ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೃಜನಶೀಲತೆಗಿಂತ ಸಮಯಪ್ರಜ್ಞೆ ಮುಖ್ಯ’

Last Updated 7 ಅಕ್ಟೋಬರ್ 2015, 19:54 IST
ಅಕ್ಷರ ಗಾತ್ರ

ನಗರದ ಜನಪ್ರಿಯ ಡಿಜೆಗಳಲ್ಲಿ ಒಬ್ಬರಾದ ಜಿತೇನ್‌ ಓದಿದ್ದು ಬಿಬಿಎಂ. ಪದವಿ ಪ್ರಮಾಣಪತ್ರವನ್ನು ಕೈಯಲ್ಲಿಟ್ಟುಕೊಂಡು ಕಂಪೆನಿಯೊಂದರ ಕಾಲ್‌ ಸೆಂಟರ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡರೂ ಬೇರೆ ಬೇರೆ ಹಾಡುಗಳನ್ನು ಚೆಂದವಾಗಿ ಹೊಂದಿಸಿ ನೂರಾರು ಜನರನ್ನು ತಾಳಕ್ಕೆ ತಕ್ಕಂತೆ ಕುಣಿಸಿ ಮೈಮರೆಸುವ ಡಿಜೆ ಲೋಕದತ್ತಲೇ ಮನಸ್ಸು ಸೆಳೆಯುತ್ತಿತ್ತು.

ಕಾಲ್‌ ಸೆಂಟರ್‌ನಲ್ಲಿ ಆರು ತಿಂಗಳಿಗಿಂತ ಹೆಚ್ಚು ಕಾಲ ಕುಳಿತುಕೊಳ್ಳುವುದು ಜಿತೇನ್‌ಗೆ ಸಾಧ್ಯವಾಗಲಿಲ್ಲ. ತಿಂಗಳಾಂತ್ಯಕ್ಕೆ ನಿರ್ದಿಷ್ಟ ಸಂಬಳ ತರುವ ಕೆಲಸಕ್ಕೆ ತಿಲಾಂಜಲಿ ಇಟ್ಟ ಅವರು, ಮ್ಯೂಸಿಕ್‌ ಮಿಕ್ಸಿಂಗ್‌ ಯಂತ್ರ ಹಿಡಿದು ಅದೃಷ್ಟ ಪರೀಕ್ಷೆಗೆ ಇಳಿದರು.

‘ಕಾಲೇಜು ದಿನಗಳಿಂದಲೇ ಡಿಜೆ ಕ್ಷೇತ್ರದತ್ತ ಆಸಕ್ತಿ ಕುದುರಿತ್ತು. ಬೇರೆ ಬೇರೆ ಹಾಡುಗಳನ್ನು ಟೇಪ್‌ ರೆಕಾರ್ಡರ್‌ನಲ್ಲಿ ಮಿಕ್ಸ್‌ ಮಾಡಿ ಕೇಳುತ್ತಿದ್ದೆ. ನಂತರ ಬೇರೆ ಡಿಜೆಗಳ ಜತೆ ಆಗಾಗ ಸಹಾಯಕನಾಗಿ ಷೋಗಳಿಗೆ ಹೋಗತೊಡಗಿದೆ. ಯಾವುದೋ ಒಂದು ಡಿಗ್ರಿ ಪಡೆದುಕೊಳ್ಳಬೇಕು ಎಂಬ ಕಾರಣಕ್ಕೆ ಬಿಬಿಎಂ ಓದಿದ್ದಷ್ಟೆ. ಡಿಗ್ರಿ ಮುಗಿಸಿ ಆರು ತಿಂಗಳು ಕಾಲ್‌ ಸೆಂಟರ್‌ನಲ್ಲಿ ಕೆಲಸ ಮಾಡಿದೆ. ಅದು ಹೊಂದಾಣಿಕೆಯಾಗದೆ ಅದನ್ನು ಬಿಟ್ಟು ಸ್ವತಂತ್ರ ಡಿಜೆ ಆಗಿ ಕೆಲಸ ಮಾಡಿದೆ. ಅಷ್ಟರಲ್ಲಿಯೇ ನನಗೆ ಡಿಜೆ ಕೆಲಸದಲ್ಲಿ ತಕ್ಕಮಟ್ಟಿಗೆ ಅನುಭವವೂ ಇತ್ತು. ಆ ಕ್ಷೇತ್ರದ ಒಳಹೊರಗನ್ನು ತಿಳಿದುಕೊಂಡಿದ್ದೆ’ ಎಂದು ಹವ್ಯಾಸವಾಗಿದ್ದ ಡಿಜೆ ಕೆಲಸವನ್ನು ಪೂರ್ಣ ಪ್ರಮಾಣದ ವೃತ್ತಿಯನ್ನಾಗಿ ಸ್ವೀಕರಿಸಿದ ಕುರಿತು ವಿವರಿಸುತ್ತಾರೆ ಜಿತೇನ್‌.

ಡಿಜೆ ವೃತ್ತಿಯ ಆರಂಭಿಕ ದಿನಗಳು ಅಷ್ಟೇನೂ ಅನುಕೂಲಕರವಾಗಿರಲಿಲ್ಲ. ಇದೇ ವೃತ್ತಿಯಲ್ಲಿ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವೇ ಎಂಬ ಬಗ್ಗೆ ಅನುಮಾನಗಳು ಕಾಡಿ ತಳಮಳಿಸಿದ್ದೂ ಇದೆ. ಆದರೆ ಆತ್ಮತೃಪ್ತಿ ನೀಡಿದ ಈ ವೃತ್ತಿ ಬಿಟ್ಟುಬಿಡಲು ಮನಸ್ಸು ಸುತರಾಂ ಸಿದ್ಧವಿರಲಿಲ್ಲ. ಇದೇ ಕಾರಣಕ್ಕೆ ಡಿಜೆ ಕೆಲಸದ ಜತೆ ಜಿತೇನ್‌ ಪಾರ್ಟಿಗಳಿಗೆ ಸೌಂಡ್‌, ಲೈಟಿಂಗ್‌ ವ್ಯವಸ್ಥೆಯನ್ನು ಮಾಡಿಕೊಡುವ ಕೆಲಸವನ್ನೂ ಆರಂಭಿಸಿದರು.

ನಿಧಾನವಾಗಿ ಅವಕಾಶಗಳು ಕುದುರತೊಡಗಿದವು. ಕಳೆದ ಒಂಬತ್ತು ವರ್ಷಗಳನ್ನು ಇದೇ ಕ್ಷೇತ್ರದಲ್ಲಿ ಕಳೆದಿರುವ ಜಿತೇನ್‌ ಇಂದು ಬೆಂಗಳೂರಿನ ಬೇಡಿಕೆಯ ಡಿಜೆಗಳಲ್ಲಿ ಒಬ್ಬರು. ಮೊದಲ ಆವೃತ್ತಿಯಿಂದಲೂ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನ ಸಂತೋಷಕೂಟಗಳಿಗೆ ಅಫಿಶಿಯಲ್‌ ಡಿಜೆ ಆಗಿರುವ ಇವರು, ಸನ್‌ಫೀಸ್ಟ್‌ ಮತ್ತು ರೇಡಿಯೊ ಮಿರ್ಚಿ ನೀಡುವ ಪ್ರಶಸ್ತಿಗೆ 2009ರಲ್ಲಿ  ಭಾಜನರಾಗಿದ್ದಾರೆ.

ಪ್ರತಿಭೆ ಮತ್ತು ತಾಳ್ಮೆ ಬೇಕು
‘ಡಿಜೆ ಕೆಲಸವನ್ನು ಸ್ವತಂತ್ರ ವೃತ್ತಿಯನ್ನಾಗಿ ಸ್ವೀಕರಿಸುವವರಿಗೆ ಆರಂಭದಲ್ಲಿ ಕಷ್ಟದ ದಿನಗಳು ಎದುರಾಗುತ್ತವೆ. ಆದರೆ ಪ್ರತಿಭೆ ಮತ್ತು ತಾಳ್ಮೆ ಇದ್ದರೆ ನಿಧಾನವಾಗಿ ಅವರು ಬೆಳೆಯುತ್ತಾರೆ. ಇಲ್ಲಿ ಅನುಭವವೇ ತುಂಬ ಮುಖ್ಯ. ಏಳೆಂಟು ವರ್ಷ ಅನುಭವವಿರುವ ಡಿಜೆ ಒಬ್ಬ ಸಾಫ್ಟ್‌ವೇರ್‌ ಎಂಜಿನಿಯರ್‌ಗಿಂತ ಹೆಚ್ಚು ಹಣ ಸಂಪಾದಿಸಲು ಸಾಧ್ಯವಿದೆ’ ಎನ್ನುತ್ತಾರೆ ಜಿತೇನ್‌.

ಕಾರ್ಪೊರೇಟ್‌ ಕಾರ್ಯಕ್ರಮಗಳು, ಮದುವೆ ಕಾರ್ಯಕ್ರಮಗಳಿಗೆ ಹೆಚ್ಚಾಗಿ ಹೋಗುವ ಜಿತೇನ್‌ ಅವರಿಗೆ ಕ್ಲಬ್‌ ಷೋಗಳಿಗಿಂತ ಇವೇ ಹೆಚ್ಚು ಸವಾಲಿನದ್ದಾಗಿ ಕಂಡಿವೆ. ‘ಕ್ಲಬ್‌ಗಳಲ್ಲಿ ನಮಗೆ ಯಾವ ಹಾಡು ಇಷ್ಟವೋ ಆ ಹಾಡುಗಳನ್ನು ಹಾಕಬಹುದು. ಆದರೆ ಕಾರ್ಪೊರೇಟ್‌ ಕಾರ್ಯಕ್ರಮ, ಮದುವೆಗಳಲ್ಲಿ ಹಾಗಲ್ಲ. ಅಲ್ಲಿ ಸೇರಿರುವ ಜನರನ್ನು ನೋಡಿ, ಆ ಕಾರ್ಯಕ್ರಮವನ್ನು ಆಧರಿಸಿ ಅದಕ್ಕೆ ಸೂಕ್ತವಾದ ಸಂಗೀತವನ್ನು ನುಡಿಸಬೇಕಾಗುತ್ತದೆ’ ಎನ್ನುವ ಅವರು, ಇಂತಹ ಷೋಗಳಿಂದ ಸಿಗುವ ಆದಾಯ ಹೆಚ್ಚು ಎನ್ನುವುದನ್ನು ಒಪ್ಪುತ್ತಾರೆ.

‘ಕ್ಲಬ್‌ಗಳಲ್ಲಿ ವಾರಾಂತ್ಯಗಳಲ್ಲಿ ಷೋ ಇದ್ದರೆ ಸಾಕಷ್ಟು ಜನರು ಬರುತ್ತಾರೆ. ವಾರದ ದಿನಗಳಲ್ಲಿ ಜನ ಇರುವುದಿಲ್ಲ. ಆದ್ದರಿಂದ ಕೆಲವೊಮ್ಮೆ ಅವರು ಸರಿಯಾಗಿ ಹಣವನ್ನು ಕೊಡುವುದಿಲ್ಲ. ಆದರೆ ಕಾರ್ಪೊರೇಟ್‌ ಕಾರ್ಯಮಗಳಲ್ಲಿ ಹಾಗಲ್ಲ. ಅವರಿಗೆ ಬರುವ ಜನರು ಮುಖ್ಯವಲ್ಲ. ಮೊದಲೇ ಮಾತನಾಡಿಕೊಂಡಂತೆ ಪೂರ್ತಿ ಹಣ ಕೊಡುತ್ತಾರೆ’ ಎಂದು ಅವರು ಕಾರ್ಯಕ್ರಮಗಳಿಗನುಗುಣವಾಗಿ  ಆದಾಯದಲ್ಲಿ ವ್ಯತ್ಯಾಸ ಆಗುವುದನ್ನು ಹೇಳುತ್ತಾರೆ.

ಸಮಯಪ್ರಜ್ಞೆಯೇ ಮುಖ್ಯ
ಡಿಜೆಗಳಿಗೆ ಸೃಜನಶೀಲತೆಗಿಂತ ಸಮಯಪ್ರಜ್ಞೆ ಮುಖ್ಯ ಎನ್ನುವುದು ಜಿತೇನ್‌ ಅನುಭವದ ಮಾತು. ‘ಹಾಡುಗಳ ರಿಮಿಕ್ಸ್‌ ಹಂತದಲ್ಲಿ ಡಿಜೆಗಳಿಗೆ ಸೃಜನಶೀಲತೆ ಬೇಕಾಗುತ್ತದೆ. ಆದರೆ ಅದಕ್ಕಿಂತ ಸೇರಿರುವ ಜನರಿಗೆ ಯಾವ ಹಾಡನ್ನು ಹಾಕಿದರೆ ಸಂತೋಷವಾಗುತ್ತದೆ. ಯಾವ ಹಾಡಿನ ನಂತರ ಯಾವುದನ್ನು ಹಾಕಬೇಕು ಎಂಬೆಲ್ಲ ವಿಷಯಗಳಲ್ಲಿ ಸಮಯಪ್ರಜ್ಞೆಯೇ ಹೆಚ್ಚು ಮುಖ್ಯ. ಅಂತಿಮವಾಗಿ ನೀವು ಹಾಕುವ ಸಂಗೀತವನ್ನು ಜನರು ಮೆಚ್ಚಿಕೊಳ್ಳಬೇಕಷ್ಟೇ’ ಎನ್ನುತ್ತಾರೆ ಅವರು.

ಪ್ರಯೋಗಶೀಲತೆಯೇ ಜೀವಾಳ
‘ಡಿಜೆ ನಿರಂತರವಾಗಿ ಪ್ರಯೋಗಶೀಲನಾಗಿರಬೇಕು’ ಎನ್ನುವುದು ಜಿತೇನ್‌ ಕಂಡುಕೊಂಡ ವೃತ್ತಿಸತ್ಯ. ‘ಜನರಿಗೆ ಇಷ್ಟವಾಗುತ್ತದೋ ಬಿಡುತ್ತದೋ ಬೇರೆ ಮಾತು. ಆದರೆ ಡಿಜೆ ಹೊಸ ಸಂಗೀತ, ಹೊಸ ಪ್ರಕಾರಗಳ ಸತತ ಅನ್ವೇಷಣೆಯಲ್ಲಿರುವುದು ಬಹುಮುಖ್ಯ’ ಎನ್ನುವ ಅವರು, ಪ್ರತಿ ಷೋಗೂ ಪ್ರತ್ಯೇಕವಾಗಿ ಸಿದ್ಧತೆ ನಡೆಸುವುದಿಲ್ಲ. ಯಾವಾಗಲೂ ಹೊಸ ಸಂಗೀತದ ಹುಡುಕಾಟದಲ್ಲಿರುವ ಅವರು ಅದನ್ನು ತಮ್ಮ ಲ್ಯಾಪ್‌ಟಾಪ್‌ನಲ್ಲಿ ಶೇಖರಿಸಿಟ್ಟುಕೊಂಡಿರುತ್ತಾರೆ. ಆಯಾ ಕಾರ್ಯಕ್ರಮದ ವಾತಾವರಣಕ್ಕೆ ಅನುಗುಣವಾಗಿ ಬಳಸಿಕೊಳ್ಳುತ್ತಾರೆ.

‘ಡಿಜೆಗಳಿಗೆ ಸಂಗೀತಜ್ಞಾನ ಇದ್ದರೆ ಒಳ್ಳೆಯದು. ಇರದಿದ್ದರೂ ನಡೆಯುತ್ತದೆ. ಆದರೆ ಒಳ್ಳೆಯ ಸಂಗೀತವನ್ನು ಗುರ್ತಿಸುವ ಸೂಕ್ಷ್ಮತೆ ಇರಬೇಕಷ್ಟೇ’ ಎನ್ನುವ ಜಿತೇನ್‌ ಅವರಿಗೂ ವೃತ್ತಿಜೀವನದ ಆರಂಭದಲ್ಲಿ ಸಂಗೀತ ಜ್ಞಾನ ಇರಲಿಲ್ಲ. ನಂತರ ಯೂಟ್ಯೂಬ್‌ ಮೂಲಕ ಸಂಗೀತದ ಬಗೆಗೆ ಪ್ರಾಥಮಿಕ ಜ್ಞಾನವನ್ನು ಗಳಿಸಿಕೊಂಡರು. ‘ಈಗ ಬೆಂಗಳೂರಿನಲ್ಲಿ ಡಿಜೆಗಳು ವಿಪರೀತ ಹೆಚ್ಚಾಗಿರುವುದರಿಂದ ಸ್ಪರ್ಧೆ ಸಾಕಷ್ಟಿದೆ’ ಎನ್ನುವ ಅವರು, ‘ಪ್ರತಿಭಾವಂತರಿಗೆ ಇಲ್ಲಿ ಒಳ್ಳೆಯ ಭವಿಷ್ಯವಿದೆ’ ಎನ್ನಲು ಮರೆಯುವುದಿಲ್ಲ.
*
"ಸಾಮಾನ್ಯ ಡಿಜೆ ಪ್ರಚಲಿತದಲ್ಲಿರುವ ಟ್ರೆಂಡ್‌ ಅನ್ನು ಅನುಸರಿಸುತ್ತಾನೆ. ಆದರೆ ಒಳ್ಳೆಯ ಡಿಜೆ ಹೊಸ ಟ್ರೆಂಡ್‌ ಅನ್ನು ರೂಪಿಸುತ್ತಾನೆ."

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT