ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವ್ಯವಸ್ಥೆ ಶಿಥಿಲಗೊಳಿಸುವ ಯತ್ನ’

ಕೇಂದ್ರ ಸರ್ಕಾರದ ವಿರುದ್ಧ ಜೈರಾಮ್‌ ರಮೇಶ್‌ ವಾಗ್ದಾಳಿ
Last Updated 23 ಮೇ 2015, 20:28 IST
ಅಕ್ಷರ ಗಾತ್ರ

ಬೆಂಗಳೂರು: ‘ನರೇಂದ್ರ ಮೋದಿ ಅವರು  ಪ್ರಧಾನಿ ಆದಂದಿನಿಂದಲೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಶಿಥಿಲ ಗೊಳಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಜೈರಾಮ್‌ ರಮೇಶ್‌ ಆರೋಪಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರದ ವೈಫಲ್ಯ ಗಳನ್ನು ಪಟ್ಟಿ ಮಾಡಿದರು. ‘ಮೋದಿ ಅವರು ಸಂಸತ್ತನ್ನು ಸಂಪೂರ್ಣ ನಿರ್ಲಕ್ಷಿ ಸಿದ್ದಾರೆ.  ಒಂದು ವರ್ಷದಲ್ಲಿ ಲೋಕ ಸಭೆಯಲ್ಲಿ 53 ಮಸೂದೆಗಳನ್ನು ಮಂಡಿಸಲಾಗಿದ್ದು, ಈ ಪೈಕಿ ಕೇವಲ ಐದು ಮಸೂದೆಗಳನ್ನು ಸ್ಥಾಯಿ ಸಮಿತಿಗೆ ಕಳುಹಿಸಿಕೊಡಲಾಗಿದೆ. ನ್ಯಾಯಾಲ ಯಗಳ ವಿಚಾರದಲ್ಲೂ ಮೋದಿ ಅವರು ಅನಗತ್ಯ ಮೂಗು ತೂರಿಸುತ್ತಿದ್ದಾರೆ’ ಎಂದರು.

‘ಕೇಂದ್ರ ಜಾಗೃತ ದಳದ ಮುಖ್ಯಸ್ಥರ  ಹುದ್ದೆ ಎಂಟು ತಿಂಗಳಿಂದ ಹಾಗೂ ಮಾಹಿತಿ ಹಕ್ಕು ಆಯೋಗದ ಮುಖ್ಯಸ್ಥರ ಹುದ್ದೆ ಆರು ತಿಂಗಳಿಂದ ಖಾಲಿ ಇದೆ. ಮಾಹಿತಿ ಹಕ್ಕಿನಡಿ ಸಲ್ಲಿಸಿದ ಅರ್ಜಿಗ ಳಿಗೂ ಸಕಾಲದಲ್ಲಿ ಉತ್ತರ ಸಿಗುತ್ತಿಲ್ಲ. ಆದರೂ ನಮ್ಮದು ಪಾರದರ್ಶಕ ಆಡಳಿತ ಎಂದು ಮೋದಿ ಹೇಳಿಕೊಳ್ಳುತ್ತಿದ್ದಾರೆ’ ಎಂದರು.

‘ಗರಿಷ್ಠ ಆಡಳಿತ ಕನಿಷ್ಠ ಸರ್ಕಾರ ಎಂದು ಮೋದಿ ಹೇಳಿದ್ದರು.  ಆದರೆ,  ಗರಿಷ್ಠ ದುರಹಂಕಾರ, ಏಕವ್ಯಕ್ತಿಯ ಆಡಳಿತ ಎಂಬ ಪರಿಸ್ಥಿತಿ ನಿರ್ಮಾಣ ವಾಗಿದೆ. ಮೋದಿ ಅವರದು ನಿರಂಕುಶ ಆಡಳಿತ. ಯಾವ ಕೇಂದ್ರ ಸಚಿವರ ಮಾತೂ ಅಲ್ಲಿ ನಡೆಯುವುದಿಲ್ಲ. ಸಚಿವಾ ಲಯಗಳಿಗೂ ಬೆಲೆ ಇಲ್ಲ. ಅವರೀಗ ‘ಸೆಲ್ಫಿ’ ಪ್ರಧಾನಿ ಆಗಿಬಿಟ್ಟಿದ್ದಾರೆ’ ಎಂದು ಅವರು ಲೇವಡಿ ಮಾಡಿದರು.

‘ದೇಶದ ಅರ್ಥವ್ಯವಸ್ಥೆಯನ್ನೇ ಬದಲಾಯಿಸುವುದಾಗಿ  ಮೋದಿ ಆಶ್ವಾಸನೆ ನೀಡಿದ್ದರು.  ಆದರೆ, ಬದಲಾ ಗಿರುವುದು  ಅವರ ನಿಲುವುಗಳು ಮಾತ್ರ.  ಈ ಹಿಂದೆ ಅಮೆರಿಕದ ಜತೆ ಪರಮಾಣು ಒಪ್ಪಂದವನ್ನು ಟೀಕಿಸಿದ್ದ ಮೋದಿ, ಈ ಒಪ್ಪಂದ ನನ್ನದೇ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ  ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ನೀತಿಯನ್ನು ವಿರೋಧಿಸಿದ್ದ ಮೋದಿ ಈಗ ಅದನ್ನೇ ಜಾರಿಗೊಳಿಸಲು ಹೊರಟಿದ್ದಾರೆ.  ವಿಶಿಷ್ಟ ಗುರುತಿನ ಸಂಖ್ಯೆ (ಯುಐಡಿ) ಇದಕ್ಕೆ  ಇನ್ನೊಂದು ಉದಾಹರಣೆ. ಈ ಮೂರು ವಿಚಾರಗಳಲ್ಲಿ ಮೋದಿ ಅವರ  ನಿಲುವು ಬದಲಾಗಿರುವುದು  ಒಳ್ಳೆಯದೆ. ಆದರೆ  ಭೂಸ್ವಾಧೀನ ಮಸೂದೆ ವಿಚಾರದಲ್ಲಿ ಬಿಜೆಪಿಯ ನಿಲುವು ಬದಲಾಗಿದ್ದನ್ನು  ಒಪ್ಪಲಾಗದು’ ಎಂದರು. 

‘ಯೋಜನೆಗಳನ್ನು ಹೊಸ ರೂಪ ದಲ್ಲಿ ಪ್ರಸ್ತುತಪಡಿಸುವ, ಜಾಹೀ ರುಪಡಿಸುವ ಹಾಗೂ ಮಾರುಕಟ್ಟೆ ರೂಪಿಸುವ  ಕಲೆಯಲ್ಲಿ ಮೋದಿ ಸಿದ್ಧಹ ಸ್ತರು. ಯುಪಿಎ ಸರ್ಕಾರದ ನಿರ್ಮಲ ಭಾರತ ಯೋಜನೆಯನ್ನು ‘ಸ್ವಚ್ಛಭಾರತ್‌’ ಹೆಸರಿನಲ್ಲಿ, ವಿತ್ತೀಯ ಸೇರ್ಪಡೆ ಕಾರ್ಯ ಕ್ರಮವನ್ನು ‘ಜನ–ಧನ್‌’  ಹೆಸರಿನಲ್ಲಿ ಮತ್ತೆ ಜಾರಿಗೊಳಿಸಿದರು’ ಎಂದರು.

‘ಒಂದೆಡೆ ‘ಟೀಮ್‌ ಇಂಡಿಯ’ ಮಂತ್ರ ಜಪಿಸುವ  ಮೋದಿ  ರಾಜ್ಯ ಸರ್ಕಾರಗಳನ್ನು ದುರ್ಬಲಗೊಳಿಸುವ ಪ್ರಯತ್ನದಲ್ಲಿ  ತೊಡಗಿದ್ದಾರೆ. ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ 2014–15ನೇ ಸಾಲಿನಲ್ಲಿ ಸಿಕ್ಕಿದ್ದಕ್ಕಿಂತ ಕಡಿಮೆ ಅನುದಾನ 2015–16ನೇ ಸಾಲಿನಲ್ಲಿ  ಸಿಗಲಿದೆ. ಸಮಾಜ ಕಲ್ಯಾಣ ಕಾರ್ಯ ಕ್ರಮಗಳಿಗೆ ಬಜೆಟ್‌ನಲ್ಲಿ ಮೀಸಲಿಡುತ್ತಿದ್ದ  ಅನುದಾನಗಳನ್ನು ಕೇಂದ್ರ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕಡಿತಗೊಳಿಸಿದೆ’ ಎಂದು  ಆರೋಪಿಸಿದರು.
*
ಮೋದಿ ಎಂದರೆ  ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಕೊಲೆ (MODI- Murder off democratic India) ಎಂದರ್ಥ. ಸರ್ಕಾರೇತರ ಸಂಘಟನೆಗಳೂ ಕೇಂದ್ರ ಸರ್ಕಾರದಿಂದ ಬೆದರಿಕೆ ಎದುರಿಸುತ್ತಿವೆ.
- ಜೈರಾಮ್‌ ರಮೇಶ್‌,
ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT