ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

183 ದಿನಗಳ ಸಂಶೋಧನೆ, 49 ದಿನದಲ್ಲಿ ಪಿಎಚ್‌.ಡಿ

Last Updated 26 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ತುಮಕೂರು: ಆಹಾರ ವಿಜ್ಞಾನದಲ್ಲಿ ಪಿಎಚ್‌.ಡಿ ಪಡೆದಿರುವ ಎಸ್‌.ಜೆ.­ಪ್ರಶಾಂತ್ ಸಂಶೋಧನೆಗೆ ತೆಗೆದು­ಕೊಂಡದ್ದು 183 ದಿನ. ಈ ‘ಮಹಾ­ಪ್ರಬಂಧ’ ಸಲ್ಲಿಕೆಯಾದ ಕೇವಲ 49 ದಿನಗಳಲ್ಲೇ ಡಾಕ್ಟರೇಟ್‌ ನೀಡಲಾಗಿದೆ.

ಹೋಟೆಲ್‌ ಉದ್ಯಮಿ ಸದಾನಂದ ಮಯ್ಯ ಅವರೊಂದಿಗಿನ ಕುಲಪತಿ ಶರ್ಮಾ ಅವರ ಗೆಳೆತನ ಈ ಅತಿವೇಗದ ಡಾಕ್ಟರೇಟ್ ನೀಡಿಕೆಗೆ ಕಾರಣ ಎಂಬ ಆರೋಪ­ಗಳು ಕೇಳಿಬರುತ್ತಿವೆ.

ಶರ್ಮಾ ಕುಲಪತಿಯಾಗಿದ್ದಾಗ ತುಮ­ಕೂರು ವಿ.ವಿ.ಯು ಸದಾನಂದ ಮಯ್ಯ ಅವರಿಗೆ ಗೌರವ ಡಾಕ್ಟರೇಟ್‌, ಡಿಎಸ್‌ಸಿ ಪದವಿ ಹಾಗೂ ಗೌರವ ಪ್ರಾಧ್ಯಾಪಕ ಹುದ್ದೆ ನೀಡಿದೆ. ಜತೆಗೆ ಬೆಂಗಳೂರಿ­ನಲ್ಲಿರುವ ಸದಾನಂದ ಮಯ್ಯರ ಸಂಸ್ಥೆಗೆ (ಡಾ.ಪಿ.ಸದಾನಂದ ಮಯ್ಯ ಸೆಂಟರ್ ಫಾರ್ ಫುಡ್‌ ಸೈನ್ಸ್ ಆ್ಯಂಡ್‌ ರಿಸರ್ಚ್) ತುಮಕೂರು ವಿಶ್ವವಿದ್ಯಾನಿಲಯದ ಸಂಶೋಧನಾ ಕೇಂದ್ರದ ಮಾನ್ಯತೆ ಕೊಡಲಾಗಿದೆ.

ಈ ಮಾನ್ಯತೆ ಒದಗಿದ ನಂತರ ಅಲ್ಲಿ ಎಸ್‌.ಜೆ.ಪ್ರಶಾಂತ್ ಅವರು ಡಾ.ವೆಂಕಟ­ರಾವ್ ಹರಿಹರನ್ ಪೊಟ್ಟಿ ಅವರ ಮಾರ್ಗದರ್ಶನದಲ್ಲಿ ಆಹಾರ ವಿಜ್ಞಾನ­ದಲ್ಲಿ ಸಂಶೋಧನೆಗೆ ಹೆಸರು ನೋಂದಾಯಿಸಿ­ಕೊಂಡಿದ್ದರು. ನಂತರ ಮೂರೇ  ತಿಂಗಳೊಳಗೆ ಅಲ್ಲಿಂದ ವಿಶ್ವವಿದ್ಯಾಲಯಕ್ಕೆ ಸಂಶೋಧನೆಯನ್ನು ವರ್ಗಾಯಿಸಿಕೊಂಡಿದ್ದಾರೆ.

ವಿ.ವಿ. ದಾಖಲೆಗಳ ಪ್ರಕಾರ ಪ್ರಶಾಂತ್ 2012ರ ಜೂನ್ 19ರಂದು ಸಂಶೋಧನೆ ನಡೆಸಲು ಅಧಿಕೃತವಾಗಿ ನೋಂದಣಿ­            ಯಾಗಿದ್ದಾರೆ. ಇದಾದ ಮೂರು ತಿಂಗಳಲ್ಲೇ ಅಂದರೆ 2012ರ ಸೆಪ್ಟೆಂಬರ್‌ 7ರಂದು ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಿ.ಸುರೇಶ್ ಅವರು ತಮ್ಮನ್ನು ಸಂಶೋಧನಾ ಮಾರ್ಗದರ್ಶಕರಾಗಿ ಪರಿ­ಗಣಿಸುವಂತೆ ವಿ.ವಿ.ಗೆ ಅರ್ಜಿ ಸಲ್ಲಿಸಿದ್ದಾರೆ.

ಇದೇ ದಿನ ಸಭೆ ಸೇರುವ ಜೀವ ವಿಜ್ಞಾನದ ಸ್ನಾತಕೋತ್ತರ ಅಧ್ಯಯನ ಮಂಡಳಿ ಸಭೆ ಮುಂದೆ ಈ ಕೋರಿಕೆಯ ಅರ್ಜಿ ಇಡಲಾಗುತ್ತದೆ. ಡಾ.ಡಿ.ಸುರೇಶ್ ರಸಾಯನಶಾಸ್ತ್ರ ವಿಭಾ­ಗ­ದವರಾದರೂ ಅವರ ಅರ್ಜಿ  ಪರಿಶೀಲಿಸಿದ ಜೀವ ವಿಜ್ಞಾನದ ಸ್ನಾತಕೋತ್ತರ ಅಧ್ಯಯನ ಮಂಡಳಿಯು ಮಾರ್ಗದರ್ಶನ ಮಾಡಲು ಸುರೇಶ್‌ಗೆ ಅವಕಾಶ ನೀಡಬಹುದೆಂಬ ಶಿಫಾರಸು ಮಾಡಿದೆ.

ವಿಶೇಷವೆಂದರೆ ಇದೇ ದಿನವೇ ಸುರೇಶ್‌ ಅವರ ಅರ್ಜಿ ಮತ್ತು ಅವರಿಗೆ ಮಾರ್ಗದರ್ಶನ ಮಾಡಬಹುದೆಂಬ ಅಧ್ಯಯನ ಮಂಡಳಿಯ ಶಿಫಾರಸು ಪತ್ರ ಕುಲಪತಿ ಶರ್ಮಾ ಅವರ ಬಳಿಗೆ ಹೋಗುತ್ತದೆ. ಕುಲಪತಿ ಶರ್ಮಾ ಅವರೂ ಅದೇ ದಿನ (2012ರ ಸೆಪ್ಟೆಂಬರ್‌ 7) ತಮ್ಮ ಅನುಮೋದನೆ ನೀಡುತ್ತಾರೆ. ಕುಲಸಚಿವರ ಕಾರ್ಯಾ­ಲಯವೂ  ಅದೇ ದಿನವೇ  ಡಾ.ಡಿ.­ಸುರೇಶ್ ಅವರಿಗೆ ಮಾರ್ಗದರ್ಶಕ­ರಾಗಿ ಅನುಮತಿ ನೀಡಿದೆ.

ಡಾ. ಸುರೇಶ್‌ ಅವರಿಗೆ ಮಾರ್ಗ­ದರ್ಶಕ­ರಾಗಲು ಅನುಮತಿ ದೊರೆತ ಕೂಡಲೇ ಎಸ್‌.ಜೆ.ಪ್ರಶಾಂತ್‌ ಅವರು ಸದಾನಂದ ಮಯ್ಯ ಅವರ ಸಂಶೋಧನಾ ಕೇಂದ್ರದ ಮಾರ್ಗ­ದರ್ಶಕ­ರಾದ ಡಾ.ಪೊಟ್ಟಿ ಅವರಿಂದ ಬಿಡುಗಡೆ ಪಡೆಯುತ್ತಾರೆ. ತಕ್ಷಣವೇ ಸುರೇಶ್ ಮಾರ್ಗದರ್ಶಕರಾಗುತ್ತಾರೆ. ಇಷ್ಟು ವೇಗವಾಗಿ ಮಾರ್ಗದರ್ಶಕರು ಸಿಕ್ಕ ನಂತರ ಅಷ್ಟೇ ವೇಗದಲ್ಲಿ ಸಂಶೋ­ಧನೆ­­ಯೂ ಪೂರ್ಣ­ಗೊಳ್ಳುತ್ತದೆ.

ತಮ್ಮದಲ್ಲದ ಕ್ಷೇತ್ರದಲ್ಲಿ ಡಾ.­ಸುರೇಶ್‌ ಮಾರ್ಗದರ್ಶನ ಮಾಡಿ­ದ್ದಾರೆ. ಪ್ರಶಾಂತ್‌ ತಮ್ಮ ಸಂಶೋಧನಾ ಪ್ರಬಂಧವನ್ನು ಆರು ತಿಂಗಳಲ್ಲಿ (2013ರ ಮಾರ್ಚ್ 11) ಸಲ್ಲಿಸಿ­ದ್ದಾರೆ. ಈ ಪ್ರಬಂಧವನ್ನು ಬೆಂಗಳೂರು ಎಂ.ಎಸ್.­ರಾಮಯ್ಯ ಅಡ್ವಾನ್ಸ್‌ಡ್ ಲರ್ನಿಂಗ್ ಸೆಂಟರ್‌ನ ಡಾ.ಕೆ.ಎನ್.­ಚಿದಾನಂದಮೂರ್ತಿ  ಮತ್ತು ಅಸ್ಸಾಂನ ಡಾ.ರುದ್ರಗೌಡ ಪೊಲೀಸ್‌ ಗೌಡ ಮೌಲ್ಯಮಾಪನ ಮಾಡಿದ್ದಾರೆ.

ಸುರೇಶ್‌ ಮಾರ್ಗದರ್ಶನದಲ್ಲಿ ಒಟ್ಟು 183 ದಿನಗಳಲ್ಲಿ ಪ್ರಶಾಂತ್‌ ಸಂಶೋ­ಧನೆ ನಡೆಸಿ ಪ್ರಬಂಧ ಸಿದ್ಧಪಡಿಸಿ­ದ್ದಾರೆ. ವಿ.ವಿ ಕೇವಲ  49 ದಿನಗಳಲ್ಲಿ ಮೌಲ್ಯ­ಮಾಪನ ನಡೆಸಿ ಪಿಎಚ್‌.ಡಿ ನೀಡಿದೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಸದಾನಂದ ಮಯ್ಯ ಮತ್ತು ಡಾ.ಸುರೇಶ್‌ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇಬ್ಬರೂ ಸೇರಿ 3 ಪುಸ್ತಕ  ಬರೆದಿದ್ದಾರೆ. ಈ ಮೂರೂ ಪುಸ್ತಕಗಳನ್ನು ತುಮಕೂರು ವಿ.ವಿ ಪ್ರಕಟಿಸಿದೆ. ಆದರೆ, ಆ ಯಾವ ಪುಸ್ತಕ­ಗಳೂ ಈಗ ವಿಶ್ವವಿದ್ಯಾಲಯ ಹಾಗೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.

ಸುರೇಶ್ ಮತ್ತು ಮಯ್ಯ ಇಬ್ಬರೂ ಒಟ್ಟು 6 ನಿಯತಕಾಲಿಕೆಗಳಲ್ಲಿ ಸಂಶೋ­ಧನಾ ಲೇಖನ ಬರೆದಿದ್ದಾರೆ. ಇವುಗಳಲ್ಲಿ ಎರಡು ಲೇಖನಗಳನ್ನು ತುಮಕೂರು ವಿ.ವಿ ವಿಜ್ಞಾನ ನಿಯತಕಾಲಿಕೆ ಪ್ರಕಟಿಸಿದೆ. ಈ ನಿಯತಕಾಲಿಕೆ ಶರ್ಮಾ ಅವರು ವಿ.ವಿ.ಯಲ್ಲಿ ಆರಂಭಿಸಿದ್ದೇ ತಮಗೆ ಬೇಕಾದವರ ಲೇಖನಗಳನ್ನು ಪ್ರಕಟಿಸುವ ಏಕೈಕ ಉದ್ದೇಶದಿಂದ ಎಂಬ ಆರೋಪಗಳಿವೆ.

ಮಯ್ಯ ಮತ್ತು ಸುರೇಶ್‌ ಬರೆದಿರುವ ಮೂರು ಸಂಶೋಧನಾ ಲೇಖನಗಳನ್ನು ಕುಲಪತಿ ಶರ್ಮಾ ಮತ್ತು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ ನಿರ್ದೇಶಕ­ರಾಗಿದ್ದ ಕಾವೇರಿಯಪ್ಪ ಸಂಪಾದಿಸಿ ಪ್ರಕಟಿಸಿದ್ದಾರೆ. ಇದನ್ನು ಉನ್ನತ ಶಿಕ್ಷಣ ಪರಿಷತ್ ಪ್ರಕಟಿಸಿದೆ.

ಮಯ್ಯ ಅವರು ತುಮಕೂರು ವಿಶ್ವವಿದ್ಯಾಲಯದ ಕೆಲವು ಪುಸ್ತಕಗಳಿಗೆ ಪ್ರಧಾನ ಸಂಪಾದಕರೂ ಆಗಿದ್ದಾರೆ. ಇಂತಹ ಅನುರೂಪದ ಬಾಂಧವ್ಯ ಹೊಂದಿರು­ವುದರಿಂದಲೇ ಶರ್ಮಾ– -ಮಯ್ಯ-– ಸುರೇಶ್– -ಪ್ರಶಾಂತ್ ಒಬ್ಬರಿಗೊಬ್ಬರು ನೆರವಾಗಿದ್ದಾರೆ. 
ಮುಂದಿನ ಸಂಚಿಕೆಯಲ್ಲಿ: ಗೌರವ ಡಾಕ್ಟರೇಟ್‌ ನೀಡಿಕೆಯಲ್ಲೂ ಜಾತಿ ವಾಸನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT