ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೈನ್ಸ್ ಆಫ್‌ ಸ್ಟುಪಿಡ್‌’ನಲ್ಲಿ ಮನೀಷ್

Last Updated 21 ಜುಲೈ 2014, 19:30 IST
ಅಕ್ಷರ ಗಾತ್ರ

ರಿಯಾಲಿಟಿ ಷೋ ಕಾರ್ಯಕ್ರಮದ ಮೂಲಕ ಮನೆ ಮಾತಾಗಿರುವ ಮನೀಷ್ ಪಾಲ್ ಈಗ ಹೊಸ ಅವತಾರದಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದು ಕೂಡ ನ್ಯಾಷನಲ್‌ ಜಿಯಾಗ್ರಫಿಕ್‌ ಚಾನೆಲ್‌ನಲ್ಲಿ (ಎನ್‌ಜಿಸಿ). ‘ಝಲಕ್‌ ದಿಖ್ಲಾ ಜಾ’ ನೃತ್ಯ ಕಾರ್ಯಕ್ರಮದ ನಿರೂಪಕರಾಗಿ ಲಕ್ಷಾಂತರ ಪ್ರೇಕ್ಷಕರ ಮನಗೆದ್ದಿರುವ ಮನೀಷ್‌ ಮೊದಲ ಬಾರಿಗೆ ವಿಜ್ಞಾನ ಕಾರ್ಯಕ್ರಮ ನಡೆಸಿಕೊಡಲು ಸಿದ್ಧರಾಗಿದ್ದಾರೆ.
ಅದರ ಹೆಸರು ‘ಸೈನ್ಸ್‌ ಆಫ್‌ ಸ್ಟುಪಿಡ್‌’. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ರಿಂದ 10ಗಂಟೆ ವರೆಗೆ ಮೂಡಿ ಬರಲಿರುವ ಈ ಕಾರ್ಯಕ್ರಮದ ಮೊದಲ ಪ್ರೀಮಿಯರ್‌ ನಿನ್ನೆ (ಜುಲೈ 21ರಂದು) ಎನ್‌ಜಿಸಿನಲ್ಲಿ ಪ್ರಸಾರವಾಯಿತು. ಕಾರ್ಯಕ್ರಮ ಕುರಿತು ಸ್ವತಃ ಮನೀಷ್‌ ಅವರೇ ‘ಮೆಟ್ರೊ’ ಜೊತೆ ಮಾತನಾಡಿದ್ದಾರೆ.

‘ಸೈನ್ಸ್‌ ಆಫ್‌ ಸ್ಟುಪಿಡ್‌’ ಮನರಂಜನೆಗೆ ಸಂಬಂಧಿಸಿದ್ದೆ ಅಥವಾ ಜ್ಞಾನ ಆಧಾರಿತ ಕಾರ್ಯಕ್ರಮವೇ?
ಇದು ಸಂಪೂರ್ಣ ವಿಭಿನ್ನ ಕಾರ್ಯಕ್ರಮ. ಮಾಹಿತಿ, ಮನರಂಜನೆ ಎರಡನ್ನೂ ಒಳಗೊಂಡಿದೆ. ಹಾಸ್ಯದ ಮೂಲಕ ಜ್ಞಾನ ಹೆಚ್ಚಿಸುವಂಥದ್ದು.

ಹಾಸ್ಯ, ಮನರಂಜನೆಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಿರಿ. ವಿಜ್ಞಾನ ವಿಷಯದ ಈ ಕಾರ್ಯಕ್ರಮದ ಅನುಭವ ಹೇಗಿದೆ?
ನೀವು ಹೇಳಿದ್ದು ನಿಜ. ಇದು ಸಂಪೂರ್ಣ ವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಯಕ್ರಮ. ಹಾಗಿದ್ದರೂ ಮಾಹಿತಿ, ಮನರಂಜನೆಯಿಂದ ಕೂಡಿದೆ. ಹಲವು ಹೊಸ ವಿಷಯ, ಸಂಗತಿಗಳನ್ನು ತಿಳಿಯಲು, ಕಲಿತುಕೊಳ್ಳಲು ಸಹಾಯಕವಾಯಿತು.

ಕಾರ್ಯಕ್ರಮದ ಮುಖ್ಯ ವಿಷಯ ವಸ್ತು ಯಾವುದು. ಇದು ಏನೇನನ್ನು ಒಳಗೊಂಡಿರುತ್ತದೆ?
ಇಂತಹುದೇ ನಿರ್ದಿಷ್ಟ ವಿಷಯ ಅಂತ ಇರುವುದಿಲ್ಲ. ನೀವು ಇದುವರೆಗೆ ನೋಡದೇ ಇರುವ ವಿಚಿತ್ರ, ವಿಲಕ್ಷಣ ದೃಶ್ಯಗಳನ್ನು ತೋರಿಸುತ್ತೇವೆ. ಇದನ್ನು ನೋಡಿದವರು ಹೊಟ್ಟೆ ಹುಣ್ಣಾಗುವಂತೆ ಬಿದ್ದು ಬಿದ್ದು ನಗುವುದಂತೂ ಗ್ಯಾರಂಟಿ.

ಈ ಕಾರ್ಯಕ್ರಮದ ಯೋಚನೆ ಯಾರದ್ದು?
ಕಾರ್ಯಕ್ರಮ ಸಂಘಟಿಸಿದ್ದು ನ್ಯಾಷನಲ್‌ ಜಿಯಾಗ್ರಫಿಕ್‌ ಚಾನೆಲ್‌. ಸಹಜವಾಗಿಯೇ ಇದು ಅದರದ್ದೆ ಐಡಿಯ.

ಕಾರ್ಯಕ್ರಮ ಜನಪ್ರಿಯತೆ ಗಳಿಸುವ ವಿಶ್ವಾಸ ಇದೆಯೇ?
ಕಾರ್ಯಕ್ರಮದ ಬಗ್ಗೆ ಇಷ್ಟು ಬೇಗ ಪ್ರತಿಕ್ರಿಯಿಸುವುದು ಬೇಡ. ಎಲ್ಲವೂ ಜನರ ಕೈಯಲ್ಲಿ ಇದೆ. ವೀಕ್ಷಕರು ಮೆಚ್ಚುತ್ತಾರೆ ಎಂಬ ವಿಶ್ವಾಸ ಇದೆ.

ಕಿರುತೆರೆಯಲ್ಲಿ ಹಲವರು ಖ್ಯಾತ ನಿರೂಪಕರಿದ್ದಾರೆ. ಆದರೆ, ನ್ಯಾಷನಲ್‌ ಜಿಯಾಗ್ರಫಿಕ್‌ ಚಾನೆಲ್‌ ನಿಮ್ಮನ್ನೇ ಆಯ್ಕೆ ಮಾಡಿರುವುದೇಕೆ?
ಬಹುಶಃ ನನ್ನ ಕೆಲಸ ಅವರಿಗೆ ಮೆಚ್ಚುಗೆ ಆಗಿರಬಹುದು. ಒಬ್ಬ ಕಲಾವಿದನಾದವನು ಬಯಸುವುದು ಇದನ್ನೇ ಅಲ್ಲವೇ?

ಕಾರ್ಯಕ್ರಮದ ಕುರಿತು ಪ್ರೇಕ್ಷಕರಿಗೆ ಏನೆನ್ನುವಿರಿ?
ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ರಿಂದ 10ಗಂಟೆಯವರೆಗೆ ಪ್ರಸಾರವಾಗುವ ಈ ಕಾರ್ಯಕ್ರಮವನ್ನು ಎಲ್ಲ ವಯೋಮಾನದವರನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ಹೀಗಾಗಿ ಕುಟುಂಬದ ಎಲ್ಲ ಸದಸ್ಯರು ಒಂದೆಡೆ ಕುಳಿತು ವೀಕ್ಷಿಸಬಹುದು. ನೂರಕ್ಕೆ ನೂರು ಮನರಂಜನೆಯ ಗ್ಯಾರಂಟಿ ಕೊಡಬಲ್ಲೆ.

ಹೊಸ ವೇಷದಲ್ಲಿ ಜನ ನಿಮ್ಮನ್ನು ಸ್ವೀಕರಿಸುತ್ತಾರೆಯೇ?
ಈ ಹಿಂದೆ ನಾನು ನಡೆಸಿಕೊಟ್ಟಿದ್ದ ಎಲ್ಲ ಕಾರ್ಯಕ್ರಮಗಳನ್ನು ಜನ ನೋಡಿ ಮೆಚ್ಚಿದ್ದಾರೆ. ಹುರಿದುಂಬಿಸಿದ್ದಾರೆ. ಈಗಲೂ ಹಾಗೆ ಮಾಡುತ್ತಾರೆ ಎಂಬ ವಿಶ್ವಾಸ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT