ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರೊಜೆಕ್ಟ್’ ಪರದಾಟ

Last Updated 27 ಸೆಪ್ಟೆಂಬರ್ 2015, 19:42 IST
ಅಕ್ಷರ ಗಾತ್ರ

ಕತ್ತರಿಸಿದ ಕಾರ್ಡ್‌ಬೋರ್ಡ್, ಹರಿದ ಹಾಳೆಗಳು, ಹರಡಿದ ಸ್ಕೆಚ್‌ಪೆನ್, ಮುರಿದ ಪೆನ್ಸಿಲ್, ಬಟ್ಟೆಗಳಿಗೆ ಬಣ್ಣ ಬಳಿದ ಕುಂಚ, ಬೆರಳುಗಳಿಗೆ ಅಂಟಿಕೊಂಡ ಫೆವಿಕ್ವಿಕ್, ಕೈಗೆ ಮೆತ್ತಿಕೊಂಡ ಮಣ್ಣು, ನೆಲಕ್ಕೆ ಬಿದ್ದ ಫೆವಿಕಾಲ್, ಗೊಂದಲವಾದಾಗ ತಲೆ ಕೆರೆದುಕೊಳ್ಳುವ ಕೈ, ಏನೇ ಮಾಡಿದರೂ ‘ಹೂಂ’ ಎನ್ನದ ಮಕ್ಕಳು... ಹೀಗೆ ಮಕ್ಕಳ ‘ಶಾಲಾ ಪ್ರೊಜೆಕ್ಟ್’ ತಯಾರಿಕೆಯಲ್ಲಿ ತೊಡಗಿಸಿಕೊಂಡ ಪೋಷಕರ ಪರದಾಟಗಳು ಹಲವು!

ಈಚೆಗೆ ‘ಪಿಬಿಎಲ್ – (Project Based Learning) ಪ್ರೊಜೆಕ್ಟ್ ಆಧರಿತ ಕಲಿಕೆ’ ಶಿಕ್ಷಣ ಕ್ಷೇತ್ರದಲ್ಲಿ ಜನಪ್ರಿಯವಾಗುತ್ತಿದೆ. ಆರಂಭದಲ್ಲಿ ಸಿಬಿಎಸ್ಇ, ಐಸಿಎಸ್ಇ ಹಾಗೂ ಕೆಲ ಖಾಸಗಿ ಹೈಟೆಕ್ ಶಾಲೆಗಳಿಗೆ ಮಾತ್ರ ಸೀಮಿತವಾಗಿದ್ದ ಈ ಮಾದರಿಯ ಕಲಿಕೆ ಇಂದು ಸರ್ಕಾರಿ ಶಾಲೆಗಳಿಗೂ ಕಾಲಿಟ್ಟಿದೆ.

ಸಾಂಪ್ರದಾಯಿಕ ಕಲಿಕೆಗಿಂತ ವಿಭಿನ್ನವಾದ ‘ಪ್ರೊಜೆಕ್ಟ್’ ಆಧರಿತ ಕಲಿಕೆ ವಿದ್ಯಾರ್ಥಿಗಳಿಂದ ಹೆಚ್ಚಿನ ಶ್ರಮ, ಶಿಕ್ಷಕರಿಂದ ಹೆಚ್ಚಿನ ಮಾರ್ಗದರ್ಶನ ಹಾಗೂ ಪೋಷಕರಿಂದ ಹೆಚ್ಚಿನ ಸಹಕಾರ ಬಯಸುತ್ತದೆ. ಈ ಮಾದರಿಯಲ್ಲಿ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆ ಮುಖ್ಯವೇ ಹೊರತು, ಪೋಷಕರ ತೊಡಗಿಸಿಕೊಳ್ಳುವಿಕೆ ಅಲ್ಲ!

ಆದರೆ, ನಾವೆಲ್ಲ ಗಮನಿಸಿರುವಂತೆ ಸಾಮಾನ್ಯವಾಗಿ ಮಕ್ಕಳ ಶಾಲಾ ಪ್ರೊಜೆಕ್ಟ್‌ಗಳಿಗೆ ಸಂಬಂಧಿಸಿ, ಮಕ್ಕಳಿಗಿಂತ ಪೋಷಕರೇ ಜಾಸ್ತಿ ತಲೆಕೆಡಿಸಿಕೊಳ್ಳುತ್ತಾರೆ. ಅದನ್ನೂ ಮೀರಿ ಕೆಲ ಶಾಲೆಗಳಲ್ಲಿ ಪ್ರೊಜೆಕ್ಟ್‌ ‘ಗು(ಹ)ಣಮಟ್ಟ’ವನ್ನು ಆಧರಿಸಿ ಮಕ್ಕಳ ಬುದ್ಧಿಶಕ್ತಿ ಹಾಗೂ ಪೋಷಕರ ಕಾಳಜಿಯ ಮಟ್ಟವನ್ನು ಅಳೆಯಲಾಗುತ್ತಿದೆ. ಹೀಗಾಗಿ, ಪೋಷಕರು ಅನಿವಾರ್ಯವಾಗಿ ‘ಪ್ರೊಜೆಕ್ಟ್’ ಪರದಾಟ ನಡೆಸುತ್ತಾರೆ.

‘ಪ್ರೊಜೆಕ್ಟ್’ ಮಹತ್ವವೇನು?
‘ಮಾಡಿ ಕಲಿ–ನೋಡಿ ತಿಳಿ’ ತತ್ವದ ಆಧಾರದ ಮೇಲೆ ‘ಪ್ರೊಜೆಕ್ಟ್’ ಆಧರಿತ ಕಲಿಕೆ ರೂಪಗೊಂಡಿದೆ. ಇದು ಸಾಂಪ್ರದಾಯಿಕ ಕಲಿಕೆಗಿಂತ ಮಿಗಿಲಾಗಿ ಮಕ್ಕಳಿಗೆ ಪ್ರತ್ಯಕ್ಷ ಅನುಭವ, ಬಾಹ್ಯ ಜಗತ್ತಿನ ಸವಾಲುಗಳ ಅರಿವನ್ನು ಒದಗಿಸುತ್ತದೆ. ಇದು ವಿದ್ಯಾರ್ಥಿ ಕೇಂದ್ರಿತ ಕಲಿಕಾ ಮಾದರಿಯಾಗಿದ್ದು, ವಿದ್ಯಾರ್ಥಿಗಳ ತೊಡಗಿಸಿ ಕೊಳ್ಳುವಿಕೆಯ ಮೇಲೆ ಇದರ ಯಶಸ್ಸು ಅಡಗಿದೆ.

ಅತ್ಯುಪಯುಕ್ತ ಮಾದರಿ
‘ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿ’ ರೂಪಿತವಾದ ಕಲಿಕಾ ಮಾದರಿ ಇದಾಗಿದ್ದು, ಇಲ್ಲಿ ವಿದ್ಯಾರ್ಥಿಗಳು ಅಗತ್ಯಕ್ಕೆ ಅನುಗುಣವಾಗಿ ವೈಯಕ್ತಿಕವಾಗಿ ಅಥವಾ ಚಿಕ್ಕ ಗುಂಪಿನಲ್ಲಿ ಕಾರ್ಯನಿರ್ವಹಿಸುತ್ತಾರೆ. ಇದರಿಂದ ಮಕ್ಕಳಲ್ಲಿ ಸಹಕಾರ, ಸಹಯೋಗ, ಸಂಯೋಜನೆ, ಸ್ವಾವಲಂಬನೆ ಹಾಗೂ ನಾಯಕತ್ವ ಗುಣಗಳು ವೃದ್ಧಿಸುತ್ತವೆ. ‘ಪ್ರೊಜೆಕ್ಟ್’ ಹೊಸತನವನ್ನು ಬಯಸುವು ದರಿಂದ ವಿದ್ಯಾರ್ಥಿಗಳು ಶೋಧನೆ ಹಾಗೂ ಸಂಶೋಧನೆ ಗಳಲ್ಲಿ ತೊಡಗುತ್ತಾರೆ. ತಮ್ಮ ‘ಪ್ರೊಜೆಕ್ಟ್’ಗೆ ಸಂಬಂಧಿಸಿ ಮಾಹಿತಿ ಸಂಗ್ರಹಿಸುವಾಗ ಅವರಲ್ಲಿ ಸಂವಹನ ಕೌಶಲ ಹೆಚ್ಚುತ್ತದೆ. ಅದರ ಕುರಿತು ತಮ್ಮ ಸಹಪಾಠಿ, ಪೋಷಕರು, ಶಿಕ್ಷಕರಿಗೆ ಮಾಹಿತಿ ಕೊಡುವಾಗ ಅಭಿವ್ಯಕ್ತಿ ಸಾಮರ್ಥ್ಯ ವಿಕಸಿತವಾಗುತ್ತದೆ. ನೇರ ತೊಡಗಿಸಿಕೊಳ್ಳು ವಿಕೆ ಹಾಗೂ ಪ್ರತ್ಯಕ್ಷಾನುಭವದಿಂದ ಕಲಿಕಾ ಸಾಮರ್ಥ್ಯ, ಸೃಜನಶೀಲತೆ ಹಾಗೂ ದೀರ್ಘಾವಧಿ ಸ್ಮರಣಶಕ್ತಿ ಹೆಚ್ಚುತ್ತವೆ.

ಎಲ್ಲ ವಿಷಯಗಳಿಗೂ ಉಪಯುಕ್ತ
ಮಕ್ಕಳಲ್ಲಿ ಏನು, ಏಕೆ, ಹೇಗೆ, ಎಲ್ಲಿ, ಯಾವಾಗ? ಎಂಬ ಪರಿಕಲ್ಪನೆಯನ್ನು ಮೂಡಿಸುವ ಪ್ರೊಜೆಕ್ಟ್ ಪದ್ಧತಿ ಇತಿಹಾಸದಲ್ಲಿ ಕ್ಷೇತ್ರ ಸಂದರ್ಶನದ ಮೂಲಕ ಸಮೀಕ್ಷಾ ಸಾಮರ್ಥ್ಯವನ್ನು, ವಿಜ್ಞಾನದಲ್ಲಿ ಪ್ರಯೋಗಗಳ ಮೂಲಕ ಶೋಧನಾ ಪ್ರವೃತ್ತಿಯನ್ನು, ಭೂಗೋಳಶಾಸ್ತ್ರದಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ಸಂಶೋಧನಾ ಪ್ರವೃತ್ತಿಯನ್ನು, ಗಣಿತದಲ್ಲಿ ಮಾದರಿಗಳ ನಿರ್ಮಾಣದ ಮೂಲಕ ತರ್ಕಶಕ್ತಿಯನ್ನು, ಭಾಷಾ ವಿಷಯಗಳಲ್ಲಿ ಅಭಿವ್ಯಕ್ತಿಯ ಮೂಲಕ ಅಭಿನಯ ಕೌಶಲವನ್ನು ಬೆಳೆಸುತ್ತದೆ.

ಪೋಷಕರ ಪಾತ್ರವೇನು?
‘ಪ್ರೊಜೆಕ್ಟ್ ರೂಪಿಸುವಲ್ಲಿ ಮಕ್ಕಳೇ ಬೆವರು ಹರಿಸಬೇಕು. ಪೋಷಕರು ಅಗತ್ಯವಿರುವ ಮಾರ್ಗದರ್ಶನ ಹಾಗೂ ಬೆಂಬಲವನ್ನಷ್ಟೇ ನೀಡಬೇಕು, ಯಾವುದೇ ಕಾರಣಕ್ಕೂ ತಾವೇ ಪ್ರೊಜೆಕ್ಟ್ ರೂಪಿಸಿ ಕೊಡಬಾರದು. ಇಲ್ಲಿ ಪೋಷಕರದ್ದು ಏನಿದ್ದರೂ ‘ಸಪೋರ್ಟಿವ್ ರೋಲ್’ ಆಗಿರಬೇಕು. ಅವರೇ ನಾಯಕ ನಟರಾಗಬಾರದು. ನಾನು ನನ್ನ ಮಗನ ವಿಷಯದಲ್ಲಿ ಮೊದಲಿನಿಂದಲೂ ಇದನ್ನೇ ಅನುಸರಿಸುತ್ತಿದ್ದೇನೆ. ನನ್ನ ಮಗ ಸ್ವಾವಲಂಬಿ ಯಾಗಿ ತನ್ನ ಶಾಲಾ ಪ್ರೊಜೆಕ್ಟ್‌ಗಳನ್ನು ನಿರ್ವಹಿಸಲು ಸಮರ್ಥನಾಗಿದ್ದಾನೆ’ ಎಂಬುದು ಮೈಸೂರಿನ ಸದ್ವಿದ್ಯಾ ಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಪೃಥ್ವಿ ತಾಯಿ ಲತಾ ಅವರ ಮಾತು.

ತಜ್ಞರೂ ಕೂಡ ಮಕ್ಕಳ ಸೃಜನಶೀಲ ಅಭಿವ್ಯಕ್ತಿಯಲ್ಲಿ ಪೋಷಕರು ಮೂಗು ತೋರಿಸಬಾರದು. ಅವರಿಗೆ ಸ್ವಾನುಭವ ಹೊಂದಲು ಅವಕಾಶ ನೀಡಬೇಕು. ಚಟುವಟಿಕೆ ಆಧಾರಿತ ಪ್ರೊಜೆಕ್ಟ್ ವಿಧಾನ ಮಕ್ಕಳಲ್ಲಿ ಆಳವಾದ ವಿಷಯ ಪರಿಜ್ಞಾನ ಬೆಳೆಸುತ್ತದೆ. ಅವರ ಸ್ವಂತ ಅಭಿವ್ಯಕ್ತಿಗೆ ಪ್ರಶಂಸೆ ದೊರೆತಾಗ ಅವರಲ್ಲಿ ‘ಸಾಧನಾ ಭಿಪ್ರೇರಣೆ’ ಮೊಳಕೆಯೊಡೆಯುತ್ತದೆ. ಒಂದೊಮ್ಮೆ ಸಾಧನಾಭಿಪ್ರೇರಣೆ ಒಡಮೂಡಿದರೆ, ಮಕ್ಕಳು ಎಂಥಹ ಕಠಿಣ ಗುರಿಯನ್ನಾದರೂ ಸಾಧಿಸಬಲ್ಲರು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶಿಕ್ಷಕರೇನು ಮಾಡಬೇಕು?
ಶಿಕ್ಷಕರು ಮಕ್ಕಳಿಗೆ ಪ್ರೊಜೆಕ್ಟ್ ವಹಿಸುವ ಮುನ್ನ ಸಂಪೂರ್ಣ ಪೂರ್ವಸಿದ್ಧತೆ ಮಾಡಿಕೊಂಡಿರಬೇಕು. ಶಾಲಾ ವೇಳಾಪಟ್ಟಿಗೆ, ಪರೀಕ್ಷೆಗಳಿಗೆ, ನಿತ್ಯ ಅಧ್ಯಯನಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಪ್ರೊಜೆಕ್ಟ್ ವಹಿಸುವ ಮೊದಲು ಯಾವುದಾದರೂ ಪರೀಕ್ಷಾರ್ಥ ಪ್ರಯೋಗ ಅಗತ್ಯವಿದೆಯೇ? ಎಂಬುದನ್ನು ಶಿಕ್ಷಕರು ಪರಿಶೀಲಿಸಬೇಕು. ಪ್ರೊಜೆಕ್ಟ್‌ಗೆ ಸಂಬಂಧಿಸಿದ ಗುರಿ ಹಾಗೂ ಪ್ರಾಕಲ್ಪನೆಗಳನ್ನು ನಿರ್ಧರಿಸಬೇಕು. ವಿದ್ಯಾರ್ಥಿಗಳ ತರಗತಿ, ಪಠ್ಯಕ್ರಮ ಹಾಗೂ ಸಾಮರ್ಥ್ಯ ಆಧರಿಸಿ ಪ್ರೊಜೆಕ್ಟ್ ಹಂಚಿಕೆ ಮಾಡಬೇಕು. ವಿದ್ಯಾರ್ಥಿಗಳ ಶ್ರಮ, ಸಮಯ ಅಪವ್ಯಯ ಆಗದಂತೆ ಎಚ್ಚರ ವಹಿಸಬೇಕು. ಯಾವುದೇ ಪ್ರೊಜೆಕ್ಟ್ ಇರಲಿ ವಿದ್ಯಾರ್ಥಿಗಳಿಗೆ 5ರಿಂದ 10 ನಿಮಿಷ ಮೀರದಂತೆ ‘ನಿರೂಪಣಾ’ ಅವಧಿಯನ್ನು ನಿಗದಿಪಡಿಸಬೇಕು. ಪ್ರೊಜೆಕ್ಟ್ ಆರಂಭದಿಂದ ಅಂತ್ಯದವರೆಗೆ ಶಿಕ್ಷಕರು ಉಪಸ್ಥಿತರಿದ್ದು, ಅಗತ್ಯ ಬಿದ್ದಾಗ ಮಾರ್ಗದರ್ಶನ ನೀಡಬೇಕು.
*
ಆತ್ಮವಿಶ್ವಾಸ ವೃದ್ಧಿ
‘ಪ್ರೊಜೆಕ್ಟ್’ ಆಧರಿತ ಕಲಿಕೆಯಿಂದ ಮಕ್ಕಳಲ್ಲಿ ವಿಮರ್ಶಾತ್ಮಕ ದೃಷ್ಟಿಕೋನ ಬೆಳೆಯುತ್ತದೆ. ಸ್ವಾವಲಂಬನೆಯಿಂದ ಆತ್ಮವಿಶ್ವಾಸವೂ ವೃದ್ಧಿಸುತ್ತದೆ. ಈ ಮಾದರಿಯಲ್ಲಿ ವಿದ್ಯಾರ್ಥಿಗಳು ಪ್ರಯತ್ನ– ಪ್ರಮಾದ, ಅನುಬಂಧನ, ಅಂತರ್ಗತ, ನಾವೀನ್ಯತೆ, ವಿಮರ್ಶಾತ್ಮಕ ಹಾಗೂ ಅನ್ವೇಷಣಾ ಕಲಿಕೆಗಳನ್ನು ರೂಢಿಸಿಕೊಳ್ಳುತ್ತಾರೆ.
- ಪ್ರಕಾಶ್ ಮಾಸ್ತಿಹೊಳಿ,
ಗಣಿತ / ವಿಜ್ಞಾನ ಶಿಕ್ಷಕರು, ಎಂ.ಕೆ. ಹುಬ್ಬಳ್ಳಿ (ಬೆಳಗಾವಿ ಜಿಲ್ಲೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT