ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ದಿನಗಳಲ್ಲಿ ಸಂಚಾರ ಆರಂಭ: ಖರೋಲಾ

* ದಕ್ಷಿಣ ಭಾರತದ ಮೊದಲ ಮೆಟ್ರೊ ಸುರಂಗ * 18 ಕಿಲೋ ಮೀಟರ್‌ ಉದ್ದ
Last Updated 11 ಏಪ್ರಿಲ್ 2016, 20:15 IST
ಅಕ್ಷರ ಗಾತ್ರ

ಬೆಂಗಳೂರು:  ನಗರದ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ಪ್ರವೇಶ ದ್ವಾರದವರೆಗಿನ ಸುರಂಗ ಮಾರ್ಗದಲ್ಲಿ 10 ದಿನಗಳಲ್ಲಿ ಸಾರ್ವಜನಿಕ ಸಂಚಾರ ಆರಂಭವಾಗಲಿದೆ.

ಈ  ಮೂಲಕ  ‘ನಮ್ಮ ಮೆಟ್ರೊ’ದ ಪೂರ್ವ– ಪಶ್ಚಿಮ ಕಾರಿಡಾರ್‌ನಲ್ಲಿ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ವರೆಗಿನ ಒಟ್ಟು 18 ಕಿ.ಮೀ. ಉದ್ದದ ಮಾರ್ಗದಲ್ಲಿ ಸಂಪೂರ್ಣ ಸಂಚಾರ ಸಾಧ್ಯವಾಗಲಿದೆ.

ಇದು ದಕ್ಷಿಣ ಭಾರತದ ಮೊದಲ ಮೆಟ್ರೊ ಸುರಂಗ ಮಾರ್ಗ. ಐದು ವರ್ಷಗಳ ಹಿಂದೆ ಸುರಂಗ ಮಾರ್ಗದ ಕಾಮಗಾರಿ ಆರಂಭವಾಗಿತ್ತು. 2015ರ ಅಂತ್ಯದೊಳಗೆ ಈ ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ ಎಂದು ನಿಗಮದ ಅಧಿಕಾರಿಗಳು ಪ್ರಕಟಿಸಿದ್ದರು. ಬಳಿಕ 2–3 ಸಲ ಗಡುವು ವಿಸ್ತರಣೆಯಾಗಿತ್ತು.

‘ಕಳೆದ ವಾರ ಪರಿಶೀಲನೆ ನಡೆಸಿದ್ದ ರೈಲ್ವೆ ಸುರಕ್ಷತಾ ಆಯುಕ್ತ ಎಸ್.ಕೆ. ಮಿತ್ತಲ್‌ ಗುರುವಾರ ಅನುಮತಿ ನೀಡಿದ್ದಾರೆ.  ಇನ್ನಷ್ಟು ಸಮರ್ಪಕವಾಗಿ ಬೆಳಕು, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಈ ಕೆಲಸಗಳನ್ನು ಮಾಡಲು 3–4 ದಿನಗಳು ಬೇಕು. 10–15 ದಿನಗಳಲ್ಲಿ ಸಾರ್ವಜನಿಕ ಸಂಚಾರ ಆರಂಭ ನಿಶ್ಚಿತ’ ಎಂದು ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ  ಪ್ರದೀಪ್‌ ಸಿಂಗ್‌ ಖರೋಲಾ ‘ಪ್ರಜಾವಾಣಿ’ಗೆ ಸೋಮವಾರ ತಿಳಿಸಿದರು.

‘ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ತಿಳಿಸಿದ್ದೇವೆ. ಅವರು ದಿನ ನಿಗದಿ ಮಾಡುವರು. ಉದ್ಘಾಟನಾ ಸಮಾರಂಭಕ್ಕೆ ಅತಿಥಿಗಳು ಅಂತಿಮ ಆಗಿಲ್ಲ’ ಎಂದು ಸ್ಪಷ್ಟಪಡಿಸಿದರು. ವಿಧಾನಸೌಧ ಅಥವಾ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಸಲು ಯೋಜಿಸಲಾಗಿದೆ ಎಂದೂ ಅವರು ಹೇಳಿದರು.

ಶರವೇಗದಲ್ಲಿ ಸಂಚಾರ:  ಸುರಂಗದೊಳಗೆ ಗಂಟೆಗೆ 90 ಕಿ.ಮೀ. ವೇಗದಲ್ಲಿ ಸಂಚಾರಕ್ಕೆ ಅನುಮತಿ ಕೋರಿದ್ದೆವು. ಸುರಕ್ಷತಾ ಆಯುಕ್ತರು ಗರಿಷ್ಠ 80 ಕಿ.ಮೀ. ವೇಗದಲ್ಲಿ ಸಂಚಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಕಡಿದಾದ ತಿರುವುಗಳಲ್ಲಿ  30ರಿಂದ 40 ಕಿ.ಮೀ. ವೇಗದಲ್ಲಿ ಮೆಟ್ರೊ ಸಂಚಾರ ನಡೆಸಲಿದೆ ಎಂದು ಅವರು ಮಾಹಿತಿ ನೀಡಿದರು.

‘ಸುರಂಗ ಮಾರ್ಗದಲ್ಲಿ ಐದು ನಿಲ್ದಾಣಗಳಿವೆ. ಮೆಜೆಸ್ಟಿಕ್‌ ನಿಲ್ದಾಣದಲ್ಲೂ ನಿಲುಗಡೆ ಇರಲಿದೆ. ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ತಲುಪಲು 2ನಿಮಿಷ ಸಾಕು. ಸುರಂಗದೊಳಗೆ ಸಂಚಾರಕ್ಕೆ ಕನಿಷ್ಠ 8ರಿಂದ 10 ನಿಮಿಷ ಸಾಕು’ ಎಂದು ವಿವರ ನೀಡಿದರು.

ಪ್ರಯಾಣದರ: ‘18.2 ಕಿ.ಮೀ.ಗೆ ಪ್ರಯಾಣ ದರವನ್ನು ₹40 ನಿಗದಿ ಮಾಡುತ್ತೇವೆ. ಟೋಕನ್‌ ಬದಲು ಸ್ಮಾರ್ಟ್‌ ಕಾರ್ಡ್‌ ಬಳಸಿ ಪ್ರಯಾಣಿಸಿದರೆ ಶೇ 15 ರಿಯಾಯಿತಿ ಸಿಗಲಿದೆ. ಬಿಎಂಟಿಸಿ ಸಾಮಾನ್ಯ ಬಸ್‌ನಲ್ಲಿ ಇಷ್ಟು ಉದ್ದದ ಪ್ರಯಾಣಕ್ಕೆ ₹ 44 ಪಾವತಿಸಬೇಕಾಗುತ್ತದೆ’ ಎಂದು ತಿಳಿಸಿದರು.

33 ನಿಮಿಷ ಪ್ರಯಾಣ: ಪೂರ್ವ– ಪಶ್ಚಿಮ ಕಾರಿಡಾರ್‌ನಲ್ಲಿ ಸಂಚಾರಕ್ಕೆ 33 ನಿಮಿಷ ಸಾಕು. ಮುಂದಿನ ದಿನಗಳಲ್ಲಿ ಅದು 31 ನಿಮಿಷಕ್ಕೆ ಇಳಿಯಲಿದೆ ಎಂದೂ ಹೇಳಿದರು.

ಮೂರ್ನಾಲ್ಕು ತಿಂಗಳಲ್ಲಿ ಮೊದಲ ಹಂತ ಸಂಪೂರ್ಣ
ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್‌ವರೆಗೆ ಸುರಂಗ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ‘ಗೋದಾವರಿ’ ಯಂತ್ರ ಮುಂದಿನ ವಾರ ಸುರಂಗದಿಂದ ಹೊರಬರಲಿದೆ.

ಈ ಸುರಂಗ ಮಾರ್ಗದ ಒಟ್ಟು ಉದ್ದ 957  ಮೀಟರ್‌ಗಳು. ಮೊದಲಿನ ಯೋಜನೆ ಪ್ರಕಾರ ‘ಗೋದಾವರಿ’ಯೇ ಜೋಡಿ ಮಾರ್ಗದ ಮತ್ತೊಂದು ಸುರಂಗವನ್ನೂ ನಿರ್ಮಿಸಬೇಕಿತ್ತು. ಆದರೆ, ಈ ಯಂತ್ರ ಕೆಟ್ಟು ನಿಂತಿದ್ದರಿಂದ ಮತ್ತೊಂದು ಸುರಂಗವನ್ನು ‘ಮಾರ್ಗರೀಟಾ’ ಎಂಬ ಟಿಬಿಎಂನಿಂದ ನಿರ್ಮಿಸಲಾಗಿತ್ತು. 3 ತಿಂಗಳ ಹಿಂದೆ ‘ಮಾರ್ಗರೀಟಾ’ ಸುರಂಗದಿಂದ ಹೊರಬಂದಿತ್ತು.

‘ಗೋದಾವರಿ’ಯ ‘ಕಟರ್‌ ಹೆಡ್‌’ ಒಂದೂವರೆ ವರ್ಷದ ಹಿಂದೆ ಜಖಂಗೊಂಡಿತ್ತು. ಖೋಡೆ ವೃತ್ತದ ಸಮೀಪದ ಲಕ್ಷ್ಮಣ್‌ ಸ್ಲಂ ಪಕ್ಕದಲ್ಲಿ 60 ಅಡಿಗಳಷ್ಟು ನೆಲದಾಳದಲ್ಲಿ ಬಂಡೆ ಕಲ್ಲನ್ನು ಕೊರೆಯುವಾಗ ‘ಕಟರ್‌ ಹೆಡ್‌’ಗೆ ಹಾನಿಯಾಗಿತ್ತು. ಇದರಿಂದ ಯಂತ್ರವು ಹಿಂದಕ್ಕಾಗಲಿ ಮುಂದಕ್ಕಾಗಲಿ ಹೋಗದಷ್ಟು ಕೆಟ್ಟುಹೋಯಿತು.

ಕೆಡುವ ಮುನ್ನ ‘ಗೋದಾವರಿ’ಯು 350 ಮೀಟರುಗಳಷ್ಟು ಉದ್ದದ ಸುರಂಗ ನಿರ್ಮಿಸಿತ್ತು. ಕಟರ್‌ ಹೆಡ್‌ ಅನ್ನು ಫೆಬ್ರುವರಿಯಲ್ಲಿ ಇಟಲಿಯಿಂದ ತರಿಸಿಕೊಳ್ಳಲಾಗಿತ್ತು. ‘ಸುರಂಗ ನಿರ್ಮಿಸುತ್ತಿರುವ ಗೋದಾವರಿ ಮೆಜೆಸ್ಟಿಕ್‌ನಿಂದ 25 ಮೀಟರ್‌ ದೂರದಲ್ಲಿದೆ. ವಾರದಲ್ಲಿ ಅದು ಹೊರಬರಲಿದೆ’ ಎಂದು ಪ್ರದೀಪ್‌ ಸಿಂಗ್‌ ಖರೋಲಾ ಹೇಳಿದರು.

‘ಆ ಬಳಿಕ ಹಳಿ ಅಳವಡಿಕೆ, ಸಿಗ್ನಲ್‌ ವ್ಯವಸ್ಥೆ ಅಳವಡಿಕೆ ಕಾರ್ಯ ನಡೆಯಬೇಕಿದೆ. ಅದಕ್ಕೆ ಒಂದೂವರೆ ತಿಂಗಳು ಬೇಕು. ಬಳಿಕ ಪ್ರಾಯೋಗಿಕ ಸಂಚಾರ ಶುರುವಾಗಲಿದೆ. 3– 4 ತಿಂಗಳಲ್ಲಿ ಈ ಮಾರ್ಗದಲ್ಲಿ ಸಾರ್ವಜನಿಕ ಸಂಚಾರ ಆರಂಭಗೊಳ್ಳಲಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ನಮ್ಮ ಮೆಟ್ರೊದ 1 ನೇ ಹಂತದ ಮತ್ತೊಂದು ಮಾರ್ಗವಾದ ಉತ್ತರ ದಕ್ಷಿಣ ಕಾರಿಡಾರ್‌ನಲ್ಲಿ ನಾಗಸಂದ್ರದಿಂದ ಸಂಪಿಗೆ ರಸ್ತೆವರೆಗಿನ 13.3 ಕಿ.ಮೀ. ಮಾರ್ಗದಲ್ಲಿ ಸಾರ್ವಜನಿಕ ಸಂಚಾರ ಆರಂಭವಾಗಿದೆ. ಸಂಪಿಗೆ ರಸ್ತೆ ಹಾಗೂ ಮೆಜೆಸ್ಟಿಕ್‌ ನಡುವಿನ ಸಂಪರ್ಕ ಇನ್ನಷ್ಟೇ ಆಗಬೇಕಿದೆ. ನ್ಯಾಷನಲ್ ಕಾಲೇಜಿನಿಂದ

ಮೆಜೆಸ್ಟಿಕ್ ಕಡೆಯ ಜೋಡಿ ಸುರಂಗ ಮಾರ್ಗದ ಕೆಲಸವೂ ನಡೆಯುತ್ತಿದೆ. ಚಿಕ್ಕಪೇಟೆಯಿಂದ ಸುರಂಗ ಕೊರೆಯುತ್ತಿರುವ ‘ಕಾವೇರಿ’ ಮೆಜೆಸ್ಟಿಕ್‌ನಿಂದ ಕೆಲವೇ ಮೀಟರ್ ದೂರದಲ್ಲಿದೆ. ಇದು ಸುರಂಗದಿಂದ ಹೊರಬರಲು 2 ತಿಂಗಳು ಬೇಕು.  ಚಿಕ್ಕಪೇಟೆ ಕಡೆಯಿಂದ ಮೆಜೆಸ್ಟಿಕ್‌ ಕಡೆಗಿನ ಜೋಡಿ ಸುರಂಗ ಮಾರ್ಗದ ಒಟ್ಟು ಉದ್ದ 744 ಮೀಟರುಗಳು.

ನ್ಯಾಷನಲ್ ಕಾಲೇಜಿನಿಂದ ಪುಟ್ಟೇನಹಳ್ಳಿ ಕ್ರಾಸ್‌ ವರೆಗಿನ 7 ಕಿ.ಮೀ. ಎತ್ತರಿಸಿದ ಮಾರ್ಗದ ಎಲ್ಲ ಕೆಲಸಗಳು ಪೂರ್ಣಗೊಂಡಿವೆ. ‘ಡಿಸೆಂಬರ್‌ನೊಳಗೆ ಮೊದಲ ಹಂತದ ಎಲ್ಲ ಕಡೆ ಸಂಚಾರ ಆರಂಭವಾಗುತ್ತದೆಯೇ’ ಎಂದು ಖರೋಲಾ ಅವರನ್ನು ಪ್ರಶ್ನಿಸಲಾಯಿತು.

‘ಅಷ್ಟೆಲ್ಲ ಕಾಯಬೇಕಿಲ್ಲ. ಅದಕ್ಕೂ ಮೊದಲೇ ಶುರುವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಹಾಗದ್ದರೆ ಅಕ್ಟೋಬರ್‌ಗೆ ಶುರು ಮಾಡುತ್ತೀರಾ’ ಎಂದಾಗ, ‘ಇಲ್ಲಪ್ಪ, ಅದಕ್ಕೂ ಮೊದಲೇ ಮಾಡುತ್ತೇವೆ’ ಎಂದೂ ಸಮಜಾಯಿಷಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT