ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೊಡ್ಡಣ್ಣ’ನ ಬಿಸಿ ತುಪ್ಪ ಟ್ರಂಪ್

ವ್ಯಕ್ತಿ
Last Updated 30 ಏಪ್ರಿಲ್ 2016, 20:24 IST
ಅಕ್ಷರ ಗಾತ್ರ

ಈ ವರ್ಷದ ಜನವರಿಯಿಂದಲೇ ಪ್ರಾರಂಭವಾಗಿರುವ 2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಲ್ಲಿನ ನಾನಾ ರಾಜ್ಯಗಳಲ್ಲಿ ಹಲವು ತಿಂಗಳುಗಳವರೆಗೆ  ನಡೆದು, ಈ ವರ್ಷಾಂತ್ಯದ ವೇಳೆಗೆ ಅಂತಿಮ ಫಲಿತಾಂಶ ಹೊರಬೀಳಬಹುದು. ಈ ಸಲದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಹಾಗೂ ಟೆಡ್ ಕ್ರೂಜ್, ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಹಾಗೂ ಬೆರ್ನಿ ಸ್ಯಾಂಡರ್ಸ್ ಮುಂಚೂಣಿಯಲ್ಲಿದ್ದು ಸದ್ಯಕ್ಕೆ ಆ ಎರಡೂ ಪಕ್ಷಗಳು ಡೊನಾಲ್ಡ್ ಟ್ರಂಪ್ ಹಾಗೂ ಹಿಲರಿ ಕ್ಲಿಂಟನ್‌ರನ್ನು ತಮ್ಮ ಅಧ್ಯಕ್ಷೀಯ ಅಭ್ಯರ್ಥಿಗಳನ್ನಾಗಿ ಬಿಂಬಿಸುತ್ತಿವೆ. 

ಕಳೆದ ಬುಧವಾರ ತಮ್ಮ ಮೊದಲ ಅಧಿಕೃತ ಪ್ರಚಾರ ಭಾಷಣದಲ್ಲಿ ತಮ್ಮನ್ನು ಮಹಾತ್ಮ ಗಾಂಧಿಗೆ ಹೋಲಿಸಿಕೊಂಡು ನಗೆಗೀಡಾಗಿದ್ದ ಡೊನಾಲ್ಡ್ ಟ್ರಂಪ್ ಮೂಲತಃ ಒಬ್ಬ ಉದ್ಯಮಿ ಹಾಗೂ ಧಾರಾವಾಹಿ ಕಲಾವಿದ ಕೂಡ. ಚುನಾವಣಾ ಪ್ರಚಾರದ ಭಾಷಣಗಳಲ್ಲಿ ಒಬ್ಬ ಮುತ್ಸದ್ದಿಯಂತೆ ತಮ್ಮ ಪ್ರತಿಸ್ಪರ್ಧಿಗಳನ್ನು ಸಮರ್ಥವಾಗಿ ಖಂಡಿಸಲಾರದ ಟ್ರಂಪ್, ಅವರುಗಳ ಉಡುಗೆ-ತೊಡುಗೆ, ಅವರು ಉಣ್ಣುವ ಶೈಲಿ ಮುಂತಾದವನ್ನು ವ್ಯಂಗ್ಯ ಮಾಡುತ್ತ ಮತದಾರರಲ್ಲಿ ‘ಇದೇನು ರಾಜಕೀಯ ಭಾಷಣವೋ ಅಥವಾ ಯಾವುದೋ ಅಸಂಗತ ಹಾಸ್ಯ ಪ್ರಹಸನವೋ’ ಎಂಬ ಗೊಂದಲ ಮೂಡಿಸಿದ್ದರು.

ರಿಯಾಲಿಟಿ ಶೋನ ತಾರೆಯಾಗಿರುವ ಟ್ರಂಪ್‌ರ ಚುನಾವಣಾ ಪ್ರಚಾರ ಭಾಷಣಗಳೂ ಅಲ್ಲಿನ ಟಿ.ವಿ. ಪರದೆಗಳ ಮೇಲೆ ಒಂದು ರಿಯಾಲಿಟಿ ಮನರಂಜನೆಯಾಗಿ ಮಾರ್ಪಟ್ಟಿವೆ. ಕಾರ್ನಿಗಿ ವಿಶ್ವವಿದ್ಯಾಲಯದ ಭಾಷಾ ತಂತ್ರಜ್ಞಾನ ಸಂಸ್ಥೆ (ಎಲ್‌ಟಿಐ) ತನ್ನ ಸಮೀಕ್ಷೆಯೊಂದರಲ್ಲಿ, ಡೊನಾಲ್ಡ್ ಟ್ರಂಪ್ ಆರನೇ ತರಗತಿ ವಿದ್ಯಾರ್ಥಿಯ ಬೌದ್ಧಿಕ ಮಟ್ಟ ಹೊಂದಿದ್ದಾರೆ ಎಂದು ಅಭಿಪ್ರಾಯ ಪಟ್ಟಿದೆ. ಅಂದಿನ ಭಾಷಣದಲ್ಲಿ ಟ್ರಂಪ್ ‘ಅಮೆರಿಕ ಫಸ್ಟ್’ ಎಂಬ ಹೆಸರಿನ ತಮ್ಮ ವಿದೇಶಾಂಗ ನೀತಿಯನ್ನು ಪ್ರಕಟಿಸಿದ್ದರು. ಅಣ್ವಸ್ತ್ರಗಳಿಂದ ಹಿಡಿದು ನ್ಯಾಟೊ ಒಪ್ಪಂದದವರೆಗೆ, ಮಧ್ಯ ಏಷ್ಯಾದಿಂದ ಹಿಡಿದು ಜಪಾನ್, ಕೊರಿಯಾದವರೆಗೆ ಎಲ್ಲ ವಿಷಯಗಳನ್ನೂ ಪ್ರಸ್ತಾಪಿಸಿದ್ದರು.

ಆದರೆ ಅವರ ಮಾತುಗಳಲ್ಲಿ ಯಾವ ವಿಷಯದ ಕುರಿತೂ ಒಂದು ಸ್ಪಷ್ಟ ಕಲ್ಪನೆ ಇರಲಿಲ್ಲ; ಒಂದು ಕ್ರಮಬದ್ಧ ಯೋಜನೆ ಕಾಣಿಸಲಿಲ್ಲ. ಕೆಲವು ಪ್ರಸ್ತಾಪಗಳಂತೂ ಭ್ರಮೆ ಮತ್ತು ಪೂರ್ವಗ್ರಹಗಳಿಂದ ಕೂಡಿದ್ದು ಬಾಲಿಶವಾಗಿ, ಗೊಂದಲಮಯವಾಗಿ ನಿರೂಪಿತವಾಗಿದ್ದವು. ಉದಾಹರಣೆಗೆ, ನ್ಯಾಟೊ ಒಕ್ಕೂಟ ರಾಷ್ಟ್ರಗಳು ಅಮೆರಿಕದ ಹಿತಾಸಕ್ತಿಗಳಿಗೆ ಅನುಕೂಲಕರವಾಗಿ ನಡೆದುಕೊಳ್ಳದಿದ್ದರೆ ಅಮೆರಿಕವು ಒಕ್ಕೂಟದೊಂದಿಗಿನ ತನ್ನ ಸಂಬಂಧವನ್ನೇ ತೊರೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದರು. ಹಾಗೊಂದು ವೇಳೆ ಯುರೋಪಿಯನ್ ಒಕ್ಕೂಟದಿಂದ ಪ್ರತ್ಯೇಕಗೊಂಡಲ್ಲಿ ಯಾವ ಕ್ಷಣದಲ್ಲಾದರೂ ಚೀನಾ ಅಥವಾ ರಷ್ಯಾದಿಂದ ಅಮೆರಿಕಕ್ಕೆ ಅಪಾಯ ಸಂಭವಿಸಬಹುದು.

ಅಮೆರಿಕದ ವಿದೇಶಾಂಗ ನೀತಿಯ ಪ್ರಾಥಮಿಕ ತಿಳಿವಳಿಕೆಯೂ ಇಲ್ಲದವರು ಮಾತ್ರ ಹೀಗೆಲ್ಲ ಮಾತನಾಡಬಲ್ಲರು ಎಂದು ಅವರ ಪ್ರತಿಸ್ಪರ್ಧಿಗಳು ಲೇವಡಿ ಮಾಡುತ್ತಿದ್ದಾರೆ. ಐಎಸ್ ಉಗ್ರರನ್ನು ಸಂಪೂರ್ಣವಾಗಿ ದಮನ ಮಾಡುವುದಾಗಿ ಆಶ್ವಾಸನೆ ನೀಡಿರುವ ಟ್ರಂಪ್ ತಮ್ಮ ಕಾರ್ಯಯೋಜನೆ ಬುಶ್ ಅಥವಾ ಒಬಾಮರ ಪ್ರಯತ್ನಗಳಿಗಿಂತ ಹೇಗೆ ಭಿನ್ನವಾದುದು ಎಂಬುದನ್ನು ವಿವರಿಸುವ ಗೊಡವೆಗೆ ಹೋಗುವುದಿಲ್ಲ. ಹಾಗೆ ನೋಡಿದರೆ ಅನ್ಯ ಜನಾಂಗಗಳನ್ನು ಅನುಮಾನದಿಂದ ನೋಡುವ, ಅವರನ್ನು ತನ್ನ ದೇಶದಿಂದ ಉಚ್ಚಾಟಿಸುವ ಅಮೆರಿಕದ ಧೋರಣೆ ಇಂದು ನಿನ್ನೆಯದ್ದಲ್ಲ.

1882ರಲ್ಲೇ ‘ಚೀನೀ ಎಕ್ಸ್‌ಕ್ಲೂಶನ್ ಆ್ಯಕ್ಟ್’ ಅನ್ನು ಅದು ಜಾರಿ ಮಾಡಿತ್ತು, ಎರಡನೆಯ ಮಹಾಯುದ್ಧದ ಅವಧಿಯಲ್ಲಿ ಅಮೆರಿಕದಲ್ಲಿ ನೆಲೆಸಿದ್ದ ಜಪಾನೀಯರನ್ನು ದೇಶದಿಂದ ಅಧಿಕೃತವಾಗೇ ಗಡಿಪಾರು ಮಾಡಿತ್ತು. ಎರಡನೆಯ ಮಹಾಯುದ್ಧದ ನಂತರ ಅಮೆರಿಕದ ಪ್ರಾಯೋಜಕತ್ವದಲ್ಲಿ ನಡೆದ ವಿಯೆಟ್ನಾಂ ಯುದ್ಧ, ಕೊಲ್ಲಿ ಯುದ್ಧ, ನಿಕರಾಗುವಾ ಮೇಲಿನ ದಾಳಿ ಇವೆಲ್ಲದರ ಹಿಂದೆ ಅದರ ಜನಾಂಗ ದ್ವೇಷವೇ ಕೆಲಸ ಮಾಡಿತ್ತು. ಪ್ಯಾಲೆಸ್ಟೀನ್ ಹಿಂಸಾಚಾರವಂತೂ ತನ್ನ ಕೈಗಳು ರಕ್ತಸಿಕ್ತವಾಗದಂತೆ ಮುಸ್ಲಿಂ ಭಯೋತ್ಪಾದಕರಿಗೆ ತನ್ನ ತುಕ್ಕು ಹಿಡಿದ ಶಸ್ತ್ರಾಸ್ತ್ರಗಳನ್ನು ಕೊಟ್ಟು ಯಹೂದಿಗಳನ್ನು ನಿರ್ನಾಮ ಮಾಡುವ ಕುತಂತ್ರವಾಗಿತ್ತು.

ಅಮೆರಿಕದ ರಾಜಕಾರಣಿಗಳ ಯಹೂದಿ ದ್ವೇಷ ಇದೀಗ ಮುಸ್ಲಿಂ ಸಮುದಾಯದತ್ತ ತಿರುಗಿದೆ ಅಷ್ಟೆ. ಪ್ರೀತಿಯ ಹಾಗೆಯೇ ದ್ವೇಷಕ್ಕೂ ಕಣ್ಣಿರುವುದಿಲ್ಲ. ಆದರೆ ಧಾರ್ಮಿಕ ಸ್ವಾತಂತ್ರ್ಯವನ್ನು ಅಳವಡಿಸಿಕೊಂಡಿರುವ ಆ ದೇಶದ ಒಬ್ಬ ರಾಜಕಾರಣಿ ಧರ್ಮದ ಹೆಸರಿನಲ್ಲಿ ಒಂದು ಜನಾಂಗವನ್ನು ಗಡಿಪಾರು ಮಾಡುವ ಯೋಚನೆ ಮಾಡುತ್ತಿರುವುದು ಇದೇ ಮೊದಲ ಸಲ ಎನಿಸುತ್ತದೆ. ಈ ಹಿನ್ನೆಲೆಯಲ್ಲೇ ಯುರೋಪಿಯನ್ ದೇಶಗಳು ಅಮೆರಿಕವನ್ನು ‘ಮೂರ್ಖರಿಂದ ಆಳಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿರುವ ಒಂದು ಹುಚ್ಚರ ಸಂತೆ’ ಎಂದು ಪದೇ ಪದೇ ವರ್ಣಿಸುವುದು. 

ಟ್ರಂಪ್‌ ಅವರ ಜನಾಂಗೀಯ ದ್ವೇಷದ ಹೇಳಿಕೆಗಳು ಹೊರಜಗತ್ತಿನಲ್ಲಿ ಮಾತ್ರವಲ್ಲ ಅಮೆರಿಕದ ಪತ್ರಿಕೆಗಳು ಹಾಗೂ ಬುದ್ಧಿಜೀವಿ ವಲಯದಿಂದಲೂ ವ್ಯಾಪಕ ಖಂಡನೆಗೆ ಒಳಗಾಗಿವೆ. ಕಳೆದ ವರ್ಷ ಡಿಸೆಂಬರ್ 6ರಂದು ಅಧ್ಯಕ್ಷ ಒಬಾಮ ತಮ್ಮ ಒಂದು ಭಾಷಣದಲ್ಲಿ ಐಎಸ್ ಭಯೋತ್ಪಾದನೆಯನ್ನು ಪ್ರಸ್ತಾಪಿಸುತ್ತ ‘ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವ ಮುಸ್ಲಿಂ ಸಂಘಟನೆ, ಸಮೂಹಗಳನ್ನು ತುರ್ತಾಗಿ ನಾವು ಗುರುತಿಸಿಕೊಳ್ಳಬೇಕಾಗಿದೆ. ದ್ವೇಷ, ಅನುಮಾನಗಳಿಂದ ಅವರನ್ನು ದೂರ ಮಾಡುವುದು ಜಾಣತನವಲ್ಲ’ ಎಂದು ಹೇಳಿದ್ದನ್ನು ಟ್ರಂಪ್‌ರಂತಹ ಅಭ್ಯರ್ಥಿಗಳು ಅವಲೋಕಿಸಿಕೊಳ್ಳಬೇಕಾಗಿದೆ. 

ಮುಸ್ಲಿಮರು, ಮುಸ್ಲಿಮೇತರರ ನಡುವೆ ಸೌಹಾರ್ದ ಮೂಡಿಸುವಲ್ಲಿ ಶತಪ್ರಯತ್ನ ನಡೆಸುತ್ತಿರುವ ಅಥವಾ ಹೊರಜಗತ್ತಿನೆದುರು ಹಾಗೆ ಬಿಂಬಿಸಿಕೊಳ್ಳುತ್ತಿರುವ ಅಮೆರಿಕಕ್ಕೆ ಟ್ರಂಪ್‌ ಅವರ ಮುಸ್ಲಿಂ ನಿಷೇಧದ ಹೇಳಿಕೆಗಳು ನುಂಗಲಾರದ ತುತ್ತಾಗಿ ಪರಿಣಮಿಸಿವೆ. ಜನವರಿ 2017ರ ವೇಳೆಗೆ ಒಂದು ವೇಳೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಚುನಾಯಿತರಾದರೆ ಅವರ ಈ ಬಗೆಯ ನಿಲುವಿನಿಂದ ಜಿಹಾದಿ ಭಯೋತ್ಪಾದನೆಗೆ ಪರಿಹಾರವೇನೂ ಸಿಗುವುದಿಲ್ಲ, ಬದಲಾಗಿ ಮುಸ್ಲಿಂ ಬಾಹುಳ್ಯವಿರುವ ಯುರೋಪಿಯನ್ ದೇಶಗಳೊಂದಿಗಿನ ಸಂಬಂಧ ಇನ್ನಷ್ಟು ಹದಗೆಡುತ್ತದೆ ಎಂದು ರಾಜಕೀಯ ಪರಿಣತರು ಅಭಿಪ್ರಾಯ ಪಡುತ್ತಿದ್ದಾರೆ.

ಜಾಗತಿಕ ಆರ್ಥಿಕ ಅಸ್ಥಿರತೆ, ಸಾಮೂಹಿಕ ವಲಸೆ, ಜಿಹಾದಿ ಭಯೋತ್ಪಾದನೆ ಇಂದು ಅಮೆರಿಕ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಾಗಿವೆ. ಆದರೆ ಜಗತ್ತಿನ ಎಲ್ಲ ರಾಜಕಾರಣಿಗಳಂತೆ ಅಲ್ಲಿನ ಅಭ್ಯರ್ಥಿಗಳು ಪ್ರಚೋದನಕಾರಿ ಹೇಳಿಕೆಗಳಿಂದಲೇ ಮತದಾರರ ಗಮನ ಸೆಳೆಯುವ ತಂತ್ರಕ್ಕೆ ಮೊರೆ ಹೋಗುತ್ತಿದ್ದಾರೆ. ಪ್ರಮುಖವಾಗಿ ಟ್ರಂಪ್ ತಮ್ಮ ಮುಸ್ಲಿಂ ವಿರೋಧಿ ನಿಲುವುಗಳಿಂದ, ಗರ್ಭಪಾತಕ್ಕೆ ಒಳಗಾಗುವ ಮಹಿಳೆಯರ ಕುರಿತ ಸಾಂಪ್ರದಾಯಿಕ ನಿಲುವುಗಳಿಂದ, ಪರಮಾಣು ಪ್ರಸರಣಕ್ಕೆ ಸಂಬಂಧಿಸಿದ ದ್ವಂದ್ವಮಯ ಹೇಳಿಕೆಗಳಿಂದ, ವಲಸಿಗರನ್ನು ಅಪಹಾಸ್ಯ ಮಾಡುವ ಸಣ್ಣತನದಿಂದ ಅಲ್ಲಿನ ಮಾಧ್ಯಮಗಳಲ್ಲಿ ಉಳಿದೆಲ್ಲರಿಗಿಂತಲೂ ಮಿಗಿಲಿನ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. 

ಮತದಾರರಲ್ಲಿ ವಿಶ್ವಾಸ, ಜೀವನ ಪ್ರೀತಿಯನ್ನು ಮೂಡಿಸದೆ ಅವರನ್ನು ಕೆರಳಿಸುವ, ಅವರೊಳಗಿನ ಮೃಗತ್ವವನ್ನು ಎಚ್ಚರಗೊಳಿಸುವ ಇಂತಹ ತಂತ್ರಗಳು ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗಬಹುದೇ ವಿನಾ ಬದುಕನ್ನು ಸಹನೀಯವಾಗಿಸುವ ಯಾವ ಯೋಜನೆಗಳೂ ಅವುಗಳಿಂದ ಸೃಷ್ಟಿಯಾಗುವುದಿಲ್ಲ. ಅಮೆರಿಕದ ಮತದಾರರು ಈ ಬಗೆಯ ಕ್ಷುಲ್ಲಕ ಪ್ರೇರಣೆ, ಪ್ರಲೋಭನೆಗಳಿಗೆ ಸೋಲುವರೇ ಅಥವಾ ಹಿಲರಿ ಅವರಂತಹ ನುರಿತ ಮುತ್ಸದ್ದಿಯನ್ನು ಆರಿಸುವ ಮೂಲಕ ತಮ್ಮ ಪ್ರಬುದ್ಧತೆಯನ್ನು ಮೆರೆಯುವರೇ ಎಂಬುದನ್ನು ಈ ಚುನಾವಣೆ ರುಜುವಾತು ಪಡಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT