ಸುತ್ತಲೂ ಪಶ್ಚಿಮ ಘಟ್ಟಗಳ ಸಾಲು, ಮಧ್ಯದಲ್ಲೊಂದು ವಿಶಾಲವಾದ ಬಯಲು, ರಸ್ತೆಯ ಬದಿಯಲ್ಲಿ ಅಲ್ಲೊಂದು ಇಲ್ಲೊಂದು ಮನೆ.
ಇದು ಕಾರವಾರ ತಾಲ್ಲೂಕಿನ ಕಡವಾಡವೆಂಬ ಗ್ರಾಮದ ದೃಶ್ಯ. ಉತ್ತರ ಕನ್ನಡದ ಜಿಲ್ಲಾ ಕೇಂದ್ರವಾದ ಕಾರವಾರ ನಗರದ ರಸ್ತೆ ಬದಿಯ ಫುಟ್ಪಾತ್ಗಳಲ್ಲಿ ತರಕಾರಿ ಮಾರುವ ಮಧ್ಯವರ್ತಿಗಳಿಂದ ಹಿಡಿದು ಹೆಚ್ಚಿನ ಎಲ್ಲಾ ತರಕಾರಿ ಗ್ರಾಹಕರಿಗೂ ಕಡವಾಡ ಗ್ರಾಮ ಚಿರಪರಿಚಿತ. ಏಕೆಂದರೆ ವರ್ಷಪೂರ್ತಿ ಕಾರವಾರ ನಗರಕ್ಕೆ ಬರುವ ಶೇ ೫೦ರಷ್ಟು ತರಕಾರಿಗಳೆಲ್ಲ ಕಡವಾಡ ಗ್ರಾಮದ್ದೇ.

ಕಾರವಾರದ ಹಬ್ಬುವಾಡ ರಸ್ತೆಯಿಂದ ಕೈಗಾಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು ೮ ಕಿ.ಮೀ. ದೂರದಲ್ಲಿ ಕಡವಾಡ ಗ್ರಾಮವಿದೆ. ಇಲ್ಲಿನ ಗುನಗಿ ಜನಾಂಗದವರು ತರಕಾರಿ ಕೃಷಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

ವರ್ಷಪೂರ್ತಿ ತರಕಾರಿ
ಮಳೆಗಾಲದಲ್ಲಿ ಇಲ್ಲಿನ ಜನ ಗುಡ್ಡದ ಬುಡಭಾಗದ ಕುಂಬ್ರಿಗಳಲ್ಲಿ, ಬೇಣಗಳಲ್ಲಿಯೇ ತರಕಾರಿ ಬೆಳೆಯುತ್ತಿದ್ದು, ಇದೀಗ ಇಲ್ಲಿನ ತರಕಾರಿಗೆ ಹೆಚ್ಚು ಬೇಡಿಕೆ ಇರುವುದರಿಂದ ಮನೆಯಂಗಳ, ಕೈತೋಟಗಳಲ್ಲಿಯೂ ತರಕಾರಿಗಳು ಬೆಳೆದು ನಿಂತಿವೆ.

ಆರಂಭದಲ್ಲಿ ಇವರು ಹೀರೇಕಾಯಿ, ಹಾಗಲ, ಮುಳ್ಳುಸೌತೆ ಮತ್ತು ಬಿಳಿಬೆಂಡೆಗಳನ್ನು ಬೆಳೆದರೆ ಸರಿಸುಮಾರು ದೀಪಾವಳಿಯ ಸಂದರ್ಭದಲ್ಲಿ ಹಾಲು ಸೋರೆಕಾಯಿ, ಸೋಡಿಗೆ, ಬೂದುಗುಂಬಳಕಾಯಿ, ಮೊಗೆಕಾಯಿ, ಇಬ್ಬಳ ಹಣ್ಣು, ಹಿಗುಂಬಳಕಾಯಿಯಂತಹ ತರಕಾರಿಗಳನ್ನು ಬೆಳೆಯುತ್ತಾರೆ.

ಜೊತೆಗೆ ಮಳೆಗಾಲದಲ್ಲಿ ಈ ಭಾಗದ ಕಾಡಿನಲ್ಲಿ ಸಿಗುವ ಮಚಳೆಸೊಪ್ಪು, ಅಣಬೆಯನ್ನು ಕಾಡಿನಿಂದ ಸಂಗ್ರಹಿಸಿ ತಂದು ಮಾರುತ್ತಾರೆ. ಈ ಮಚಳೆಸೊಪ್ಪನ್ನು ಮೊದಲಿನಿಂದಲೂ ಉತ್ತರ ಕನ್ನಡದಲ್ಲಿ ಕಾರವಾರದ ಜನ ಮಾತ್ರ ಬಳಸುತ್ತಿರುವುದು ನಿಜಕ್ಕೂ ವಿಭಿನ್ನ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇವರು ಹಿಂದಿನ ವರ್ಷ ನೆಟ್ಟ ಕರಿಕೆಸುವಿನ ಗಡ್ಡೆಯನ್ನು ಕೀಳುತ್ತಾರೆ. ಅಂತೆಯೇ ಸಿಹಿಗೆಣಸು, ಗುಟ್ಟ ಗೆಣಸನ್ನೆಲ್ಲ ಬೆಳೆದು ಮಾರುಕಟ್ಟೆಗೆ ತರುತ್ತಾರೆ. ಬೇಸಿಗೆಯಲ್ಲಿ ಗದ್ದೆಗಳಲ್ಲಿ ಅಲ್ಲಲ್ಲಿ ಬೆಂಡೆ, ಬದನೆ, ಸೋಡಿಗೆ, ಕತ್ತಿ ಅವರೆಯಂತಹ ತರಕಾರಿಗಳನ್ನು ಬೆಳೆಯುತ್ತಾರೆ.

ಅಲ್ಲದೇ ಬೇಸಿಗೆಯಲ್ಲಿ, ಬಸಳೆ ಬಳ್ಳಿಯನ್ನು ೮ ರಿಂದ ೧೫ ಗುಂಟೆ ವಿಸ್ತಾರವಾದ ಜಾಗದಲ್ಲಿ ನೆಟ್ಟು ವಾರವೊಂದಕ್ಕೆ ₨೬ ಸಾವಿರ ಆದಾಯ ಪಡೆಯುತ್ತಾರೆ. ಕೆಲವರು ಬೇಸಿಗೆಯಲ್ಲಿ ಕೆಂಪು ಹರಿವೆ, ದೊಡ್ಡ ಹರಿವೆ, ತೊಂಡೆ, ಬದನೆಯ ಕೃಷಿಯನ್ನು ಮಾಡುತ್ತಾರೆ. ಅಂತೆಯೇ ಮನೆಯ ಹಿಂಭಾಗದ ಕೈತೋಟದಲ್ಲಿಯೂ ಆದಾಯ ನೀಡುವ ಬೇರು ಹಲಸು, ನುಗ್ಗೆ ಮರ, ಸಕ್ಕರೆ ಕಂಚಿ, ಕರಿಬೇವಿನ ಮರವನ್ನೇ ನೆಟ್ಟಿದ್ದಾರೆ.

ತಳಿ ವೈವಿಧ್ಯ
ಕಡವಾಡದ ಇನ್ನೊಂದು ವಿಶೇಷತೆ ಏನೆಂದರೆ ಇಲ್ಲಿನ ತರಕಾರಿಯ ತಳಿಗಳು. ಮುಳ್ಳುಸೌತೆಯ ಗುಡ್ಡತಳಿ, ಗೋಲವಾದ ಗುಂಡುಹಾಗಲು, ರಾಗಿಮುದ್ದೆಯಾಕಾರದ ಬದನೆ, ಬಿಳಿಬೆಂಡೆ, ರಕ್ತಗೆಂಪಿನ ಹರಿವೆ ಸೊಪ್ಪಿನ ಗಿಡ, ಪರಿಮಳಭರಿತ ಚಿಕ್ಕ ಇಬ್ಬಳೆಹಣ್ಣು ಇವುಗಳಲ್ಲಿ ಪ್ರಮುಖವಾದವು. ಇಲ್ಲಿನ ರೈತರು ಹೈಬ್ರಿಡ್ ಬೀಜಗಳನ್ನು ಬಳಸದೇ ಸ್ಥಳೀಯ ತಳಿಯನ್ನೇ ನೆಚ್ಚಿರುವುದು ಇಲ್ಲಿನ ಇನ್ನೊಂದು ವಿಶೇಷ.

ತರಕಾರಿ ಗಿಡಕ್ಕೆ ಅತಿ ಅವಶ್ಯಕವಾಗಿರುವ ಸಗಣಿ ಗೊಬ್ಬರವನ್ನು ೨೫ ರೂಪಾಯಿಗೊಂದು ಬುಟ್ಟಿಯಂತೆ ಖರೀದಿಸುತ್ತಾರೆ. ಎಕರೆಗೆ ಸರಾಸರಿ ರೂ. ೮ಸಾವಿರದಷ್ಟು ಗೊಬ್ಬರಕ್ಕಾಗಿಯೇ ಮೀಸಲಿಡುತ್ತಾರೆ. ಇಲ್ಲಿನ ಮಣ್ಣಿನಲ್ಲಿ ಇಳುವರಿ ಚೆನ್ನಾಗಿರುವುದರಿಂದ ಕೈಗೆಟುಕುವ ಬೆಲೆಗೆ ಇಲ್ಲಿನ ರೈತರು ತರಕಾರಿಗಳನ್ನು ಮಾರುತ್ತಾರೆ.

ಕುಟುಂಬದ ಯಜಮಾನ ಭೂಮಿಯನ್ನು ಹದಗೊಳಿಸಿ ತರಕಾರಿ ಗಿಡಗಳನ್ನು ಉಳಿದ ಸದಸ್ಯರ ಸಹಾಯದಿಂದ ನೆಟ್ಟರೆ, ಮಹಿಳೆಯರು ಹಾಗೂ ಮಕ್ಕಳು ಹಗಲಿನಲ್ಲಿ ತರಕಾರಿ ಗಿಡಗಳ ಆರೈಕೆಯ ಜೊತೆಗೆ ಕಾವಲು ಕಾಯುತ್ತಾರೆ. ಕೆಲವರು ಬೆಳೆದ ತರಕಾರಿಯನ್ನು ಮಧ್ಯವರ್ತಿಗಳಿಗೆ ನೀಡಿದರೆ ಇನ್ನೂ ಕೆಲವು ಕುಟುಂಬಗಳಲ್ಲಿ ಮಹಿಳೆಯರು ಬೆಳೆದ ತರಕಾರಿಗಳನ್ನು ಮನೆ-ಮನೆಗೆ ಹೋಗಿ ಮಾರುತ್ತಾರೆ.

ಒಟ್ಟಿನಲ್ಲಿ ಕೃಷಿಯಿಂದ ಲಾಭವಿಲ್ಲವೆಂದು ಪಟ್ಟಣಗಳತ್ತ ಮುಖಮಾಡುತ್ತಿರುವ ಯುವಜನತೆಗೆ ಕಡವಾಡದ ರೈತರು ತರಕಾರಿ ಕೃಷಿಯಿಂದಲೇ ಸ್ವಾವಲಂಬಿ ಜೀವನ ನಡೆಸಬಹುದೆಂಬುದನ್ನು ಸಾಧಿಸಿ ತೋರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.