ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹುತಾತ್ಮ’ ಪಟ್ಟದ ಹುನ್ನಾರ

Last Updated 1 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಪ್ರತಿಭಟನೆಗೆ ಅನುಸರಿಸುತ್ತಿರುವ ಮಾರ್ಗವನ್ನೇ ಮುಖ್ಯವಾಗಿಸುವ ಚರ್ಚೆಗಳು ಹೆಚ್ಚಿವೆ. ಇದರ ಹಿಂದೆ ಹುನ್ನಾರವಿದೆ. ಸಂವೇದನಾಶೀಲರು ಇದನ್ನು ಗ್ರಹಿಸಬೇಕು.

ಪ್ರತಿಭಟನೆಯ ಕಾರಣಕ್ಕಿಂತ ಪ್ರತಿಭಟನೆಯ ಮಾದರಿಯೇ ಮುಖ್ಯ ಚರ್ಚಾ ವಿಷಯವಾಗಿಬಿಡುವ ವಿಪರ್ಯಾಸವೊಂದು ನಮ್ಮೆದುರು ಪ್ರತಿದಿನವೂ ಅನಾವರಣಗೊಳ್ಳುತ್ತಿದೆ. ಇದರ ಇತ್ತೀಚಿನ ಮಾದರಿ ಬೆಂಗಳೂರು ಸಾಹಿತ್ಯ ಹಬ್ಬದ ಸುತ್ತ ನಡೆಯುತ್ತಿರುವ ವಿವಾದ. ಹಿರಿಯ ಲೇಖಕ ಮತ್ತು ವಿಮರ್ಶಕ ಓ.ಎಲ್.ನಾಗಭೂಷಣ ಸ್ವಾಮಿ, ಯುವ ಸಾಹಿತಿಗಳಾದ ಆರಿಫ್ ರಾಜ ಮತ್ತು ಟಿ.ಕೆ.ದಯಾನಂದ್ ತಮ್ಮದೇ ಆದ ಕಾರಣಗಳನ್ನು ಮುಂದಿಟ್ಟು ಬೆಂಗಳೂರು ಸಾಹಿತ್ಯ ಹಬ್ಬದಿಂದ ದೂರ ಉಳಿಯುತ್ತೇವೆಂದರು. ಇದಕ್ಕೆ ಪ್ರತಿಕ್ರಿಯೆಯಾಗಿ ಬೆಂಗಳೂರು ಸಾಹಿತ್ಯ ಹಬ್ಬದ ಸಂಸ್ಥಾಪಕ ನಿರ್ದೇಶಕರಾದ ವಿಕ್ರಂ ಸಂಪತ್ ಸಾಹಿತ್ಯ ಹಬ್ಬದಿಂದ ಕೆಲ ಲೇಖಕರು ದೂರ ಉಳಿಯುತ್ತಿರುವುದಕ್ಕೆ ತಾನೇ ಕಾರಣನಾಗಿದ್ದೇನೆಂದು ಆರೋಪಿಸಿಕೊಂಡು ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದರು.

ವಿಕ್ರಂ ಸಂಪತ್ ತಮ್ಮ ರಾಜೀನಾಮೆ ಏಕೆ ಎಂದು ವಿವರಿಸುವ ಟಿಪ್ಪಣಿಯಲ್ಲಿ ತಮ್ಮ ‘ಅಭಿವ್ಯಕ್ತಿ ಸ್ವಾತಂತ್ರ್ಯ’ವನ್ನು ಹೇಗೆ ಕಿತ್ತುಕೊಳ್ಳಲಾಗುತ್ತಿದೆ ಎಂಬುದನ್ನು ವಿವರಿಸಿ ‘ಹುತಾತ್ಮ’ತೆಯನ್ನು ಆರೋಪಿಸಿಕೊಂಡರು. ‘ಹುತಾತ್ಮ’ರಾದವರ ಪರವಾಗಿ ವಾದಿಸುವ ಒಂದು ಗುಂಪೊಂದರಿಂದ ಇಡೀ ಕನ್ನಡ ಲೇಖಕ ಸಮುದಾಯವನ್ನು ಹೀಗಳೆಯುವ ಪ್ರಕ್ರಿಯೆಯೂ ಆರಂಭವಾಯಿತು. ಈ ಮಧ್ಯೆ ಮರೆತು ಹೋದದ್ದು ಕನ್ನಡದ ಮೂವರು ಲೇಖಕರು ಕಾರ್ಯಕ್ರಮದಿಂದ ದೂರ ಉಳಿಯುತ್ತಿರುವುದಕ್ಕೆ ನೀಡಿದ ಕಾರಣ.

ಪ್ರಶಸ್ತಿ ಹಿಂದಿರುಗಿಸಿರುವ ಯಾವುದೇ ಧೀಮಂತರು ಪ್ರಶಸ್ತಿ ಹಿಂದಿರುಗಿಸದೇ ಇರುವ ಯಾರನ್ನೂ ಈತನಕ ಟೀಕಿಸಿಲ್ಲ. ಅಥವಾ ಅವರಿಗೆ ವ್ಯವಸ್ಥೆಯ ಪರವಾಗಿರುವವರು ಎಂಬ ಹಣೆಪಟ್ಟಿ ಹಚ್ಚಿಲ್ಲ. ಎಲ್ಲರೂ ತಮ್ಮ ವೈಯಕ್ತಿಕ ನೆಲೆಯ ಪ್ರತಿಭಟನೆಯಾಗಿಯಷ್ಟೇ ಇದನ್ನು ಕಂಡಿದ್ದಾರೆ ಮತ್ತು ಹಾಗೆ ನಡೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಸಾಹಿತ್ಯ ಹಬ್ಬದ ಸಂಘಟಕರಲ್ಲಿ ಒಬ್ಬರಾಗಿರುವ ವಿಕ್ರಂ ಸಂಪತ್ ಪ್ರಶಸ್ತಿಯನ್ನು ತಾವೇಕೆ  ಹಿಂದಿರುಗಿಸುತ್ತಿಲ್ಲ ಎಂಬ ಲೇಖನವೊಂದನ್ನು ಆಂಗ್ಲ ಪತ್ರಿಕೆಯೊಂದರಲ್ಲಿ ಬರೆದಿದ್ದರು. ಈ ಲೇಖನದಲ್ಲಿ ಪ್ರಶಸ್ತಿ ಹಿಂದಿರುಗಿಸುತ್ತಿರುವ ಎಲ್ಲರನ್ನೂ ‘ರಾಜಕೀಯದ ಕೈಗೊಂಬೆ’ ಎಂದು ಅವರು ಹೀಗಳೆದಿದ್ದರು.

ಇದು ಕನ್ನಡದ ಮೂವರು ಲೇಖಕರು ಸಾಹಿತ್ಯ ಹಬ್ಬದಿಂದ ದೂರ ಉಳಿಯಲು ನಿರ್ಧರಿಸುವುದಕ್ಕೆ ಕಾರಣವಾಯಿತು. ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳದೆಯೇ ಎಲ್ಲಾ ಚರ್ಚೆಗಳೂ ನಡೆಯುತ್ತಿವೆ. ಇದು ಹೊಸತೇನೂ ಅಲ್ಲ. ನಯನತಾರಾ ಸೆಹಗಲ್ ಪ್ರಶಸ್ತಿ ಹಿಂದಿರುಗಿಸಿದ ದಿನದಿಂದಲೂ ಈ ಬಗೆಯ ಏಕಪಕ್ಷೀಯ ಟೀಕೆಗಳ ಪ್ರವಾಹವೇ ಹರಿದು ಬರುತ್ತಿದೆ. ಈ ಎಲ್ಲಾ ಟೀಕೆಗಳು ಪ್ರಶಸ್ತಿಗಳನ್ನು ಹಿಂದಿರುಗಿಸಿರುವ ಲೇಖಕರ ವೈಯಕ್ತಿಕ ಹಿನ್ನೆಲೆ, ರಾಜಕೀಯ ಒಲವು ಇತ್ಯಾದಿಗಳನ್ನು ಗುರಿಯಾಗಿಟ್ಟುಕೊಂಡಿವೆ. ಯಾರೊಬ್ಬರೂ ಈ ಲೇಖಕರು ತಮ್ಮ ಪ್ರತಿಭಟನೆಗೆ ನೀಡಿರುವ ಕಾರಣಗಳ ಕುರಿತು ಚರ್ಚಿಸುತ್ತಿಲ್ಲ. ದೇಶದಲ್ಲಿ ಅಸಹಿಷ್ಣುತೆ ಇದೆ ಎಂಬುದನ್ನು ಕೇಂದ್ರದ ಸಚಿವರೊಬ್ಬರು ಸಂಸತ್ತಿನಲ್ಲೇ ಒಪ್ಪಿಕೊಂಡರು.

‘ಅಲ್ಪ ಸ್ವಲ್ಪ ಇದೆ’ ಎಂಬ ಅವರು ಮಾತು ಇದೆ ಎಂಬುದನ್ನೇ ಹೇಳುತ್ತಿದೆಯಲ್ಲವೇ. ವಿವಿಧ ಧಾರ್ಮಿಕ ಗುಂಪುಗಳು ಅಕ್ರಮ ಮಾರ್ಗಗಳಲ್ಲಿ ಅಭಿವ್ಯಕ್ತಿಯನ್ನು ಹತ್ತಿಕ್ಕುವ ಕ್ರಿಯೆಯಲ್ಲಿ ತೊಡಗಿರುವುದನ್ನು ಯಾರಾದರೂ ಅಲ್ಲಗಳೆಯಲು ಸಾಧ್ಯವೇ. ಇದು ಹಿಂದೆಯೂ ಇತ್ತು. ಆಗ ಯಾರೂ ಪ್ರತಿಭಟಿಸಿರಲಿಲ್ಲ ಎಂಬುದು ಈಗ ಪ್ರತಿಭಟಿಸುತ್ತಿರುವವರನ್ನು ಟೀಕಿಸುವುದಕ್ಕೆ ಕಾರಣವಾಗುವುದು ಮಾತ್ರ ಕ್ರೂರ ವ್ಯಂಗ್ಯ, ಯಾವುದೇ ಕ್ರಿಯೆಯನ್ನು ಅದರ ಸೂಕ್ಷ್ಮಗಳಲ್ಲಿ ಗ್ರಹಿಸದೆ ಪ್ರತಿಕ್ರಿಯಿಸುವ ದೊಡ್ಡದೊಂದು ವರ್ಗವೇ ಈಗ ಸೃಷ್ಟಿಯಾಗಿದೆ. ಸಾಮಾಜಿಕ ಜಾಲತಾಣಗಳಂಥ ಮಾಧ್ಯಮಗಳು ವ್ಯಾಪಕವಾಗಿರುವ ಈ ಹೊತ್ತಿನಲ್ಲಿ ಇದು ಸಹಜವೂ ಸಾಮಾನ್ಯವೂ ಹೌದು.

ವಿಕ್ರಂ ಸಂಪತ್ ಅವರಂಥ ಲೇಖಕರೂ ಈ ಕೂಗುಮಾರಿಗಳ ಮಾತನ್ನೇ ಪ್ರತಿಧ್ವನಿಸುವುದು ಧೀಮಂತರಲ್ಲಿ ಆತಂಕ ಸೃಷ್ಟಿಸಿದ್ದರೆ ಅದನ್ನು ಅಸಹಜ ಪ್ರತಿಕ್ರಿಯೆ ಎನ್ನಲು ಸಾಧ್ಯವೇ? ಬೆಂಗಳೂರು ಸಾಹಿತ್ಯ ಹಬ್ಬದಿಂದ ದೂರ ಉಳಿಯಲು ನಿರ್ಧರಿಸಿ ಮೂವರೂ ಲೇಖಕರು ಕೇಳುತ್ತಿರುವ ಪ್ರಶ್ನೆಯೂ ಇದುವೇ ಅಲ್ಲವೇ? ಆದರೆ ವಿಕ್ರಂ ಸಂಪತ್ ಅವರು ಈ ಪ್ರಶ್ನೆಗೆ ಉತ್ತರ ಕೊಡುವ ಬದಲಿಗೆ ಪಕ್ಕಾ ರಾಜಕಾರಣಿಯಂತೆ ವರ್ತಿಸಿದರು. ಸಾಹಿತ್ಯ ಹಬ್ಬದಿಂದ ತಾನೇ ದೂರ ಉಳಿಯುವುದಾಗಿ ಘೋಷಿಸಿದರು. ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಯಿತೆಂಬ ಹುಯಿಲೆ ಬ್ಬಿಸಿದರು.

ಅಸಹಿಷ್ಣುತೆಯ ಕುರಿತ ಚರ್ಚೆ ಇದ್ದಕ್ಕಿದ್ದಂತೆ ಹುಟ್ಟಿಕೊಂಡದ್ದೇನೂ ಅಲ್ಲ. ಅಥವಾ ಅಸಹಿಷ್ಣುತೆ ಎಂಬುದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲಷ್ಟೇ ಕಾಣಿಸಿಕೊಂಡ ವಿದ್ಯಮಾನವೂ ಅಲ್ಲ. ಕಳೆದ ಒಂದೂವರೆ ದಶಕಗಳ ಅವಧಿಯಲ್ಲಿ ಮುಕ್ತ ಅಭಿವ್ಯಕ್ತಿಗೆ ಅಡ್ಡಿಯಾಗಿರುವ ಘಟನೆಗಳ ಪಟ್ಟಿಯನ್ನೊಮ್ಮೆ ನೋಡಿದರೆ ಇದು ಎಂಥವರಿಗೂ ಅರ್ಥವಾಗುತ್ತದೆ. ಕಲಾವಿದ ಎಂ.ಎಫ್.ಹುಸೇನ್ ದೇಶಭ್ರಷ್ಟರಾಗಿಯೇ ಪ್ರಾಣ ಕಳೆದುಕೊಳ್ಳಬೇಕಾಗಿ ಬಂದದ್ದು ಬಿಜೆಪಿ ಆಡಳಿತಾವಧಿಯಲ್ಲಿ ಅಲ್ಲ. ಲೇಖಕಿ ತಸ್ಲಿಮಾ ನಸ್ರೀನ್ ತೊಂದರೆ ಅನುಭವಿಸಿದ್ದು ಕಮ್ಯುನಿಸ್ಟರು ಆಳುತ್ತಿದ್ದ ರಾಜ್ಯವೊಂದರಲ್ಲಿ.

ಮಹಿಳೆಯರ ಉಡುಪಿನಿಂದ ಆರಂಭಿಸಿ ಅವರು ಯಾವಾಗ ಎಲ್ಲಿ ಎನು ಮಾಡಬೇಕೆಂದು ನಿರ್ಧರಿಸುವ ‘ಅನೈತಿಕ ಪೊಲೀಸುಗಿರಿ’ ನಡೆಯುತ್ತಿರುವ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವುದೂ  ಜಾತ್ಯತೀತ ಪಕ್ಷವೇ. ಹೀಗೆ ಪಟ್ಟಿ ಮಾಡುತ್ತಾ ಹೋದಷ್ಟೂ ತಥಾಕಥಿತ ಜಾತ್ಯತೀತ ಪಕ್ಷಗಳು ಮಾಡಿರುವ ಅನಾಹುತಗಳ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ. ಈ ಎಲ್ಲಾ ಒತ್ತಡಗಳು ಪ್ರತಿಭಟನೆಯ ರೂಪ ಪಡೆದುಕೊಂಡದ್ದು ಈಗ. ಸಾಮಾನ್ಯ ಜ್ಞಾನ ಇರುವವರಿಗೆಲ್ಲಾ ಈ ಸೂಕ್ಷ್ಮ ತಿಳಿದಿದೆ.

ಅಸಹಿಷ್ಣುತೆಯ ಬಗ್ಗೆ ಯಾವುದೇ ಧೀಮಂತರು ಮಾತನಾಡಿದ ತಕ್ಷಣ ಅದನ್ನು ಕೇಂದ್ರ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧದ ಟೀಕೆ ಎಂಬ ಬಣ್ಣ ಕೊಡುವುದರ ಹಿಂದೆ ಬಹುದೊಡ್ಡ ರಾಜಕಾರಣವಿದೆ. ಇದು ಬಿಜೆಪಿ ಮತ್ತು ಕಾಂಗ್ರೆಸ್‌ಗಳೆರಡಕ್ಕೂ  ಲಾಭ ತಂದುಕೊಡುತ್ತದೆ. ಬಿಜೆಪಿ ತನಗೆ ಹುತಾತ್ಮ ಪಟ್ಟ ಸಿಗುತ್ತದೆ. ಹೀಗಾದರೆ ಬಹುಸಂಖ್ಯಾತರು ತಮ್ಮೊಂದಿಗೆ ಇರುತ್ತಾರೆ ಎಂಬ ಭ್ರಮೆಯಿದೆ. ಹಾಗೆಯೇ ಕಾಂಗ್ರೆಸ್‌ಗೆ ಇದರಿಂದ ತನ್ನ ಜಾತ್ಯತೀತ ಮುಖವಾಡಕ್ಕೆ ಅಧಿಕೃತತೆ ದೊರೆಯುತ್ತದೆ ಎಂಬುದು ತಿಳಿದಿದೆ. ಈ ಕಾರಣದಿಂದಾಗಿಯೇ ಪ್ರತಿಭಟಿಸುತ್ತಿರುವ ಲೇಖಕರು ಮುಂದಿಡುತ್ತಿರುವ ಪ್ರಶ್ನೆಗಳನ್ನು ಗೌಣವಾಗಿಸಿ ಪ್ರತಿಭಟನೆಗೆ ಅವರು ಅನುಸರಿಸುತ್ತಿರುವ ಮಾರ್ಗವನ್ನೇ ಮುಖ್ಯವಾಗಿಸುವ ಚರ್ಚೆಗಳು ಹೆಚ್ಚಿವೆ. ಈ ಹುನ್ನಾರವನ್ನು ಎಡ–ಬಲದ ವ್ಯತ್ಯಾಸವನ್ನು ಬದಿಗಿಟ್ಟು ಎಲ್ಲಾ ಸಂವೇದನಾಶೀಲರೂ ಗ್ರಹಿಸಬೇಕಾದ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT