ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜ ಜಾಗೃತಿಗೊಳಿಸಿದ ಕ್ರಾಂತಿ ಪುರುಷ ಸಿಜಿಕೆ’

ಸಿಜಿಕೆ ಬೀದಿರಂಗ ದಿನಾಚರಣೆ ಕಾರ್ಯಕ್ರಮದಲ್ಲಿ ಗುರುಬಸವ ಸ್ವಾಮೀಜಿ
Last Updated 28 ಜೂನ್ 2016, 11:08 IST
ಅಕ್ಷರ ಗಾತ್ರ

ದಾವಣಗೆರೆ:  ‘ಸಿ.ಜಿ.ಕೃಷ್ಣಮೂರ್ತಿ ಅವರು ಬೀದಿ ನಾಟಕಗಳ ಮೂಲಕ ಸಮಾಜವನ್ನು ಜಾಗೃತಿಗೊಳಿಸಿದ ಕ್ರಾಂತಿ ಪುರುಷ’ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ರೋಟರಿ ಬಾಲಭವನದಲ್ಲಿ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘ ಸೋಮವಾರ ಆಯೋಜಿಸಿದ್ದ ‘ಸಿ.ಜಿ.ಕೆ. ಬೀದಿರಂಗ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬೀದಿ ನಾಟಕ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಂಡ ಸಿಜಿಕೆ, ಗ್ರಾಮೀಣ ಪ್ರದೇಶಗಳಲ್ಲಿ ಜನರನ್ನು ಜಾಗೃತಿಗೊಳಿಸಿದರು. ಸಾಮಾಜಿಕ, ಧಾರ್ಮಿಕ ಪಿಡುಗುಗಳ ಬಗ್ಗೆ ಅರಿವು ಮೂಡಿಸಿದರು. ರಂಗ ಕಲೆಯ ಜೊತೆಗೆ ಸಮಾಜದ ಪರಿವರ್ತನೆಗೆ ಶ್ರಮಿಸಿದರು. ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರೂ ರಂಗಭೂಮಿ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಸಿ.ಜಿ.ಕೆ. ಅವರನ್ನು ಸಾಂಸ್ಕೃತಿಕ ರಾಯಭಾರಿ ಎಂದರೆ ತಪ್ಪಾಗಲಾರದು’ ಎಂದು ಹೇಳಿದರು."

‘ಪ್ರಸ್ತುತ ದಿನಗಳಲ್ಲಿ ರಂಗಕಲೆ ನಶಿಸುತ್ತಿದೆ. ಸಮಾಜದ ಪರಿವರ್ತನೆ ಮಾಡಬೇಕಾದ ಸಮೂಹ ಮಾಧ್ಯಮ ಗಳು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ.ಮಾನವೀಯ ಮೌಲ್ಯಗಳು ಮತ್ತೆ ಪ್ರಜ್ವಲಿಸಬೇಕಾದರೆ ಬೀದಿ ನಾಟಕಗಳ ಅಗತ್ಯವಿದೆ. ರಂಗ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ನಾಟಕ ಪ್ರಯೋಗಗಳಿಗೆ ಹೆಚ್ಚಿನ ಮಾನ್ಯತೆ ನೀಡಬೇಕಾಗಿದೆ’ ಎಂದು ಸ್ವಾಮೀಜಿ ಸಲಹೆ ನೀಡಿದರು.

‘ಅಪೂರ್ವ ಸಂದೇಶಗಳನ್ನು ನೀಡುತ್ತಿದ್ದ ಹಳ್ಳಿ ನಾಟಕಗಳು ಇಂದು ನಶಿಸುತ್ತಿವೆ. ದಂದ್ವಾರ್ಥ ನಾಟಕಗಳಿಂದ ಸಮಾಜ ಕಲುಷಿತಗೊಳ್ಳುತ್ತಿದೆ. ಸಿಜಿಕೆ ಹಾಗೂ ರಂಗಕರ್ಮಿ ಪ್ರಸನ್ನ ಅವರು ಈ ಬಗ್ಗೆ ಬಂಡೆದ್ದು, ಸಾಮಾಜಿಕ ನೆಲೆಕಟ್ಟಿನ ಬೀದಿ ನಾಟಕಗಳನ್ನು ಪ್ರಸ್ತುತಪಡಿಸಿದರು. ಅವರ ನಾಟಕಗಳು ಇಂದಿಗೂ ಯಶಸ್ವಿಯಾಗಿವೆ’ ಎಂದು ಹಿರಿಯ ಸಾಹಿತಿ ಎಸ್‌.ಟಿ.ಶಾಂತಗಂಗಾಧರ ಅವರು  ಅಭಿಪ್ರಾಯಪಟ್ಟರು.

‌‌ಹರಿಹರ ತಾಲ್ಲೂಕು ಕಸಾಪ ಕೋಶಾಧ್ಯಕ್ಷ ಕೆ.ಎಸ್.ಹನುಮಂತಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಪತ್ರಕರ್ತ ಐರಣಿ ಬಸವರಾಜ್‌ ಮಾತನಾಡಿದರು.ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ಎನ್‌.ಎಸ್.ರಾಜು ಸ್ವಾಗತಿಸಿದರು.ಜಾನಪದ ಕಲಾವಿದೆ ಸಿದ್ದಮ್ಮನಹಳ್ಳಿ ಚೌಡಮ್ಮ ಅವರಿಗೆ ಸಿ.ಜಿ.ಕೆ. ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT