ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೂತ ಬಂಗಲೆ’ಯಲ್ಲಿ ಭೂತಗಳೇ ಇಲ್ಲ!

Last Updated 24 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳ ಅತೃಪ್ತ ಆತ್ಮಗಳೆಲ್ಲ ರೈಲು ಹಳಿಗೆ ಹೊಂದಿಕೊಂಡಿರುವ ‘ಅನುಗ್ರಹ’ದಲ್ಲಿ ಬಿಡಾರ

ಹೂಡಿವೆಯೇ?’

ಇಂತಹದ್ದೊಂದು ಜಿಜ್ಞಾಸೆ ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಸದಸ್ಯರನ್ನು ಬಲವಾಗಿ ಕಾಡಿತು. ಜೆಡಿಎಸ್‌ನ ಎಂ.ಸಿ. ನಾಣಯ್ಯ ಅವರು ಮಂಡಿಸಿದ ಖಾಸಗಿ ಮಸೂದೆಗೆ ಸಂಬಂಧಿಸಿದಂತೆ ಸಭಾ­ನಾಯಕರೂ ಆಗಿರುವ ಸಚಿವ ಎಸ್‌.ಆರ್‌. ಪಾಟೀಲ ನೀಡಿದ ಹೇಳಿಕೆ ಸ್ವಾರಸ್ಯಕರ ಚರ್ಚೆಗೆ ನಾಂದಿ ಹಾಡಿತು.

‘ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಹಿಂದಿನ ಸರ್ಕಾರ ನನಗೆ ‘ಅನುಗ್ರಹ’ ನಿವಾಸವನ್ನು ಹಂಚಿಕೆ ಮಾಡಿತು. ಆತ್ಮಹತ್ಯೆ ಮಾಡಿಕೊಂಡ ಅತೃಪ್ತ ಆತ್ಮಗಳೆಲ್ಲ ಆ ಮನೆಯಲ್ಲಿ ವಾಸವಾಗಿವೆ. ಆ ಭೂತ ಬಂಗಲೆಯಲ್ಲಿ ವಾಸಿಸುವುದು ಬೇಡ ಎಂಬ ಸಲಹೆಯನ್ನು ಹಲವರು ನೀಡಿದರು. ಆದರೆ, ನಾನು ಮನಸ್ಸು ಬದಲಿಸದೆ ಅಲ್ಲಿಯೇ ವಾಸವಾದೆ’ ಎಂದು ಪಾಟೀಲ ಹೇಳಿದರು.

‘ಭೂತಗಳು ಭೇಟಿಯಾದವೆ’ ಎಂಬ ಪ್ರಶ್ನೆ ಸದನದ ಮಧ್ಯದಿಂದ ತೂರಿಬಂತು. ಅದಕ್ಕೆ ಉತ್ತರಿಸಿದ ಪಾಟೀಲ, ‘ಮಂತ್ರಿಯಾದ ಮೇಲೂ ಅದೇ ಮನೆಯಲ್ಲಿ ವಾಸವಾಗಿದ್ದೇನೆ. ನನಗೆ ಇದುವರೆಗೆ ಭೂತದ ದರ್ಶನವಾಗಿಲ್ಲ.  ಬೆಳಗಿನ ವಾಕಿಂಗ್‌ ಮಾಡದ ದಿನ  ನಡುರಾತ್ರಿಯಲ್ಲೂ ಮನೆಸುತ್ತ ಓಡಾಡಿದ್ದೇನೆ. ದೆವ್ವ–ಭೂತ ಯಾವುದೂ ಸಿಕ್ಕಿಲ್ಲ’ ಎಂದು ಉತ್ತರಿಸಿದರು.

‘ಯಾವುದೇ ಅಂಜಿಕೆ–ಅಳುಕಿಲ್ಲದೆ ಓಡಾಡುವ ಪಾಟೀಲರು ಭೂತಗಳ ಪಾಲಿಗೆ ಪೆಡಂಭೂತದಂತೆ ಕಂಡಿರಬೇಕು. ಆದ್ದರಿಂದಲೇ ಅವು ಕಾಣದಂತೆ ಮಾಯವಾಗಿವೆ’ ಎಂದು ಬಿಜೆಪಿಯ ಕೆ.ಬಿ. ಶಾಣಪ್ಪ ತಮಾಷೆ ಮಾಡಿದರು. ‘ನಾವು ಚಿಕ್ಕವರಿದ್ದಾಗ ಕೊಳ್ಳಿದೆವ್ವಗಳು ಇದ್ದವಂತೆ. ಅವು ಸಹ ನಮಗೆ ದರ್ಶನ ನೀಡ­ಲಿಲ್ಲ’ ಎಂದು ಪಾಟೀಲ ಹೇಳಿದರು.

‘ವಾಸ್ತುದೋಷ ಸರಿಪಡಿಸದಿದ್ದರೂ, ಹೋಮ–ಹವನ ಮಾಡದಿದ್ದರೂ ಭೂತಗಳು ಕಾಣೆಯಾಗಿವೆಯಲ್ಲ’ ಎಂದು ಅವರು ಸೋಜಿಗಪಟ್ಟರು. ಆಗ ಸದನದಲ್ಲಿ ನಗೆಯ ಅಲೆ ಎದ್ದಿತು.

‘ಹಲ್ಲುಗಳು ಬೆಳ್ಳಗಾಗಿವೆ’
ಬೆಂಗಳೂರು:
‘ವೈ.ಎ. ನಾರಾಯಣಸ್ವಾಮಿ ಅವರ ವಾದದ ಕುರಿತು ನನಗೆ ಅನುಮಾನ ಇದೆ. ಏಕೆಂದರೆ ಅವರ ಹಲ್ಲುಗಳು ಬೆಳ್ಳಗಾಗಿವೆ’

–ಜೆಡಿಎಸ್‌ನ ಎಂ.ಸಿ. ನಾಣಯ್ಯ ಅವರು ಶುಕ್ರವಾರ ಪರಿಷತ್ತಿನಲ್ಲಿ ತಮ್ಮ ಸಹ ಸದಸ್ಯನ ಕಾಲೆಳೆದ ಬಗೆ ಇದು. ಡಾ.ಪರಮಶಿವಯ್ಯ ಅವರ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗಮನ ಸೆಳೆಯುವ ಸೂಚನೆ ಮಂಡಿಸಿದ ನಾರಾಯಣಸ್ವಾಮಿ, ‘ಕೋಲಾರ ಜಿಲ್ಲೆಯಲ್ಲಿ ಕುಡಿಯಲು ನೀರೇ ಇಲ್ಲ. ವಿಷಯುಕ್ತ ದ್ರವವನ್ನು ಕುಡಿದು ಅಲ್ಲಿನ ಜನರ ಹಲ್ಲುಗಳೆಲ್ಲ ಕಪ್ಪಗಾಗಿವೆ’ ಎಂದು ಹೇಳಿದರು. ತಕ್ಷಣ ಎದ್ದುನಿಂತ ನಾಣಯ್ಯ, ‘ಕೋಲಾರದವರೇ ಆದ ನಾರಾಯಣಸ್ವಾಮಿ ಅವರ ಹಲ್ಲುಗಳು ಬೆಳ್ಳಗಿವೆಯಲ್ಲ’ ಎಂದು ತಮಾಷೆ ಮಾಡಿದರು.

‘ಸ್ವಾಮಿ, ನೀವು ಕಾವೇರಿ ನಾಡಿನವರು. ನೀರಿಲ್ಲದ ನಮಗೆ ತಮಾಷೆ ಮಾಡುತ್ತೀರಿ’ ಎಂದು ನಾರಾಯಣಸ್ವಾಮಿ ಮಾರುತ್ತರ ನೀಡಿದರು. ಅದಕ್ಕೆ ನಾಣಯ್ಯ, ‘ಕಾವೇರಿ ಕೊಡಗಿಗೆ ಶಾಪ. ಮಳೆಗಾಲದಲ್ಲಿ ಬೆಳೆಯನ್ನು ನುಂಗಿ ಬಿಡುತ್ತಾಳೆ. ನಮ್ಮಲ್ಲಿ ಹುಟ್ಟಿದರೂ ನಮಗೆ ಹೆಚ್ಚಿನ ಅನುಕೂಲ ನೀಡುವುದಿಲ್ಲ. ಬೇರೆ ಭಾಗಕ್ಕೆ ನೀರನ್ನು ಕಾವೇರಿ ಮೂಲಕ ಕೊಡುವುದರಿಂದಲೇ ನಮ್ಮದು ಕೊಡಗು’ ಎಂದು ಹೇಳಿದರು.


ಚರ್ಚೆಯಲ್ಲಿ ಪಾಲ್ಗೊಂಡ ಮೋಟಮ್ಮ, ‘ನಾಣಯ್ಯನವರೇ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ಗಾದೆ ಗೊತ್ತಿಲ್ಲವೇ’ ಎಂದು ಕೇಳಿದರು.

ಮೋಟಮ್ಮ ಈಗ ದೊಡ್ಡಮ್ಮ
ಬೆಂಗಳೂರು
: ‘ವಿಜಾಪುರದ ಮಹಿಳಾ ವಿಶ್ವವಿದ್ಯಾಲಯ ಮೋಟಮ್ಮನವರಿಗೆ ಗೌರವ ಡಾಕ್ಟರೇಟ್‌ ನೀಡಲು ತೀರ್ಮಾನಿಸಿದೆ’ ಎಂಬ ಸಂಗತಿಯನ್ನು ಶುಕ್ರವಾರ ಬಿಜೆಪಿಯ ಕೆ.ಬಿ. ಶಾಣಪ್ಪ ಪರಿಷತ್‌ ಸದಸ್ಯರ ಗಮನಕ್ಕೆ ತಂದರು.

ಮೇಲ್ಮನೆ ಸದಸ್ಯರೆಲ್ಲ ಮೇಜು ಕುಟ್ಟಿ ಮೋಟಮ್ಮನವರನ್ನು ಅಭಿನಂದಿಸಿದರು. ಕೆಲವು ಸದಸ್ಯರು ತಕ್ಷಣ ‘ಡಾ. ಮೋಟಮ್ಮ’ ಎಂದೇ ಅವರನ್ನು ಮಾತನಾಡಿಸಿದರು. ಸಭಾನಾಯಕ ಪಾಟೀಲರು ಮಾತನಾಡುವಾಗ ಮೋಟಮ್ಮ ಅವರನ್ನು ‘ಡಾಕ್ಟರ್‌’ ಎಂದೇ ಸಂಬೋಧಿಸಿದರು. ‘ಡಾಕ್ಟರ್‌ಗೆ ಸಚಿವ ಸ್ಥಾನವನ್ನೂ ಕೊಡಬೇಕು’ ಎಂದು ವಿರೋಧ ಪಕ್ಷದ ಸದಸ್ಯರು ಒತ್ತಾಯಿಸಿದರು.

ಡಾ. ದೊಡ್ಡರಂಗೇಗೌಡರು ಸದನದಲ್ಲೇ ಬರೆದ ‘ನಮ್ಮ ‘ಮೋಟ’ಮ್ಮ, ಈಗ ‘ದೊಡ್ಡ’ಮ್ಮ’ ಎಂಬ ಕವನವನ್ನು ಕಲಾಪದ ಬಳಿಕ ಮೋಟಮ್ಮನವರಿಗೆ ಕೊಟ್ಟರು. ಜತೆಗೆ ಪುಸ್ತಕವೊಂದನ್ನು ಕಾಣಿಕೆಯಾಗಿ ಇತ್ತರು. ‘ಸದನದ ‘ಡಾಕ್ಟರ್‌’ಗಳ ಸಂಖ್ಯೆ ಮತ್ತಷ್ಟು ಹಿಗ್ಗಿತು’ ಎಂಬ ಮಾತೂ ಕೇಳಿಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT