ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆರೆ’ಯಲ್ಲಿ ‘ದಿಂಬು’ ಹಾಕಿ ಮಲಗಿರುವ ಸಮಸ್ಯೆಗಳು

‘ಕೆರೆದಿಂಬ’ ಪೋಡಿನ ಗಿರಿಜನರ ಸಿಗದ ಮೂಲಸೌಕರ್ಯ
Last Updated 1 ಏಪ್ರಿಲ್ 2015, 10:39 IST
ಅಕ್ಷರ ಗಾತ್ರ

ಯಳಂದೂರು: ‘ಗಾಳಿ ಬಂದರೆ ತೂರಿ ಹೋಗುವ ಶೀಟ್‌ನ ಮನೆಗಳು, ಹೊಸ ಮನೆಗಳ ನಿರ್ಮಾಣ ಮರೀಚಿಕೆ,  ವಾಸ ಸ್ಥಾನಕ್ಕೆ ತೆಂಗಿನ ಗರಿಗಳ ತಡಿಕೆ ಆಸರೆ, ಇದರ ನಡುವೆ ಮಳೆ ಬಂದರೆ ನೆನೆಯುವ ಶಿಕ್ಷೆ, ಇರುವ 2 ಕೈಪಂಪಿನಲ್ಲಿ  ಶ್ರಮಪಟ್ಟು ವಾಸನೆಯುಕ್ತ ನೀರು ತರುವ ಅನಿವಾರ್ಯತೆ, ಇರುವ ಭೂಮಿಯಲ್ಲಿ ಕಷ್ಟಪಟ್ಟು ಬೆಳೆಯುವ ಬೆಳೆಗಳನ್ನು ವನ್ಯ ಪ್ರಾಣಿಗಳಿಂದ ರಕ್ಷಿಸುವ ಶಿಕ್ಷೆ,  ಮಳೆ ಬಾರದಿದ್ದರೆ ಬೆಳೆಯೂ ಬಾರದ ಸ್ಥಿತಿ.....

ಇದು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿರುವ ‘ಕೆರೆದಿಂಬ’ ಪೋಡಿನ ಗಿರಿಜನರ ಕತೆ–ವ್ಯಥೆ. ಬಿಆರ್‌ಟಿಗೆ ಚಾಮರಾಜನಗರಕ್ಕೆ  ತೆರಳುವ ರಸ್ತೆಯ  ಚೈನ್‌ಗೇಟ್‌ನಿಂದ ಅರಣ್ಯ ಇಲಾಖೆ ನಿರ್ಮಾಣ ಮಾಡಿರುವ ರಸ್ತೆಯಲ್ಲಿ ಹೋದರೆ ಕಾಣಸಿಗುವ ಗಿರಿಜನರಾದ ಸೋಲಿಗರು ವಾಸಿಸುವ ಇಲ್ಲಿ ಅನಾದಿ ಕಾಲದಿಂದಲೂ ಹತ್ತಾರು ಕುಟುಂಬಗಳು ವಾಸವಾಗಿವೆ. ಪಕ್ಕದಲ್ಲೇ ಪೌರಾಣಿಕ ದೊಡ್ಡಸಂಪಿಗೆ ಮರದ ಪಕ್ಕದಲ್ಲೇ ಇದೆ.

ಆದರೆ, ಇವರಿಗೆ ಮೂಲ ಸೌಲಭ್ಯಗಳು ಇನ್ನೂ ಮರೀಚಿಕೆಯಾಗಿವೆ. ಇಲ್ಲಿಗೆ ವಿದ್ಯುತ್‌ ಸಂಪರ್ಕ ಇಲ್ಲ. ಮನೆಗಳಿಗೆ ನೀಡಲಾಗಿರುವ ಸೋಲಾರ್‌ ವಿದ್ಯುತ್‌ ದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಕಂಬಗಳಲ್ಲಿ ಅಳವಡಿಸಿರುವ ವಿದ್ಯುತ್‌ ದೀಪಗಳೂ ಹಾಳಾಗಿವೆ. ಇರುವ 2 ಕೈ ಪಂಪುಗಳಲ್ಲಿ ಬರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಇದರ ನಡುವೆಯೇ  ಈ ಬಗ್ಗೆ ಸಂಬಂಧಪಟ್ಟ ಪಂಚಾಯಿತಿ ಕ್ರಮ ವಹಿಸಿಲ್ಲ ಎಂಬುದು ಇಲ್ಲಿನ ಮುಖಂಡರಾದ ರಂಗೇಗೌಡ, ಮಾದೇಗೌಡ, ಜಡೇಗೌಡ ಸೇರಿದಂತೆ ಹಲವರ ದೂರು.

ಕಳೆದ ಕೆಲವು ದಿನಗಳಿಂದ ನಿರ್ಮಿತಿ ಕೇಂದ್ರದವರು ಕುಡಿಯುವ ನೀರಿನ ತೊಟ್ಟಿ ನಿರ್ಮಾಣ ಮಾಡುತ್ತಿದ್ದರೂ ಇದು ಪೂರ್ಣಗೊಂಡಿಲ್ಲ. ಅಲ್ಲದೆ ಹೊಸದಾಗಿ ಮನೆಗಳ ನಿರ್ಮಾಣಕ್ಕೂ ಅವಕಾಶ ನೀಡಿಲ್ಲ. ಈ ಹಿಂದೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಇಲ್ಲಿಗೆ ಭೇಟಿ ನೀಡಿದ್ದರೂ ಇನ್ನೂ ಇವರ ಸಮಸ್ಯೆ ನಿವಾರಣೆಯಾಗಿಲ್ಲ.

ಹಾಗಾಗಿ ಇಲ್ಲಿನ ನಾಗರಿಕರು ತಾವೇ ನಿರ್ಮಿಸಿಕೊಂಡಿ ರುವ ತೆಂಗಿನ ಗರಿಗಳ ಮನೆಗಳಲ್ಲೇ ವಾಸವಾಗಿದ್ದು ಮಳೆ ಬಂದರೆ ನೆನೆದುಕೊಂಡೇ ಜೀವನ ಸಾಗಿಸುವ ಅನಿವಾರ್ಯತೆ ಇದೆ ಎಂಬುದಾಗಿ ಇಲ್ಲಿನ ನಾಗರಿಕರು ದೂರುತ್ತಾರೆ. ಮೂಲಸೌಲಭ್ಯಗಳಿಂದ ವಂಚಿತ ವಾಗಿರುವ ಇಲ್ಲಿನ ಜನರಿಗೆ  ಮುಕ್ತಿ ಸಿಗುವುದೇ? ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT