ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಾಳ ಕ್ಷೇತ್ರ: ಶೇ 44ರಷ್ಟು ಮತದಾನ

ಕಾಣದ ಉತ್ಸಾಹ: ಕಳೆದ ಬಾರಿಗಿಂತ ಶೇ 10ರಷ್ಟು ಮತದಾನ ಇಳಿಕೆ * ಗುರುತಿನ ಚೀಟಿ ಮರೆತ ಜಯಮಾಲಾ
Last Updated 14 ಫೆಬ್ರುವರಿ 2016, 9:10 IST
ಅಕ್ಷರ ಗಾತ್ರ

ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶನಿವಾರ ಶೇ 44.48ರಷ್ಟು ಮತದಾನವಾಗಿದೆ. 2013ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಮತದಾನದ ಪ್ರಮಾಣ ಶೇ 10ರಷ್ಟು ಕಡಿಮೆ ಆಗಿದೆ.

2013ರಲ್ಲಿ ಶೇ 54.89 ಮತದಾನ ನಡೆದಿತ್ತು.  2,10,497 ಮತದಾರರ ಪೈಕಿ 1,15,542 ಮಂದಿ ಮತ ಚಲಾಯಿಸಿದ್ದರು.

ಈ ಬಾರಿ 2,43,703 ಮತದಾರರ ಪೈಕಿ 1,08,401 ಮಂದಿ ಹಕ್ಕನ್ನು ಚಲಾಯಿಸಿದ್ದಾರೆ. 56,898 ಪುರುಷರು ಹಾಗೂ 51,503 ಮಹಿಳೆಯರು ಮತದಾನ ಮಾಡಿದ್ದಾರೆ. ಕ್ಷೇತ್ರದಲ್ಲಿ 14 ಮಂದಿ ತೃತೀಯಲಿಂಗಿ ಮತದಾರರಿದ್ದು, ಒಬ್ಬರೂ ಮತ ಚಲಾಯಿಸಿಲ್ಲ.

ವಿ.ನಾಗೇನಹಳ್ಳಿ ಸರ್ಕಾರಿ ಶಾಲೆಯ ಮತಗಟ್ಟೆಯ ಬಳಿ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದನ್ನು ಹೊರತುಪಡಿಸಿದರೆ ಬಹುತೇಕ ಎಲ್ಲ ಕಡೆ ಮತದಾನ ಶಾಂತಿಯುತವಾಗಿತ್ತು.  

ಕಾಣದ ಉತ್ಸಾಹ: ಬೆಳಿಗ್ಗೆಯಿಂದ ಸಂಜೆವರೆಗೂ ಹೆಚ್ಚಿನ ಮತಗಟ್ಟೆಗಳ ಬಳಿ ಮತದಾನದ ಉತ್ಸಾಹ ಕಂಡುಬರಲಿಲ್ಲ. ಮಧ್ಯಾಹ್ನ 1 ಗಂಟೆಯವರೆಗೆ ಹೆಚ್ಚಿನ ಕಡೆಗಳಲ್ಲಿ ಶೇ 25ರಷ್ಟೂ ಮತದಾನ ಆಗಿರಲಿಲ್ಲ.  ಸಂಜೆ 3 ಗಂಟೆ ವೇಳೆಗೆ ಕ್ಷೇತ್ರದಾದ್ಯಂತ  ಶೇ 32 ರಷ್ಟು ಮತದಾನ ನಡೆದಿತ್ತು. ಸಂಜೆಯ ವೇಳೆಗಾದರೂ ಮತದಾನದ ಪ್ರಮಾಣ ಹೆಚ್ಚಬಹುದು ಎಂಬ ನಿರೀಕ್ಷೆಯೂ ಹುಸಿಯಾಯಿತು. 

ಗುರುತಿನ ಚೀಟಿ ಮರೆತ ಜಯಮಾಲಾ: ವಿಧಾನ ಪರಿಷತ್‌ ಸದಸ್ಯೆ ಜಯಮಾಲಾ ಅವರು ಮತದಾನ ಮಾಡಲು ಪುತ್ರಿ ಸೌಂದರ್ಯ  ಜತೆ ಡಾಲರ್ಸ್‌ ಕಾಲೊನಿಯ ಗೋಪಾಲ ರಾಮನಾರಾಯಣ ಸರ್ಕಾರಿ ಶಾಲೆಯ ಮತಗಟ್ಟೆಗೆ ಬಂದಿದ್ದರು. ಗುರುತಿನ ಚೀಟಿ ಮರೆತು ಬಂದ ಅವರನ್ನು ಮತಗಟ್ಟೆ ಅಧಿಕಾರಿಗಳು ಹಿಂದಕ್ಕೆ ಕಳುಹಿಸಿದರು. ಮನೆಗೆ ಹೋಗಿ ಗುರುತಿನ ಚೀಟಿ ತಂದ ಬಳಿಕವೇ ಅಧಿಕಾರಿಗಳು ಅವರಿಬ್ಬರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಿದರು.

ಇದೇ ಮತಗಟ್ಟೆಯಲ್ಲಿ ಮತ ಚಲಾಯಿಸಲು ಬಂದ ಹಿರಿಯ ನಾಗರಿಕ ಕುರಿಯನ್‌ ಥಾಮಸ್‌ ಅವರಿಗೆ  ಮತದಾನ ಮಾಡಲು ಅಧಿಕಾರಿಗಳು ಮೊದಲು ಅವಕಾಶ ನೀಡಲಿಲ್ಲ. ಮತದಾರರ ಪಟ್ಟಿಯಲ್ಲಿ ಅವರ ಹೆಸರಿನ ಮುಂದೆ  ಬೇರೊಬ್ಬರ ಭಾವಚಿತ್ರ ಮುದ್ರಣವಾಗಿತ್ತು.

ಬಳಿಕ ಮತಗಟ್ಟೆ ಅಧಿಕಾರಿ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು. ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ, ಮತದಾನಕ್ಕೆ ಅವಕಾಶ ನೀಡಬಹುದು ಎಂದು ಹಿರಿಯ  ಅಧಿಕಾರಿಗಳು ತಿಳಿಸಿದ ಬಳಿಕ ಅವರಿಗೆ ಮತ ಚಲಾಯಿಸುವುದಕ್ಕೆ ಅವಕಾಶ ಕಲ್ಪಿಸಲಾಯಿತು.

ವಿ.ನಾಗೇನಹಳ್ಳಿ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ 100 ವರ್ಷದ ಮುನಿಯಪ್ಪ ಎಂಬವರು ಮತ ಚಲಾಯಿಸಿದರು.

‘ಸ್ವಾತಂತ್ರ್ಯ ಬಂದಾಗಿನಿಂದ ಮತ ಚಲಾಯಿಸುತ್ತಿದ್ದೇನೆ. ಹಿಂದೆ ನಡೆಯುತ್ತಿದ್ದ ಮತದಾನದ ಖದರ್ರೇ ಬೇರೆ. ಈಗ ಜನರಲ್ಲಿ ಮತ ಚಲಾಯಿಸುವ ಉತ್ಸಾಹ ಕುಗ್ಗಿದೆ’ ಎಂದು ಮುನಿಯಪ್ಪ ಬೇಸರ ವ್ಯಕ್ತಪಡಿಸಿದರು.

‘ಮತ ಚಲಾಯಿಸುವುದು ನನ್ನ ಹಕ್ಕು. ಹಕ್ಕು ಚಲಾಯಿಸುವುದನ್ನು ನಾನು ತಪ್ಪಿಸುವುದಿಲ್ಲ’ ಎಂದರು.

ಮತಯಂತ್ರದಲ್ಲಿ ದೋಷ: ಮತಗಟ್ಟೆ ಸಂಖ್ಯೆ 63, 88 ಹಾಗೂ 103ರಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತು.  ಬಳಿಕ ತಂತ್ರಜ್ಞರನ್ನು ಕರೆಸಿ ಮತಯಂತ್ರವನ್ನು ಸರಿಪಡಿಸಲಾಯಿತು.

‘ಮತಯಂತ್ರಗಳಲ್ಲಿ ಸಣ್ಣ ಪುಟ್ಟ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಅದನ್ನು ಸರಿಪಡಿಸಿದ್ದೇವೆ. ಯಾವುದೇ ಮತಯಂತ್ರವನ್ನು ಬದಲಾಯಿಸಬೇಕಾದ ಪ್ರಮೇಯ ಸೃಷ್ಟಿಯಾಗಿಲ್ಲ’ ಎಂದು ಚುನಾವಣಾಧಿಕಾರಿ ಎಂ.ಶಿಲ್ಪಾ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಂಗ್ರೆಸ್‌ ಅಭ್ಯರ್ಥಿ ಸಿ.ಕೆ.ಅಬ್ದುಲ್‌ ರೆಹಮಾನ್‌ ಷರೀಫ್‌, ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಹಾಗೂ ಜೆಡಿಎಸ್‌ ಅಭ್ಯರ್ಥಿ ಇಸ್ಮಾಯಿಲ್‌ ಷರೀಫ್‌ ನಾನಾ ಅವರು ಹೆಬ್ಬಾಳ ಕ್ಷೇತ್ರದಲ್ಲಿ ಮತದಾನದ  ಹಕ್ಕು ಹೊಂದಿರಲಿಲ್ಲ.

ಹೆಬ್ಬಾಳದ ಜಿಕೆವಿಕೆ ಪ್ರಾಂಗಣದ ಡೈರಿ ವಿಜ್ಞಾನ ಕಾಲೇಜಿನಲ್ಲಿ   ಇದೇ 16ರಂದು ಮತ ಎಣಿಕೆ ನಡೆಯಲಿದೆ.

ವಿ.ನಾಗೇನಹಳ್ಳಿ–ಚಕಮಕಿ
ಕೆ.ಆರ್‌.ಪುರದ ಕ್ಷೇತ್ರದ ಪಾಲಿಕೆ ಸದಸ್ಯರೊಬ್ಬರಿಗೆ ಸೇರಿದ ಎನ್ನಲಾದ ಕಾರು ವಿ.ನಾಗೇನಹಳ್ಳಿಯ ಚರ್ಚ್‌ ಪರಿಸರದಲ್ಲಿ  ಓಡಾಡುತ್ತಿತ್ತು. ಮತಗಟ್ಟೆ ಬಳಿ  ಹೆಬ್ಬಾಳ ಕ್ಷೇತ್ರಕ್ಕೆ ಸಂಬಂಧ ಪಡದ ಕೆಲವರು ಕಾಣಿಸಿಕೊಂಡಿದ್ದರು. ಇದಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಅಷ್ಟರಲ್ಲೇ ಸ್ಥಳಕ್ಕೆ ಬಂದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಅವರೂ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿದ ಪರಿಸ್ಥಿತಿ ತಿಳಿಗೊಳಿಸಿದರು.

ನಾರಾಯಣಸ್ವಾಮಿ ಸುದ್ದಿಗಾರರ ಜತೆ ಮಾತನಾಡಿ, ‘ಶಾಸಕ ಬೈರತಿ ಬಸವರಾಜು ಬೆಂಬಲಿಗರು ಈ ಕ್ಷೇತ್ರಕ್ಕೆ ಬಂದು ಹಣ ಹಂಚುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ಸಿದ್ದರಾಮಯ್ಯ ರಿಪಬ್ಲಿಕ್‌ ನಿರ್ಮಿಸಲು ಹೊರಟಿದೆ. ಇದಕ್ಕೆ ಚುನಾವಣಾಧಿಕಾರಿಗಳು ಅವಕಾಶ ಕೊಡಬಾರದು. ಇದನ್ನು ತಡೆಯದಿದ್ದರೆ ನಾನು ಧರಣಿ ಕುಳಿತುಕೊಳ್ಳುತ್ತೇನೆ. ಇದು ಮುಂದುವರಿದರೆ ನಾವೂ ಗಲಾಟೆ ಮಾಡಲು ಸಿದ್ಧ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT