ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಡಿತನದ ಹೇಯ ಕೃತ್ಯ

Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಪಾಕಿಸ್ತಾನದ ಪೆಶಾವರದಲ್ಲಿ ತೆಹ್ರಿಕ್‌-ಎ-ತಾಲಿಬಾನ್‌ ಉಗ್ರರು ಸೇನಾ ಪಬ್ಲಿಕ್‌ ಶಾಲೆಯ ಮೇಲೆ ಆತ್ಮಹತ್ಯಾದಾಳಿ ನಡೆಸಿ 132 ವಿದ್ಯಾರ್ಥಿಗಳ ಸಹಿತ 140ಕ್ಕೂ ಹೆಚ್ಚು ಮಂದಿಯನ್ನು ಹತ್ಯೆಗೈದಿದ್ದಾರೆ. ಶಾಲೆ­ಯಲ್ಲಿ ಅಕ್ಷರ ಕಲಿಯುತ್ತಿದ್ದ ಮುಗ್ಧ ಮಕ್ಕಳನ್ನು ಪ್ರತೀಕಾರಕ್ಕಾಗಿ ಕೊಂದಿ­ರುವುದನ್ನು ನೋಡಿದರೆ ತಾಲಿಬಾನ್‌ ಉಗ್ರರು ರಾಜಕೀಯವಾಗಿ ಮತ್ತು ನೈತಿಕವಾಗಿ ಸಂಪೂರ್ಣ ಹತಾಶೆಗೆ ಒಳಗಾಗಿದ್ದಾರೆ ಎನ್ನುವುದು ಸ್ಪಷ್ಟ.

ಇಡೀ ಜಗತ್ತೇ ಒಕ್ಕೊರಲಿನಿಂದ ಕಟುವಾಗಿ ಖಂಡಿಸಬೇಕಾದ ಹೇಡಿತನದ ಈ ಕೃತ್ಯ, ಮನುಷ್ಯತ್ವದ ವಿನಾಶಕ್ಕೆ ಪ್ರತೀಕ. ಇದುವರೆಗೆ ಪಾಕಿಸ್ತಾನದಲ್ಲಿ ಸೇನೆ ಮತ್ತು ಉಗ್ರರ ಮಧ್ಯೆ ನಡೆಯುತ್ತಿದ್ದ ಘರ್ಷಣೆ ಈಗ ನಾಗರಿಕ ಸಮಾಜಕ್ಕೂ ವಿಸ್ತ­ರಣೆ ಆದಂತಾಗಿದೆ. ಪಾಕಿಸ್ತಾನ ಸರ್ಕಾರ ಇದನ್ನೊಂದು ರಾಷ್ಟ್ರೀಯ ದುರಂತ ಎಂದು ಪರಿಗಣಿಸಿ ಮೂರು ದಿನಗಳ ಶೋಕಾಚರಣೆಯನ್ನೂ ಪ್ರಕಟಿಸಿದೆ.

ಶಾಲಾಮಕ್ಕಳ ಬರ್ಬರ ಹತ್ಯೆಯಿಂದ ಆಘಾತಕ್ಕೆ ಒಳಗಾಗಿರುವ ಪಾಕಿಸ್ತಾನದ ನಾಗರಿಕರಿಗೆ ಸರ್ಕಾರದ ಈ ನಿರ್ಧಾರ ಸ್ವಲ್ಪ ಮಟ್ಟಿನ ಸಾಂತ್ವನ ಎನ್ನಬಹು­ದಾದರೂ, ಘಟನೆಯ ಹೊಣೆಗಾರಿಕೆಯಿಂದ ಸರ್ಕಾರ ನುಣುಚಿಕೊಳ್ಳು­ವಂತಿಲ್ಲ. ‘ಉಗ್ರರ ವಿರುದ್ಧ ನಮ್ಮ ಹೋರಾಟ ಈಗ ನಿರ್ಣಾಯಕ ಹಂತ ತಲುಪಿದೆ. ಕಾರ್ಯಾಚರಣೆ ನಿಲ್ಲದು’ ಎಂದು ಅಲ್ಲಿನ ಪ್ರಧಾನಿ ನವಾಜ್‌ ಷರೀಫ್‌ ಹೇಳಿದ್ದಾರೆ. ಉಗ್ರವಾದ ಮತ್ತು ಭಯೋತ್ಪಾದನೆಯನ್ನು ಆಂಶಿಕ­ವಾಗಿ ಎದುರಿಸುವುದರಿಂದ ಸಂಪೂರ್ಣ ಮಟ್ಟ ಹಾಕಲು ಸಾಧ್ಯವಿಲ್ಲ ಎನ್ನುವು­ದನ್ನು ಪಾಕಿಸ್ತಾನದ ಸರ್ಕಾರ ಈಗಲಾದರೂ ಅರ್ಥ ಮಾಡಿಕೊಳ್ಳಬೇಕಿದೆ.

ಒಂದೆಡೆ ಲಷ್ಕರ್–ಎ– ತಯಬಾ ಸಂಘಟನೆಯ ಉಗ್ರರನ್ನು ಸರ್ಕಾರವೇ ಓಲೈ­ಸುತ್ತಾ, ಇನ್ನೊಂದೆಡೆ ಉಗ್ರವಾದವನ್ನು ಮಟ್ಟ ಹಾಕಲು ಬದ್ಧ ಎನ್ನು­ವುದು ದ್ವಿಮುಖ ನೀತಿಯಾಗುತ್ತದೆ. ಭಯೋತ್ಪಾದಕರು ಭಾರತಕ್ಕೆ ನುಸುಳಿ ಇಲ್ಲಿ ಮಾರಣಹೋಮ ನಡೆಸುವುದನ್ನು ಬಹಿರಂಗವಾಗಿ ಬೆಂಬಲಿಸುವ ಹಫೀಜ್‌ ಸಯೀದ್‌ರಂತಹ ಉಗ್ರರನ್ನು ಬಗಲಿನಲ್ಲಿ ಇಟ್ಟುಕೊಂಡಿರುವ ಪಾಕಿ­ಸ್ತಾನ ಸರ್ಕಾರ, ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಸಾಧ್ಯವೆ? ಭಯೋತ್ಪಾದನೆ ಎನ್ನುವುದು ಮನುಷ್ಯತ್ವದ ವಿರುದ್ಧದ ಸಂಚು.  ಅದರ ವಿರುದ್ಧ ಸಮಗ್ರ ನಿಲುವು ತಳೆದರೆ ಮಾತ್ರ ಹೋರಾಟದಲ್ಲಿ ಪಾಕಿ­ಸ್ತಾನ ಯಶಸ್ಸು ಪಡೆಯಬಹುದು.

ಕೆಲವೇ ವರ್ಷಗಳ ಹಿಂದೆ ತಾಲಿಬಾನ್‌ ಉಗ್ರರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಅಲ್ಲಿನ ಸೇನೆಯ ಮೂಲಕವೇ ಶಸ್ತ್ರಾಸ್ತ್ರಗಳು ಪೂರೈಕೆ­ಯಾಗುತ್ತಿತ್ತು ಎನ್ನುವುದು ರಹಸ್ಯವೇನಲ್ಲ. ರಷ್ಯಾದ ವಿರುದ್ಧ ಆಪ್ಘಾ­ನಿಸ್ತಾನದಲ್ಲಿ ತಾಲಿಬಾನಿಗಳು ಹೋರಾಟ ನಡೆಸುತ್ತಿದ್ದಾಗ, ಶಸ್ತ್ರಾಸ್ತ್ರ ನೆರವು ಒದಗಿಸಿದ್ದ ಅದೇ ಅಮೆರಿಕ, ಈಗ ತಾಲಿಬಾನಿಗಳನ್ನು ಮಟ್ಟ ಹಾಕಲು ಪಾಕಿ­ಸ್ತಾನಕ್ಕೆ ನೆರವಾಗುತ್ತಿದೆ. ಅಮೆರಿಕದ ವಿರುದ್ಧದ ಹೋರಾಟದಲ್ಲಿ ತಾಲಿಬಾ­ನಿ­ಗಳ ಕೈಗೆ ಈಗ ರಷ್ಯಾ, ಚೀನಾದ ಶಸ್ತ್ರಾಸ್ತ್ರಗಳು ಸಿಕ್ಕಿವೆ.

ಜಗತ್ತಿನಾದ್ಯಂತ ಉಗ್ರವಾದದ ಬೇರುಗಳನ್ನು ಕಿತ್ತು ಹಾಕಬೇಕಾದರೆ ಈ ಶಸ್ತ್ರಾಸ್ತ್ರ ಮಾರಾ­ಟದ ಜಾಲವನ್ನೂ ನಿಯಂತ್ರಿಸಬೇಕಿದೆ. ಪಾಕಿಸ್ತಾನದಲ್ಲಿ ಉಗ್ರವಾದ ಬೇರು ಬಿಟ್ಟು ಅಲ್ಲಿನ ಜನರನ್ನೇ ಆಹುತಿ ತೆಗೆದುಕೊಳ್ಳುತ್ತಿರುವ ವಿದ್ಯಮಾನದಿಂದ ಭಾರತವೂ ಕಲಿತುಕೊಳ್ಳಬೇಕಾದದ್ದಿದೆ. ಯಾವುದೇ ರೀತಿಯ ಧಾರ್ಮಿಕ ಉಗ್ರವಾದವನ್ನು ಪರೋಕ್ಷವಾಗಿ ಬೆಂಬಲಿಸುವುದೂ ಮುಂದೊಂದು ದಿನ ಭಾರೀ ಅನಾಹುತಕ್ಕೆ ಕಾರಣವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT