ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾರಂಪರಿಕ ತಾಣಗಳಿಗೆ ರಕ್ಷಣೆ ಸಿಗಲಿ’

Last Updated 21 ಏಪ್ರಿಲ್ 2014, 8:46 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಇದು ಜಿಲ್ಲೆಯ ಐತಿ­ಹಾಸಿಕ ಸ್ಥಳಗಳ ಬಗ್ಗೆ ಹಿಂದಿನಿಂದಲೂ ಕೇಳಿಬರುತ್ತಿರುವ ಆಕ್ಷೇಪಣೆ. ಸ್ಥಳೀಯ­ರಿಗೆ ಕಣ್ಣೆದುರೇ ಹಾಳಾಗುತ್ತಿರುವ ಪರಂಪರೆಯ ಭಾಗದಂತಿರುವ ಕೋಟೆ ಕೊತ್ತಲಗಳ ಬಗ್ಗೆ ಹೃದಯ ಹಿಂಡುವಂಥ ಅಂತಕರಣ ಒಂದೆಡೆ ಇದ್ದರೆ, ಯಾರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬ ಬೇಸರ ಮತ್ತೊಂದೆಡೆ.

ನೂರಾರು ವರ್ಷಗಳ ಹಿಂದೆ ಆಳ್ವಿಕೆ ನಡೆಸಿದ ಪಾಳೇಗಾರರಿಗೂ ಮತ್ತು ಚಿಕ್ಕಬಳ್ಳಾಪುರಕ್ಕೂ ಗಾಢ ನಂಟು ಇದ್ದು, ಈಗಲೂ ಅದರ ಪಳೆಯಳಿಕೆಗಳು ಬೆಟ್ಟ­ಗುಡ್ಡ ಮತ್ತು ಕುಗ್ರಾಮದಂತಹ ಪ್ರದೇಶ­ಗಳಲ್ಲಿ ಕಾಣಸಿಗುತ್ತವೆ.

ಜಿಲ್ಲೆಯ ಬಾಗೇಪಲ್ಲಿಯಲ್ಲಿರುವ ಗುಮ್ಮ­ನಾಯಕನಪಾಳ್ಯ ಕೋಟೆ ಇದಕ್ಕೆ ಒಂದು ಉದಾಹರಣೆಯಾದರೆ, ಚಿಕ್ಕ­ಬಳ್ಳಾಪುರದ ಮೂಲೆಯಲ್ಲಿರುವ ಸ್ಕಂದ­ಗಿರಿ ಬೆಟ್ಟದ ಮೇಲಿನ ಕೋಟೆ ಗೋಡೆ­ಗಳು, ದೇಗುಲ, ನಂದಿ ಮೂರ್ತಿ ಮತ್ತೊಂದು ಸಾಕ್ಷಿ.

ನಂದಿ ಬೆಟ್ಟಕ್ಕೆ ಸಮ ಎತ್ತರದಲ್ಲಿರುವ ಸ್ಕಂದಗಿರಿ ಬೆಟ್ಟವನ್ನು ಹತ್ತಿದರೆ, ತುದಿ­ಯಲ್ಲಿ ಎರಡು ಪುರಾತನ ದೇಗುಲ ಕಾಣಸಿಗುತ್ತದೆ. ಅಷ್ಟೇ ಅಲ್ಲ, ಬೆಟ್ಟದ ತುದಿ ತಲುಪುವವರೆಗೆ ಮಾರ್ಗ­ದುದ್ದಕ್ಕೂ ಎರಡು–ಮೂರು ಹಂತದ ಕಲ್ಲಿನ ಕೋಟೆಯಂತಹ ಗೋಡೆಗಳು ಗೋಚರಿಸುತ್ತವೆ. ಗೋಡೆ ಕೆಲ ಭಾಗ ಈಗಲೂ ಗಟ್ಟಿಮುಟ್ಟಾಗಿದ್ದರೆ, ಇನ್ನೂ ಕೆಲ ಭಾಗಗಳು ಅವಶೇಷಗಳಾಗಿ ಚದುರಿ ಹೋಗಿವೆ. ಅಲ್ಲಲ್ಲಿ ಕಲ್ಲಿನ ಪ್ರವೇಶದ್ವಾರ ಯಥಾಸ್ಥಿತಿಯಲ್ಲಿರುವುದು ಅಚ್ಚರಿ ಮೂಡಿಸುತ್ತದೆ.

‘ಭಾರತೀಯ ಪ್ರಾಚ್ಯವಸ್ತು ಸಂಗ್ರಹಾ­ಲಯ ಬಹುತೇಕ ಕಡೆ ಬೆಟ್ಟದ ಕೆಳಗಿನ ಭಾಗದ ಸ್ಮಾರಕಗಳನ್ನು ಮತ್ತು ಪುರಾ­ತನ ಕೋಟೆಗಳನ್ನು ತನ್ನ ವ್ಯಾಪ್ತಿಗೆ ತೆಗೆದು­ಕೊಂಡಿದೆ. ಆದರೆ ಸ್ಕಂದಗಿರಿಯಂತಹ ಬೆಟ್ಟದ ತುದಿಯಲ್ಲಿರುವ ಪುರಾತನ ಸ್ಮಾರಕಗಳ ಬಗ್ಗೆ ಹೆಚ್ಚು ಗಮನಹರಿಸಲ್ಲ. ಈಗಲೂ ಅಲ್ಲಿನ ಕಟ್ಟಡಗಳಲ್ಲಿ ಹಳೆಯ ಲಿಪಿಗಳು ಕಾಣಿಸುತ್ತವೆ. ಆಗಿನ ದೇವತಾ­ಮೂರ್ತಿ ನೋಡ­ಬಹುದು’ ಎಂದು ನಗರದ ನಿವಾಸಿ ಶ್ರೀನಿವಾಸ್‌ರಾವ್‌ ‘ಪ್ರಜಾ­ವಾಣಿ’ಗೆ ತಿಳಿಸಿದರು.

ಸ್ಕಂದಗಿರಿ ಕೋಟೆ ಯುದ್ಧದ ಸಂದರ್ಭದಲ್ಲಿ ನಾಶವಾಗಿರಬಹುದು. ಇಲ್ಲವೇ ಪಾಳೇಗಾರರ ಪದ್ಧತಿ ಸಂಪೂರ್ಣ ಕೊನೆಗೊಂಡ ನಂತರ ಕೆಲ ಕಿಡಿಗೇಡಿಗಳು ಇಡೀ ಪುರಾತನ ಪರಿಸರಕ್ಕೆ ಹಾನಿ ಮಾಡಿರಬಹುದು. ಹೀಗೆ ಹೇಳಲು ಹಲ ಕಾರಣಗಳಿವೆ. ದೇಗುಲ ಒಳ ಆವರಣದಲ್ಲಿ ಇರಬೇಕಾದ ನಂದಿ ಮೂರ್ತಿ ಹೊರಾವರಣದಲ್ಲಿ ಇದ್ದರೆ, ಕೋಟೆಗೆ ಸಂಬಂಧಿಸಿದ ಕಲ್ಲು ಮತ್ತು ಕಂಬಗಳು ಅಲ್ಲಲ್ಲಿ ಚದುರಿ ಹೋಗಿವೆ. ಒಂದಾನೊಂದು ಕಾಲದಲ್ಲಿ ಇಲ್ಲಿ ಕೋಟೆಯಿತ್ತು ಎಂಬುದಕ್ಕೆ ಹೇಳಲು ಕೂಡ ಸಾಧ್ಯವಾಗದಂತಹ ಪರಿಸ್ಥಿತಿ­ಯಿದೆ’ ಎಂದು ಅವರು ತಿಳಿಸಿದರು.

ಬೆಟ್ಟದ ಕೆಳಗೆ ಸುಭದ್ರ ಕೋಟೆ ಅಥವಾ ಸುಂದರವಾದ ದೇಗುಲ ನಿರ್ಮಿ­ಸುವುದು ಸಾಮಾನ್ಯ. ಆದರೆ ಬೆಟ್ಟದ ಮೇಲೆ ಕೋಟೆ ನಿರ್ಮಿಸುವುದು ನಿರ್ಲಕ್ಷಿ­ಸುವಂತಹ ವಿಷಯವಲ್ಲ. ಇತಿ­ಹಾಸ ತಜ್ಞರು, ಪ್ರಾಚ್ಯವಸ್ತು ತಜ್ಞರು ಇತ್ತ ಗಮನಹರಿಸಬೇಕು. ಇತಿಹಾಸದ ಭಾಗ­ವಾದ ಇಂಥ ಸ್ಥಳ ಕಾಪಾಡುವ, ಹೆಚ್ಚು ಮಾಹಿತಿ ಕಲೆಹಾಕುವ ಪ್ರಯತ್ನ ಮಾಡ­ಬೇಕು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT