ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಮಳೆ ಬೀಳುವ ಆಗುಂಬೆಯಲ್ಲೇ ನೀರಿಲ್ಲ

ಕರ್ನಾಟಕದ ‘ಚಿರಾಪುಂಜಿ’ಯಲ್ಲೇ ಕುಡಿಯುವ ನೀರಿಗೆ ಪರಿತಾಪ
Last Updated 21 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ಕರ್ನಾಟಕದ ಚಿರಾಪುಂಜಿ ಎಂದೇ ಖ್ಯಾತಿ ಗಳಿಸಿರುವ ಆಗುಂಬೆಯಲ್ಲಿಯೂ ಈಗ ನೀರಿಗೆ ಹಾಹಾಕಾರ. ಬತ್ತಿದ ಬಾವಿಗಳು, ನೀರಿನ ಬದಲು ಬರೀ ಗಾಳಿ ಸೂಸುವ ಕೊಳವೆ ಬಾವಿಗಳು, ಬಿಸಿಲ ಬೇಗೆ, ನೀರಿಗಾಗಿ ಪರಿತಪಿಸುವ ಜನರು.

ಸುಮಾರು 16 ವರ್ಷಗಳ ಹಿಂದೆ ಎಸ್‌. ಬಂಗಾರಪ್ಪ ಸಂಸದರಾಗಿದ್ದಾಗ ಇಲ್ಲಿ ಒಂದು ಕೊಳವೆ ಬಾವಿ ಕೊರೆಸಿದ್ದರು. ಈ ಬಾವಿ ತನ್ನೊಡಲೊಳಗೆ ಎಂತಹ ಜಲರಾಶಿ ತುಂಬಿಕೊಂಡಿತ್ತೆಂದರೆ, ಅದು ಪ್ರತಿ ದಿನ ಎರಡು ಓವರ್‌ಹೆಡ್‌ ಟ್ಯಾಂಕ್‌ಗಳಿಗೆ 1 ಲಕ್ಷ ಲೀಟರ್‌ ನೀರು ತುಂಬಿಸುತ್ತಿತ್ತು. ಈಗ ಅದೆಲ್ಲಾ ಕನಸು.

ನೀರಿನ ಕೊರತೆ ಅಲ್ಲಿನ ಜನರಿಗೆ ಒಂದು ದಿನವೂ ಅನುಭವಕ್ಕೆ ಬಂದಿರಲಿಲ್ಲ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಧೋ ಎಂದು ಬಿಟ್ಟೂ ಬಿಡದೇ ಸುರಿಯುವ ಮಳೆಯ ನೀರು ಮನೆಯ ಮುಂದೆಯೇ ಹಿಡಿದಿಟ್ಟುಕೊಳ್ಳುವ ವ್ಯವಸ್ಥೆ,  ಮಳೆಗಾಲದ ನಂತರ ಕೊಳವೆಬಾವಿಗಳು, ಜಲತೊರೆಗಳ ಮೂಲಕ ನಿರಂತರ ನೀರು ಪೂರೈಕೆ.

ಹೀಗೆ ಮಳೆಕಾಡಿನ ನಡುವೆ ಬದುಕುವ ಜನ ಈ ವರ್ಷದ ಮಾರ್ಚ್‌ ಮುಗಿದು ಏಪ್ರಿಲ್‌ ಆರಂಭವಾಗುತ್ತಿದ್ದಂತೆ ಮೂರು ದಿನ ನೀರು ಬಾರದೇ ಹೋದಾಗ ಹೌಹಾರಿದ್ದಾರೆ.

ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ಪಿಡಿಒ  ಒಮ್ಮೆಗೆ ಕುಸಿದ ಅಂತರ್ಜಲ ಕಂಡು ಬೆಚ್ಚಿದ್ದಾರೆ. 30– 40 ಅಡಿಗೆಲ್ಲ ಸಿಗುತ್ತಿದ್ದ ನೀರು 120 ಅಡಿ ದಾಟಿದರೂ ನಿಲುಕದಾಗಿದೆ.

ಆಗುಂಬೆ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದ 20 ತೆರೆದ ಬಾವಿಗಳು, 10ಕ್ಕೂ ಹೆಚ್ಚು ಸರ್ಕಾರಿ, 50ಕ್ಕೂ ಹೆಚ್ಚು ಖಾಸಗಿ ಕೊಳವೆ ಬಾವಿಗಳು ಸಂಪೂರ್ಣ ಬತ್ತಿಹೋಗಿವೆ. ತಕ್ಷಣವೇ ಪಂಚಾಯ್ತಿ ಸಭೆ ಕರೆದು ಎಲ್ಲ ಕೊಳವೆಬಾವಿಗಳ ಮೋಟಾರ್‌ ಎತ್ತಿಸಿ, ಮಾಲತಿ ನದಿಯ ಉಪ ನದಿಗೆ ಮೋಟಾರ್‌ ಇಟ್ಟು ನೇರವಾಗಿ ಟ್ಯಾಂಕ್‌ಗಳಿಗೆ ನೀರು ಹರಿಸುತ್ತಿದ್ದಾರೆ. ಈ ವ್ಯವಸ್ಥೆ ತಾತ್ಕಾಲಿಕ. ಏಕೆಂದರೆ ಇನ್ನು ವಾರ, ಹತ್ತು ದಿನದಲ್ಲಿ ಈ ಉಪ ನದಿಯ ಹರಿವೂ ಸ್ಥಗಿತವಾಗುತ್ತದೆ!

‘ಹೊಸೂರು, ತಲ್ಲೂರು ಸೇರಿದಂತೆ ಈ ಪಂಚಾಯ್ತಿ ವ್ಯಾಪ್ತಿಯಲ್ಲಿ 3,237 ಜನ ಸಂಖ್ಯೆ ಇದೆ. ಹಿಂದೆಂದೂ ಇಂತಹ ಜಲಕ್ಷಾಮ ನೋಡಿರಲಿಲ್ಲ. ಒಂದೆಡೆ ಅಂತರ್ಜಲ ಕುಸಿತ, ಇನ್ನೊಂದೆಡೆ ಪದೇಪದೇ ಕೈಕೊಡುವ ವಿದ್ಯುತ್‌ನಿಂದಾಗಿ  ಪಂಚಾಯ್ತಿ ಎಲ್ಲ ಸದಸ್ಯರು, ಸಿಬ್ಬಂದಿಗಳಿಗೆ ರಾತ್ರಿ ಪೂರ ನಿದ್ದೆಗೆಟ್ಟು ಟ್ಯಾಂಕ್ ತುಂಬಿಸುವುದೇ ಕೆಲಸವಾಗಿದೆ.

ಇನ್ನೆರಡು ವಾರದ ನಂತರ ಉಪ ನದಿಯೂ ಸಂಪೂರ್ಣ ಬತ್ತಲಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಮಾಹಿತಿ ನೀಡಿದರು ಆಗುಂಬೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಸಿರುಮನೆ ನಂದನ್.

‘ವರ್ಷಕ್ಕೆ ಸರಾಸರಿ 8–9 ಸಾವಿರ ಮಿ.ಮೀ ದಾಖಲೆಯ ಮಳೆ ಸುರಿದರೂ, ನೀರು ಇಂಗಿಸುವ ಯಾವುದೇ ಯೋಜನೆ ರೂಪಿಸದ ಪರಿಣಾಮ ಇಂತಹ ಸ್ಥಿತಿ ಎದುರಾಗಿದೆ.

ಜಾಗತಿಕ ತಾಪಮಾನ ಏರಿಕೆಯಿಂದಾಗಿ ದಟ್ಟ ಕಾನನದ ಈ ಪ್ರದೇಶದಲ್ಲೂ ಮಳೆ ಕೊರತೆ ಎದುರಾಗಿದೆ. ಉದ್ಯೋಗ ಖಾತ್ರಿಯಲ್ಲಿ ಒಡ್ಡು ನಿರ್ಮಿಸಲು ಅವಕಾಶ ನೀಡಿದ್ದರೂ, ಯಂತ್ರ ಬಳಕೆ ಮಾಡದ ಕಾರಣ ಒಡ್ಡುಗಳು ಒಂದೇ ಮಳೆಗಾಲಕ್ಕೆ ಒಡೆದು ಹೋಗುತ್ತಿವೆ. ಬಯಲು ಸೀಮೆಯಲ್ಲಿ ಅನುಸರಿಸುವ ಮಳೆ ನೀರು ಸಂಗ್ರಹ ವಿಧಾನಗಳು ಇಲ್ಲಿ ವಿಫಲವಾಗಿವೆ.

ಈ ಯೋಜನೆ ಮಳೆಗಾಲ ಮುಗಿದ ಒಂದು ತಿಂಗಳು ಮಾತ್ರ ಉಪಯೋಗಕ್ಕೆ ಬರುತ್ತದೆ. ಉಳಿದಂತೆ ಭವಿಷ್ಯದಲ್ಲಿ ಬೇಸಿಗೆ ಬವಣೆ ಎದುರಿಸಲು ನೀರು ಇಂಗಿಸುವ, ಕುಡಿಯುವ ನೀರಿಗಾಗಿಯೇ ನೀರು ಸಂಗ್ರಹಿಸಿ ಇಟ್ಟುಕೊಳ್ಳುವ ಯೋಜನೆ ರೂಪಿಸಬೇಕಿದೆ’ ಎಂದು ಸಮಸ್ಯೆ, ಪರಿಹಾರದ ಯೋಜನೆ ಬಿಚ್ಚಿಟ್ಟರು ನಂದನ್ ಹಾಗೂ ಪಿಡಿಒ ಎಸ್.ಜಿ.ಪರಮೇಶ್ವರಪ್ಪ.

ಪಕ್ಕದ ಹೊನ್ನೆತಾಳು ಪಂಚಾಯ್ತಿ ವ್ಯಾಪ್ತಿಯಲ್ಲೂ ಇದೇ ಸ್ಥಿತಿ. ಅಲ್ಲೂ ಒಣಗುತ್ತಿರುವ ಮಾಲತಿ ನದಿಯ ಅಳಿದುಳಿದ ನೀರಿಗೇ ಮೋಟಾರ್‌ ಬಿಟ್ಟುಕೊಂಡಿದ್ದಾರೆ. ಗುಡ್ಡೇಕಲ್‌, ಕುಂದಾದ್ರಿಯಲ್ಲೂ ಅಂತರ್ಜಲ ತೀವ್ರ ಕುಸಿತ ಕಂಡಿದೆ. ಸುತ್ತಲೂ ಚಕ್ರ, ವರಾಹಿ, ಸಾವೆಹಕ್ಲು  ಜಲಾಶಯಗಳ ಹಿನ್ನೀರು ಇದ್ದರೂ, ಅದು ಕುಡಿಯಲು ಯೋಗ್ಯವಾಗಿಲ್ಲ.

ದಟ್ಟ ಕಾನನದ ನಕ್ಸಲ್ ಬಾಧಿತ ಪ್ರದೇಶ ಮಲ್ಲಂದೂರಿನಲ್ಲಿ ಸಾಕಷ್ಟು ತೆರೆದ ಬಾವಿಗಳಿದ್ದರೂ, ಅಲ್ಲೂ ಅಂತರ್ಜಲ ಕುಸಿದಿದೆ. ಗುರುತ್ವಾಕರ್ಷಣಾ ಬಲದ ಆಧಾರದಲ್ಲಿ ನೇರವಾಗಿ ಗ್ರಾಮಕ್ಕೆ ನೀರು ಪೂರೈಸುವ ಯೋಜನೆಗೆ ಅರಣ್ಯ ಇಲಾಖೆ ತಡೆಯೊಡ್ಡಿದೆ.

‘35 ವರ್ಷದ ಹಿಂದೆ ಹೊಸನಗರ ತಾಲ್ಲೂಕು ಹೆಗ್ಗೋಡಿನಿಂದ ಇಲ್ಲಿಗೆ ಮದುವೆಯಾಗಿ ಬಂದೆ. ಎಂದೂ ಕುಡಿಯುವ ನೀರಿನ ಸಮಸ್ಯೆ ನೋಡಿರಲಿಲ್ಲ. ತೆರೆದ ಬಾವಿಗಳು ಬೇಸಿಗೆಯಲ್ಲೂ ತುಂಬಿ     ತುಳುಕಾಡುತ್ತಿದ್ದವು. ಈ ವರ್ಷ ಬಾವಿಗೆ ಹಗ್ಗ ಹಾಕಿದರೆ ಅರ್ಧ ಕೊಡ ತುಂಬುತ್ತಿಲ್ಲ. ಇಲ್ಲಿರುವ 70 ಕುಟುಂಬಗಳ ಸ್ಥಿತಿಯೂ ಇದೇ ಆಗಿದೆ.

ಬಾವಿಗಳಲ್ಲಿ ನೀರು ಬತ್ತಿದೆ ಎಂದು ಕಾಡಿಗೆ ಹೋಗಿ ನೀರು ತರಲು ಕಾಡು ಪ್ರಾಣಿಗಳ ಕಾಟ. ಬೇಗನೆ ಮಳೆ ಬಾರದೇ ಹೋದರೆ ನಮ್ಮ ಪಾಡು ಹೇಳತೀರದು’ ಎಂದು ಸಮಸ್ಯೆಗಳ ಸರಮಾಲೆಯನ್ನೇ ತೆರೆದಿಟ್ಟರು ನೇತ್ರಾವತಿ ಶ್ರೀನಿವಾಸ ಗೌಡ. ಅವರ ಮಾತಿಗೆ ಸಾಕಮ್ಮ, ರಾಜಮ್ಮ, ಸುಶೀಲಮ್ಮ ದನಿಗೂಡಿಸಿದರು.

ಕಳೆದ ವರ್ಷವೇ ಅತ್ಯಂತ ಕಡಿಮೆ ಮಳೆ
ಆಗುಂಬೆ ಭಾಗದಲ್ಲಿ 60ರ ದಶಕಕ್ಕೂ ಮೊದಲು ವಾರ್ಷಿಕ ಸರಾಸರಿ ಮಳೆ ಪ್ರಮಾಣ 10 ಸಾವಿರ ಮಿ.ಮೀ ದಾಟುತ್ತಿತ್ತು. 1970ರಿಂದ ಈಚೆಗೆ ಸ್ವಲ್ಪ ಮಳೆ ಪ್ರಮಾಣ ಕಡಿಮೆಯಾಗಿದ್ದರೂ, ಸರಾಸರಿ 8 ಸಾವಿರ ಮಿ.ಮೀಗಿಂತ ಕಡಿಮೆಯಾಗಿರಲಿಲ್ಲ. 2000ದಲ್ಲಿ ಮಾತ್ರ ಈ ಪ್ರಮಾಣ 8 ಸಾವಿರದ ಕೆಳಗೆ ಕುಸಿದಿತ್ತು. 1972, 79, 87ರಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ಬಿಟ್ಟರೆ,  ಕಳೆದ ವರ್ಷವೇ ಅತ್ಯಂತ ಕಡಿಮೆ (6 ಸಾವಿರ ಮಿ.ಮೀ) ಮಳೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT