ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತ ತನ್ನದೇ ಆರ್ಥಿಕ ಮಾದರಿ ಹುಡುಕಿಕೊಳ್ಳಬೇಕು’

ಸಂದರ್ಶನ
Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

* ನಿಮ್ಮ ‘ಬಹಿಷ್ಕೃತ’ ಅನುಭವ ಕಥನ ಕನ್ನಡ­ದಲ್ಲೂ ಅನುವಾದವಾಗಿ ಪ್ರಸಿದ್ಧವಾಗಿದೆ. ಮಹಾರಾಷ್ಟ್ರದ ದಲಿತ ಹಿನ್ನೆಲೆಯಿಂದ ಬಂದ

ನೀವು ದಲಿತ ಚಿಂತನೆಗೆ ನಿಮ್ಮ ಕೊಡುಗೆಯನ್ನು ಹೇಗೆ ನೋಡುವಿರಿ?
ಬಾಲ್ಯದಿಂದಲೂ ಬಾಬಾಸಾಹೇಬ್‌ ಅಂಬೇಡ್ಕರ್‌ ಚಿಂತನೆ ನನ್ನನ್ನು ಸೆಳೆದಿತ್ತು.  ಅವರ ಸಮಗ್ರ ಬರಹ ಮತ್ತು ಭಾಷಣಗಳನ್ನು 22 ಸಂಪುಟ­ಗಳಲ್ಲಿ ಪ್ರಕಟಿಸಿ ಮಹಾರಾಷ್ಟ್ರ ಸರ್ಕಾರ ದೊಡ್ಡ ಕೆಲಸ ಮಾಡಿದೆ. ಆದರೆ  ಅಲ್ಲಿರುವ ಸಮಸ್ಯೆ ಎಂದರೆ ಅವು ಕ್ರಮಬದ್ಧವಾಗಿಲ್ಲ. ಅಂಬೇಡ್ಕರ್‌ ಅವರು ಮರಾಠಿ, ಹಿಂದಿ, ಇಂಗ್ಲಿಷ್‌ ಹಾಗೂ ಗುಜರಾತಿಯಲ್ಲಿ ಒಟ್ಟು 532 ಭಾಷಣ­ಗಳನ್ನು ಮಾಡಿದ್ದಾರೆ.

ಅವು ಒಂದು ಕ್ರಮದಲ್ಲಿ ದೊರೆಯುವಂತೆ ನಾನು ಮೂರು ಸಂಪುಟಗಳಲ್ಲಿ ಅವುಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ ಸಂಪಾದಿ­ಸಿದ್ದೀನಿ. ನೋಡಿ, ಡಾ.ಅಂಬೇಡ್ಕರ್‌ ಬಹು ದೊಡ್ಡ ಅರ್ಥ ಶಾಸ್ತ್ರಜ್ಞ ಎಂಬುದು ಈಗ ಅನೇಕ ಪ್ರಮುಖ ಆರ್ಥಿಕ ತಜ್ಞರಿಗೇ ಮರೆತುಹೋಗಿದೆ. ಕಾನೂನು ಪದವಿಯೊಂದನ್ನು ಹೊರತು­ಪಡಿಸಿ­ದರೆ ಅವರು ಪಡೆದಿದ್ದ  ಬಹುತೇಕ ಪದವಿಗಳು ಇರುವುದು ಅರ್ಥಶಾಸ್ತ್ರದಲ್ಲೇ. 
     
ನಾನು ಈ ಆಯಾಮವನ್ನು ಮತ್ತೆ ಮುನ್ನೆಲೆಗೆ ತರಲು  ಶ್ರಮಿಸುತ್ತಿದ್ದು, ಈಗ ದೇಶದ ಹಲವು ವಿಶ್ವ­­­ವಿದ್ಯಾಲಯಗಳಲ್ಲಿ ಅಂಬೇಡ್ಕರ್‌ ಅರ್ಥ­ಶಾಸ್ತ್ರ ಪೀಠಗಳ ಸ್ಥಾಪನೆಯಾಗಿರುವುದು ಸಂತೋ­ಷದ ಸಂಗತಿ. ಕೇವಲ 12ನೇ ತರಗತಿ ತನಕ ಓದಿ­ದವರಿಗಾಗಿ ಅಂಬೇಡ್ಕರ್‌ ಅವರ ವಿಚಾರಗಳನ್ನು ಸರಳವಾಗಿ ತಿಳಿಸುವ ಸರಣಿ­ಯೊಂದನ್ನು  ಪ್ರಕ­ಟಿ­ಸ­ಲಾಗುತ್ತಿದೆ. ಅದರದ್ದೇ ಪ್ರೌಢ ಆವೃತ್ತಿ ಕೂಡ ಸಿದ್ಧ ವಾಗುತ್ತಿದೆ. ದುರಂತ­ವೆಂದರೆ ಈಗ ಅನೇಕ ತರುಣ ದಲಿತ ನಾಯಕರೇ ಅಂಬೇಡ್ಕರ್‌ ಸಾಹಿತ್ಯ ಓದಿ­ರು­ವುದಿಲ್ಲ.  ಅಂಬೇಡ್ಕರ್‌ ಬರಹಗಳನ್ನು ಈಗ ನಾನು 4 ಸಂಪುಟಗಳಲ್ಲಿ ಹಿಂದಿಯಲ್ಲಿ ತರುತ್ತಿದ್ದೇನೆ.

* ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರವು ಯೋಜನಾ ಆಯೋಗವನ್ನು ಬದಲಾಯಿಸುವ ಪ್ರಕ್ರಿಯೆಯಲ್ಲಿದೆ. ಹಿಂದಿನ ಸರ್ಕಾರದಲ್ಲಿ ಇದರ ಒಂದು ಭಾಗವಾಗಿದ್ದ ನಿಮ್ಮ ಪ್ರತಿಕ್ರಿಯೆ ಏನು?
ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹಿಂದಿನ ಸರ್ಕಾರಗಳು ಮಾಡಿರುವ ಒಳ್ಳೆಯ ಕೆಲಸಗಳನ್ನು ಶ್ಲಾಘಿಸಿ ಅವುಗಳನ್ನು ಮುಂದುವರಿ­ಸುವುದಾಗಿ ಹೇಳಿದ್ದಾರೆ. ಯೋಜನಾ ಆಯೋಗ ಹಿಂದೆ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿದೆ. ಅದೇ ಸಮಯಕ್ಕೆ ವಿಶ್ವದಲ್ಲಿ ಉಂಟಾದ ಅನೇಕ ಆರ್ಥಿಕ  ಹಾಗೂ ಯೋಜನಾತ್ಮಕ ಬದಲಾವಣೆ­ಗಳ ಜತೆಯಲ್ಲಿ ಯೋಜನಾ ಆಯೋಗ ಹೆಜ್ಜೆ ಹಾಕಲಿಲ್ಲ ಎಂಬುದನ್ನೂ ನಾವು ಒಪ್ಪಬೇಕು.

ಅಮೆರಿಕ ಮತ್ತು ಯುರೋಪಿನಲ್ಲಿ  ಆರ್ಥಿಕ ಹಿಂಜರಿತ ಸಂಭವಿಸಿದಾಗ ಭಾರತದಲ್ಲೂ ಅದು ಆರಂಭವಾಗಿ ಬಿಟ್ಟಿದೆ ಎಂದು ಅನೇಕ ಆರ್ಥಿಕ  ‘ತಜ್ಞ’ರು ಅಂದಿನ ಕೇಂದ್ರ ಸರ್ಕಾರದ ಮನ ಒಲಿಸಿ ನಿಗ್ರಹಕ್ಕೆ ಯೋಜನೆಗಳನ್ನು ರೂಪಿಸಲು ನೋಡಿ­ದರು. ಆರ್ಥಿಕ ಅಭಿವೃದ್ಧಿ ದರ ಶೇಕಡ 9ರಿಂದ ಶೇ 6.99ಕ್ಕೆ ಕುಸಿದ ಮಾತ್ರಕ್ಕೆ ಅದನ್ನು ರಿಸೆಷನ್‌ ಎನ್ನಲು ಸಾಧ್ಯವಿಲ್ಲ. ವಿಶ್ವದ ಬೇರೆ ಕಡೆ ಆದಂತೆ ನಮ್ಮಲ್ಲಿ ಈ ಆರ್ಥಿಕ ಅಭಿವೃದ್ಧಿ ದರ ಸೊನ್ನೆ­ಗಿಂತಲೂ ಕಡಿಮೆ ಆಗುವುದು ಸಾಧ್ಯವೇ ಇಲ್ಲ ಎಂದು ವಾದಿಸಿದ್ದೆ.

ಹಿಂಜರಿತ ಇಲ್ಲದಿದ್ದರೂ ಇದೆ ಎಂಬ ವಾತಾ­ವ­ರಣ ಸುತ್ತಲೂ ಸೃಷ್ಟಿ ಆದರೆ ನಿಜಕ್ಕೂ ಆರ್ಥಿಕ ಹಿಂಜರಿತ ಉಂಟಾಗುತ್ತದೆ, ಏಕೆಂದರೆ ಜನ ಹಣ ಹೂಡಲು ಹಿಂಜರಿಯು­ತ್ತಾರೆ ಮತ್ತು ಅದರ ದುಷ್ಪ­­ರಿ­ಣಾಮಗಳನ್ನು ಎಲ್ಲರೂ ಎದುರಿಸ­ಬೇಕಾ­ಗುತ್ತದೆ. ಮೋದಿ ಸರ್ಕಾರ ಭರವಸೆಯ ಮಾತು­ಗಳನ್ನು ಆಡುತ್ತಿ­ರುವುದು ಆರ್ಥಿಕತೆಯ ಪುನಶ್ಚೇ­ತನಕ್ಕೆ ಅನು­ಕೂಲ­­­ವಾಗುತ್ತದೆ. ಆದರೆ ಮಾತಿನ ಜತೆ ಮುಂದಿನ ದಿನಗಳಲ್ಲಿ ಎಲ್ಲರೂ ಕೆಲವು ಗಟ್ಟಿ ಕ್ರಿಯೆಗಳನ್ನೂ ಎದುರು ನೋಡುತ್ತಿರುವುದಂತೂ ನಿಜ.

ಆರ್ಥಿಕ ಅಭಿವೃದ್ಧಿ ದರ ಮುಂಬರುವ ನಾಲ್ಕು ವರ್ಷ­ಗಳಲ್ಲಿ  ಶೇ 9ಕ್ಕೆ ಮುಟ್ಟ­ಬಹುದು ಎಂದು ನಾನು ಭಾವಿಸಿದ್ದೇನೆ.  ಆದರೆ ಸಮಸ್ಯೆ ಇರುವುದು ಈ ಆರ್ಥಿಕ ಅಭಿವೃದ್ಧಿಯನ್ನು  ಸಾಮಾಜಿಕವಾಗಿ ಹಿಂದುಳಿದ ವರ್ಗಗಳವರೆಗೂ ತೆಗೆದುಕೊಂಡು ಹೋಗುವುದರಲ್ಲಿ. ಪ್ರಸ್ತುತ ಸರ್ಕಾರ ಶಿಕ್ಷಣ, ಆರೋಗ್ಯಕ್ಕೆ ಮಹತ್ವ ನೀಡುತ್ತಿ­ರು­ವದು ಸ್ವಾಗ­ತಾರ್ಹ, ಆದರೆ ಸಾಮಾ­ಜಿಕ ಸಾಮ­ರಸ್ಯ ಮತ್ತು ಸಾಮಾಜಿಕ ವಲಯಗಳ ಬಗ್ಗೆ ಇನ್ನಷ್ಟು ಕಾಳಜಿ ತೋರಬೇಕು ಎಂದು ಒಬ್ಬ ಆರ್ಥಿಕ ತಜ್ಞನಾಗಿ ನಾನು ಸರ್ಕಾರದಿಂದ ಬಯ­ಸುತ್ತೇನೆ.

* ಭಾರತ ಈಗ ಅತಿ ಹೆಚ್ಚು ಯುವ ಜನರನ್ನು ಹೊಂದಿದ್ದು, ಸಂಖ್ಯೆಯ ದೃಷ್ಟಿಯಿಂದ ವಿಶ್ವದ ಯುವ ದೇಶಗಳಲ್ಲಿ ಒಂದು. ಇದನ್ನು ಜನ­ಸಂಖ್ಯಾ ಲಾಭ (ಡೆಮಾಗ್ರಾಫಿಕ್‌ ಡಿವಿಡೆಂಡ್‌)­ವಾಗಿ ಪರಿವ­ರ್ತಿ­ಸುವುದರ  ಕುರಿತು ಎಲ್ಲರೂ ಮಾತನಾಡುತ್ತಿ­ದ್ದಾರಲ್ಲಾ?
ನಿಜ ಯುವಕರ ಸಂಖ್ಯೆಯು ಅಧಿಕವಾಗಿರುವ ದೇಶ ಎಂಬ ದೃಷ್ಟಿಯಿಂದ ಈಗ (2014) ಭಾರ­ತದ ಜನರ ಸರಾಸರಿ ವಯಸ್ಸು 24 ವರ್ಷಗಳು. ಇದು 2020ರಲ್ಲಿ 29 ವರ್ಷಗಳಾಗಿರುತ್ತದೆ. ಆಗ ಭಾರತ ಜಗತ್ತಿನ ಅತೀ  ಯುವ ದೇಶ­ವೆನಿ­ಸು­ತ್ತದೆ. ಚೀನಾ, ಅಮೆರಿಕ, ಜಪಾನ್‌ ಇವು ಈ ಹೋಲಿಕೆಯಲ್ಲಿ 2020ರ ವೇಳೆಗೆ ಭಾರತಕ್ಕಿಂತ ವೃದ್ಧ ದೇಶಗಳೆ­ನಿಸುತ್ತವೆ. ಆದರೆ ನಿಜಕ್ಕೂ ಪ್ರಸ್ತುತ ಸರ್ಕಾರಕ್ಕೆ ಮತ್ತು ಯೋಜನೆಗಳನ್ನು ಮಾಡುವ­ವರಿಗೆ ಇಲ್ಲೇ ಸವಾಲು ಇರುವುದು.

ಶಿಕ್ಷಣ ಮತ್ತು ಆರೋಗ್ಯದ ಜತೆಗೆ ಕೌಶಲವನ್ನು ಅಭಿವೃದ್ಧಿ­ಗೊಳಿಸಿ ಅದನ್ನು ಆರ್ಥಿಕತೆಯ ಚೇತರಿಕೆಗೆ ಬಳಸುವುದರಲ್ಲಿ. ನಾನು ಗುರುತಿಸಿ­ರುವಂತೆ ತಾಂತ್ರಿಕ ಶಿಕ್ಷಣ ಹಾಗೂ ಸಾಮಾನ್ಯ ಶಿಕ್ಷಣದ ನಡುವೆ ಭಾರಿ ಕಂದಕವಿದೆ. ಪ್ರಸ್ತುತ ಕೇಂದ್ರ ಮಾನವ ಸಂಪ­ನ್ಮೂಲ ಮತ್ತು ಕೌಶಲ ಅಭಿವೃದ್ಧಿ ಸಚಿವಾ­ಲಯ­ಗಳು ದುರ್ಬಲ ನಾಯಕ­ರನ್ನು ಹೊಂದಿವೆ. ಜತೆಗೆ ಪರಸ್ಪರ ತಾಳಮೇಳದ ಕೊರತೆ ಎದ್ದು ಕಾಣು­ತ್ತದೆ. ಹಿಂದಿನ ಸರ್ಕಾರ­ದಲ್ಲೂ ಮಲ್ಲಿಕಾರ್ಜುನ ಖರ್ಗೆ ಮತ್ತು ಕಪಿಲ್‌ ಸಿಬಲ್‌ ಎರಡು ಬೇರೆ ಬೇರೆ ವರದಿಗಳನ್ನು ತಯಾರಿಸಿ­ದ್ದರು.

ನಾನು ಅವುಗಳ ಉತ್ತಮ ಅಂಶಗಳನ್ನು ಹೆಕ್ಕಿ ಇನ್ನೊಂದು ವರದಿ ಸಿದ್ಧಪಡಿಸ­ಬೇಕಾಗಿ ಬಂತು. ಸಚಿವಾಲಯಗಳ ನಡು­ವಿನ ಒಡಕು ಮತ್ತು ವಾಸ್ತ­ವಿಕ ಶಿಕ್ಷಣದ ಬಿರುಕು ದೂರವಾದರೆ, ಹೆಚ್ಚು ಹೆಚ್ಚು ಸಮಕಾ­ಲೀನ ಕಲಿಕೆ ಸಾಧ್ಯವಾಗು­ತ್ತದೆ. ಆಗ ಮಾತ್ರ ಜನಸಂಖ್ಯಾ ಲಾಭ (ಪಾಪ್ಯುಲೇಷನ್‌ ಡಿವಿಡೆಂಡ್‌) ಸಾಧ್ಯ, ಇಲ್ಲದಿ­ದ್ದರೆ ಅದು ಜನ­ಸಂಖ್ಯಾ ವಿನಾಶ (ಪಾಪ್ಯುಲೇಷನ್‌  ಡಿಸಾ­ಸ್ಟರ್‌) ಕೂಡ ಆಗ
ಬ­ಹುದು.  ಎನ್‌ಡಿಎ ಸರ್ಕಾರದ ಎದುರಿಗಿರುವ ಪ್ರಮುಖ ಸವಾಲು ಇದೇ ಆಗಿದೆ.

* ಸ್ವದೇಶಿ ಆರ್ಥಿಕತೆಯನ್ನು ಸಂಘಪರಿವಾರ ಒತ್ತಾಯಿಸುತ್ತದೆ, ಈ ಹಿನ್ನೆಲೆಯಲ್ಲಿ ನಿಮ್ಮ ಪ್ರಕಾರ, ದೇಶದ ಆರ್ಥಿಕ ಯೋಜನೆ, ಅನುಷ್ಠಾನ­ಗಳು ಹೇಗಿದ್ದರೆ ಒಳ್ಳೆಯದು?
ಯಾವುದೂ ಅತಿಯಾದರೆ ಒಳ್ಳೆಯದಲ್ಲ. ಒಂದೋ ಸ್ವದೇಶಿ ಇಲ್ಲವೇ  ಜಾಗತೀಕರಣ ಸರಿ ಎಂಬ ಅತಿರೇಕದ ಚಿಂತನೆಯನ್ನು ಕೈಬಿಟ್ಟು, ದೇಶದ ಆರ್ಥಿಕತೆಯಲ್ಲಿ ಇವೆರಡರ ನ್ಯಾಯ­ಯುತ ಮಿಶ್ರಣ ಇರಬೇಕು ಎನ್ನುವವನು ನಾನು. ವಿಶ್ವ ವ್ಯಾಪಾರದಲ್ಲಿ ಅತಿ ಕಡಿಮೆ ಪಾಲಿರುವ ನಾವು ಬೇರೆ ರೀತಿ ಯೋಚಿಸಿ, ಕ್ರಿಯೆಗೆ ಇಳಿ­ಯ­ಬೇಕೇ ಹೊರತು ಅತಿಯಾದ ಸ್ವದೇಶಿ ಹಾಗೇ ಅತಿ­ಯಾದ ಆರ್ಥಿಕ ಮುಕ್ತತೆ ಎರಡ­ರಿಂದಲೂ ದೂರ­ವಿರಬೇಕು. ಇವುಗಳನ್ನು ಹಂತ ಹಂತವಾಗಿ ಸಾಧಿ­ಸಲೂ ಪ್ರಯತ್ನಿಸಬೇಕು. ಬದಲಾದ ಸನ್ನಿ­ವೇಶ­ದಲ್ಲಿ ಎರಡು ದಶಕಗಳ ಹಿಂದೆ ಚೀನಾ ತನ್ನದೇ ಆರ್ಥಿಕ ಮಾದರಿ ನಿರ್ಮಿಸಿ­ಕೊಂಡಿತ್ತು, ಈಗ ನಾವು ನಮ್ಮ ಆರ್ಥಿಕ ಮಾದರಿ ಹುಡುಕಿ­ಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT