ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೊಡಕು’ ನಿವಾರಣೆಯಲ್ಲೇ ತೊಡಕು

ತಂತ್ರಾಂಶ ಅವಾಂತರ
Last Updated 31 ಜನವರಿ 2014, 19:30 IST
ಅಕ್ಷರ ಗಾತ್ರ

ಕನ್ನಡ, ಕಂಪ್ಯೂಟರ್ ಜಗತ್ತಿನಲ್ಲಿ ಅನಾಥವಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿ ರಚಿಸಿತ್ತು. ಅದರ ಶಿಫಾರಸಿನ ಅನ್ವಯ ತಯಾರಿಸಿದ ತಂತ್ರಾಂಶಗಳ ಬೀಟಾ ಆವೃತ್ತಿಯನ್ನು ಸರ್ಕಾರ ಈಗ ಬಿಡುಗಡೆ ಮಾಡಿದೆ. ತಂತ್ರಜ್ಞಾನ ವಿಸ್ತರಿಸಿಕೊಳ್ಳುವ ವೇಗಕ್ಕೆ ಅನುಗುಣವಾದ ತಂತ್ರಾಂಶ ಅಭಿವೃದ್ಧಿ ಮಾದರಿಯನ್ನು ಅಳವಡಿಸಿಕೊಳ್ಳದೇ ರೂಪುಗೊಂಡ ಈ ತಂತ್ರಾಂಶಗಳ ಪ್ರಯೋಜನದ ಬಗ್ಗೆಯೇ ಪ್ರಶ್ನೆಗಳೆದ್ದಿವೆ. ತೆರಿಗೆದಾರರ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿದ ತಂತ್ರಾಂಶಗಳ ಇತಿಮಿತಿಗಳ ಬಗ್ಗೆ ತಜ್ಞ ಬಳಕೆದಾರರು ನಡೆಸಿರುವ ಸ್ವತಂತ್ರ ಮೌಲ್ಯಮಾಪನ ಇಲ್ಲಿದೆ.

ಕರ್ನಾಟಕ ಸರ್ಕಾರ ಇತ್ತೀಚೆಗೆ ಅಂಧರಿಗೆ ಉಪಯುಕ್ತವಾಗುವ ತಂತ್ರಾಂಶ ಬಿಡುಗಡೆ ಮಾಡಿದೆ ಎಂದು ತಿಳಿದಾಗ ಸಂತೋಷ­ಪಟ್ಟ­ವರಲ್ಲಿ ನಾನೂ ಒಬ್ಬ. ನಮ್ಮಂಥವರನ್ನೂ ಸರ್ಕಾರ ಗಮನದಲ್ಲಿಟ್ಟುಕೊಂಡಿದೆ ಎಂಬುದು ಈ ಸಂತೋಷಕ್ಕೆ ಕಾರಣ. ಆದರೆ ಇದನ್ನು ಡೌನ್‌­ಲೋಡ್ ಮಾಡಿಕೊಂಡು ಪರೀಕ್ಷಿಸಿದಾಗ ನಿರಾಶೆ­ಯಾ­ಯಿತು. ಇದು ಅಂಧರಿಗೆ ಅಗತ್ಯವಿರುವ ಕನಿಷ್ಠ ಸವಲತ್ತುಗಳ ಬಗ್ಗೆಯೂ ಗಮನಹರಿಸಿಲ್ಲ.

ಸರ್ಕಾರದ ಬ್ರೈಲ್ ತಂತ್ರಾಂಶದ ವಿಮರ್ಶೆಗೆ ಮುನ್ನ ಬ್ರೈಲ್ ಎಂದರೇನು ಎಂದು ನೋಡೋಣ. ೧೯ನೇ ಶತಮಾನದಲ್ಲಿ ಲೂಯಿ ಬ್ರೈಲ್ ಎಂಬ ಫ್ರಾನ್ಸ್‌ನ ಅಂಧ ವಿಜ್ಞಾನಿಯೊಬ್ಬರು ಬ್ರೈಲ್ ಲಿಪಿ­ಯನ್ನು ಕಂಡುಹಿಡಿದರು. ಈ ಲಿಪಿಯಲ್ಲಿ ದಪ್ಪ ಕಾಗ­­ದದ ಮೇಲೆ ಸ್ಪರ್ಶಾನುಭವಕ್ಕೆ ಬರುವ ಚುಕ್ಕೆ­ಗಳನ್ನು ಮೂಡಿಸಿ ತನ್ಮೂಲಕ ಅಕ್ಷರ ವಿನ್ಯಾಸ­ಗಳನ್ನು ರೂಪಿಸಲಾಗುತ್ತದೆ. ಲಂಬ ಕೋನದಲ್ಲಿ ಒಂದರ ಪಕ್ಕ ಒಂದು ೩–೩ ಚುಕ್ಕೆಗಳಿರುವ ಒಂದು ಬ್ರೈಲ್ ಸೆಲ್ (ಖಾನೆ) ಅನ್ನು ಒಂದು ಅಕ್ಷರ ಬರೆಯಲು ಬಳಸಲಾಗುತ್ತದೆ. ಈ ಆರು ಚುಕ್ಕೆಗಳ ಸಂಯೋನೆಯ ವಿವಿಧ ಮಾದರಿಗಳನ್ನು ಬಳಸಿ ಜಗ­ತ್ತಿನ ಎಲ್ಲಾ ಭಾಷೆಗಳನ್ನು ಬ್ರೈಲ್ ಲಿಪಿಯಲ್ಲಿ ಬರೆಯ­ಬಹುದು. ಈ ಆರು ಚುಕ್ಕೆಗಳಲ್ಲಿ ಒಟ್ಟು ೬೪ ವಿವಿಧ 'combination' ಗಳನ್ನು ಮಾಡ­ಬಹುದು. ಈ ಬಗೆಯ ಲಿಪಿಯನ್ನು ಬರೆಯಲು ಬ್ರೈಲ್ ಖಾನೆಗಳನ್ನು (cell)  ಒಳಗೊಂಡ ಪಾಟಿ­ಯಂತಹ ಬ್ರೈಲ್ ಬರೆಯುವ ಸಾಧನ ಲಭ್ಯವಿದೆ. ಇದಕ್ಕಾಗಿಯೇ ತಯಾರಿಸಿದ ಮೊಳೆಯಂಥ ಸಾಧನವನ್ನು ಬಳಸಿ ಕಾಗದದ ಮೇಲೆ ಚುಕ್ಕೆ­ಗಳನ್ನು ಮೂಡಿಸುವ ಮೂಲಕ ಬ್ರೈಲ್ ಬರೆಯ­ಲಾಗುತ್ತದೆ. ಇದೇ ಮಾದರಿಯನ್ನು ಅನುಸರಿಸಿ ಬ್ರೈಲ್ ಮುದ್ರಣ ಯಂತ್ರಗಳು ರೂಪುಗೊಂಡವು. ಅವುಗಳಲ್ಲಿ ಮೊಳೆಗಳನ್ನು ಜೋಡಿಸಿ ಬ್ರೈಲ್ ಮುದ್ರಣ ಮಾಡಲಾಗುತ್ತಿತ್ತು.

ಮಾಹಿತಿ ತಂತ್ರಜ್ಞಾನದಲ್ಲಿನ ಪ್ರಗತಿಯು ಬ್ರೈಲ್ ಮುದ್ರಣ ಯಂತ್ರಗಳನ್ನು ಗಣಕದಿಂದ ನಿಯಂತ್ರಿಸಿ ಬಳಸುವ ಅವಕಾಶವನ್ನು ಒದಗಿಸಿ­ಕೊಟ್ಟಿತು. ಹೀಗೆ, ಗಣಕದಲ್ಲಿ ಬ್ರೈಲ್ ಅಕ್ಷರ­ಗಳನ್ನು ಬೆರಳಚ್ಚಿಸುವ, ಹಾಗೂ ಬೆರಳಚ್ಚಿಸಿದ ಸಾಮಾನ್ಯ ಅಕ್ಷರಗಳನ್ನು ಬ್ರೈಲ್‌ಗೆ ಪರಿವರ್ತಿಸುವ ತಂತ್ರಾಂಶಗಳು ರೂಪುಗೊಳ್ಳುವ ಅವಕಾಶ ಉಂಟಾ­ಯಿತು. ಈ ಉದ್ದೇಶಕ್ಕಾಗಿ ರೂಪಿಸಲಾದ ತಂತ್ರಾಂಶವನ್ನೇ ಬ್ರೈಲ್ ತಂತ್ರಾಂಶ ಎನ್ನಬಹುದು. ಬ್ರೈಲ್ ತಂತ್ರಾಂಶವನ್ನು ಎರಡು ಭಾಗವಾಗಿ ವಿಂಗಡಿ­ಸೋಣ ಒಂದು ಸಾಮಾನ್ಯ ‘ASCII’ ಅಥವಾ ‘Unicode' ಅಕ್ಷರಗಳಿಂದ ಬ್ರೈಲ್ ಅಕ್ಷರ­ಗಳಿಗೆ ಪರಿವರ್ತಿಸುವ ಪರಿವರ್ತಕ. ಮತ್ತೊಂದು ಬ್ರೈಲ್ ಲಿಪಿಯಲ್ಲಿಯೇ ಬೆರಳಚ್ಚು ಮಾಡುವ ವಿಶೇಷ ಕೀಲಿಮಣೆ ವಿನ್ಯಾಸ. ಕಂಪ್ಯೂಟರಿ­ನಲ್ಲಿರುವ ಕೀಲಿಮಣೆಯಲ್ಲಿನ ಆರು ಕೀಲಿ (f, d, s ಮತ್ತು l, k, j) ಹಾಗು ‘space bar’ ಗಳನ್ನು ಬ್ರೈಲ್ ಲಿಪಿ ಮೂಡಿಸಲು ಬಳಸ­ಲಾಗು­ತ್ತದೆ. ರಾಜ್ಯ ಸರ್ಕಾರ ಇಂಥದ್ದೇ ಒಂದು ಕೀಲಿಮಣೆ ತಂತ್ರಾಂಶವನ್ನು ಕನ್ನಡ ಬ್ರೈಲ್ ಬರವಣಿಗೆಗಾಗಿ ರೂಪಿಸಿದೆ.

ಅಂಧರು ಕಂಪ್ಯೂಟರ್ ಬಳಸುವುದಕ್ಕೆ ಬೇಕಿರುವ ಮತ್ತೊಂದು ಸವಲತ್ತು ಸ್ಕ್ರೀನ್ ರೀಡರ್. ಅಂದರೆ ಕಂಪ್ಯೂಟರ್  ಪರದೆಯ ಮೇಲೆ ಮೂಡುವ ಪಠ್ಯವನ್ನು ಓದಿ ಹೇಳುವ ತಂತ್ರಾಂಶ. ಈ ಕೆಲಸವನ್ನು ‘ಟೆಕ್ಸ್ಟ್ ಟು ಸ್ಪೀಚ್’ ಅಥವಾ ಪಠ್ಯವನ್ನು ಧ್ವನಿರೂಪಕ್ಕೆ ಪರಿವರ್ತಿಸುವ ತಂತ್ರಾಂಶ ಮಾಡುತ್ತದೆ. ವಿವಿಧ ಬಗೆಯ ಸ್ಕ್ರೀನ್ ರೀಡರ್‌­ಗಳು ಈಗ  ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ತಂತ್ರಾಂಶಗಳು ವಿಂಡೋಸ್, ಲಿನಕ್ಸ್,  ಆಂಡ್ರಾಯ್ಡ್, ಐಓಎಸ್ ಹೀಗೆ ಹೆಚ್ಚೂ ಕಡಿಮೆ ಎಲ್ಲಾ ಕಾರ್ಯಾಚರಣಾ ವ್ಯವಸ್ಥೆಗಳಿಗೂ ಲಭ್ಯ­ವಿವೆ. ಕಾರ್ಯಾಚರಣೆ ವ್ಯವಸ್ಥೆಯಲ್ಲಿನ ‘accessibility API' ಎಂಬ ಸವಲತ್ತನ್ನು ಬಳಸಿ­ಕೊಂಡು ಈ ತಂತ್ರಾಂಶಗಳು ಕೆಲಸ ಮಾಡುತ್ತವೆ. ಈ ಸ್ಕ್ರೀನ್ ರೀಡರ್‌ಗಳನ್ನು ಬಳಸಿಕೊಂಡು ‘ವಿಡಿಯೊ’, ಗ್ರಾಫಿಕ್ಸ್ ಹಾಗೂ ಅನಿಮೇಷನ್ ಬಿಟ್ಟು ಉಳಿದ ಎಲ್ಲಾ ಕೆಲಸಗಳನ್ನೂ ಅಂಧರು ಸ್ವತಂತ್ರ­ವಾಗಿ ಮಾಡಬಹುದು.

ರಾಜ್ಯ ಸರ್ಕಾರ ಅಭಿವೃದ್ಧಿ ಪಡಿಸಿರುವ ಬ್ರೈಲ್ ತಂತ್ರಾಂಶದ ನಿಯಂತ್ರಕಗಳನ್ನು ಅಂಧರು ಬಳಸುವ ಸ್ಕ್ರೀನ್ ರೀಡರ್‌ಗಳು ಗುರುತಿಸುವುದಿಲ್ಲ. ಕಾರ್ಯಾ­ಚರಣೆ ವ್ಯವಸ್ಥೆಯಲ್ಲಿನ ‘Accessibility interface’ ನ ಜೊತೆ ಸಂಪರ್ಕ ಈ ತಂತ್ರಾಂಶಕ್ಕೆ ಸಾಧ್ಯವಾಗಿಲ್ಲ.  ಸ್ಕ್ರೀನ್ ರೀಡರ್ ಬಳಸುವ ಅಂಧರು ಸಾಮಾನ್ಯವಾಗಿ ಮೌಸ್ ಬಳಸುವುದಿಲ್ಲ, ಬದಲಾಗಿ ಎಲ್ಲಾ ಕೆಲಸ­ಗಳನ್ನೂ ಕೀಲಿಮಣೆಯ ನೆರವಿನಿಂದಲೇ ಮಾಡು­ತ್ತಾರೆ. ಈ ಕನ್ನಡ ಬ್ರೈಲ್ ತಂತ್ರಾಂಶವನ್ನು ನೋಡಿದರೆ, ಇದರ ತಯಾರಕರಿಗೆ ಅಂಧರು ಹೇಗೆ ಗಣಕವನ್ನು ಬಳಸುತ್ತಾರೆ ಎಂಬ ಕನಿಷ್ಠ ಜ್ಞಾನವೂ ಇಲ್ಲ ಎಂದು ತೋರುತ್ತದೆ. ಅಂಧರನ್ನೇ ಗಮನ­ದಲ್ಲಿಟ್ಟುಕೊಂಡು ರೂಪಿಸಿದ ಈ ತಂತ್ರಾಂಶ­ವನ್ನು ಅಂಧರೇ ಬಳಸಲು ಸಾಧ್ಯವಿಲ್ಲ ಎಂಬುದು ಹಾಸ್ಯಾಸ್ಪದವಲ್ಲವೇ?

ದುರಂತವೆಂದರೆ, ಈ ತಂತ್ರಾಂಶದ ಸಹಾಯಕ ಕಡತ­ವನ್ನೂ ಅಂಧರು ಬಳಸಲು ಸಾಧ್ಯವಿಲ್ಲ. ಕನ್ನಡ ಟೆಕ್ಸ್ಟ್ ಟು ಸ್ಪೀಚ್ (eSpeak) ಯೂನಿ­­ಕೋಡ್ ಕನ್ನಡ ಪಠ್ಯ­ವನ್ನು ಮಾತ್ರ ಓದುತ್ತದೆ. ಈ ತಂತ್ರಾಂ­ಶ­ದ ಸಹಾಯಕ ಕಡತವು ‘pdf’ ರೂಪ­ದ­ಲ್ಲಿದ್ದು, ಇದರಲ್ಲಿ ಯೂನಿಕೋಡ್ ಬಳಕೆ­ಯಾ­ಗಿಲ್ಲ.  ‘pdf' ಕಡತ ಮಾದರಿ ಯುನಿ­ಕೋಡ್‌ ಅನ್ನು  ಬೆಂಬಲಿಸು­ವುದಿಲ್ಲ­ವಾಗಿದ್ದರೆ ಈ ಸಹಾ­ಯಕ ಕಡತವನ್ನು 'HTML' ಅಥವ 'DOC' ರೂಪದಲ್ಲಿ­ಯಾ­ದರೂ ನೀಡ­ಬಹು­ದಿತ್ತು.
ಈ ಎಲ್ಲಾ ಮಿತಿಗಳನ್ನು ಮುಂದೆ ಸರಿಪಡಿಸಬಹುದು ಎಂಬ ನಂಬಿಕೆ­ಯಿಟ್ಟು­ಕೊಂಡರೂ ಪ್ರಯೋಜನವಿಲ್ಲ. ಏಕೆಂದರೆ ರಾಜ್ಯ  ಸರ್ಕಾರ ರೂಪಿಸಿರುವ ಬ್ರೈಲ್ ಕೀಲಿಮಣೆ ವಿನ್ಯಾಸ­ವನ್ನು ಬಳಸುವವರು ಈಗ ತುಂಬಾ ಕಡಿಮೆ. ಈಗಿರುವ ಸ್ಥಿತಿಯಲ್ಲಿ ಈ ತಂತ್ರಾಂಶವನ್ನು ಅಂಧರು ಸ್ವತಂತ್ರವಾಗಿ ಚಾಲೂ ಮಾಡಲು ಬರುವುದಿಲ್ಲ. ಯಾರಾದರೂ ಇದನ್ನು ಚಾಲೂ ಮಾಡಿ­ಕೊಟ್ಟರೆ, ಇದರಲ್ಲಿ ಬ್ರೈಲ್ ಬೆರಳಚ್ಚು ಮಾಡಬಹುದು. ಕೆಲಸ ಮುಗಿದ ಮೇಲೆ ಅದನ್ನು ಉಳಿಸಿಟ್ಟುಕೊಳ್ಳಲು ಯಾರಾದರೂ ದೃಷ್ಟಿ ಇರುವವರ ಸಹಾಯ ಬೇಕು. ಹೀಗೆ ಬೇರೆಯವರ ನೆರವಿ­ನಿಂದ ಅಂಧರು ಬಳಸುವಾಗ ಬೆರಳಚ್ಚಿನಲ್ಲಿ ಆದ ತಪ್ಪನ್ನು ಸ್ವತಂತ್ರವಾಗಿ ತಿದ್ದಲು ಅಥವಾ ಪರಿ­ಶೀಲಿ­ಸಲು ಸಾಧ್ಯವೇ ಇಲ್ಲ. ಬೆರಳಚ್ಚಿಸುವಾಗ ಒಂದು ಧ್ವನಿಯು ಅಕ್ಷರಗಳನ್ನು ಉಚ್ಚರಿಸು­ತ್ತದೆ­ಯಾ­ದರೂ, ಅದು ಈಗಿನ ಕಾಲಕ್ಕೆ ಏನೂ ಅಲ್ಲ. ಸ್ಕ್ರೀನ್ ರೀಡರ್‌ಗಳ ಕಾಲದಲ್ಲಿ ಇದು ತೀರಾ ಕಡಿಮೆ.  ಇದರ ಬದಲು, ಒಂದು ಯೂನಿ­ಕೋಡ್‌­ನಿಂದ ಬ್ರೈಲ್‌ಗೆ ಪರಿವರ್ತಿಸುವ ಪರಿ­ವರ್ತಕ ಸಾಕಾಗಿತ್ತು. ಅದರ ನೆರವಿನಿಂದ ಅನೇಕ ಬ್ರೈಲ್ ಪುಸ್ತಕಗಳನ್ನು ಮುದ್ರಿಸಬಹುದಾಗಿತ್ತು. ಅಂಧರಿಗೆ ಕನ್ನಡ ಟೈಪಿಂಗ್ ಕಷ್ಟವೇನಲ್ಲ. ಕನ್ನಡ ಟೆಕ್ಸ್ಟ್ ಟು ಸ್ಪೀಚ್ ಬಳಸಿ, ಕನ್ನಡ ಯೂನಿ­ಕೋಡ್‌­ನಲ್ಲಿ ಬೆರಳಚ್ಚು ಮಾಡಿ ನಾಗರಾಜ್ ಎಂಬ ಅಂಧ ವಿದ್ಯಾರ್ಥಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಸ್ನಾತ­ಕೋತ್ತರ ಪರೀಕ್ಷೆಯಲ್ಲಿ ರ್‍ಯಾಂಕ್‌ ಪಡೆದಿದ್ದಾರೆ.

ಜಗತ್ತಿನ ದಿಗ್ಗಜ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ತಮ್ಮ ಎಲ್ಲಾ ಜಾಲತಾಣ ಹಾಗೂ ತಂತ್ರಾಂಶ­ಗಳನ್ನು accessible ಆಗಿ ಮಾಡಲು ಒಂದೊಂದು accessibility ತಂಡಗಳನ್ನೇ ರಚಿಸಿ­ಕೊಂಡಿವೆ. ಖಾಸಗಿ ಕಂಪೆನಿಗಳ ಈ ಕೆಲಸವನ್ನು ನೋಡಿ, ಸರ್ಕಾರವು ತನ್ನ ತಂತ್ರಾಂಶ ಹಾಗೂ ಜಾಲ­ತಾಣಗಳನ್ನು accessible  ಮಾಡುವ ನಿಟ್ಟಿನಲ್ಲಿ ಗಮನ ನೀಡುವುದು ಉತ್ತಮ. ಸರ್ಕಾರ ಈಗ ಬಿಡುಗಡೆ ಮಾಡಿರುವ ಬ್ರೈಲ್ ತಂತ್ರಾಂಶದಂಥ ತಂತ್ರಾಂಶಗಳು ೬-೭ ವರ್ಷ­ಗಳಿಂದಲೇ ಮಾರುಕಟ್ಟೆಯಲ್ಲಿ ಲಭ್ಯವಿವೆ. ಅಲ್ಲದೇ, ಇದೇ ಬಗೆಯ ತಂತ್ರಾಂಶವನ್ನು (ಎಲ್ಲಾ ಭಾರತೀಯ ಭಾಷೆಗಳಿಗೂ) ೫-೬ ವರ್ಷಗಳ ಹಿಂದೆಯೇ, ಒಂದು ಎಂಜಿನಿಯರಿಂಗ್ ಪ್ರಾಜೆಕ್ಟ್ ಆಗಿ ತಯಾರಿಸಿದ್ದರು. ಈ ಎಲ್ಲಾ ಕಾರಣಗಳಿಂದ ಸರ್ಕಾರ, ಬಿಡುಗಡೆ ಮಾಡಿರುವ ಈ ಬ್ರೈಲ್ ತಂತ್ರಾಂಶವು ನಿಷ್ಪ್ರಯೋಜಕ ಎನಿಸುತ್ತದೆ.

accessibility ಎಂದರೇನು?
ಸಾಫ್ಟ್‌ವೇರ್ ಅಥವಾ ವೆಬ್ accessibility ಎಂದರೆ, ದೈಹಿಕ ನ್ಯೂನತೆ­ಗಳನ್ನು ಹೊಂದಿರುವವರಿಗೂ  ಸಾಫ್ಟ್‌­ವೇರ್  ಮತ್ತು ವೆಬ್ ಸೈಟ್‌ಗಳನ್ನು ಬಳಸಲು ತೊಡಕಾ­ಗದಂತೆ ಮಾಡುವುದು. ಅಂದರೆ, ಅವರು ಬಳ­ಸುವ ವಿಶೇಷ ತಂತ್ರಾಂಶಗಳಾದ ಉದಾ: ಸ್ಕ್ರೀನ್ ರೀಡರ್ ಅಥವಾ ಆನ್-ಸ್ಕ್ರೀನ್ ಕೀಬೋರ್ಡ್ ಇತ್ಯಾದಿ; ಬಳಸಿದಾಗಲೂ ಅವರು ಸಮಸ್ಯೆಗಳಿಗೆ ಒಳಗಾಗದಂತೆ ಸಾಫ್ಟ್‌­ವೇರ್  ಅಥವಾ ವೆಬ್‌ಸೈಟ್ ಬಳಸುವಂತೆ ಮಾಡು­ವುದು. ಹೆಚ್ಚಿನ ಎಲ್ಲಾ ಕಾರ್ಯಾ­ಚರಣಾ ವ್ಯವಸ್ಥೆಗಳಲ್ಲಿಯೂ 'accessibility application interface' ಎಂಬ ತಂತ್ರಾಂಶ ಇದ್ದೇ ಇರುತ್ತದೆ. ಇದು ವಿಶೇಷ ಅಗತ್ಯ­ಗಳಿರುವವರು ಬಳಸುವ ತಂತ್ರಾಂಶ ಹಾಗೂ ಕಾರ್ಯಾಚರಣಾ ವ್ಯವಸ್ಥೆಯ ಮಧ್ಯೆ ಸಂಪರ್ಕ ಮಾಧ್ಯಮ­ವಾಗಿ ಕೆಲಸ ಮಾಡುತ್ತದೆ.

ಯಾವುದೇ ತಂತ್ರಾಂಶವನ್ನು ಬಳಸುವಾಗ, ಅದರಲ್ಲಿ ಯಾವುದಾದರೂ ಕಾರ್ಯ ನಡೆದರೆ, ಉದಾ: ಒಂದು ಬಟನ್ ಕ್ಲಿಕ್ ಮಾಡಿ­ದರೆ ಅಥವಾ ಪಠ್ಯವನ್ನು ನಮೂದಿಸಿದರೆ, ಒಂದು ‘event’ ಉಂಟಾಗುತ್ತದೆ. ಅದು ಕಾರ್ಯಾ­ಚರಣಾ ವ್ಯವಸ್ಥೆಗೆ ಯಾವ ಕೆಲಸ ನಡೆ­ದಿದೆ ಎಂಬ ಸಂದೇಶವನ್ನು ರವಾನಿಸುತ್ತದೆ. ಈ ‘event’ಗಳನ್ನು ಬಳಸಿಕೊಂಡು ಈ ‘accessibility API’ ವಿಶೇಷ ತಂತ್ರಾಂಶಗಳಿಗೆ ಸಂದೇಶ ನೀಡುತ್ತದೆ. ಯಾವುದೇ ತಂತ್ರಾಂಶವನ್ನು ತಯಾರಿಸುವ ಹೊತ್ತಿನಲ್ಲಿ ಅಂದರೆ ತಂತ್ರಾಂಶಕ್ಕೆ ಸಂಕೇತ­ಗಳನ್ನು (coding) ಬರೆಯುವ ಹೊತ್ತಿನಲ್ಲಿ, ‘acces­sible’ ‘property’ಯನ್ನು ಸೂಚಿಸ­ಬೇಕಾಗುತ್ತದೆ.

ಹೆಚ್ಚಿನ ಎಲ್ಲಾ ‘Programming language’ ಗಳಲ್ಲಿ ಎಲ್ಲ ‘class’ ಹಾಗೂ ‘interface’ ಗಳಿಗೂ ಈ ‘accessible’ ‘property’ ಯನ್ನು ಸೂಚಿಸ­ಬಹುದು. ತಂತ್ರಾಂಶ ಅಭಿವೃದ್ಧಿಗಾರರೂ  ಈ ಅಂಶ­ವನ್ನು ನೆನಪಿನಲ್ಲಿಟ್ಟುಕೊಂಡಿದ್ದರೆ ದೃಷ್ಟಿ­ವಂಚಿತ ಹಾಗೂ ಇತರೆ ಅಂಗವಿಕಲರಿಗೆ ತಂತ್ರಾಂಶದ ಬಳಕೆಯಲ್ಲಿನ ತೊಡಕನ್ನು ನಿವಾರಿಸಬಹುದು.

(ಲೇಖಕರು ಇ– -ಸ್ಪೀಕ್‌ ಎಂಬ ಪಠ್ಯವನ್ನು ಓದುವ ಬಹುಭಾಷಾ ತಂತ್ರಾಂಶದ ಕನ್ನಡ ಭಾಗವನ್ನು ರೂಪಿಸಿಕೊಟ್ಟ ಯುವತಂತ್ರಜ್ಞ.  ಸಂಪೂರ್ಣ ದೃಷ್ಟಿಸವಾಲನ್ನು ಗೆದ್ದಿರುವ  ಜೀವನೋತ್ಸಾಹಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT