ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನುಡಿ’ ಸ್ವೀಕಾರ: ಸೋಲುತ್ತಿರುವ ಭಾರತ

ಚರ್ಚೆ
Last Updated 29 ನವೆಂಬರ್ 2015, 19:47 IST
ಅಕ್ಷರ ಗಾತ್ರ

ವಾಕ್ಯದ ಅರ್ಥದಿಂದ ಸಾಮಾಜಿಕ ಅರ್ಥವನ್ನು ಹೇಗೆ ಗ್ರಹಿಸಬೇಕು ಅನ್ನುವುದನ್ನು ಕಲಿಯುವುದು ಮುಖ್ಯ. ಶಬ್ದಶಃ ಅರ್ಥ ಮಾಡಿಕೊಳ್ಳುವುದು ಒಂದು ರೀತಿಯ ಅನಕ್ಷರತೆಯೇ ಸರಿ.

ಯು.ಆರ್. ಅನಂತಮೂರ್ತಿ ಅವರಿಂದ ಹಿಡಿದು, ಗಿರೀಶ ಕಾರ್ನಾಡ್‌ ಮತ್ತೆ ಈಗ ಅಮೀರ್ ಖಾನ್ ಅವರು ಮಾತನಾಡಿದ ನುಡಿಗಳು ಸೃಷ್ಟಿಸಿರುವ ಗೊಂದಲ, ಸಹಿಷ್ಣುತೆ-ಅಸಹಿಷ್ಣುತೆಯ ವಿಚಾರದ ಆಚೆ ‘ವಾಕ್ಯಗಳನ್ನು ಹೇಗೆ ಗ್ರಹಿಸಿ ಸ್ವೀಕರಿಸಬೇಕು’ ಅನ್ನುವ ಕಾಗ್ನಿಟಿವ್ ಸಮಸ್ಯೆಯಂತಲೂ ನೋಡಬಹುದು.

ನುಡಿಗಳಿಂದಾದ ಸಮಸ್ಯೆಗಳನ್ನು ಗಮನಿಸಿದರೆ, ವ್ಯಕ್ತಿಗಳು ಆಡಿದ ಮಾತುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದರಲ್ಲಿ ಭಾರತ ಸೋಲುತ್ತಿದೆಯೇನೋ ಅನಿಸುತ್ತದೆ. ಇದು ಇಂದಿನ ಯುವ ಸಂಸ್ಕೃತಿಯ ಕಾಗ್ನಿಟಿವ್ ಸಾಮರ್ಥ್ಯದಲ್ಲಿ ಇರುವ ತೊಂದರೆಯಾಗಿಯೂ ಕಾಣುತ್ತದೆ. ಅನಂತಮೂರ್ತಿ ಅವರ ವಾಕ್ಯದ ತಾತ್ಪರ್ಯವನ್ನು ಅರ್ಥಮಾಡಿಕೊಳ್ಳದ ಭಾರತ, ಒಂದು ನಿರ್ದಿಷ್ಟವಾದ ಸಂಭಾಷಣೆಯ ಭಾಗವಾಗಿ ತನ್ನ ಪತ್ನಿ ಜೊತೆ ಆಡಿದ ಮಾತಿನ ತಿರುಳನ್ನು ಉದ್ಧರಿಸಿದ ಅಮೀರ್ ಖಾನ್‌ರ ವಾಕ್ಯಗಳನ್ನು ಅದರ ಹಿಂದೆ ಮುಂದೆ ಬಂದ ವಾಕ್ಯಸರಣಿ ಮತ್ತು ಸಂದರ್ಭವನ್ನು ಕತ್ತರಿಸಿ ಕೇವಲ ಒಂದೇ ವಾಕ್ಯವನ್ನು ಅರ್ಥೈಸುವುದು;

ಕಾರ್ನಾಡರು ಒಂದು ನಿರ್ದಿಷ್ಟವಾದ ಐತಿಹಾಸಿಕ ಒಲವನ್ನು, ಒಂದು ನಿರ್ದಿಷ್ಟ ಸಂದರ್ಭದಲ್ಲಿ ನುಡಿದದ್ದು ಅನ್ನುವುದನ್ನು ಮರೆತು, ಕೇವಲ ವಾಕ್ಯಗಳನ್ನು ಆಕ್ರಮಣ ಮಾಡುವುದು ಅಸಹಿಷ್ಣುತೆಯನ್ನು ತೋರಿಸದಿದ್ದರೂ, ಯುವಜನರ ಅವಸರದ ಅರ್ಥೈಸುವಿಕೆ, ನುಡಿಯನ್ನು  ಸಂದರ್ಭೋಚಿತವಾಗಿ ಹೇಗೆ ಸ್ವೀಕರಿಸಬೇಕೆಂಬ ತಿಳಿವಳಿಕೆಯ ಕೊರತೆ ಇದೆ ಅನ್ನುವುದನ್ನು ಸೂಚಿಸುತ್ತದೆ.

ಭಾಷಾ ವಿಜ್ಞಾನದಲ್ಲಿ ಒಂದು ರೀತಿಯ ವ್ಯತ್ಯಾಸವನ್ನು ಮಾಡುತ್ತಾರೆ. ಅಂದರೆ ವಾಕ್ಯದ ಅರ್ಥ ಮತ್ತು ಒಂದು ಭಾಷಿಕ ಸಮುದಾಯದಲ್ಲಿ ಅದೇ ವಾಕ್ಯಕ್ಕಿರುವ ಸಾಮಾಜಿಕ ಸಂದರ್ಭದ ಅರ್ಥ ಬೇರೆ, ಬೇರೆ ಆಗಿರುತ್ತವೆ ಅನ್ನುವ ವಿಚಾರ. ಉದಾಹರಣೆಯನ್ನು ಕೊಟ್ಟು ವಿವರಿಸುವುದಾದರೆ ಹೀಗೆ ಹೇಳಬಹುದು. ಒಮ್ಮೆ  ನಾನು ಚಿಕ್ಕ ಕುರ್ಚಿಯ ಮೇಲೆ ಕುಳಿತಿದ್ದೆ. ಆಗ ನನ್ನ ಎರಡು ವರ್ಷದ ಮಗಳು ಒಂದು ದೊಡ್ಡ ಬೊಂಬೆಯನ್ನು ಹಿಡಿದುಕೊಂಡು ನಾನು ಕುಳಿತಿದ್ದ ಕುರ್ಚಿಯಲ್ಲಿ ಕುಳಿತುಕೊಳ್ಳಲು ಬಂದಳು. ಆಗ ನಾನು ಅವಳಿಗೆ, ‘ನಮಗೇ ಕುಳಿತುಕೊಳ್ಳಲು ಇಲ್ಲಿ ಜಾಗವಿಲ್ಲ, ಈ ಬೊಂಬೆಯನ್ನು ಎಲ್ಲಿಂದ ತಂದಿದ್ದೀಯಾ?’ ಅಂದೆ.

ತಕ್ಷಣ ಅವಳು ಮೂಲೆಗೆ ಕೈ ತೋರಿಸಿ, ‘ಅಲ್ಲಿಂದ ತೆಗೆದುಕೊಂಡು ಬಂದೆ’  ಅಂದಳು. ಇಲ್ಲಿ ನನ್ನ ಮಗಳು ನನ್ನ ವಾಕ್ಯವನ್ನು ಒಂದು ಪ್ರಶ್ನೆಯನ್ನಾಗಿ ಅರಿತುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ, ನಿಜ. ಆದರೆ ನನ್ನ ವಾಕ್ಯದ ಉದ್ದೇಶ ಬೊಂಬೆ ಎಲ್ಲಿಂದ ಬಂತು ಎಂದು  ಕೇಳುವುದಾಗಿರಲಿಲ್ಲ. ಬೊಂಬೆಯನ್ನು ಇಲ್ಲಿ ತರಬೇಡ ಅನ್ನುವ ಸೂಚನೆ ಆಗಿತ್ತು ಅಷ್ಟೇ. ಮಕ್ಕಳು ವಾಕ್ಯದ ಅರ್ಥದಿಂದ ಸಾಮಾಜಿಕ ಅರ್ಥವನ್ನು ಹೇಗೆ ಗ್ರಹಿಸಬೇಕು ಅನ್ನುವುದನ್ನು ಭಾಷಿಕ ಸಮುದಾಯದಲ್ಲಿ ಕಲಿಯುತ್ತಾ ಹೋಗುತ್ತಾರೆ.  ಶಬ್ದಶಃ ಅರ್ಥ ಮಾಡಿಕೊಳ್ಳುವುದು ಒಂದು ರೀತಿಯ ಅನಕ್ಷರತೆಯೇ ಸರಿ.

ಭಾಷಿಕ ಸಮುದಾಯದಲ್ಲಿ ವಾಕ್ಯಗಳು ಸಾಮಾಜಿಕ ನುಡಿಗಳಾಗಿ ಕೆಲಸ ಮಾಡುವುದರಿಂದ ಜೀವಂತವಾಗಿರುತ್ತವೆ. ಸಾಮಾನ್ಯ ಭಾಷಾ ವಿಜ್ಞಾನದಲ್ಲಿ ಮತ್ತು ಕಾನೂನಿನ ಕಾಳಗದಲ್ಲಿ ವಾಕ್ಯದ ಅರ್ಥಕ್ಕೆ ಒಮ್ಮೊಮ್ಮೆ ಪ್ರಾಮುಖ್ಯ ಬರಬಹುದು. ಆದರೆ ಬದುಕಿನ ವ್ಯವಹಾರದಲ್ಲಿ ಸಾಮಾಜಿಕ ಅರ್ಥವನ್ನು ಹೊಮ್ಮಿಸುವುದೇ ವಾಕ್ಯಗಳ ಉದ್ದೇಶವಾಗಿರುತ್ತದೆ. ಭಾಷೆಯನ್ನು ಕಲಿಯುವುದೆಂದರೆ ಅದರ ಸಾಮಾಜಿಕ ಅರ್ಥವನ್ನು ಹಿಡಿಯುವ ಶಕ್ತಿಯನ್ನು ಬೆಳೆಸಿಕೊಳ್ಳುವುದು ಎಂದು ಅರ್ಥ. ಒಂದು ವಾಕ್ಯದ ಸಾಂದರ್ಭಿಕ ಅರ್ಥವನ್ನು ಹೇಗೆ ಗ್ರಹಿಸಬೇಕು ಅನ್ನುವುದು ಒಂದು ರೀತಿಯ ಸಾಮರ್ಥ್ಯ.

ಪ್ರಸ್ತುತ ಕಾಲದಲ್ಲಿ, ವಾಕ್ಯಕ್ಕಿರುವ ಆಶಯ, ಧ್ವನಿ ಮತ್ತು ಸಂದರ್ಭಗಳನ್ನು ಬಿಟ್ಟು, ಕೇವಲ ಒಣ ‘ವಾಕ್ಯಾರ್ಥ’ಕ್ಕೆ ಜೋತು ಬೀಳುತ್ತಿರುವುದು ಈ ದೇಶದ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸುಸಂಸ್ಕೃತ ಯಂತ್ರಕಲೆ ಪ್ರವೀಣರಾದ ಯುವಜನರೇ ಹೊರತು ಗ್ರಾಮೀಣ ಪ್ರದೇಶದ ಜನಸಾಮಾನ್ಯರು ಅಲ್ಲ. ಇವರು ಹೆಚ್ಚಾಗಿ ಸಾಮಾಜಿಕ ತಾಣಗಳ ಬಳಕೆದಾರರು. ಆದರೆ ನಾವು ಇಂತಹ ಸಂದರ್ಭದಲ್ಲಿ, ಸಾರಾಸಗಟಾಗಿ ಪತ್ರಿಕಾ ಮಾಧ್ಯಮ ಮತ್ತು ಟಿ.ವಿ. ಮಾಧ್ಯಮಗಳನ್ನು ದೂರುತ್ತೇವೆ.

ಮಾಧ್ಯಮಗಳು ಇಂತಹ ವಿದ್ಯಮಾನಗಳನ್ನು ಬೆಳೆಸಿ ವಿವಾದವಾಗಿಸುತ್ತವೆ ಎಂದು  ದೂರುವುದು ತಪ್ಪು. ವ್ಯಕ್ತಿಗಳು ಸಾರ್ವಜನಿಕವಾಗಿ ಆಡಿದ ನುಡಿಗಳನ್ನು ವರದಿ ಮಾಡುವುದು ಮಾಧ್ಯಮಗಳ ಜವಾಬ್ದಾರಿ. ಆ ನುಡಿಗಳಿಗೆ ಬಂದ ಪ್ರತಿಕ್ರಿಯೆಗಳನ್ನೂ ವರದಿ ಮಾಡುವುದು ಅವುಗಳಿಗೆ ಅಷ್ಟೇ ಮುಖ್ಯವಾಗಿರುತ್ತದೆ. ಆದರೆ ನಾವು ಅವುಗಳನ್ನು ಹೇಗೆ ಓದುತ್ತೇವೆ, ಅರ್ಥ ಮಾಡಿಕೊಳ್ಳುತ್ತೇವೆ  ಅನ್ನುವುದು ಮುಖ್ಯವಾಗುತ್ತದೆ.

ನಮ್ಮ ಸಮಕಾಲೀನ ಯುಗವನ್ನು ‘ಜ್ಞಾನ ಸಮಾಜ’ ಎಂದು ಗುರುತಿಸುವುದುಂಟು. ಜ್ಞಾನದ ಆಗುಹೋಗುಗಳು ಸಮಾಜದ ‘ಗ್ರಹಿಕಾ ಸಾಮರ್ಥ್ಯ’ದ (ಕಾಗ್ನಿಟಿವ್) ರಚನೆಗಳ ಮೇಲೆ ನಿಂತಿರುತ್ತವೆ.  ಇಲ್ಲಿ ಭಾಷೆ ಮತ್ತು ಇತರೆ ಸಂಜ್ಞೆಗಳನ್ನು ಗ್ರಹಿಸುವ ಸಂವೇದನಾಶೀಲತೆ ಮತ್ತು ಸೂಕ್ಷ್ಮತೆ ಬಹಳ ಮುಖ್ಯವಾಗುತ್ತದೆ. ಒಂದರ್ಥದಲ್ಲಿ ಈಗಿರುವ ಸಮಸ್ಯೆ ನುಡಿಗಳನ್ನು  ಅರ್ಥೈಸುವಿಕೆಯ ಸಮಸ್ಯೆ ಅಂತಲೂ ಗುರುತಿಸಬಹುದು. ಮಾನವ ಇತಿಹಾಸದಲ್ಲಿ ‘ನುಡಿ’ ಯಾವಾಗಲೂ ಸಮಸ್ಯೆಯೇ ಅಂತ ಕಾಣಿಸುತ್ತದೆ! ಶರಣರು ‘ನುಡಿಯೊಳಗಾಗಿ ನಡೆಯುವುದ’ರ ಕುರಿತು ಮಾತನಾಡಿದ್ದಾರೆ. ನಡೆಯಬೇಕಾದರೆ, ಮೊದಲು ನುಡಿಯ ಅರ್ಥ ಸ್ಪಷ್ಟವಾಗಬೇಕು.

ಫ್ರೆಂಚ್ ತತ್ವಜ್ಞಾನಿ ಮಿಶೆಲ್ ಫುಕೊ ‘ನುಡಿ’ (ನೇರ ನುಡಿ) ಗ್ರೀಕರಿಗೆ ಯಾವ ರೀತಿಯ ಸಮಸ್ಯೆಯಾಗಿತ್ತು ಅನ್ನುವುದನ್ನು ತನ್ನ ‘ಪರೆಸಿಯಾ’ ಎಂಬ ಪುಸ್ತಕದಲ್ಲಿ ವಿವರಿಸುತ್ತಾನೆ. ಈ ಪುಸ್ತಕ ಸತ್ಯವನ್ನು ನುಡಿಯುವ ಮತ್ತು ಅದಕ್ಕೆ ಬೇಕಾಗಿರುವ ಧೈರ್ಯದ ಬಗ್ಗೆ ಮಾತನಾಡುತ್ತಾ, ಅದು ಹೇಗೆ ಪ್ರಾಣಾಪಾಯವನ್ನು ಒಡ್ಡುತ್ತದೆ ಅನ್ನುವುದರ ಕುರಿತು ಚರ್ಚಿಸುತ್ತದೆ. ಭಾಷೆಯ ಸಮಸ್ಯೆ ಗ್ರೀಕರಿಗೆ ಸತ್ಯ, ಧೈರ್ಯ ಮತ್ತು ಪ್ರಾಣಾಪಾಯದ ಸಮಸ್ಯೆಯಾಗಿತ್ತು.

ಮುಂದೆ, ಶೇಕ್‌ಸ್ಪಿಯರನ ಶ್ರೇಷ್ಠ ನಾಟಕಗಳಲ್ಲಿ ಒಂದಾದ ‘ಕಿಂಗ್ ಲಿಯರ್’ ಒಂದು ನೆಲೆಯಲ್ಲಿ ಭಾಷೆಯ ಸಮಸ್ಯೆಯನ್ನು ಕುರಿತ ನಾಟಕವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಕೆಲವು ನುಡಿಗಳನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವುದರಿಂದಆಗುವ ದುರಂತವನ್ನು ಹೇಳುವ ಕತೆಯಂತಲೂ ಈ ನಾಟಕವನ್ನು ಓದಬಹುದು. ಕಾರ್ಡೀಲಿಯಾಳ ನೇರ ನುಡಿಯಿಂದಲೆ ಅಷ್ಟೆಲ್ಲಾ ದುರಂತವಾಗುವುದು. ಆದರೆ ನಾಟಕದ ಆಶಯ ಇರುವುದು ನಾಟಕದ ಕೊನೆಯಲ್ಲಿ ಎಡ್ಗರ್ ಹೇಳುವ ಉಕ್ತಿಯಲ್ಲಿ, ‘Speak what you mean, not what you ought to’ (ಏನನ್ನು ನುಡಿದರೆ ನಿನಗೆ ಲಾಭವೊ ಅದನ್ನು ನುಡಿಯದೆ, ನಿನಗೆ ಅನಿಸಿದ್ದನ್ನು ನುಡಿ).

ಬಹುಶಃ ಶೇಕ್‌ಸ್ಪಿಯರ್ ತನ್ನ ನಾಟಕದ ಕತೆಯ ಆಚೆಗೂ ಸಮಕಾಲೀನ ಸಾಮಾಜಿಕ ಜೀವನದಲ್ಲಿ ‘ನುಡಿ’ ಯಾವ ಪಾತ್ರ ವಹಿಸಬೇಕೆಂಬುದನ್ನು ಇಲ್ಲಿ ಸೂಚಿಸಿದಂತೆ ಕಾಣಿಸುತ್ತದೆ. ಅದು ಏನೇ ಇರಲಿ. ನಮ್ಮ ಸಮಕಾಲೀನ ನುಡಿಗಳನ್ನು ಹೇಗೆ ಸ್ವೀಕರಿಸಬೇಕು ಅನ್ನುವ ಸಮಸ್ಯೆಯನ್ನು ಕೇವಲ ಭಾಷಾ ಶಿಕ್ಷಣದಿಂದ ಬಗೆಹರಿಸಲು ಸಾಧ್ಯವಿಲ್ಲ. ನಮಗೆ ಬೇಕಾಗಿರುವುದು ಮಾನವೀಯ ನೆಲೆಯ ಉದಾರ ಶಿಕ್ಷಣ. ಮಾನವೀಯ ನೆಲೆಗಟ್ಟಿನಲ್ಲಿ ವಾಕ್ಯಗಳನ್ನು ಹೇಗೆ ಇಡಿಯಾಗಿ, ಸೌಜನ್ಯದಿಂದ, ಉಚಿತವಾಗಿ ಸ್ವೀಕರಿಸಬೇಕು ಅನ್ನುವ ಶಿಕ್ಷಣ.

ಯಾವ ವಾಕ್ಯಗಳನ್ನು ಪರಿಗಣಿಸಬೇಕು, ಯಾವ ವಾಕ್ಯಗಳನ್ನು ನಿರ್ಲಕ್ಷಿಸಬೇಕು ಅನ್ನುವ ವಿವೇಕ ಬೆಳೆಸುವ ಹ್ಯುಮನಿಸ್ಟಿಕ್ ಶಿಕ್ಷಣ ಇಂದು ಅವಶ್ಯ ಅನಿಸುತ್ತದೆ. ಈ ಸಲಹೆ ಒಂದು ಷರತ್ತನ್ನು ಒಳಗೊಂಡಿದೆ. ಅದೇನೆಂದರೆ, ಸದ್ಯದ (ತುರ್ತು) ಪರಿಸ್ಥಿತಿಯನ್ನು ನೆನಪಿನಲ್ಲಿಟ್ಟುಕೊಂಡು ಲೇಖಕರು, ಬುದ್ಧಿಜೀವಿಗಳು, ಪ್ರಸಿದ್ಧ ವ್ಯಕ್ತಿಗಳು ತಮ್ಮ ಮಾತುಗಳನ್ನು ಕಾಳಜಿಯಿಂದ ಕೆತ್ತನೆ ಮಾಡಿ ಸಾರ್ವಜನಿಕವಾಗಿ ಪ್ರದರ್ಶಿಸಬೇಕು; ಸಾಮಾಜಿಕ ಸ್ವಾಸ್ಥ್ಯ ದೃಷ್ಟಿಯಿಂದ ಅವರ ಜವಾಬ್ದಾರಿಯೂ ಅಷ್ಟೇ ಮುಖ್ಯ.

ಲೇಖಕ ಸಹ ಪ್ರಾಧ್ಯಾಪಕ, ಇಂಗ್ಲಿಷ್‌ ಅಧ್ಯಯನ ಹಾಗೂಸಂಶೋಧನಾ ವಿಭಾಗ, ತುಮಕೂರು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT