ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಲವತ್ತೇಳರ ಸ್ವಾತಂತ್ರ್ಯ ಪ್ರಶ್ನೆ ಇನ್ನೂ ಜೀವಂತ’

Last Updated 28 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಹಿತಿ ಸಿ.ಜಿ.ಕೃಷ್ಣಸ್ವಾಮಿ ಅವರು ನನ್ನ ಬಳಿ ಬಂದು ‘ಹೋಟೆಲ್ ಕಾರ್ಮಿಕರ ಸಮಸ್ಯೆಗಳ ಕುರಿತು ನಾಟಕ ಮಾಡುತ್ತಿದ್ದೇವೆ. ಇದಕ್ಕೆ ನೀವು  ಕವಿತೆ­ಯನ್ನು ರಚಿಸಬೇಕು’ ಎಂದು  ಬೇಡಿಕೆ ಇಟ್ಟರು. ಚಹಾ ಕೊಡಿಸಿದರೆ ಮಾತ್ರ ಕವಿತೆ ರಚಿಸುವುದಾಗಿ ಷರತ್ತು ಹಾಕಿದೆ. ಚಹಾ ಕುಡಿದ ನಂತರ ಮೊದಲ ನಾಲ್ಕು ಸಾಲುಗಳು ಹೊಳೆದವು. ಅಂತಿಮವಾಗಿ ಕವನ ಪೂರ್ಣಗೊಂಡಾಗ ಐದಾರು ಬಾರಿ ಚಹಾ ಸೇವಿಸಿದ್ದೆ. ಕವಿತೆ ಜನಿಸಲು ಸ್ಫೂರ್ತಿಯಾದ ಚಹಾಕ್ಕೆ ಎಂದಿಗೂ ಋಣಿ’  –‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ’ದ ಕವಿತೆ ರೂಪುಗೊಂಡ ಸನ್ನಿವೇಶವನ್ನು ಕವಿ ಡಾ.­ಸಿದ್ದಲಿಂಗಯ್ಯ ಅವರು ಬಿಡಿಸಿಟ್ಟ ಪರಿ. ಈ ಕವಿತೆ­ಯನ್ನು ಗಾಯಕ ಪಂಚಮ ಹಳಿಬಂಡಿ ಸುಶ್ರಾವ್ಯವಾಗಿ ಹಾಡಿದರು.

ಕರ್ನಾಟಕ ಸುಗಮ ಸಂಗೀತ ಪರಿಷತ್ತು ನಗರದ ಪ್ರತಿಭಾ ಶಿಕ್ಷಣ ಸಮಿತಿ ಆವರಣದಲ್ಲಿ ಭಾನುವಾರ ಏರ್ಪ­ಡಿಸಿದ್ದ ‘ಕವಿಯ ನೋಡಿ–ಕವಿತೆ ಕೇಳಿ’ ಸರಣಿ ಕಾರ್ಯಕ್ರಮದಲ್ಲಿ ಹಲವು ನೆನಪುಗಳನ್ನು ಮೆಲುಕು ಹಾಕಿದರು.

‘ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದರೂ, ಇಂದಿಗೂ ಕಾರ್ಮಿಕ ಮತ್ತು  ರೈತರ ಸಮಸ್ಯೆಗಳು ಬಗೆ­ಹರಿದಿಲ್ಲ. ವ್ಯಕ್ತಿಗಳ ನಡುವೆ ಅಂತರ ಹೆಚ್ಚಾಗು­ತ್ತಿದೆ. ಆರ್ಥಿಕ ಅಸಮಾನತೆ ಇಂದಿನ ಸಮಾಜದ ಪ್ರಮುಖ ಸಮಸ್ಯೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಸಿದ್ದಲಿಂಗಯ್ಯ ಅವರ ಮಾತುಗಳ ಜತೆಗೆ ಅವರು ರಚಿ­ಸಿ­ರುವ 12 ಕವಿತೆಗಳನ್ನು ಕಿಕ್ಕಿರಿದು ತುಂಬಿದ್ದ  ಸಭಾಂಗಣದಲ್ಲಿ ಹೆಸರಾಂತ ಗಾಯಕರು ಪ್ರಸ್ತುತ­ಪಡಿ­ಸಿದರು. ಕವಿ ಬಿ.ಆರ್‌.ಲಕ್ಷ್ಮಣರಾವ್‌ ಸೇರಿದಂತೆ ಅಪಾರ ಸಾಹಿತ್ಯಾಭಿ­ಮಾನಿಗಳು ಈ ವಿನೂತನ ಕಾರ್ಯಕ್ರ­ಮಕ್ಕೆ ಸಾಕ್ಷಿಯಾದರು.

‘ಪ್ರೀತಿಯ ಗಂಗೆ ಹರಿಯುತಲಿರಲಿ’ ಕವಿತೆ ಕುರಿತು ಹೇಳಿದ ಸಿದ್ದಲಿಂಗಯ್ಯ, ‘ಪ್ರೀತಿ ಎನ್ನುವುದು  ಹೃದ­ಯದ ಅಂತರಂಗದ ಕಣಿವೆಯಲ್ಲಿ ಸದಾ ನದಿಯಂತೆ ಹರಿಯುತ್ತಿರಬೇಕು. ಅದು ನಿಜವಾದ ಪ್ರೀತಿ. ಪ್ರೀತಿ ವಿಷಯದ ಕುರಿತು ತಜ್ಞರಿಂದ  ಉಪನ್ಯಾಸ ಮಾಡಿಸಿ­ದರೆ  ಪ್ರೀತಿಯ ವ್ಯಾಮೋಹ  ಕಡಿಮೆಯಾಗಲಿದೆ’ ಎಂದು ವಿವರಿಸಿದರು.

‘ಕೊಡಲಿಯ ಏಟಿಗೆ ಗಡಗಡ ನಡುಗಿ’ ಕವಿತೆಯನ್ನು ವಾಚಿಸಿದ ಅವರು, ‘ನನಗೆ ಶ್ರೀಮಂತ ದೇವತೆಗಳಿಗಿಂತ ಬಡ ಗ್ರಾಮ ದೇವತೆಗಳ ಬಗ್ಗೆ ಹೆಚ್ಚು ಒಲವು. ಹಳ್ಳಿಯಲ್ಲಿ ಕೆಲ ಭಕ್ತರ ಮೈಮೇಲೆ ದೇವರು ಬಂದಾಗ ಅವರು ವರ್ತಿಸುವ ರೀತಿ, ಹಾಗೂ ಅವರನ್ನು ಭಕ್ತರು ಕೇಳುವ ಪ್ರಶ್ನೆಗಳನ್ನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದೆ’ ಎಂದು ಹೇಳಿದರು.

ಭಕ್ತರು ಸಮಸ್ಯೆಗಳ ಕುರಿತು ಪ್ರಶ್ನೆ ಕೇಳುವ ಮುಂಚಿ­ತ­ವಾಗಿಯೇ ಮೈಮೇಲೆ  ಬಂದಿದ್ದ ದೇವರುಗಳು ‘ಏನ್ ಪ್ರಾಬ್ಲಂ, ನಿಮ್ಮ ಸಮಸ್ಯೆಯ ಪರಿಹಾರಕ್ಕೆ ‘ನೆಕ್ಸ್ಟ್‌ ವೀಕ್ ಬನ್ನಿ’ ಎಂದು ಇಂಗ್ಲಿಷ್‌ನಲ್ಲಿ ಹೇಳುವ ಅವರು ಪ್ರಸಂಗ­ವನ್ನು ಹಾಸ್ಯಭರಿತವಾಗಿ ವಿವರಿಸಿದರು.

‘ಈ ಪ್ರಸಂಗದ ಕುರಿತು ನನ್ನ ಗುರುಗಳಾದ ಜಿ.ಎಸ್‌.ಶಿವರುದ್ರಪ್ಪ ಅವರಿಗೆ ತಿಳಿಸಿದಾಗ ಅವರು ಕನ್ನಡದ ದೇವತೆಗಳೆ ಇಂಗ್ಲಿಷ್ ಮಾತನಾಡಿದರೆ, ಕನ್ನಡ­ವನ್ನು ಉಳಿಸುವವರು ಯಾರು’ ಎಂಬ ಪ್ರಶ್ನೆ ಹಾಕಿದ್ದರು’ ಎಂದು ನೆನೆದರು.

‘ಗ್ರಾಮೀಣ ಭಾಗದ ಭಕ್ತರು ದೇವರನ್ನು ನಿರ್ದಿಷ್ಟ ಸ್ಥಾನದಲ್ಲಿ ಇಟ್ಟಿಲ್ಲ. ಗಿಡ, ಮರ ಬೆಟ್ಟ, ನದಿ ಹೀಗೆ.. ನಿಸರ್ಗದ ಪ್ರತಿಯೊಂದು ವಸ್ತುವಿನಲ್ಲಿ ದೇವರನ್ನು ಕಾಣುತ್ತಾರೆ’ ಎಂದು ಹೇಳಿದರು. ಪ್ರೇಮಗೀತೆ, ದುರಂತ ಜೀವನ,  ಯುಗಾದಿಯ ಸುಗ್ಗಿ, ಪರಿಸರ...  ಹೀಗೆ ಅವರ ಕಾವ್ಯದ ಯಾತ್ರೆಯಲ್ಲಿ ಬಣ್ಣ, ಬಣ್ಣದ ಪ್ರಪಂಚ ತುಂಬಿತ್ತು!

‘ಹಸಿವಿನಿಂದ ಸತ್ತೋರು, ಸೈಜುಗಲ್ಲು ಹೊತ್ತೋರು’ ಕವಿತೆ ಕುರಿತು ಮಾತನಾಡಿದ ಅವರು, ‘ಈ ಕವಿತೆಯು ಕೇವಲ ಒಂದು ಜನಾಂಗಕ್ಕೆ ಮೀಸಲಾಗಿಲ್ಲ. ಶೋಷಣೆಗೆ ಒಳಗಾದ  ಎಲ್ಲಾ ಜನಾಂಗಗಳ ಕುರಿತ ಕವಿತೆಯಾಗಿದೆ. ಕವಿತೆಯಲ್ಲಿ ‘ನನ್ನ ಜನಗಳು’ ಎಂಬ ಪದವು ಕೂಲಿ ಕಾರ್ಮಿಕರು, ರೈತರು ಹಾಗೂ ಶೋಷಿತರ ಧ್ವನಿಯಾಗಿದೆ’ ಎಂದು ಹೇಳಿದರು. ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ, ರಂಗಾಯಣ ನಿರ್ದೇಶಕ ಜನಾರ್ದನ್, ಪ್ರತಿಮಾ ಆತ್ರೇಯ, ಎಸ್. ಸುನಿತಾ ಅವರು ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT