ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಳುಕು ಮುಚ್ಚುವ ಪುಟಿನ್‌ ಕಸರತ್ತು

ರಷ್ಯಾದ ತೋರಿಕೆಯ ಶಕ್ತಿ ಮತ್ತು ವಾಸ್ತವದ ಶಕ್ತಿಯ ನಡುವಣ ಅಂತರ ಎಷ್ಟು?
Last Updated 22 ಮೇ 2015, 19:30 IST
ಅಕ್ಷರ ಗಾತ್ರ

ಉಕ್ರೇನ್‌ನಲ್ಲಿ ಆಕ್ರಮಣಕಾರಿ ವರ್ತನೆ ಮತ್ತು ಅಮೆರಿಕ ಹಾಗೂ ಯುರೋಪ್ ವಿರುದ್ಧ ಸಂಘರ್ಷಾತ್ಮಕ ನೀತಿ, ಕಳೆದು ಹೋದ ಸೋವಿಯತ್ ದಿನಗಳ ವೈಭವವನ್ನು ಪುನರುಜ್ಜೀವನಗೊಳಿಸುವ ರಷ್ಯಾದ ಪ್ರಯತ್ನಗಳು ಎಂಬುದೇ ಪಶ್ಚಿಮದಲ್ಲಿರುವ ವ್ಯಾಪಕ ಅಭಿಪ್ರಾಯವಾಗಿದೆ. ಆದರೆ ನಾವು ರಷ್ಯಾದ ಕೆಲವು ದೇಶಿ ನೀತಿ ಉಪಕ್ರಮಗಳನ್ನು ಗಮನಿಸಿದರೆ ಈ ದೇಶ ಆದಷ್ಟು ಕಡಿಮೆ ‘ಸೋವಿಯತ್’ ಆಗಲು ಹೆಣಗುತ್ತಿದೆ ಎಂಬುದು ತಿಳಿಯುತ್ತದೆ. ಹಾಗೆಯೇ ಕಾಲ ಮಿಂಚಿ ಹೋಗುವುದಕ್ಕೆ ಮೊದಲು ತನ್ನ ಕೆಲವು ಜೀರ್ಣ ಸಂಸ್ಥೆಗಳ ಸುಧಾರಣೆಗೆ ಯತ್ನಿಸುತ್ತಿದೆ.

ಸೋವಿಯತ್ ಕಾಲದಲ್ಲಿ ರೂಪುಗೊಂಡ ಹಲವು ದುಬಾರಿ ವ್ಯವಸ್ಥೆಗಳನ್ನು ಭರಿಸುವುದು ಸಾಧ್ಯವಿಲ್ಲ ಎಂಬುದನ್ನು ಈಗ ಜಾರಿಯಲ್ಲಿರುವ ಹಲವು ಸುಧಾರಣಾ ಕ್ರಮಗಳು ತೋರಿಸುತ್ತವೆ. ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಉನ್ನತ ಶಿಕ್ಷಣ ಅಥವಾ ಸಾಮೂಹಿಕವಾಗಿ ಜನರನ್ನು ಸೇರಿಸಿಕೊಂಡ ಭಾರಿ ಪ್ರಮಾಣದ ಸೇನೆ ಇದರಲ್ಲಿ ಸೇರಿದ ಕೆಲವು ಅಂಶಗಳು.

ಈಗಿನ ಹಲವು ಬದಲಾವಣೆಗಳ ಹಿಂದೆ ಇರುವುದು ತುರ್ತು ಅಗತ್ಯಗಳೇ ಹೊರತು ಭವ್ಯವಾದ ಪ್ರಗತಿಪರ ದೃಷ್ಟಿಕೋನ ಅಲ್ಲ. ಹೇಗಿದ್ದರೂ ಅವು ಸುಧಾರಣಾ ಕ್ರಮಗಳೇ ಆಗಿವೆ. ಈ ಕ್ರಮವೇ ಅತ್ಯಂತ ಗಮನಾರ್ಹವಾದ ಬೆಳವಣಿಗೆಯಾಗಿದೆ. ಸಾಮಾನ್ಯವಾಗಿ ರಷ್ಯನ್ನರು ವೈಯಕ್ತಿಕ ಸ್ವಾತಂತ್ರ್ಯದ ನಷ್ಟವನ್ನು ಸಹಿಸಿಕೊಳ್ಳಲು ಸಿದ್ಧ ಇದ್ದಾರೆ. ಆದರೆ ಅವರು ಈಗಲೂ ಉಚಿತ ಆರೋಗ್ಯ ರಕ್ಷಣೆ ವ್ಯವಸ್ಥೆಯಂತಹ ಸೋವಿಯತ್ ಕಾಲದ ಸಾಮಾಜಿಕ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಇಂತಹ ಸೌಲಭ್ಯಗಳನ್ನು ಮಾರ್ಪಡಿಸಲು ಅಥವಾ ರದ್ದುಪಡಿಸಲು ರಷ್ಯಾ ಸರ್ಕಾರ ಕೂಡ ಹಿಂದೇಟು ಹಾಕುತ್ತಿದೆ.

ಈಗ, ನಿರಾಶಾದಾಯಕ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ, ಗೊತ್ತು ಗುರಿಯಿಲ್ಲದ್ದಾಗಿದ್ದರೂ ಮುಂದಕ್ಕೆ ಸಾಗುತ್ತಿರುವ ಸುಧಾರಣೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ದೇಶಭಕ್ತಿಯ ಪ್ರಚಾರ ಯಶಸ್ವಿಯಾಗಿದೆ. ವಿರೋಧಾಭಾಸವೆಂದರೆ, ಜಾಗತಿಕ ಮಟ್ಟದಲ್ಲಿ ಸೋವಿಯತ್ ವೈಭವದ ಡಂಗೂರ ಸಾರುತ್ತಿರುವ ಮುಖಂಡರು ತವರಿನಲ್ಲಿ ಮಾತ್ರ ಅದರಿಂದ ದೂರ ಸರಿಯುತ್ತಿರುವ ಪ್ರಯತ್ನದ ಮುಂದಾಳುತ್ವ ವಹಿಸಿದ್ದಾರೆ.

ಆರೋಗ್ಯ ರಕ್ಷಣೆ ಇಂತಹ ಒಂದು ಅಂಶ. 2012ರ ವಸಂತದಲ್ಲಿ ಪುಟಿನ್ ಅಧ್ಯಕ್ಷತೆ ವಹಿಸಿಕೊಂಡ ನಂತರ ಸುಧಾರಣೆಗಳು ಆರಂಭವಾಗಿ ಈಗ ಕೆಲವು ವರ್ಷಗಳಾಗಿವೆ. ಈಗಿನ ಒಟ್ಟು ಪರಿಸ್ಥಿತಿ ನಿರಾಶಾದಾಯಕವೇ ಆಗಿದೆ. ಅದಕ್ಷ ವ್ಯವಸ್ಥೆಗಳನ್ನು ಮುಚ್ಚುವುದು, ಒಂದೇ ಸೌಲಭ್ಯ ಒದಗಿಸುವ ಒಂದಕ್ಕಿಂತ ಹೆಚ್ಚು ಯೋಜನೆಗಳನ್ನು ರದ್ದುಪಡಿಸುವುದು, ಶಿಥಿಲಗೊಳ್ಳುತ್ತಿರುವ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳನ್ನು ಮುಚ್ಚುವುದು, ವೈದ್ಯಕೀಯ ಸಿಬ್ಬಂದಿಯ ಸಂಖ್ಯೆಯನ್ನು ಕಡಿತ ಮಾಡುವುದಕ್ಕಾಗಿ ಪ್ರಾದೇಶಿಕ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹಧನ ನೀಡುತ್ತಿದೆ. ಹಾಗೆಯೇ, ದಕ್ಷತೆಯನ್ನು ಸುಧಾರಿಸುವುದಕ್ಕಾಗಿ ಆಧುನಿಕ ಉಪಕರಣಗಳ ಖರೀದಿ, ಆಸ್ಪತ್ರೆಗಳ ನವೀಕರಣ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಉತ್ತಮ ವೇತನಕ್ಕಾಗಿ ಹಣಕಾಸು ನೆರವನ್ನೂ ಒದಗಿಸಲಾಗುತ್ತಿದೆ.

ಹಲವು ಆಸ್ಪತ್ರೆಗಳನ್ನು ನವೀಕರಣ ಮಾಡಲಾಗುತ್ತಿದೆ. ಆದರೆ ಮುಚ್ಚುತ್ತಿರುವ ಆಸ್ಪತ್ರೆಗಳ ಸಂಖ್ಯೆ ಭಾರಿಯಾಗಿಯೇ ಇದೆ. ಗ್ರಾಮೀಣ ಪ್ರದೇಶಗಳಿಗೆ ಇದರ ನಿಜವಾದ ಬಿಸಿ ತಾಗಿದೆ. ಒಂದು ಕಾಲದಲ್ಲಿ ಸಣ್ಣ ಆರೋಗ್ಯ ಕೇಂದ್ರಗಳನ್ನು ಹೊಂದಿದ್ದ 17 ಸಾವಿರಕ್ಕೂ ಹೆಚ್ಚು ಗ್ರಾಮಗಳಿಗೆ ಈಗ ವೈದ್ಯಕೀಯ ಸೌಲಭ್ಯ ಇಲ್ಲ. ಸರ್ಕಾರದ್ದೇ ವರದಿಗಳ ಪ್ರಕಾರ, 2005ರಿಂದ 2013ರ ಅವಧಿಯಲ್ಲಿ ಆರೋಗ್ಯ ಕೇಂದ್ರಗಳ ಸಂಖ್ಯೆ 8,249ರಿಂದ 2,085ಕ್ಕೆ ಮತ್ತು ಗ್ರಾಮೀಣ ಆಸ್ಪತ್ರೆಗಳ ಸಂಖ್ಯೆ 2,631ರಿಂದ 124ಕ್ಕೆ ಇಳಿದಿದೆ.

ರಷ್ಯಾ ಸರ್ಕಾರದ ಚಿಂತನೆಗಳೇನು ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಸುಳಿವುಗಳು ಇಲ್ಲ. ರಷ್ಯಾದ ಒಟ್ಟು ನೀತಿಗಳ ಬಗ್ಗೆ ಸಾರ್ವಜನಿಕ ಚರ್ಚೆ ನಡೆದೇ ಇಲ್ಲ. ‘ಜನರು ಅರ್ಥ ಮಾಡಿಕೊಳ್ಳಲಿಕ್ಕಿಲ್ಲ ಎಂಬ ಭೀತಿ ಅವರನ್ನು ಕಾಡುತ್ತಿದೆ’ ಎಂದು ಸೋಷಿಯಲ್ ಡಿಮಾಂಡ್ ಎಂಬ ನಾಗರಿಕರ ಹಕ್ಕುಗಳ ಗುಂಪಿನ ಮುಖ್ಯಸ್ಥೆ ಮರಿಯಾ ಗೈಡರ್ ಹೇಳುತ್ತಾರೆ. ‘ಸಾರ್ವಜನಿಕರ ಬಂಡಾಯವನ್ನು ತಪ್ಪಿಸಲು ಅವರು ಬಯಸುತ್ತಾರೆ. ಅದಕ್ಕಾಗಿ ಈ ಎಲ್ಲವೂ ಪ್ರಾದೇಶಿಕ ಮಟ್ಟದಲ್ಲಿ ನಡೆಯುತ್ತಿದೆ. ಸುಧಾರಣೆಗಳು ಯೋಜಿತ ರೀತಿಯಲ್ಲಿ ನಡೆಯದೇ ಇದ್ದರೆ ಅಥವಾ ತಪ್ಪುಗಳು ಘಟಿಸಿದರೆ ಪ್ರಾಂತ್ಯಗಳ ಗವರ್ನರ್‌ಗಳ ಮೇಲೆ ತಪ್ಪು ಹೊರಿಸಬಹುದು. ಕೇಂದ್ರ ಸರ್ಕಾರ ಸುರಕ್ಷಿತವಾಗಿರುತ್ತದೆ’ ಎಂದು ಗೈಡರ್ ಅಭಿಪ್ರಾಯಪಡುತ್ತಾರೆ.

ಎಷ್ಟೇ ಸಂಖ್ಯೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಿ, ಎಷ್ಟೇ ಸಂಖ್ಯೆಯ ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆದುಕೊಳ್ಳಲಿ ಎಲ್ಲ ವೈದ್ಯಕೀಯ ಸೌಲಭ್ಯಗಳು, ಶಾಲೆಗಳು ಮತ್ತು ಇತರ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸಹಾಯ ಧನ ಒದಗಿಸುವ ನಿರ್ಧಾರದ ಬಗ್ಗೆ ಸೋವಿಯತ್ ಕಾಲದಲ್ಲಿಯೂ ಅತೃಪ್ತಿ ವ್ಯಕ್ತವಾಗಿತ್ತು.

ಶಿಕ್ಷಣ ಕ್ಷೇತ್ರದ ಸುಧಾರಣೆಗಳಿಗೂ ಗೊತ್ತು ಗುರಿ ಇಲ್ಲ. ರಷ್ಯಾದ ಪ್ರಮುಖ ಶಿಕ್ಷಣ ಸಂಸ್ಥೆಗಳು ಅಂತರರಾಷ್ಟ್ರೀಯ ಶ್ರೇಣಿಯಲ್ಲಿ ಕುಸಿದಿವೆ. ಸುಧಾರಕರು ಏಕರೂಪದ ಪರೀಕ್ಷಾ ವ್ಯವಸ್ಥೆಯನ್ನು (ಅಮೆರಿಕದ ಎಸ್‍ಎಟಿಯನ್ನು ಹೋಲುವಂತೆ) ಆರಂಭಿಸಿದ್ದಾರೆ; ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಯುರೋಪ್‌ನ ಶಿಕ್ಷಣ ವ್ಯವಸ್ಥೆಗೆ ಹೊಂದಿಕೆಯಾಗುವ ರೀತಿಯಲ್ಲಿ ಮಾರ್ಪಡಿಸಲಾಗಿದೆ ಮತ್ತು ಹೊಸ ಸಂಶೋಧನಾ ಸಂಸ್ಥೆಗಳನ್ನು ಕಟ್ಟಲು ಆರಂಭಿಸುವುದರೊಂದಿಗೆ ಪ್ರಾದೇಶಿಕ ವಿಶ್ವವಿದ್ಯಾಲಯಗಳನ್ನು ಇತರ ದೊಡ್ಡ ಸಂಸ್ಥೆಗಳೊಂದಿಗೆ ವಿಲೀನಗೊಳಿಸಲಾಗಿದೆ. ಮೂರು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಾಗ ಪುಟಿನ್ ಅವರು ಜನ ಮೆಚ್ಚುಗೆಯ ಕ್ರಮವಾಗಿ ಶಿಕ್ಷಕರಿಗೆ ಹೆಚ್ಚಿನ ವೇತನ ಕೊಡುವುದಾಗಿ ಘೋಷಿಸಿದ್ದರು.

ಆದರೆ ಈಗ, ಪಶ್ಚಿಮದ ನಿರ್ಬಂಧಗಳು ಮತ್ತು ತೈಲ ವರಮಾನದಲ್ಲಿನ ಕುಸಿತದಿಂದಾಗಿ ರಾಷ್ಟ್ರೀಯ ಬಜೆಟ್ ಗಾತ್ರ ಕುಗ್ಗಿದೆ. ಪರಿಣಾಮವಾಗಿ ಕೇಂದ್ರ ಸರ್ಕಾರ ಅನುದಾನಗಳನ್ನು ವ್ಯಾಪಕವಾಗಿ ಕಡಿತ ಮಾಡಿದ್ದು, ಶಿಕ್ಷಕರು, ವಸ್ತುಸಂಗ್ರಹಾಲಯದ ಕಾವಲುಗಾರರಿಂದ ಹಿಡಿದು ಸಿನಿಮಾ ಮಂದಿರಗಳ ದ್ವಾರಪಾಲಕರವರೆಗಿನ ಸಾವಿರಾರು ಸರ್ಕಾರಿ ನೌಕರರಿಗೆ ತೊಂದರೆಯಾಗಿದೆ. ಸೇನೆಯನ್ನು ಮರುರೂಪಿಸುವ ಯತ್ನ ಮಾತ್ರ ಸರ್ಕಾರದ ಸುಧಾರಣಾ ಕ್ರಮಗಳಲ್ಲೇ ಅತ್ಯಂತ ಹೆಚ್ಚಿನ ಯಶಸ್ಸನ್ನು ಪಡೆದಿದೆ ಎಂದು ಹೇಳಬಹುದು. ಸೋವಿಯತ್‌ನ ಅನಿಯಂತ್ರಿತ ಸೇನಾ ವ್ಯವಸ್ಥೆಯ ಬದಲಿಗೆ ಚಿಕ್ಕದಾದ ಮತ್ತು ಹೆಚ್ಚು ದಕ್ಷವಾದ ಆಧುನಿಕ ಸಶಸ್ತ್ರ ಪಡೆ ನಿರ್ಮಾಣಕ್ಕೆ ರಷ್ಯಾ ಮುಂದಾಗಿದೆ.

‘ಇದು ಈಗಲೂ ಪ್ರಗತಿಯಲ್ಲಿರುವ ಕೆಲಸವಾಗಿ ಮುಂದುವರಿಯುತ್ತಿದೆ’ ಎಂದು ಕೆನ್ನನ್ ಇನ್‌ಸ್ಟಿಟ್ಯೂಟ್‌ನ ವಿದ್ವಾಂಸ ಮೈಕೆಲ್ ಕಾಫ್‌ಮನ್‌ ನನಗೆ ಹೇಳಿದರು. ‘ಪಶ್ಚಿಮದ ರಾಷ್ಟ್ರಗಳ ರೀತಿಯ ಹೆಚ್ಚು ಚಲನಶೀಲ, ಪರಸ್ಪರ ಸಂಬಂಧಿಯಾದ, ಬಲವಂತದ ಸೇನಾ ಸೇರ್ಪಡೆಯ ಮೇಲೆ ಅವಲಂಬಿತವಲ್ಲದ ಮತ್ತು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಕಾರ್ಯಾಚರಣೆಗೆ ಸನ್ನದ್ಧವಾಗುವ ಸೇನೆಯನ್ನು ಹೊಂದುವ ಕನಸಿನ ದಿಕ್ಕಿನಲ್ಲಿ ರಷ್ಯಾ ಬಹಳ ದೂರ ಸಾಗಿದ್ದು ಹಿಂದಿನ ಸ್ಥಿತಿ ಬಹಳಷ್ಟು ಬದಲಾವಣೆಗೊಂಡಿದೆ’ ಎಂದು ಅವರು ಹೇಳುತ್ತಾರೆ.

ಇಡೀ ಸೋವಿಯತೋತ್ತರ ಅವಧಿಯಲ್ಲಿ ಸೇನಾ ವ್ಯಯ ಈ ಮಟ್ಟಕ್ಕೆ ಯಾವತ್ತೂ ಏರಿರಲಿಲ್ಲ ಎಂದು ಕೋಫ್‌ಮನ್ ಹೇಳುತ್ತಾರೆ. 2015ರಲ್ಲಿ ರಷ್ಯಾದ ರಕ್ಷಣಾ ಬಜೆಟ್ 3.3 ಲಕ್ಷ ಕೋಟಿ ರೂಬಲ್ (₨4 ಲಕ್ಷ ಕೋಟಿಗೂ ಹೆಚ್ಚು) ಅಥವಾ ಒಟ್ಟು ದೇಶಿ ಉತ್ಪನ್ನದ ಶೇ 4.2. ಪುಟಿನ್ ಅಧಿಕಾರಕ್ಕೆ ಬಂದಾಗ ರಕ್ಷಣಾ ವೆಚ್ಚ ಒಟ್ಟು ದೇಶಿ ಉತ್ಪನ್ನದ ಶೇ 2.6ರಷ್ಟಿತ್ತು.

‘ಬಜೆಟ್ ಮತ್ತು ಗಾತ್ರದಲ್ಲಿ ರಷ್ಯಾ ಸೇನೆ ಈಗ ಅತ್ಯುತ್ತಮ ಸ್ಥಿತಿಯಲ್ಲಿದೆ. ಈಗಿನ ಪರಿಸ್ಥಿತಿ ಗಮನಿಸಿದರೆ ಹಣಕಾಸು ಮತ್ತು ಸೈನಿಕರ ಬಲದ ವಿಷಯದಲ್ಲಿ ಅತ್ಯುತ್ತಮ ಸಮೃದ್ಧಿಯ ಸ್ಥಿತಿಗೆ ಸೇನೆ ತಲುಪಿದೆ’ ಎಂದು ಕೋಫ್‌ಮನ್ ಅಭಿಪ್ರಾಯಪಡುತ್ತಾರೆ.
ಮೂವತ್ತು ವರ್ಷಗಳ ಹಿಂದೆ 1985ರ ಏಪ್ರಿಲ್ 23ರಂದು ಕಮ್ಯುನಿಸ್ಟ್ ಪಕ್ಷಕ್ಕೆ ಹೊಸದಾಗಿ ನೇಮಕವಾದ ಪ್ರಧಾನ ಕಾರ್ಯದರ್ಶಿ ಮಿಖಾಯಿಲ್ ಗೊರ್ಬಚೆವ್ ಪೆರೆಸ್ಟ್ರೊಯಿಕಾ ನೀತಿಗಳನ್ನು (ಕಮ್ಯುನಿಸ್ಟ್ ಪಕ್ಷದೊಳಗೆ ಸುಧಾರಣೆ ತರುವ ರಾಜಕೀಯ ಚಳವಳಿ) ಘೋಷಿಸಿದರು.

ಸೋವಿಯತ್ ಒಕ್ಕೂಟದ ತೀವ್ರ ಕುಸಿತವನ್ನು ತಡೆಯುವುದು ಅವರ ಉದ್ದೇಶವಾಗಿತ್ತು. ಆದರೆ, ಅವರು ಆರಂಭಿಸಿದ ಸುಧಾರಣೆಗಳು ಈ ಅಂತಃಸ್ಫೋಟವನ್ನು ಇನ್ನಷ್ಟು ತೀವ್ರಗೊಳಿಸಿದವು. ಸೋವಿಯತ್ ಗಣರಾಜ್ಯದಲ್ಲಿದ್ದ ಇತರ ದೇಶಗಳು ರಷ್ಯಾವನ್ನು ಹಿಂದಿಕ್ಕಿ ಮುಂದೆ ಸಾಗಿದವು. ಆದರೆ ರಷ್ಯಾಕ್ಕೆ ಮಾತ್ರ ಹಿಂದಿನ ಮನಸ್ಥಿತಿಯಿಂದ ಹೊರಬರುವುದಕ್ಕೆ ಅಂದು ಸಾಧ್ಯವಾಗಲಿಲ್ಲ, ಅದು ಇಂದಿಗೂ ಸಾಧ್ಯವಾಗಿಲ್ಲ. ಇಸ್ಟೋನಿಯ, ಲಾತ್ವಿಯ ಮತ್ತು ಲಿಥುವೇನಿಯದಂತಹ ದೇಶಗಳು ಅತ್ಯಂತ ತ್ವರಿತವಾಗಿ ಸುಧಾರಣೆಗಳನ್ನು ಜಾರಿಗೆ ತಂದವು.

ಯಾಕೆಂದರೆ ಈ ದೇಶಗಳ ಗುರಿ ಅತ್ಯಂತ ಸ್ಪಷ್ಟವಾಗಿತ್ತು; ಯುರೋಪ್‌ನತ್ತ ಮತ್ತು ಪಶ್ಚಿಮದ ಸಂಸ್ಥೆಗಳತ್ತ ಈ ದೇಶಗಳ ಗುರಿ ನೆಟ್ಟಿತ್ತು. ತನ್ನ ಸಮೃದ್ಧ ನೈಸರ್ಗಿಕ ಸಂಪನ್ಮೂಲವನ್ನು ಬಳಸಿಕೊಂಡ ಕಜಕಿಸ್ತಾನ ಹಳೆಯ ಅಧಿಕಾರ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದರೊಂದಿಗೆ ಆರ್ಥಿಕ ಬೆಳವಣಿಗೆಯನ್ನೂ ಸಾಧಿಸಿತು. ಆದರೆ ರಷ್ಯನ್ನರು ಬಹಳ ದೀರ್ಘ ಕಾಲದವರೆಗೆ ಭಾರಿ ಗೊಂದಲದಲ್ಲೇ ಇದ್ದರು. ಈ ಅವಧಿಯಲ್ಲಿ ತೈಲ ಮತ್ತು ಅನಿಲದಿಂದ ದೊರೆತ ಅಪಾರ ಪ್ರಮಾಣದ ವರಮಾನ ಸುಧಾರಣೆಗೆ ಒಡ್ಡಿಕೊಳ್ಳದೇ ಇರುವುದಕ್ಕೆ ರಷ್ಯಾಕ್ಕೆ ನೆರವಾಯಿತು. 

ಬದಲಾವಣೆಯಿಂದ ದೂರವೇ ಇರುವುದಕ್ಕೆ ರಷ್ಯಾಕ್ಕೆ ಸಾಧ್ಯವಾಗಲಿಲ್ಲ. ವರ್ಷಗಳಿಂದ ಕಾಲ ತಳ್ಳುತ್ತಾ ಬಂದು ಈಗ ಅನಿಶ್ಚಿತ ಗುರಿಯತ್ತ ಸುದೀರ್ಘ, ಪ್ರಯಾಸಕರ ಪ್ರಯಾಣ ಹೊರಟಿದೆ. ಬಾಹ್ಯ ಶಕ್ತಿ ಪ್ರದರ್ಶನದ ಮೂಲಕ ರಷ್ಯಾದೊಳಗಿನ ಅವ್ಯವಸ್ಥೆಯಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ಸಮುದಾಯದ ಗಮನವನ್ನು ಬೇರೆಡೆಗೆ ತಿರುಗಿಸುವುದು ಪುಟಿನ್ ಅವರ ಉದ್ದೇಶ ಎಂಬುದು ಸ್ಪಷ್ಟ. ರಷ್ಯಾದ ತೋರಿಕೆಯ ಶಕ್ತಿ ಮತ್ತು ವಾಸ್ತವದ ಶಕ್ತಿಯ ನಡುವಣ ಅಂತರ ಎಷ್ಟು ಎಂಬುದು ಆ ದೇಶದ ಮುಖಂಡರಿಗಷ್ಟೇ ಗೊತ್ತು.

ಕಳೆದ ವರ್ಷಗಳಲ್ಲಿ ಪುಟಿನ್ ಅವರ ಸೊಕ್ಕು ಮತ್ತು ಆಕ್ರಮಣಶೀಲತೆ, ಸೋವಿಯತೋತ್ತರ ಅವಧಿಯಲ್ಲಿ ದೀರ್ಘ ಕಾಲದ ಅನಿಶ್ಚಿತತೆಗಳ ಪರಿಣಾಮವಾಗಿ ರಷ್ಯಾದ ಭವಿಷ್ಯ ಅತ್ಯುತ್ತಮ ಅವಕಾಶಗಳಿಂದ ಅತ್ಯಂತ ಕೆಟ್ಟ ಪರಿಸ್ಥಿತಿಗೆ ಪರಿವರ್ತನೆಗೊಂಡಿದೆ. ಇಲ್ಲಿನ ಅರ್ಥ ವ್ಯವಸ್ಥೆ ಕುಸಿಯುತ್ತಿದೆ; ಶ್ರೀಮಂತರು ಪಶ್ಚಿಮದ ನಿರ್ಬಂಧಗಳ ಬಲೆಯಲ್ಲಿ ಸಿಲುಕಿದ್ದಾರೆ; ವಿದೇಶಿ ಸಾಲಗಳು ಮತ್ತು ಹೊಸ ತಂತ್ರಜ್ಞಾನ ಪಡೆಯುವ ಅವಕಾಶಗಳು ತೀವ್ರವಾಗಿ ನಿರ್ಬಂಧಿತವಾಗಿವೆ.

ಇಂತಹ ಸನ್ನಿವೇಶದಲ್ಲಿ ಪುಟಿನ್ ತಮ್ಮದೇ ಆದ ಪೆರೆಸ್ಟ್ರೊಯಿಕಾ ಅನುಷ್ಠಾನಕ್ಕೆ ಶ್ರಮಿಸಬೇಕಿದೆ. ಕೆಲವೇ ಕೆಲವು ವರ್ಷಗಳ ಹಿಂದೆ ಇದನ್ನು ಮಾಡಿದ್ದರೆ ಸಾರ್ವತ್ರಿಕ ಶ್ಲಾಘನೆಗೆ ಪುಟಿನ್ ಪಾತ್ರವಾಗುತ್ತಿದ್ದರು. ರಷ್ಯಾಕ್ಕೆ ಉದಾರವಾಗಿ ನೆರವು ಹರಿದು ಬರುತ್ತಿತ್ತು. ಬೇಸರವೆಂದರೆ, ಒಂದೆಡೆ, ಪುಟಿನ್  ಪ್ರಯತ್ನ ಅತ್ಯಲ್ಪವಾದರೆ ಅದು ಅತಿ ವಿಳಂಬವಾಗಿಯೂ ಆರಂಭಗೊಂಡಿದೆ.
ಲೇಖಕ ವೆಡೊಮೊಸ್ಟಿ ಪತ್ರಿಕೆಯ ಸಂಪಾದಕೀಯ ವಿಭಾಗದ ಮುಖ್ಯಸ್ಥರು. ವಾಷಿಂಗ್ಟನ್‌ನ ವಿಲ್ಸನ್ ಸೆಂಟರ್‌ನ ಫೆಲೊ
ದಿ ನ್ಯೂಯಾರ್ಕ್‌ ಟೈಮ್ಸ್‌

editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT