ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ಗೆ ಮತ್ತೆ ‘ಐಎನ್‌ಸಿಕ್ಯುಸಿ’ ಮನ್ನಣೆ

Last Updated 1 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುದ್ರಣದ ಗುಣಮಟ್ಟಕ್ಕೆ ಪ್ರಜಾವಾಣಿ – ಡೆಕ್ಕನ್ ಹೆರಾಲ್ಡ್ ಬಳಗ ಸತತ ಮೂರನೇ ಬಾರಿಗೆ ‘ಅಂತರ­ರಾಷ್ಟ್ರೀಯ ವರ್ಣ ಮುದ್ರಣ ಗುಣ­ಮಟ್ಟ ಕ್ಲಬ್’ (ಇಂಟರ್‌­ನ್ಯಾಷನಲ್ ಕಲರ್ ಕ್ವಾಲಿಟಿ ಕ್ಲಬ್–ಐಎನ್‌ಸಿಕ್ಯುಸಿ) ಸದಸ್ಯತ್ವದ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿಶ್ವದ ಅತ್ಯುತ್ತಮ ವೃತ್ತ ಪತ್ರಿಕಾ ಮುದ್ರಕರನ್ನು ಗುರ್ತಿಸುವ ಈ ಪ್ರಕ್ರಿಯೆ­ಯನ್ನು ಪ್ರತೀ ಎರಡು ವರ್ಷಗಳಿ­ಗೊಮ್ಮೆ ವಿಶ್ವ ವೃತ್ತ ಪತ್ರಿಕೆಗಳ ಸಂಸ್ಥೆ ‘ವ್ಯಾನ್–ಇಫ್ರಾ’ ನಡೆಸುತ್ತದೆ. ಈ ಬಾರಿ ವಿಶ್ವದ ವಿವಿಧ ಭಾಗಗಳಿಂದ 160 ಪ್ರಕಟಣೆ­ಗಳಿದ್ದವು. ಇವುಗಳಲ್ಲಿ 26 ದೇಶಗಳ 76 ಪ್ರಕಟಣೆಗಳಿಗೆ ಈ ಪ್ರಶಸ್ತಿ ದೊರೆತಿದೆ.
ನಿರ್ದಿಷ್ಟ ಆವೃತ್ತಿಯ ಮುದ್ರಣ ಗುಣಮಟ್ಟವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ‘ಡೆಕ್ಕನ್ ಹೆರಾಲ್ಡ್‌’ನ ಬೆಂಗಳೂರು ಆವೃತ್ತಿಗೆ ಸತತ ಮೂರನೇ ಬಾರಿಗೆ ಈ ಪ್ರಶಸ್ತಿ ದೊರೆತಿದ್ದರೆ ‘ಪ್ರಜಾವಾಣಿ’ಯ ಬೆಂಗ­ಳೂರು ಆವೃತ್ತಿಯದ್ದು ಸತತ ಎರಡನೆ ಬಾರಿ ಸ್ಪರ್ಧೆಯ ಜಯಗಳಿಸಿದ ಹೆಗ್ಗಳಿಕೆ. ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದ ‘ಪ್ರಜಾವಾಣಿ’ಯ ಹುಬ್ಬಳ್ಳಿ ಆವೃತ್ತಿ ಕೂಡಾ ಪ್ರಶಸ್ತಿ ಪಡೆದು­ಕೊಂಡಿದೆ.

ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಪ್ರಥಮಗಳನ್ನು ದಾಖಲಿಸಿರುವ ‘ಪ್ರಜಾವಾಣಿ’, 2012–-14ರ ಅವಧಿಗೆ ‘ಐಎನ್‌ಸಿಕ್ಯುಸಿ’ ಸದಸ್ಯತ್ವ ಪಡೆಯುವ ಮೂಲಕ ತನ್ನ ಪ್ರಥಮಗಳ ಪರಂಪರೆ ಮುಂದುವರಿಸಿತ್ತು. ಜೊತೆಗೆ ಈ ಗೌರವಕ್ಕೆ ಪಾತ್ರವಾಗಿರುವ ದಕ್ಷಿಣ ಭಾರತದ ಏಕೈಕ ಭಾಷಾ ಪತ್ರಿಕೆ ಎಂಬ ಹೆಗ್ಗಳಿಕೆಯೂ ‘ಪ್ರಜಾವಾಣಿ’­ಯ­ದ್ದಾಗಿದೆ. ಈ ಬಾರಿಯೂ ಮತ್ತೆ ‘ಐಎ­ನ್‌ಸಿಕ್ಯುಸಿ’ ಸದಸ್ಯತ್ವ ಪಡೆಯುವ ಮೂಲಕ ‘ಪ್ರಜಾವಾಣಿ’ ಮುದ್ರಣ ಗುಣಮಟ್ಟದಲ್ಲಿ ಸ್ಥಿರತೆ ಕಾಯ್ದು­ಕೊಂಡಿ­ರುವುದನ್ನು ತೋರಿಸುತ್ತಿದೆ. ಹಾಗೆಯೇ ಹುಬ್ಬಳ್ಳಿ ಆವೃತ್ತಿಯ ಮುದ್ರಣಕ್ಕೂ ಪ್ರಶಸ್ತಿ ದೊರೆತಿರುವುದು ಅಂತರ­ರಾಷ್ಟ್ರೀಯ ಮಟ್ಟದ ಗುಣಮಟ್ಟ ನೀತಿಯನ್ನು ‘ಪ್ರಜಾವಾಣಿ’ ವಿಸ್ತರಿಸಿ­ಕೊಳ್ಳುತ್ತಿರು­ವುದಕ್ಕೆ ಸಾಕ್ಷಿಯಾಗಿದೆ.

ಅಂತರರಾಷ್ಟ್ರೀಯ ಶಿಷ್ಟತೆಗಳನ್ನು ಒಳಗೊಂಡ ಪರೀಕ್ಷಾ ಪ್ರಕ್ರಿಯೆ 3 ತಿಂಗಳಷ್ಟು ದೀರ್ಘವಾದುದು. ಈ ಅವಧಿ­ಯಲ್ಲಿ ಪರೀಕ್ಷೆಗೆ ಅಗತ್ಯವಿರುವ ತಾಂತ್ರಿಕ ವಿವರಗ­ಳೊಂದಿಗೆ ಪತ್ರಿಕೆ­ಯನ್ನು ಮುದ್ರಿಸಬೇಕಾಗುತ್ತದೆ. ಹೀಗೆ ಮುದ್ರಣಗೊಂಡ ಪ್ರತಿ­ಗಳನ್ನು ಮೊದ­ಲಿಗೆ ಸಾಮಾನ್ಯ ಓದುಗನ ದೃಷ್ಟಿಕೋನ­ದಿಂದ ಪರಿಶೀಲಿಸ­ಲಾಗು­ತ್ತದೆ. ಇದರ ಜೊತೆಗೆ ಇನ್ನೂ 28 ತಾಂತ್ರಿಕ ಮಾನದಂಡಗಳಲ್ಲಿ ಸೂಕ್ಷ್ಮ ಪರಿಶೀಲನೆ ನಡೆಸಿದ ನಂತರ ಗುಣ­ಮ­ಟ್ಟದ ಬಗ್ಗೆ ತೀರ್ಪುಗಾರರ ತಂಡ ನಿರ್ಧಾರಕ್ಕೆ ಬರುತ್ತದೆ.

ಅಂತರರಾಷ್ಟ್ರೀಯ ಮಟ್ಟದ ತೀರ್ಪುಗಾರರ ಮಂಡಳಿ­ಯಲ್ಲಿ ‘ಸನ್ ಕೆಮಿಕಲ್ಸ್‌’ನ ಪಾಲ್ ಕ್ಯಾಸಿ, ಐಸ್ಲೆಂಡ್‌ನ ‘ಐಡಿಎನ್ ವೊಕೇಶನಲ್ ಎಜುಕೇಶನ್ ಅಂಡ್ ಟ್ರೈನಿಂಗ್ ಸೆಂಟರ್‌’ನ ಇಂಗಿ ರಾಫ್ನ್ ಒಲಾಫ್ಸನ್, ‘ಜರ್ಮನ್ ಇಂಜಿನಿ­ಯರಿಂಗ್ ಫೆಡರೇಷನ್‌’ನ ಡಾ. ನೋರಾ ಲಾಟ­ರ್ಬಾಷ್, ಜಾಹೀರಾತು ಮತ್ತು ವಿನ್ಯಾಸ ತಜ್ಞ ಡೀಟರ್ ಮೇ ಮತ್ತು ‘ವ್ಯಾನ್–ಇಫ್ರಾ’ ದಕ್ಷಿಣ ಏಷ್ಯಾದ ಮಗ್ದೂಮ್ ಮೊಹಮ್ಮದ್ ಇದ್ದರು.

ಐಎನ್‌ಸಿಕ್ಯುಸಿ ಮನ್ನಣೆಗೆ ಪಾತ್ರವಾ­ಗುವ ಪತ್ರಿಕೆಗಳಲ್ಲಿ ಮುದ್ರಿತವಾಗುವ ವರ್ಣ ಚಿತ್ರಗಳ ಗುಣಮಟ್ಟವು, ಮೂಲಚಿತ್ರಗಳ ವರ್ಣ ಸಂಯೋಜನೆಗೆ ಸಮನಾಗಿರುತ್ತದೆ. ಇದನ್ನು ಸಾಧಿಸುವ ಹಾದಿ ಸುಗಮವಾದುದೇನೂ ಅಲ್ಲ. ಸಾಮಾನ್ಯವಾಗಿ ವರ್ಣಚಿತ್ರಗಳನ್ನು ಮುದ್ರಿಸುವ ಪ್ರಕ್ರಿಯೆಗೂ ಪತ್ರಿಕಾ ಮುದ್ರಣದ ಪ್ರಕ್ರಿಯೆಯ ನಡುವೆಯೂ ಬಹಳ ದೊಡ್ಡ ವ್ಯತ್ಯಾಸಗಳಿವೆ.

ಮುದ್ರಣಕ್ಕೆ ಬಳಸುವ ಶಾಯಿ, ಮುದ್ರಣದ ಯಂತ್ರ, ಮುದ್ರಣ ವಿಧಾನ ಹಾಗೂ ಒಟ್ಟು ಪ್ರಕ್ರಿಯೆಯ ನಿರ್ವಹಣೆ­ಯಲ್ಲಿ ಅಂತರರಾಷ್ಟ್ರೀಯ ಶಿಷ್ಟತಾ ಸಂಸ್ಥೆ ನಿಗದಿ ಪಡಿಸಿರುವ ಎಲ್ಲಾ ನಿಯಮಗಳನ್ನೂ ಚಾಚೂ ತಪ್ಪದೆ ಪಾಲಿಸ­ಬೇಕು. ತಂತ್ರಜ್ಞಾನದ ಆಯ್ಕೆ­ಯಿಂದ ಆರಂಭಿಸಿ ಅದನ್ನು ಕಾರ್ಯರೂಪಕ್ಕೆ ತರುವ ಸಿಬ್ಬಂದಿ­ಯಲ್ಲೂ ನಿರ್ದಿಷ್ಟ ಶಿಷ್ಟತೆಗಳನ್ನು ಪಾಲಿಸುವ ಪರಿಣತಿ ಇರಬೇಕಾಗುತ್ತದೆ.

‘ಪ್ರಜಾವಾಣಿ’ 2010ರಿಂದಲೇ ತನ್ನ ಓದುಗರಿಗೆ ಗುಣ­ಮಟ್ಟ­ದಲ್ಲಿ ರಾಜಿ ಇಲ್ಲದ ಪತ್ರಿಕೆ ನೀಡುವ ಉದ್ದೇಶದಿಂದ ಇಡೀ ಮುದ್ರಣ ಪ್ರಕ್ರಿಯೆಯನ್ನು ಅಂತರರಾಷ್ಟ್ರೀಯ ಶಿಷ್ಟತೆಗೆ ಅನುಗುಣ­ವಾಗಿ ಮಾರ್ಪಡಿಸಿ-­ಕೊಂಡಿದೆ. ಇದನ್ನು ನಿರಂತರ­ವಾಗಿ ಪಾಲಿಸಿಕೊಂಡು ಬಂದಿರುವುದರಿಂದ ‘ಡೆಕ್ಕನ್ ಹೆರಾಲ್ಡ್’ ಸತತ 3ನೇ ಬಾರಿ ಮತ್ತು ‘ಪ್ರಜಾವಾಣಿ’ ಸತತ ಎರಡನೇ ಬಾರಿ ಐಎನ್‌ಸಿಕ್ಯುಸಿ ಮನ್ನಣೆಗೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT