ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ವರ್ಷಕ್ಕೂ ಮೊದಲೇ 8.2 ಲಕ್ಷ ಮಂದಿ ವಿವಾಹ!

ಬಾಲ್ಯ ವಿವಾಹ: ದಶಕದಲ್ಲಿ 3 ಸಾವಿರ ಬಾಲಕಿಯರು ಹಸೆಮಣೆಗೆ
Last Updated 3 ಜೂನ್ 2016, 0:00 IST
ಅಕ್ಷರ ಗಾತ್ರ

ಮೈಸೂರು: ರಾಜ್ಯದಲ್ಲಿರುವ 3.4 ಕೋಟಿ ವಿವಾಹಿತರಲ್ಲಿ 8.26 ಲಕ್ಷ ಮಂದಿ ಹತ್ತು ವರ್ಷ ತುಂಬುವ ಮುಂಚೆಯೇ ವಿವಾಹವಾಗಿರುವ ಸಂಗತಿ ಬೆಳಕಿಗೆ ಬಂದಿದೆ.

18 ವರ್ಷ ತುಂಬುವ ಮುನ್ನ 23.3 ಲಕ್ಷ ಮಂದಿ ಸಪ್ತಪದಿ ತುಳಿದಿದ್ದಾರೆ. ಜನಗಣತಿ ಆಯೋಗ ಈಚೆಗೆ ಬಿಡುಗಡೆ ಮಾಡಿರುವ 2011ರ ಜನಗಣತಿಗೆ ಸಂಬಂಧಿಸಿದ ‘ಕರ್ನಾಟಕದಲ್ಲಿ ವಿವಾಹಿತರ ಒಟ್ಟು ಸಂಖ್ಯೆ ಹಾಗೂ ಆ ಸಂದರ್ಭದಲ್ಲಿ ಅವರ ವಯಸ್ಸು’ ಎಂಬ ವರದಿಯಲ್ಲಿ ಈ ಅಂಶ ಗೊತ್ತಾಗಿದೆ.

1.86 ಕೋಟಿ ವಿವಾಹಿತ ಮಹಿಳೆಯರಲ್ಲಿ ಇನ್ನೂ 10 ವರ್ಷ ತುಂಬದ 5.75 ಲಕ್ಷ ಮಂದಿ ವಿವಾಹ ಜೀವನಕ್ಕೆ ಕಾಲಿಟ್ಟಿರುವುದು ವರದಿಯಲ್ಲಿ ನಮೂದಾಗಿದೆ. ಕಳೆದ ದಶಕವೊಂದರಲ್ಲೇ 3 ಸಾವಿರ ಬಾಲಕಿಯರು ವಿವಾಹವಾಗಿದ್ದಾರೆ. ಅಭಿಯಾನ ಹಾಗೂ ಜಾಗೃತಿ ಕಾರ್ಯಕ್ರಮಗಳ ಮೂಲಕ ಈ ಪಿಡುಗು ಕ್ರಮೇಣ ಕಡಿಮೆಯಾಗುತ್ತಿದ್ದರೂ ಬಾಲ್ಯ ವಿವಾಹಿತರು ಹೆಚ್ಚಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ರಾಜಸ್ತಾನ ಮೊದಲ ಸ್ಥಾನ ಹೊಂದಿದೆ.

ಮೈಸೂರು ಜಿಲ್ಲೆಯೊಂದರಲ್ಲಿ 12,600 ಸಾವಿರ ಪುರುಷರು ಹಾಗೂ 29,200 ಸಾವಿರ ಮಹಿಳೆಯರು 10 ವರ್ಷ ತುಂಬುವ ಮೊದಲೇ ಮದುವೆಯಾಗಿದ್ದಾರೆ. ಕಳೆದ ದಶಕದಲ್ಲಿ 66 ಬಾಲಕಿಯರು ಹಾಗೂ 8 ಬಾಲಕರು ಸಪ್ತಪದಿ ತುಳಿದಿದ್ದಾರೆ.

‘ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಡೆಯುವ ಬಗ್ಗೆ ನಿತ್ಯ ದೂರುಗಳು ಬರುತ್ತಿರುತ್ತವೆ. ಆ ಜಾಡು ಹಿಡಿದು ಬಾಲ್ಯ ವಿವಾಹ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದೇವೆ. ಜಾಗೃತಿ ಶಿಬಿರ ಆಯೋಜಿಸಿದ್ದೇವೆ. ಕಾನೂನಿನ ಅರಿವು ಮೂಡಿಸುತ್ತಿದ್ದೇವೆ. ಈಚಿನ ವರ್ಷಗಳಲ್ಲಿ ಆ ಸಂಖ್ಯೆ ಕಡಿಮೆಯಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೆ.ರಾಧಾ ಪ್ರತಿಕ್ರಿಯಿಸಿದರು.

‘ವಿವಾಹವಾಗಲು ಕಾಯ್ದೆ ಪ್ರಕಾರ ಮಹಿಳೆಯರಿಗೆ 18 ವರ್ಷ ಹಾಗೂ ಪುರುಷರಿಗೆ 21 ವರ್ಷ ತುಂಬಿರಬೇಕು. ಹಲವು ಕಾನೂನುಗಳಿದ್ದರೂ ಇಷ್ಟು ಪ್ರಮಾಣದಲ್ಲಿ ಬಾಲ್ಯ ವಿವಾಹ ನಡೆದಿರುವುದು ಆತಂಕಕಾರಿ ವಿಷಯ. ನೂರಾರು ವರ್ಷಗಳಿಂದ ಸುಧಾರಣೆ ಬಗ್ಗೆ ಮಾತನಾಡುತ್ತಲೇ ಇದ್ದೇವೆ. ಬಾಲ್ಯ ವಿವಾಹ ತಡೆಯುವ ಸಂಬಂಧ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್‌ ನೇತೃತ್ವದ ಸಮಿತಿ ನೀಡಿರುವ ವರದಿ ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಮುಂದಿನ ದಿನಗಳಲ್ಲಿ ಇಂಥ ಪ್ರಕರಣ ತಡೆಯಬಹುದು. ಮೊದಲು ಮಕ್ಕಳು ಶಾಲೆ ತೊರೆಯದಂತೆ ನೋಡಿಕೊಳ್ಳಬೇಕು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ನಿರಂಜನಾರಾಧ್ಯ ತಿಳಿಸಿದರು.

‘ಹೈಟೆಕ್ ಸಿಟಿ’ ಎನಿಸಿಕೊಂಡಿರುವ ರಾಜಧಾನಿ ಬೆಂಗಳೂರಿನಲ್ಲಿಯೇ ಬಾಲ್ಯ ವಿವಾಹಿತರು ಅಧಿಕ. 2011ರ ವರೆಗಿನ ಜನಗಣತಿ ಪ್ರಕಾರ ಇಲ್ಲಿರುವ 55.1 ಲಕ್ಷ ವಿವಾಹಿತರಲ್ಲಿ 1.03 ಲಕ್ಷ ಮಂದಿ ಹತ್ತು ವರ್ಷ ತುಂಬುವ ಮುನ್ನವೇ ವಿವಾಹವಾಗಿರುವುದು ವರದಿಯಲ್ಲಿ ಉಲ್ಲೇಖ ವಾಗಿದೆ ಎಂದರು ‘ಆಪ್ಸಾ’ ಸಂಘಟನೆಯ ಲಕ್ಷಪತಿ.
*
ಬಾಲ್ಯ ವಿವಾಹ ಈಗ ಕಡಿಮೆಯಾಗಿದ್ದರೂ ಒಟ್ಟಾರೆ ಅಂಕಿ–ಅಂಶಗಳು ಬೆಚ್ಚಿಬೀಳಿಸುವಂತಿವೆ. ‘ಶಾಲೆ ಕಡೆ ನನ್ನ ನಡೆ’ ಎಂಬ ಅಭಿಯಾನ ಹಮ್ಮಿಕೊಂಡಿದ್ದು, ನಿಯಂತ್ರಣಕ್ಕೆ ಬರಬಹುದು.
-ಕೃಪಾ ಆಳ್ವ ,
ಅಧ್ಯಕ್ಷೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT