ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಬಗೆಯ ಸಾಂಸ್ಕೃತಿಕ ಚಲನೆ

Last Updated 27 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ನಾನು ಈ ಸಾರಿ ಮಹಾತ್ಮ ಗಾಂಧಿ ಅವರ ‘ಹಿಂದ್‌ ಸ್ವರಾಜ್’ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸುತ್ತಿದ್ದಾಗ ವಿದ್ಯಾರ್ಥಿಯೊಬ್ಬ ನನ್ನ ಬಳಿ ಬಂದು ಹೇಳಿದ್ದು ವಿಶೇಷವಾಗಿತ್ತು. ಅವನಿಗೆ ಸಾಹಿತ್ಯ- ಸಮಾಜ- ಬದಲಾವಣೆ ಅಂತೇನೂ ವಿಶೇಷವಾದ ಆಸಕ್ತಿಗಳಿಲ್ಲದಿದ್ದರೂ ಬಹಳ ಸೂಕ್ಷ್ಮವಾಗಿ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ. ‘ಸಾರ್ ನಾವು ಎರಡು ವರ್ಷದ ತರಗತಿಗಳಲ್ಲಿ ಸ್ತ್ರೀವಾದ, ದಲಿತ ಸಾಹಿತ್ಯ, ವಸಾಹತೋತ್ತರ ಚಿಂತನೆ ಎಂತೆಲ್ಲ ಚರ್ಚಿಸು ವಾಗ ಇವೆಲ್ಲವನ್ನೂ ಕೇಳಿಸಿಕೊಳ್ಳುತ್ತ ನನ್ನೊಳಗೆ ಇಷ್ಟಿಷ್ಟೇ ಬದಲಾವಣೆಗಳನ್ನು ಮಾಡಿಕೊಳ್ಳುತ್ತ ಹೋದೆ.

ನಾನು ನನ್ನ ಅಕ್ಕ, ತಾಯಿಯ ಜೊತೆ, ಬೇರೆ ಬೇರೆ ಜಾತಿ, ಧರ್ಮದವರ ಜೊತೆ ಬೆರೆಯುವಾಗ ನನ್ನೊಳಗೆ ಏನೇನೋ ಬದಲಾವಣೆಗಳಾಗುತ್ತಿವೆ. ಆದರೆ ಗಾಂಧಿಯವರು ಯಂತ್ರಗಳು- ಆಧುನಿಕ ನಾಗರಿಕತೆಯನ್ನು ಕುರಿತು ಹೇಳಿದ ಮಾತುಗಳನ್ನು ಓದಿ ನನಗಾದ ತಲ್ಲಣಗಳನ್ನು, ಪ್ರಶ್ನೆಗಳನ್ನು ಸುಲಭವಾಗಿ ಬಿಡಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಹೇಳಿದ. ಅವನ ಅನುಮಾನಗಳನ್ನು ನಿವಾರಿಸಲು ನಾನೇ ನನ್ನೋ ಹೇಳಿದರೂ ಅವನು ಹೇಳುತ್ತಿದ್ದ ಗೋಜಲುಗಳ ಸರಮಾಲೆಯಲ್ಲಿ ಸ್ವತಃ ನಮ್ಮಂಥವರೆಲ್ಲ ಸಿಲುಕಿಕೊಂಡಿರುವುದರಿಂದ ಅವನಂಥ ಹುಡುಗರಿಗೆ ಇದನ್ನೆಲ್ಲ ಹೇಗೆ ಬಿಡಿಸಿಹೇಳುವುದು?

ಪ್ರಸನ್ನ ಅವರು ಸುಸ್ಥಿರ ಬದುಕಿಗಾಗಿ ನಡೆಸುತ್ತಿರುವ ಆಂದೋಲನವು ಇಂಥ ಗೋಜಲುಗಳ ನಡುವೆಯೇ ಸ್ಪಷ್ಟತೆಯ ಕಡೆಗೆ ನಡೆಯುತ್ತಿರುವ ಪುಟ್ಟ ನಡಿಗೆಯಾಗಿದೆ. ಈ ನಡಿಗೆಗೆ ಬೇಕಾದ ಬೆಂಬಲ-ಸಹಮತಗಳು ನಾಡಿನ ಮೂಲೆಗಳಿಂದ ಹೊರಟು ಬದನವಾಳು ವಿನಲ್ಲಿ ಸೇರಿಕೊಂಡಿದ್ದು ಬಹಳ ಅರ್ಥಪೂರ್ಣ. ಜನವರಿಯಲ್ಲಿ ಮೈಸೂರಿನಲ್ಲಿ ನಡೆದ ಸಭೆಯೊಂದ ರಲ್ಲಿ ಸೂಫಿ ಗಾಯಕ ಮುಕ್ತಿಯಾರ್ ಅಲಿ, ಪ್ರಸನ್ನ ಅವರು ನೇಕಾರರ ಸಮಸ್ಯೆಗಳ ನಿವಾರಣೆಗೆ ನಡೆಸಿದ ಸತ್ಯಾಗ್ರಹಕ್ಕೆ ಬೆಂಬಲ ನೀಡುತ್ತ ಅದ್ಭುತವಾದ ಕತೆಯೊಂದನ್ನು ಹೇಳಿದ್ದರು. ಲೈಲಾಳನ್ನು ನೋಡಲು ಒಮ್ಮೆ ಮಜ್ನೂ ಅವಳ ಮನೆಗೆ ಹೋದನಂತೆ.

ಮನೆಯಲ್ಲಿ ತೂಗಿಬಿದ್ದಿದ್ದ ದುಪಟ್ಟಾವೊಂದನ್ನು ನೋಡಿ ಆ ದುಪಟ್ಟಾದ ನೂಲುಗಳು- ಹತ್ತಿ- ಆ ಹತ್ತಿ ಬೆಳೆದ ಮಣ್ಣಿನ ಕಸುವು-ನೂಲಿನ ಬಣ್ಣ- ಇವೆಲ್ಲವನ್ನೂ ಬಳಸಿ ಮಾಡಿದ ಆ ನೇಕಾರನ ಕೈಚಳಕ, ಅದನ್ನು ಒಪ್ಪವಾಗಿ ಸೇರಿಸಿ ಹೊಲಿದ ದರ್ಜಿಯ ಕೌಶಲ- ಎಲ್ಲವನ್ನೂ ನೋಡುತ್ತ ಲೈಲಾಳನ್ನು ಇಷ್ಟು ಸುಂದರವಾಗಿಸಲು ಸಾಧ್ಯವಾಗಿಸಿದ ಅವರೆಲ್ಲರನ್ನೂ ನೆನೆಯುತ್ತ ಅವಳ ಪ್ರೀತಿಯಲ್ಲಿ ಇನ್ನಷ್ಟು ಮುಳುಗಿಹೋದನಂತೆ. ಮುಕ್ತಿಯಾರ್ ಅಲಿ ಹೇಳಿದ ಈ ಮೋಹಕ ಕತೆ, ಪ್ರಸನ್ನ ಮಾಡುತ್ತಿರುವ ನೂಲಿನ ಪರವಾದ ಕೆಲಸವು ಮನುಷ್ಯ ಬದುಕನ್ನು, ಸಮಾಜ, ಪರಿಸರ, ಆರ್ಥಿಕತೆ, ನೈತಿಕ ಮೌಲ್ಯಗಳು, ಆದರ್ಶಗಳು- ಒಂದನ್ನೊಂದು ಒಡಲ ನೂಲಿನ ಬಂಧದಲ್ಲಿ ಬೆಸೆದು ನೋಡುವ ಪ್ರಯತ್ನವಾಗಿದೆ ಎಂದು ಹೇಳಿದಂತಿತ್ತು. 

ಅದಕ್ಕಾಗಿಯೇ ಇತ್ತೀಚೆಗೆ ಧಾರವಾಡದಲ್ಲಿ ನಡೆದ ‘ತಾಯಿನುಡಿಯ ಸಮಾವೇಶ’ದಲ್ಲಿ ಕನ್ನಡಕ್ಕೆ ಬಂದಿರುವ ಕುತ್ತು, ನೇಕಾರರಿಗೆ ಬಂದೊದಗಿರುವ ದುರ್ಗತಿ ಮತ್ತು ಯಂತ್ರನಾಗರಿಕತೆ ನಮ್ಮನ್ನು ನುಂಗಿನೊಣೆಯುತ್ತಿರುವ ಪರಿ ಇವೆಲ್ಲವೂ ಅಸ್ಥಿರಗೊಂಡಿರುವ ಬದುಕಿನ ಹಲವು ಮಗ್ಗುಲುಗಳೇ ಆಗಿವೆ. ಇವುಗಳನ್ನೆಲ್ಲ ಒಂದರೊಡನೊಂದು ಹೆಣೆದು, ಚದುರಿ ಹೋಗುತ್ತಿರುವ ಸಾಮಾಜಿಕ ಆಶಯಗಳನ್ನು ಒಂದೆಡೆಗೆ ತರುವುದು ಸುಸ್ಥಿರ ಬದುಕಿನ ಅಗತ್ಯಗಳಲ್ಲೊಂದಾಗಿದೆ ಎಂದು ಪ್ರಸನ್ನ ಹೇಳಿದ್ದು ಮುಖ್ಯವಾಗಿದೆ. ಹೀಗೆ ಎಲ್ಲ ಕಡೆಯೂ ಮುರಿದುಬಿದ್ದಿರುವ ಚಿತ್ರಗಳೇ ಕಾಣುತ್ತಿದ್ದು ಅವುಗಳ ನಡುವಿಂದ ನಾವು ಹೊಸ ದಾರಿಯನ್ನು ಹುಡುಕುತ್ತಿರುವಾಗ ಬದನವಾಳುವಿನ ಪಾಳು ಬಿದ್ದ ಮನೆಗಳು, ನೂಲಿನ ಕೇಂದ್ರಗ ಳಲ್ಲಿ ಹೊಸಚಿಂತನೆ ಆರಂಭವಾದದ್ದು ನಮ್ಮ ಅಂತಃಕರಣವನ್ನು ಎಚ್ಚರಿಸುವಂತಿದೆ.

ಮೊನ್ನೆ ಶಿವಮೊಗ್ಗದಲ್ಲಿ ಪ್ರಸನ್ನ ನಿರ್ದೇಶಿಸಿದ, ದು.ಸರಸ್ವತಿ ಅಭಿನಯದ ‘ಮೆಕ್ಕಾ ದಾರಿ’ ನಾಟಕದಲ್ಲಿ ಬಳಸಿ ಬಿಸಾಡಿದ ಮರುಬಳಕೆ ವಸ್ತುಗಳನ್ನು ತನ್ನ ಶ್ರಮದ ಮೂಲಕ ಕಲಾಕೃತಿಗಳನ್ನಾಗಿ ರೂಪಿಸಿಕೊಂಡು ಅದರಿಂದ ತನ್ನ ಜೀವಂತಿಕೆಯನ್ನು ಉಳಿಸಿಕೊಳ್ಳಲು ಹೋರಾಡುವ ಬಡ ಮುದುಕಿಯ ಕತೆ ಇತ್ತು. ಅಲ್ಲಿಯೂ ಆಧುನಿಕತೆಯಿಂದ ಛಿದ್ರಗೊಂಡಿರುವ ಬದುಕನ್ನು ತಾಳ್ಮೆಯಿಂದ ಮತ್ತೊಮ್ಮೆ ಕಟ್ಟಿಕೊಳ್ಳಬಯಸುವ ಆಶಯ, ಆರ್ತತೆಯಿಂದ ನಮ್ಮನ್ನು ಎಚ್ಚರಿಸುತ್ತಿತ್ತು.

ಗಾಂಧಿ ಹೇಳಿದ ಸುಸ್ಥಿರ-ಸ್ವಾವಲಂಬಿ ಬದುಕಿನ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿರುವುದು ಯಂತ್ರನಾಗರಿಕತೆಯಿಂದ ದಿನೇ ದಿನೇ ಉಲ್ಬಣಿಸುತ್ತಿರುವ ಬಿಕ್ಕಟ್ಟುಗಳ ಕಾರಣದಿಂದ. ತಂತ್ರಜ್ಞಾನದ ಅಭಿವೃದ್ಧಿಯಿಂದ ಅಪರಿಮಿತ ವಸ್ತುಗಳನ್ನು ಉತ್ಪಾದಿಸಿ ಮನುಷ್ಯ ಕೇವಲ ಒಬ್ಬ ಬಳಕೆ ದಾರನಾಗಿಬಿಟ್ಟಿದ್ದಾನೆಯೇ ಹೊರತು ಅವನ ಮೂಲಭೂತ ಅಗತ್ಯಗಳು ಪೂರೈಕೆಯಾಗುತ್ತಿಲ್ಲ. ಮನುಷ್ಯನ ಬಳಕೆಯನ್ನು, ಸೌಲಭ್ಯಗಳ ಪ್ರಮಾಣವನ್ನು ಅಪರಿಮಿತಗೊಳಿಸುವುದು ಮಾತ್ರವೇ ಆಧುನಿಕ ಜಗತ್ತಿನ ಏಕೈಕ ಗುರಿಯಾಗಿದೆ. ಅದಕ್ಕಾಗಿಯೇ ಆಧುನಿಕ ನಾಗರಿಕತೆಯ ಮಹಾನ್ ತಿಪ್ಪೆಯಲ್ಲಿ ನಮಗೆ ಬೇಕಾದ-ಬೇಡವಾದ ಸಾಮಾನು ಸರಂಜಾಮುಗಳ ರಾಶಿಯೇ ಬಿದ್ದಿದೆ.

ಅವು ನಮ್ಮಲ್ಲಿ ಸಾವಿರಾರು ಆಸೆಗಳ  ರಾಕ್ಷಸರನ್ನು ದಿನಾಲೂ ಕೊಬ್ಬಿಸುತ್ತಿವೆಯೇ ವಿನಾ ನಮ್ಮ ಅಗತ್ಯಗಳನ್ನು ಪೂರೈಸುತ್ತಿಲ್ಲ. ಉತ್ಪನ್ನಗಳ ಹೆಚ್ಚಳ- ಬಳಕೆಯ ಪ್ರಮಾಣ ಹೆಚ್ಚಿದಷ್ಟೂ ಶೋಷಣೆ, ಅಸಮಾನತೆ, ಪರಿಸರನಾಶ ಹೆಚ್ಚಾಗಿ ಬದುಕುದುಸ್ತರವಾಗಿದೆ. ಅಷ್ಟೇ ಅಲ್ಲ ಮನುಷ್ಯನ ಯಂತ್ರಗಳ ನಿರಂತರ ಅವಲಂಬನೆ ನಿಧಾನವಾಗಿ ಅವನ ಅಂಗಾಂಗಗಳನ್ನೇ ನಿಶ್ಚೇಷ್ಟಿತಗೊಳಿಸುತ್ತಿದೆ. ಕ್ರಮೇಣ ಅವು ಮನುಷ್ಯ ನಾಗರಿಕತೆಯ ಅಸ್ತಿತ್ವವನ್ನೇ ಕಬಳಿಸುವಷ್ಟು ಬಲಶಾಲಿಯಾಗುತ್ತವೆ ಎಂಬ ಕಾರಣಕ್ಕೆ ಗಾಂಧಿ ಯಂತ್ರನಾಗರಿಕತೆಯ ವಿರೋಧಿಯಾಗಿದ್ದರು.

ಇಂಥ ವಿನಾಶಕಾರಿ ಆಧುನಿಕತೆಯ ವಿರುದ್ಧ ದಿಕ್ಕಿನ ಚಲನೆಯೊಂದು ಆರಂಭವಾಗಬೇಕಿದ್ದರೆ ಅದು ಸಮಾಜದ ಹಲವು ನೆಲೆಗಳಲ್ಲಿ ಹಲವು ಸ್ತರಗಳಲ್ಲಿ ರೂಪುಗೊಳ್ಳು ವುದು ಅನಿವಾರ್ಯವಾಗಿದೆ. ಬದನವಾಳು ಎಂದರೆ ಅಲ್ಲಿ 90ರ ದಶಕದಲ್ಲಿ ನಡೆದ  ದಲಿತರ ಹತ್ಯಾಕಾಂಡದ ನೆನಪು ಮರುಕಳಿಸಿಬರುತ್ತದೆ. ಹಾಗೇ ಗಾಂಧಿಯವರ ಗ್ರಾಮಸ್ವರಾಜ್ಯ ಯೋಜನೆಯಿಂದ ಪ್ರೇರಿತವಾಗಿ ಅದು ಒಂದು ಕಾಲದಲ್ಲಿ ಸುತ್ತಲಿನ ಹಳ್ಳಿಗಳಿಗೆ ಹಲವು ಕೈಕಸುಬುಗಳ, ಗುಡಿಕೈಗಾರಿಕೆಗಳ ಕೇಂದ್ರವಾಗಿ, ಈಗ ಪಾಳು ಬಿದ್ದಿರುವ ಚಿತ್ರವೂ ನಮ್ಮೆದುರು ಮೂಡುತ್ತದೆ.

ಒಂದು ಬಗೆಯಲ್ಲಿ ಇಂದಿನ ಭಾರತವೂ ಬದನವಾಳುವಿನಂತೆ ಆಧುನಿಕತೆ-ಅಭಿವೃದ್ಧಿ-ಜಾತಿ ಸಂಘರ್ಷದ ಬೇಗುದಿಯಲ್ಲಿ ಸಿಲುಕಿ ನಾಶವಾಗುತ್ತಿದೆ. ಮೊನ್ನೆ ಪ್ರಸನ್ನ ಅವರು ಬದನವಾಳುವಿನ ಮುರುಕಲು ಮನೆಯಲ್ಲಿ ಕಾಯಿ ಪಲ್ಲೆ ಬೇಯಿಸಿಕೊಳ್ಳುತ್ತ ಕುಳಿತ ಚಿತ್ರ ನೋಡಿದಾಗ ಹೊಸದೊಂದು ಆಸೆ ಮತ್ತೆ ಚಿಗುರುವಂತೆ ಕಾಣಿಸುತ್ತಿದೆ. ಹಲವು ಚಿಂತನೆಗಳು, ಆಲೋಚನಾ ಧಾರೆಗಳು, ಹಲವು ಚಳವಳಿಯ ಆಶಯಗಳು ಬದನವಾಳುವಿನ ಪ್ರಯೋಗದ ಮೂಲಕ ನಿಧಾನವಾಗಿ ಗಾಂಧಿ ಅಂತಃಸ್ಸತ್ವದ ಕಡೆಗೆ ನಡೆಯುತ್ತಿರುವುದು ಕರ್ನಾಟಕದ ಮಟ್ಟಿಗೆ ಹೊಸ ಬಗೆಯ ಸಾಂಸ್ಕೃತಿಕ ಚಲನೆಯಾಗಿದೆ.

ಲೇಖಕ ಸಹಪ್ರಾಧ್ಯಾಪಕ, ಸ್ನಾತಕೋತ್ತರ ಇಂಗ್ಲಿಷ್‌ ಅಧ್ಯಯನ ವಿಭಾಗ, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT