ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ ಆದೇಶವನ್ನೇ ಧಿಕ್ಕರಿಸಿದ ಪಾಲಿಕೆ!

ಮರಗಳ ಸಮೀಕ್ಷೆಗೆ ನಿರ್ದೇಶನ ನೀಡಿ ಎರಡು ವರ್ಷವಾದರೂ ಸುಮ್ಮನೆ ಕುಳಿತ ಅಧಿಕಾರಿಗಳು
Last Updated 27 ಜೂನ್ 2016, 20:03 IST
ಅಕ್ಷರ ಗಾತ್ರ

ಬೆಂಗಳೂರು: ಮರಗಳ ಸಮಗ್ರ ಸಮೀಕ್ಷೆ ನಡೆಸಿ ವರದಿ ನೀಡುವಂತೆ 2014ರ ಮಾರ್ಚ್‌ನಲ್ಲೇ ಹೈಕೋರ್ಟ್‌ ಸೂಚನೆ ನೀಡಿದ್ದರೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದುವರೆಗೆ ಸಮೀಕ್ಷಾ ಕಾರ್ಯವನ್ನು ಆರಂಭಿಸಿಲ್ಲ.

ನಗರದಲ್ಲಿ ಯಾವ ಪ್ರಭೇದದ ಎಷ್ಟು ಮರಗಳಿವೆ, ಅವುಗಳಲ್ಲಿ ರೋಗಗ್ರಸ್ತ, ಒಣಗಿನಿಂತ ಮರಗಳು ಎಷ್ಟು, ಸಂಚಾರ ಹಾಗೂ ಪ್ರಾಣಕ್ಕೆ ಸಂಚಕಾರ ತರಬಹುದಾದ ಮರಗಳು ಯಾವುವು ಎಂಬ ಮಾಹಿತಿಯೂ ಸೇರಿದಂತೆ ವೃಕ್ಷ ಸಂಕುಲಕ್ಕೆ ಸಂಬಂಧಿಸಿದ ಸಮಗ್ರ ವಿವರ ಈ ಸಮೀಕ್ಷೆಯಿಂದ ಬೆಳಕಿಗೆ ಬರಬೇಕಿದೆ.

ಆದರೆ, ರಾಜ್ಯ ನಗರಾಭಿವೃದ್ಧಿ ಇಲಾಖೆಯಿಂದ ಆದೇಶ ಬಂದಿಲ್ಲ ಎಂದು ಸಮಯ ತಳ್ಳುತ್ತಾ ಬಂದಿದ್ದ ಬಿಬಿಎಂಪಿ, ಈಗ ಮಳೆಗಾಲ ಮುಗಿದ ತಕ್ಷಣವೇ ಸಮೀಕ್ಷಾ ಕಾರ್ಯವನ್ನು ಆರಂಭ ಮಾಡಲಾಗುವುದು ಎನ್ನುತ್ತಿದೆ.

ಪ್ರತಿವರ್ಷ ಲಕ್ಷಗಟ್ಟಲೆ ಸಸಿ ನೆಟ್ಟ ದಾಖಲೆಗಳನ್ನು ಸಹ ಬಿಬಿಎಂಪಿ ಕೊಟ್ಟಿದೆ. ಹೈಕೋರ್ಟ್‌ನಲ್ಲಿ ಈ ಸಂಬಂಧ ಅನುಮಾನ ವ್ಯಕ್ತಪಡಿಸಲಾಗಿತ್ತು. ‘ಆ ಸಸಿಗಳನ್ನು ಅಧಿಕಾರಿಗಳು ತೋರಿಸಲು ಸಾಧ್ಯವೇ’ ಎಂದೂ ಪ್ರಶ್ನಿಸಲಾಗಿತ್ತು.

‘ನಗರದಲ್ಲಿರುವ ಹಳೆಯ ಮರಗಳ ಜತೆಗೆ ನೀವು ನೆಟ್ಟಿರುವ ಸಸಿಗಳ ಸ್ಥಿತಿ ಏನಾಗಿದೆ ಎಂಬ ವಿವರವೂ ಬೇಕು’ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಹೈಕೋರ್ಟ್‌ ತಾಕೀತು ಮಾಡಿತ್ತು. ಅದರ ಸ್ಪಷ್ಟ ನಿರ್ದೇಶನದ ಹೊರತಾಗಿಯೂ ತಾಂತ್ರಿಕ ನೆಪವನ್ನು ಮುಂದೆ ಮಾಡುತ್ತಾ ಕಳೆದ ಎರಡು ವರ್ಷಗಳಿಂದ ಸಮೀಕ್ಷಾ ಕಾರ್ಯವನ್ನು ಮುಂದಕ್ಕೆ ಹಾಕುತ್ತಲೇ ಬರಲಾಗಿದೆ.

ಸಮೀಕ್ಷಾ ಕಾರ್ಯಕ್ಕೆ ಕೋರ್ಟ್‌ ನಿರ್ದೇಶನದಂತೆ ಪರಿಸರ ತಜ್ಞರು ಹಾಗೂ ಅರಣ್ಯ ಘಟಕದ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಬೇಕಿತ್ತು. ಆದರೆ, ಇದುವರೆಗೆ ಸಮಿತಿ ರಚನೆಯೇ ಆಗಿಲ್ಲ.

ಪ್ರತಿಸಲ ಮಳೆಗಾಲ ಬಂದಾಗಲೂ ಒಣಮರಗಳ ಸಮೀಕ್ಷೆ ನಡೆಸಿ, ತೆರವುಗೊಳಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಲೇ ಇದೆ. ಬೇರು ಸಡಿಲಗೊಂಡ ಮರಗಳು ಜೋರಾದ ಗಾಳಿಗೆ ಮನೆ, ವಾಹನಗಳ ಮೇಲೆ ಉರುಳಿ ಬಿದ್ದು ಜೀವ ಹಾಗೂ ಆಸ್ತಿ ಹಾನಿ ಆಗುತ್ತಲೇ ಇದೆ.

‘ಮಳೆ ಬಂತೆಂದರೆ ಯಾವ ಮರ ಯಾವಾಗ ಬೀಳುತ್ತದೋ ಎಂಬ ಭಯವಾಗುತ್ತದೆ. ಗಾಳಿ ಬೀಸುವಾಗ ಮನೆಯಿಂದ ಹೊರಗೆ ಬರದಿರುವುದೇ ಲೇಸು. ವರ್ಷಪೂರ್ತಿ ಸುಮ್ಮನಿರುವ ಬಿಬಿಎಂಪಿ, ಮಳೆಯಿಂದ ಮರ ಉರುಳಿದಾಗ ಮಾತ್ರ ಗರಗಸ ಕೈಗೆತ್ತಿಕೊಳ್ಳುತ್ತದೆ’ ಎನ್ನುತ್ತಾರೆ ಮಲ್ಲೇಶ್ವರದ ನಿವಾಸಿ ಎ.ಆರ್‌.ವನಜಾ.

‘ಮನೆಯಿಂದ ಹೊರ ಹೋದವರು ಮಳೆ ಬಂದಾಗ ಪಕ್ಕದ ಮರದ ಬುಡದಲ್ಲಿ ಆಶ್ರಯ ಪಡೆಯುವುದು ವಾಡಿಕೆ. ಈಗ ಮರದ ಅಡಿಯಲ್ಲಿ ನಿಲ್ಲಲು ಎಲ್ಲರೂ ಅಂಜುತ್ತಾರೆ’ ಎಂದು ವಿವರಿಸುತ್ತಾರೆ.

‘ಮರಗಳ ಸಮೀಕ್ಷೆ ನಡೆದಿಲ್ಲ ನಿಜ. ಧರೆಗುರುಳಿದ ಮರಗಳನ್ನು ತ್ವರಿತವಾಗಿ ತೆರವುಗೊಳಿಸಲು ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಸಿಬ್ಬಂದಿ ಕೊರತೆಯಿದ್ದರೂ ಯಾಂತ್ರಿಕ ಗರಗಸ, ಟ್ರ್ಯಾಕ್ಟರ್‌ ಮತ್ತು ದಿನಗೂಲಿ ನೌಕರರನ್ನು ಕಾರ್ಯಪಡೆಗೆ ಒದಗಿಸಲಾಗಿದೆ’ ಎಂದು ಹೇಳುತ್ತಾರೆ ಬಿಬಿಎಂಪಿ ಅರಣ್ಯ ಘಟಕದ ಅಧಿಕಾರಿ ರಂಗನಾಥಸ್ವಾಮಿ.

‘ಮರಗಳ ನಿರ್ವಹಣೆಯಲ್ಲಿ ಪಾಲಿಕೆ ಭಾರಿ ನಿರ್ಲಕ್ಷ್ಯ ತೋರುತ್ತಿದೆ. ಹೊಸ ಕಟ್ಟಡ ಹಾಗೂ ರಸ್ತೆಗಳು ಪ್ರತಿದಿನ ನಿರ್ಮಾಣ ಆಗುತ್ತಿರುವ ಕಾರಣ, ಬೇರುಗಳಿಗೆ ಉಸಿರು ಕಟ್ಟುತ್ತಿದ್ದು, ಇದರಿಂದ ಮರಗಳ ಸಮತೋಲನ ತಪ್ಪುತ್ತಿದೆ. ಈಗ ನಡೆದಿರುವ ದುರ್ಘಟನೆಗಳಿಗೆ ಅದೇ ಕಾರಣ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಂಶೋಧಕ ಡಾ. ಟಿ.ವಿ. ರಾಮಚಂದ್ರ ವಿವರಿಸುತ್ತಾರೆ.

ಐಐಎಸ್ಸಿ ತಂಡ ಎರಡು ವರ್ಷಗಳ ಹಿಂದೆ ನಗರದಲ್ಲಿ ಮರಗಳ ಸಮೀಕ್ಷೆಯನ್ನು ನಡೆಸಿತ್ತು. ನಗರದಲ್ಲಿ 14.78 ಲಕ್ಷ ಮರಗಳಿವೆ. ನಾಲ್ಕು ದಶಕಗಳಲ್ಲಿ ನಗರ ಶೇ 584ರಷ್ಟು ಕಟ್ಟಡಗಳ ಹೆಚ್ಚುವಿಕೆಗೆ, ಶೇ 74ರಷ್ಟು ಜಲಮೂಲಗಳು ಮತ್ತು ಶೇ 66ರಷ್ಟು ಮರಗಳ ನಶಿಸುವಿಕೆಗೆ ಸಾಕ್ಷಿಯಾಗಿದೆ ಎಂದು ಸಮೀಕ್ಷಾ ವರದಿಯಲ್ಲಿ ವಿವರಿಸಲಾಗಿತ್ತು.

ಸಮೀಕ್ಷೆಗೆ ಆಧುನಿಕ ತಂತ್ರಜ್ಞಾನ: ಮರಗಳ ಎಣಿಕೆ ಮಾಡಲು ಸಾಂಪ್ರದಾಯಿಕ ವಿಧಾನಗಳಲ್ಲಿ ಅಧಿಕ ಸಮಯ ಮತ್ತು ಮಾನವ ಸಂಪನ್ಮೂಲದ ಅಗತ್ಯವಿದೆ. ದೋಷಗಳು ಉಳಿಯುವ ಸಾಧ್ಯತೆಯೂ ಇದೆ. ದೂರ ಸಂವೇದಿ ಮತ್ತು ಭೂಮಾಹಿತಿ ತಂತ್ರಜ್ಞಾನದಿಂದ ದೋಷರಹಿತವಾಗಿ ವಿವರ ಕಲೆ ಹಾಕಬಹುದು ಎನ್ನುತ್ತಾರೆ ಡಾ. ರಾಮಚಂದ್ರ.

‘ಪ್ರತಿಯೊಂದು ಪ್ರದೇಶದ ಮಾಹಿತಿ ವಿವಿಧ ಭೂವೈಶಿಷ್ಟ್ಯ ಹಾಗೂ ರಚನೆಗಳ ವಿವರವನ್ನು ಹೊಂದಿರುತ್ತದೆ. ಅದನ್ನು ಬಹು-ದೃಶ್ಯ (ಮಲ್ಟಿ ರೆಸಲ್ಯೂಷನ್) ದೂರ ಸಂವೇದಿ ವ್ಯವಸ್ಥೆಯಿಂದ ಸೆರೆ ಹಿಡಿಯಲು ಸಾಧ್ಯ. ಪ್ಯಾನ್‍ಕ್ರೋಮ್ಯಾಟಿಕ್ ಮತ್ತು ಮಲ್ಟಿಸ್ಪೆಕ್ಟ್ರಲ್ ಸಂವೇದಕಗಳಿಂದ ದೊರೆತ ಪ್ರಾದೇಶಿಕ ಚಿತ್ರ ಮಾಹಿತಿಯನ್ನು ಸಮ್ಮಿಳನ ತಂತ್ರಜ್ಞಾನದ ಮೂಲಕ ಸಂಸ್ಕರಿಸಬಹುದು. ಆ ಮೂಲಕ ನಿರ್ದಿಷ್ಟ ಪರಿಸರದ ನಿಖರ ಸ್ಥಿತಿಯನ್ನು ತಿಳಿಯಬಹುದು’ ಎಂದು ವಿವರಿಸುತ್ತಾರೆ. 

‘ನಾವು ಈ ಸಮ್ಮಿಳನ ತಂತ್ರಜ್ಞಾನದಿಂದ ಮರಗಳ ಸಮೀಕ್ಷೆ ಮಾಡಿದ್ದೇವೆ. ಹಸಿರು ಪ್ರದೇಶವನ್ನು ಗುರುತಿಸಿ, ದಾಖಲಿಸಿದ್ದೇವೆ. ಪ್ರತೀ ವಾರ್ಡ್‌ನಲ್ಲಿರುವ ಮರಗಳನ್ನು ಪತ್ತೆ ಹಚ್ಚಿದ್ದೇವೆ’ ಎಂದು ಹೇಳುತ್ತಾರೆ.

ಮರಗಳೇಕೆ ಉರುಳಿ ಬೀಳುತ್ತವೆ?
‘ಮರಗಳು ಉರುಳಿ ಬೀಳಲು ಮುಖ್ಯವಾಗಿ ಮೂರು ಕಾರಣಗಳು. ವಯಸ್ಸಾದ ಮರಗಳು ಜೀವ ಕಳೆದುಕೊಂಡು, ಕಾಂಡ ಕೊಳೆಯುತ್ತಾ ಉರುಳಿ ಬೀಳುವುದು ಸ್ವಾಭಾವಿಕ. ಜತೆಗೆ ರೋಗಗ್ರಸ್ತ ಮರಗಳು ಅಕಾಲಿಕವಾಗಿ ಜೀವ ಕಳೆದುಕೊಳ್ಳುತ್ತವೆ’ ಎನ್ನುತ್ತಾರೆ ಸಸ್ಯವಿಜ್ಞಾನಿ ಡಾ.ಎನ್‌.ಪಿ. ನಾಯರ್‌.

‘ನಮ್ಮ ನಿರ್ಮಾಣ ಹಾಗೂ ಅಭಿವೃದ್ಧಿ ಚಟುವಟಿಕೆಗಳು ಮರಗಳ ಜೀವ ಹಿಂಡುವುದು ಮೂರನೇ ಕಾರಣ. ಬೃಹತ್‌ ಕಟ್ಟಡಗಳು, ಸೇತುವೆಗಳು, ರಸ್ತೆಗಳ ನಿರ್ಮಾಣದ ಭರದಲ್ಲಿ ಮರಗಳ ಬೇರುಗಳ ಜಾಲವನ್ನೇ ನಾಮಾವಶೇಷ ಮಾಡಲಾಗುತ್ತದೆ.

ಭೂಮಿಯ ಮೇಲ್ಭಾಗದಲ್ಲಿ ಎಷ್ಟು ವಿಶಾಲವಾಗಿ ಮರದ ರೆಂಬೆ–ಕೊಂಬೆಗಳು ಚಾಚಿರುತ್ತವೆಯೋ, ಭೂಮಿಯ ಒಡಲಲ್ಲಿ ಅದರ ಬೇರುಗಳ ಜಾಲ ಅಷ್ಟೇ ವಿಶಾಲವಾಗಿ ಹರಡಿರುತ್ತದೆ. ಮರ ಸದೃಢವಾಗಿ ಬೆಳೆದು, ನಿಲ್ಲಲು ಈ ಸಮತೋಲನ ಅತ್ಯಗತ್ಯ. ಆದರೆ, ಪಾಯ ತೋಡುವ ಭರದಲ್ಲಿ ಮರಗಳ ಬೇರುಗಳಿಗೆಲ್ಲ ಕೊಡಲಿ ಪೆಟ್ಟು ಬಿದ್ದಿರುತ್ತದೆ’ ಎಂದು ಅವರು ವಿವರಿಸುತ್ತಾರೆ.

‘ಸಮತೋಲನ ಕಳೆದುಕೊಂಡ ಮರ ಜೋರು ಮಳೆ–ಗಾಳಿಗೆ ಬೀಳುವುದು ಸಹಜ’ ಎಂದು ಅವರು ಹೇಳುತ್ತಾರೆ. ‘ಮರಗಳ ಕಾಂಡದ ಸುತ್ತ ಟಾರು ಹಾಗೂ ಕಾಂಕ್ರೀಟ್‌ನ ಹೊದಿಕೆ ಬಿದ್ದಿರುವುದನ್ನು ನಗರದ ತುಂಬಾ ಕಾಣಬಹುದು. ಇಂತಹ ವ್ಯವಸ್ಥೆ ಕೂಡ ಮರಗಳಿಗೆ ಮಾರಕ. ಅವುಗಳಿಗೆ ಬಿದ್ದ ಕುಣಿಕೆ’ ಎನ್ನುತ್ತಾರೆ ಅವರು.

‘ಮೆದು ಮರಗಳು ಬಿರುಗಾಳಿಯಿಂದ ಉಂಟಾಗುವ ಒತ್ತಡವನ್ನು ತಾಳಿಕೊಳ್ಳುವ ಸಾಮರ್ಥ್ಯವಿಲ್ಲದೆ ಉರುಳಿ ಬೀಳುತ್ತವೆ. ಆದ್ದರಿಂದ ಮಾವು, ಬೇವು, ಹೊಂಗೆಯಂತಹ ಗಟ್ಟಿ ಪ್ರಭೇದದ ಸಸಿಗಳನ್ನೇ ನೆಡುವುದು ಉತ್ತಮ’ ಎಂದು ಅವರು ಸಲಹೆ ನೀಡುತ್ತಾರೆ.

ನಗರದಲ್ಲಿ ಸಿಗುವ ವೃಕ್ಷ ಸಂಕುಲ
ಸ್ಥಳೀಯ ಪ್ರಭೇದಗಳು: ಹಲಸು, ಮಾವು, ಬೇವು, ಹತ್ತಿ, ಬೂರುಗ, ಆಲ, ಅಶ್ವತ್ಥ, ಸೌಸಗೆ, ಮಂದಾರ, ಇಪ್ಪೆ, ಮಲಬಾರ್ ಬೇವು, ಕದಂಬ, ಹೊಂಗೆ, ಹೊನ್ನೆ, ನೇರಳೆ, ಅಶೋಕ, ಮಹಾಗನಿ, ಆರ್ಜುನ, ತಾರೆ

ಅನ್ಯಪ್ರದೇಶದ ಪ್ರಭೇದಗಳು: ಗುಲ್ ಮೊಹರ್, ಶಿರೀಶ (ರೇನ್ ಟ್ರೀ), ಶಿವಲಿಂಗ ಮರ, ಕಾಪರ್ ಪೊಡ್, ಬೆಂಕಿ ಹೂ ಮರ.

ಮರದಿಂದ ಪ್ರಯೋಜನಗಳು
* ಸೂಕ್ಷ್ಮ ವಾತಾವರಣದ ಸಮತೋಲನ ಕಾಪಾಡುತ್ತದೆ. ತೇಲುವ ಕಣಗಳ ಪ್ರಮಾಣ ತಗ್ಗಿಸುತ್ತದೆ.
* ಇಂಗಾಲದ ಕ್ರೋಡೀಕರಣ ಮಾಡುತ್ತದೆ ಮತ್ತು ವಾಯು ಮಾಲಿನ್ಯ ತಡೆಗಟ್ಟುತ್ತದೆ.
* ಹಸಿರು ಮನೆ ಅನಿಲ ಹೀರುತ್ತದೆ.
* ಮರದಿಂದ ವಾತಾನುಕೂಲಿಗಳ ಬಳಕೆ ತಗ್ಗುವುದರಿಂದ ವಿದ್ಯುತ್‌ ಶಕ್ತಿ ಉಳಿತಾಯ ಆಗುತ್ತದೆ. ಗಾಳಿ ಮತ್ತು ಜಲ ಶುದ್ಧೀಕರಣಕ್ಕೆ ನೆರವಾಗುತ್ತದೆ.
* ನೀರಿನ ಹರಿಯುವಿಕೆಯನ್ನು ಕಡಿಮೆ ಮಾಡುತ್ತದೆ.
* ನಗರದ ಉಷ್ಣದ್ವೀಪ ಪ್ರಭಾವವನ್ನು ತಗ್ಗಿಸುತ್ತದೆ.


ಬೆಂಗಳೂರು 133 ಕುಟುಂಬದ, 542 ಜಾತಿಯ, 979 ಪ್ರಭೇದದ ನೈಸರ್ಗಿಕ ವನ್ಯ ಸಂಪತ್ತನ್ನು ಹೊಂದಿತ್ತು. ಈಗ ಅರ್ಧದಷ್ಟೂ ಇಲ್ಲ ಎನ್ನುತ್ತದೆ ಐಐಎಸ್ಸಿ ಸಮೀಕ್ಷಾ ವರದಿ.

** *** **
ಪಾಲಿಕೆಯಿಂದ ಒಮ್ಮೆಯೂ ಮರಗಳ ಸಮೀಕ್ಷೆ ನಡೆಸಲಾಗಿಲ್ಲ. ಹೀಗಾಗಿ ಎಷ್ಟು ಮರಗಳಿವೆ ಎಂಬ ವಿವರ ಗೊತ್ತಿಲ್ಲ. ಮಳೆಗಾಲ ಮುಗಿದೊಡನೆ ಸಮೀಕ್ಷೆ ಕಾರ್ಯ ಆರಂಭಿಸುತ್ತೇವೆ.
-ರಂಗನಾಥಸ್ವಾಮಿ,
ಬಿಬಿಎಂಪಿ ಅರಣ್ಯ ಘಟಕದ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT