ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೆಚ್ಚು ಓದುಗರನ್ನು ತಲುಪಿದ ಭೈರಪ್ಪ’

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಿ.ವಿ.ನಾರಾಯಣ ಬಣ್ಣನೆ
Last Updated 25 ಜನವರಿ 2015, 19:41 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಕಾದಂಬರಿ ಪ್ರಕಾರಕ್ಕೆ ಹೊಸ ಆಯಾಮ ತಂದು­ಕೊಟ್ಟ­ವರು ಎಸ್‌.ಎಲ್‌.ಭೈರಪ್ಪ. ಜನರ ಮನಸ್ಸಿನ ನೋವು, ತವಕ, ತಲ್ಲಣಗಳನ್ನು ತಮ್ಮ ಕಾದಂಬರಿಗಳಲ್ಲಿ ಚಿತ್ರಿಸಿದ್ದಾರೆ. ಓದುಗರ ಹೃದಯದಲ್ಲಿರುವ ಅಂಶಗ­ಳನ್ನು ತಮ್ಮದಾಗಿಸಿಕೊಂಡು ಅವು­ಗಳನ್ನು ಮತ್ತೆ ಓದುಗರಿಗೆ ತಲುಪಿಸಿ­ದ್ದಾರೆ’ ಎಂದು ಹಿರಿಯ ವಿಮರ್ಶಕ ಪಿ.ವಿ.ನಾರಾಯಣ ಬಣ್ಣಿಸಿದರು.

ಸುಂದರ ಪ್ರಕಾಶನವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯ­ಕ್ರಮದಲ್ಲಿ ‘ಡಾ.ಎಸ್‌.ಎಲ್‌. ಭೈರಪ್ಪ­ನವರ ಕಾದಂಬರಿಗಳಲ್ಲಿ ಪ್ರಮುಖ ಪಾತ್ರಗಳು’, ‘ಗೀತೆಗಳ ಗಾರುಡಿಗ ಸಿ.ವಿ.ಶಿವಶಂಕರ್‌–ಎಂಬತ್ತರ ಸಂಭ್ರಮ’ (ಸಂಪಾದಕ: ಗೌರಿಸುಂದರ್‌) ಹಾಗೂ ‘ಸಬರದ ಬಸವನ ವಚನಗಳು’ (ಲೇಖಕ ಡಾ.ಬಸವರಾಜ ಸಬರದ) ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

‘ಭಾರಿ ಜನಪ್ರಿಯತೆ ಪಡೆದ ಕನ್ನಡದ ಮೂವರು ಸಾಹಿತಿಗಳೆಂದರೆ ಕುಮಾರವ್ಯಾಸ, ಅ.ನ.ಕೃಷ್ಣರಾಯರು ಹಾಗೂ ಭೈರಪ್ಪ. ಕನ್ನಡನಾಡಿನ ಯಾವುದೇ ಮೂಲೆಗೆ ಹೋದರೂ ಕುಮಾರವ್ಯಾಸ ಭಾರತದ ಹಸ್ತಪ್ರತಿಗಳು ಲಭಿಸುತ್ತವೆ. ಆಧುನಿಕ ಕಾಲದಲ್ಲಿ ಓದುವಿಕೆಯನ್ನು ಪ್ರಚೋದಿಸಿದ್ದು ಕೃಷ್ಣ­ರಾಯರು. ಬಹಳ ಜನ ಓದುಗರನ್ನು ಯಶಸ್ವಿಯಾಗಿ ತಲುಪಿದ, ಹಿಡಿದಿಟ್ಟು­ಕೊಂಡಿದ್ದು ಭೈರಪ್ಪ’ ಎಂದರು.
‘ಕರ್ನಾಟಕದಲ್ಲಿ ಮಾತ್ರವಲ್ಲ; ಬೇರೆ ರಾಜ್ಯಗಳಲ್ಲೂ ಭೈರಪ್ಪನವರು ಪ್ರಸಿದ್ಧಿ ಪಡೆ­ದಿದ್ದಾರೆ. ಅವರ ಬರಹದ ಹಿಂದೆ ಶ್ರಮ­ವಿದೆ, ಸಂಶೋಧನೆಯಿದೆ’ ಎಂದರು. ಹಿರಿಯ ಕವಿ ಪ್ರೊ.ದೊಡ್ಡರಂಗೇಗೌಡ ಅವರು, ‘ಯಾವುದೇ ಬರಹ ತಿಣುಕಿ ಬರೆದ ಬರಹವಾಗಿರಬಾರದು. ಅದು ಸುಲಭವಾಗಿ ವ್ಯಕ್ತಿಯ ಲೇಖನಿಗೆ ದಕ್ಕ­ಬೇಕು. ಎಲ್ಲಿ ಅನುಭವ ಹರಳುಗಟ್ಟಿ­ರು­ತ್ತ­ದೆಯೊ ಅಲ್ಲಿ ಅಭಿವ್ಯಕ್ತಿ ಮೈದುಂಬಿ ಹರಿ­ಯುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಬಸವರಾಜ ಸಬರದ ಅವರು ಸಮಾಜದ ಆಗು ಹೋಗುಗಳ ಬಗ್ಗೆ, ಸಮಾಜದ ಅಸಮಾನತೆಗಳ ಬಗ್ಗೆ, ವಿಷವರ್ತಿಗಳ ಬಗ್ಗೆ ತಮ್ಮ ವಚನಗಳ ಮೂಲಕ ಮಾತನಾಡಿದ್ದಾರೆ. ಹಳೆಯ ಪರಂಪರೆಯನ್ನು ಬಿಡದೆ ಸಮಾಜ­ಮುಖಿಯಾಗಿ ಬರೆದಿದ್ದಾರೆ. ಇವುಗಳನ್ನು ಸಾಮಾಜಿಕ ಪ್ರಜ್ಞೆಯ ಕವಿತೆಗಳು ಎನ್ನ­ಬಹುದು’ ಎಂದು ವ್ಯಾಖ್ಯಾನಿಸಿದರು.

ಬಿಡುಗಡೆಯಾದ ಪುಸ್ತಕಗಳು: ಡಾ.ಎಸ್‌.ಎಲ್‌.­ಭೈರಪ್ಪನವರ ಕಾದಂಬರಿಗಳಲ್ಲಿ ಪ್ರಮುಖ ಪಾತ್ರಗಳು: ಬೆಲೆ: ₨ 180, ಗೀತೆಗಳ ಗಾರುಡಿಗ ಸಿ.ವಿ.ಶಿವಶಂಕರ್‌–ಎಂಬತ್ತರ ಸಂಭ್ರಮ: ಬೆಲೆ: ₨ 120 ಹಾಗೂ ಸಬರದ ಬಸವನ ವಚನಗಳು: ₨ 100

‘ಭೈರಪ್ಪ ಅವರಲ್ಲಿ ಯಾವುದೇ ಕುಂದು­ಕೊರತೆ ಇಲ್ಲ ಎಂದು ನಾನು ಹೇಳುವುದಿಲ್ಲ. ನನಗಂತೂ ಅವರ ‘ಆವರಣ’ ಉತ್ತಮ ಕಾದಂಬರಿ ಅನಿಸ­ಲಿಲ್ಲ. ಒಳ್ಳೆಯ ಕಲೆ ಅದರಲ್ಲಿ ಚಿತ್ರಿತವಾಗಿಲ್ಲ’  
–ಪಿ.ವಿ.ನಾರಾಯಣ ಹಿರಿಯ ವಿಮರ್ಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT