ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಠ್ಯಕ್ರಮದಲ್ಲಿ ಈಶಾನ್ಯ ರಾಜ್ಯಗಳ ಇತಿಹಾಸಕ್ಕೆ ಆದ್ಯತೆ’

Last Updated 2 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಈಶಾನ್ಯದ ಏಳು ರಾಜ್ಯಗಳ ಸಂಸ್ಕೃತಿ ಮತ್ತು ಸ್ವಾತಂತ್ರ್ಯ ಹೋರಾಟ­ದಲ್ಲಿ ಅವುಗಳ ಐತಿ­ಹಾ­ಸಿಕ ಪಾತ್ರವನ್ನು ಪಠ್ಯಕ್ರಮದಲ್ಲಿ ಅಳವಡಿಸುವಂತೆ ದೇಶದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ವಿಶ್ವ­ವಿದ್ಯಾ­ಲ­ಯ­ಗಳ ಧನಸಹಾಯ ಆಯೋಗ (ಯುಜಿಸಿ) ಸಲಹೆ ನೀಡಿದೆ.

ವಸಾಹತುಶಾಹಿ ವಿರುದ್ಧ ಹೋರಾಟ ಮಾಡಿದ ಈಶಾನ್ಯ ರಾಜ್ಯಗಳ ಪ್ರಮುಖ ನಾಯಕರ ಕುರಿತ ಪಠ್ಯಕ್ರಮವು ಉನ್ನತ ಶಿಕ್ಷಣದಲ್ಲಿ ರೂಪುಗೊಳ್ಳಬೇಕು ಎಂಬ ಸೂಚನೆಯನ್ನು ಇತ್ತೀಚೆಗೆ ನೀಡಿದೆ.

ಈಶಾನ್ಯ ರಾಜ್ಯಗಳ ವಿಭಿನ್ನ ಜನಾಂಗೀಯತೆ ಮತ್ತು ಅವರ ಸಂಸ್ಕೃತಿಯ ಕುರಿತು ದೇಶದ ಇತರ ಭಾಗಗಳಲ್ಲಿ ಅಷ್ಟಾಗಿ ಪರಿಚಯವಿಲ್ಲ. ಈ ಕೊರತೆಯನ್ನು ನೀಗಿಸಲು ಯುಜಿಸಿ ಈ ಸಲಹೆ ನೀಡಿದೆ.

ಹಿನ್ನೆಲೆ: ಎರಡು ವರ್ಷಗಳ ಹಿಂದೆ ಮಾನವ ಸಂಪ­ನ್ಮೂಲ ಅಭಿವೃದ್ಧಿ ಸಚಿವಾಲಯ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶಗಳನ್ನು ಉತ್ತೇಜಿ­ಸಲು ಮತ್ತು ಅವರ ಕಲ್ಯಾಣಕ್ಕಾಗಿ ಸಲಹೆ ನೀಡಲು ಕಾರ್ಯಪಡೆಯೊಂದನ್ನು ರಚಿಸಿತ್ತು.

ಶಾಲಾ ಹಂತದಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ಈಶಾನ್ಯ ರಾಜ್ಯಗಳ ಇತಿಹಾಸ ಮತ್ತು ಸಂಸ್ಕೃತಿಯನ್ನು ಪರಿಚಯಿಸುವಂತಹ ಪಠ್ಯಕ್ರಮ ಅಗತ್ಯ ಎಂದು ಕಾರ್ಯ­ಪಡೆ  ಶಿಫಾರಸು ನೀಡಿತ್ತು.

ವಸಾಹತುಶಾಹಿ ಪೂರ್ವದಿಂದ ಸ್ವಾತಂತ್ರ್ಯದವರೆಗೆ ಮತ್ತು ಸ್ವಾತಂತ್ರ್ಯ ನಂತರದ ಈಶಾನ್ಯ ರಾಜ್ಯಗಳ ಇತಿಹಾಸವನ್ನು ಶಾಲಾ– ಕಾಲೇಜುಗಳ ಪಠ್ಯಕ್ರಮ­ದಲ್ಲಿ ಅಡಕ ಮಾಡಬೇಕು. ಈ ಏಳು ರಾಜ್ಯಗಳ ಮತ್ತು ದೇಶದ ಇತರೆಡೆಯ ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ನಿಯಮಿತವಾಗಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ­ಗಳು ನಡೆಯಬೇಕು ಎಂಬ ಸಲಹೆಯನ್ನೂ ಕಾರ್ಯ­ಪಡೆ ತನ್ನ ವರದಿಯಲ್ಲಿ ಸೇರಿಸಿತ್ತು.

ಅನುಷ್ಠಾನಕ್ಕೆ ಸೂಚನೆ: ಕಾರ್ಯಪಡೆ ನೀಡಿರುವ ಈ ಶಿಫಾರಸುಗಳನ್ನು ಅನುಷ್ಠಾನ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಿಶ್ವವಿದ್ಯಾಲಯಗಳಿಗೆ ಯುಜಿಸಿ ಈಗ ಸೂಚಿಸಿದೆ.

ಈ ಮಧ್ಯೆ, ಇತ್ತೀಚೆಗೆ ದೆಹಲಿಯಲ್ಲಿ ಅರುಣಾಚಲ ಪ್ರದೇಶದ 19 ವರ್ಷದ ವಿದ್ಯಾರ್ಥಿ ನಿಡೊ ತಾನಿಯಾ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಮತ್ತು ಆತನ ಸಾವು ಹಾಗೂ ದೇಶದ ವಿವಿಧೆಡೆ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯದ ಹಿನ್ನೆಲೆ­ಯಲ್ಲಿ  ಈ ರಾಜ್ಯಗಳ ವಿದ್ಯಾರ್ಥಿಗಳ ನಿಯೋಗ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಇತ್ತೀಚೆಗೆ ಭೇಟಿ ಮಾಡಿತ್ತು.

ತಮ್ಮ ರಾಜ್ಯಗಳ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ನೀಡಿತ್ತು. ಇದರಲ್ಲಿ ‘ಸಪ್ತ ಸೋದರಿಯರು’ ರಾಜ್ಯಗಳ ಇತಿಹಾಸ ಮತ್ತು ಅವುಗಳ ವಿಶಿಷ್ಟ ಸಂಸ್ಕೃತಿ ಬಗ್ಗೆ ರಾಷ್ಟ್ರೀಯ ಪಠ್ಯಕ್ರಮ ರೂಪಿಸಬೇಕೆಂದೂ ಒತ್ತಾಯಿಸಿತ್ತು. ಇದನ್ನು ಸಹ ಯುಜಿಸಿ ಪರಿಗಣಿಸಿ ಈ ಸಲಹೆಗಳನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT