ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಹವಾ

Last Updated 27 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನಮ್ಮ ನಾಡಿನ ನಿರ್ದೇಶಕ ಎಂ.ಎಸ್. ಸತ್ಯು ಅವರ ಹೆಸರಿನ ಜೊತೆಗೆ ನೆನಪಾಗುವ ಸಿನಿಮಾ ‘ಗರಂ ಹವಾ’. ಹಿಂದಿ–ಉರ್ದು ಭಾಷೆಯ, ಕೈಫಿ ಆಜ್ಮಿ ಬರೆದ ಮಾತುಗಳಿದ್ದ ಈ ಸಿನಿಮಾ ಭಾರತ–ಪಾಕಿಸ್ತಾನದ ವಿಭಜನೆಯ ಹಿನ್ನೆಲೆಯ ಕಥಾನಕವನ್ನು ಭಾವತೀವ್ರತೆಯಿಂದ ತೋರಿತ್ತು. ಈ ಸಿನಿಮಾ ಡಿಜಟಲೀಕರಣಗೊಂಡು ಇದೇ ತಿಂಗಳ 14ರಂದು ಮರು ಬಿಡುಗಡೆಯಾದದ್ದು ಎಷ್ಟೋ ಮಂದಿಗೆ ಗೊತ್ತಾಗಲೇ ಇಲ್ಲ. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಪಿವಿಆರ್‌ನಲ್ಲಿ ಕೂಡ ಒಂದು ವಾರ ಪ್ರದರ್ಶನ ಕಂಡಿತು.

ಇನ್ನಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ಮರು ಬಿಡುಗಡೆ ಮಾಡುವ ಯತ್ನ ನಡೆಸಿರುವ ನಿರ್ದೇಶಕ ಎಂ.ಎಸ್‌. ಸತ್ಯು ಮುಂಬೈನಲ್ಲಿ ಅದೇ ಕೆಲಸದಲ್ಲಿ ನಿರತರಾಗಿದ್ದರು. ಅವರು ‘ಸಿನಿಮಾ ರಂಜನೆ’ ಜೊತೆ ಮಾತನಾಡಿದರು.

ಸಿನಿಮಾ ಬೆಂಗಳೂರಿನಲ್ಲಿ ಬಿಡುಗಡೆಯಾದದ್ದು ಗೊತ್ತೇ ಆಗಲಿಲ್ಲ ಎಂದು ಕೇಳಿದಾಗ ಅವರು ಹೇಳಿದ್ದಿಷ್ಟು: ‘ಒಂದೇ ಒಂದು ಸ್ಕ್ರೀನ್‌ನಲ್ಲಿ ತೆರೆಕಂಡಿತು. ಮೊದಲು ಪಿವಿಆರ್‌ ಜೊತೆ ಒಪ್ಪಂದ ಆಗಿತ್ತು. ಈಗ ಬೆಂಗಳೂರಿನ ಕೆಂಪೇಗೌಡ ರಸ್ತೆಯ ಒಂದೇ ತೆರೆಯ ಯಾವುದಾದರೂ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಪ್ರಯತ್ನ ನಡೆಸಿದ್ದೇವೆ. ಮರು ಬಿಡುಗಡೆ ಆದಮೇಲೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದರಿಂದ ಹಳೆ ಮೈಸೂರು, ಉತ್ತರ ಕರ್ನಾಟಕ, ದೆಹಲಿ–ಉತ್ತರ ಪ್ರದೇಶ, ಮುಂಬೈನ ಇನ್ನಿತರ ಭಾಗಗಳು, ಮದ್ರಾಸ್‌, ಲಖನೌ, ಅಲಹಾಬಾದ್‌ ಎಲ್ಲಾ ಕಡೆ ಇನ್ನಷ್ಟು ಚಿತ್ರಮಂದಿರಗಳಲ್ಲಿ ತೆರೆ ಕಾಣಿಸಲು ವಿತರಕರ ಜೊತೆ ಮಾತುಕತೆ ನಡೆಸಿದ್ದೇವೆ’.
ಒಟ್ಟು ಒಂಬತ್ತು ನಗರಗಳ ಆಯ್ದ ಪಿವಿಆರ್‌ಗಳಲ್ಲಿ ‘ಗರಂ ಹವಾ’ದ ಡಿಜಟಲೀಕೃತ ಪ್ರತಿ ಬಿಡುಗಡೆಯಾಗಿತ್ತು. ಎರಡು ವರ್ಷಗಳ ಹಿಂದೆಯೇ ಸತ್ಯು ಅವರಿಗೆ ಈ ಸಿನಿಮಾದ ಪ್ರಿಂಟ್‌ಗೆ ಹೊಸಜೀವ ಕೊಡುವ ಬಯಕೆ ಇತ್ತು. ಸಂಶೋಧಕ ಸುಭಾಷ್‌ ಚೆಡ್ಡಾ ಈ ಯೋಜನೆಗೆ ರೆಕ್ಕೆಪುಕ್ಕ ಹಚ್ಚಿದರೆ, ಹಣ ಸಹಾಯ ಮಾಡಿದವರು ಪುಣೆಯ ಆರ್‌.ಡಿ. ದೇಶಪಾಂಡೆ.

ನೆಗೆಟಿವ್‌ ರೂಪದಲ್ಲಿ ಇರುವ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಫ್ರೇಮ್‌ಗಳನ್ನು ಡಿಜಿಟಲೀಕರಣದ ಮೂಲಕ ಸಂಸ್ಕರಿಸಿ, ಕಾಪಾಡುವ ಪ್ರಕ್ರಿಯೆ ಹೆಚ್ಚು ಸಮಯ ಬೇಡುತ್ತದೆ.

‘ಹಾಲಿವುಡ್‌ನಲ್ಲಿ ಒಂದೇ ನೆಗೆಟಿವ್‌ ಇಟ್ಟುಕೊಳ್ಳುವುದಿಲ್ಲ. ಮೊದಲಿನಿಂದ ಅಲ್ಲಿ ಡ್ಯೂಪ್‌ ನೆಗೆಟಿವ್‌ ಮಾಡಿಟ್ಟುಕೊಳ್ಳುವ ಪರಿಪಾಠವಿದೆ. ಭಾರತೀಯ ಚಿತ್ರಗಳ ಬಜೆಟ್‌ನ ದೃಷ್ಟಿಯಿಂದ ಇದು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಒಂದೇ ನೆಗೆಟಿವ್‌ ಇಟ್ಟುಕೊಂಡು, ಅನುಕೂಲಕ್ಕೆ ತಕ್ಕಷ್ಟು ಪ್ರಿಂಟ್‌ಗಳನ್ನು ಹಾಕಿಸುತ್ತಿದ್ದರು. ಹೀಗೆ ಮಾಡಿದಾಗ, ಮೂಲ ನೆಗೆಟಿವ್‌ ಹಾಳಾಗುವ ಸಾಧ್ಯತೆ ಹೆಚ್ಚು. ಗರಂ ಹವಾ ಸಿನಿಮಾದ ನೆಗೆಟಿವ್‌ ಕೂಡ ಸಾಕಷ್ಟು ಹಾಳಾಗಿತ್ತು. ಅದನ್ನು ಕಾಪಾಡುವುದು ತುಂಬಾ ಕಷ್ಟಕರ ಕೆಲಸ. ಅದಕ್ಕೇ ಡಿಜಿಟಲೀಕರಣಕ್ಕೆ ಮುಂದಾದೆವು. ಇದಕ್ಕೆ ಮೂಲ ಚಿತ್ರದ ಬಜೆಟ್‌ನ ಹತ್ತು ಪಟ್ಟು ಹೆಚ್ಚು ಹಣ ಖರ್ಚಾಗಿದೆ’ ಎಂದು ಸತ್ಯು ವಿವರ ಕೊಟ್ಟರು.

ಡಿಜಿಟಲೀಕರಣಗೊಂಡ ‘ಗರಂ ಹವಾ’ ನೋಡಿದಾಗ ಅವರಿಗೆ ತಮ್ಮದೇ ಹೊಸ ಸಿನಿಮಾ ಕಂಡಷ್ಟು ಖುಷಿಯಾಗಿದೆ.
‘ಅಮೆರಿಕದ ಡಿಲಕ್ಸ್‌ ಲ್ಯಾಬ್‌ನಲ್ಲಿ ಧ್ವನಿ, ಶಬ್ದಗಳಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿಸಿದ್ದೆವು. ಸಿನಿಮಾದ ಮೂಲ ಬಣ್ಣದ ಗುಣಮಟ್ಟ ಕೂಡ ಈಗ ಸುಧಾರಿಸಿದೆ. ಹೊಸ ತಲೆಮಾರಿನ ಎಷ್ಟೋ ಜನ ಆ ಸಿನಿಮಾ ನೋಡಿರಲಿಲ್ಲ. ಈಗ ನೋಡಿ ವೆಬ್‌ಸೈಟ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಸಂತಸ ಹಂಚಿಕೊಂಡರು.

‘ಗರಂ ಹವಾ’ ಸಿನಿಮಾವನ್ನು ಇಂಗ್ಲೆಂಡ್‌, ಅಮೆರಿಕ, ಕೆನಡಾ ಹಾಗೂ ಗಲ್ಫ್‌ ರಾಷ್ಟ್ರಗಳಲ್ಲಿ ಮರುಬಿಡುಗಡೆ ಮಾಡುವ ಯತ್ನಗಳನ್ನೂ ಅವರು ನಡೆಸಿದ್ದಾರೆ. 1975ರಲ್ಲಿ ಮೊದಲು ಸಿನಿಮಾ ತೆರೆಕಂಡ ನಂತರ ಪಾಕಿಸ್ತಾನದವರು ಅನಧಿಕೃತವಾಗಿ ಅದನ್ನು ಯಾರ್‍್ಯಾರಿಂದಲೋ ತರಿಸಿಕೊಂಡು ನೋಡಿದ್ದರೆಂಬುದು ಕೆಲವರ ಪ್ರತಿಕ್ರಿಯೆಗಳಿಂದ ಸತ್ಯು ಅವರಿಗೆ ಗೊತ್ತಾಗಿತ್ತು. ಈಗ ಆ ದೇಶದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡುವ ಮಹತ್ವಾಕಾಂಕ್ಷೆಯೂ ಅವರಿಗೆ ಇದೆ.

ವಿವಿಧೆಡೆ ಸಿನಿಮಾ ತೆರೆಕಂಡ ನಂತರ ಅದರ ಉತ್ತಮ ಗುಣಮಟ್ಟದ ಡಿವಿಡಿಗಳೂ ಮಾರುಕಟ್ಟೆಗೆ ಬರಲಿವೆ. ಕೆಲವು ಕಂಪೆನಿಗಳ ಜೊತೆ ಈ ನಿಟ್ಟಿನಲ್ಲಿ ಅವರು ಮಾತುಕತೆ ನಡೆಸಿದ್ದಾರೆ.

‘ಗರಂ ಹವಾ’ ಮರು ಬಿಡುಗಡೆಯ ಬಿಸಿ ತಣ್ಣಗಾದ ಮೇಲೆ ಸತ್ಯು ಇನ್ನೊಂದು ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಕನ್ನಡ, ಬಂಗಾಳಿ, ಗುಜರಾತಿ ಭಾಷೆಗಳಲ್ಲಿ ಇದನ್ನು ತಯಾರಿಸುವುದು ಅವರ ಉದ್ದೇಶ. ಅವರೇ ಸ್ಕ್ರಿಪ್ಟ್‌ ಸಿದ್ಧಪಡಿಸಿದ್ದು, ಮೈಸೂರಿನ ಸಂಗೀತಗಾರನೊಬ್ಬನ ಬದುಕಿನ ಪಯಣದ ವಸ್ತುವನ್ನು ಅದು ಒಳಗೊಂಡಿದೆ.

ನಿಮ್ಮ ಹೊಸ ಸಿನಿಮಾದ ಸಂಗೀತಗಾರ ಕರ್ನಾಟಕದವರೇ ಎಂದು ಕೇಳಿದರೆ, ‘ಮೈಸೂರು ಅಂದಮೇಲೆ ಕನ್ನಡದವರೇ ಅಲ್ಲವೇ’ ಎಂದು ಒಗಟಿನ ರೂಪದ ಉತ್ತರ ಕೊಟ್ಟರು. ಆ ಸಂಗೀತಗಾರ ಯಾರು ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT