ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ವರ್ಷದಿಂದ ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರಿಲ್ಲ!

Last Updated 20 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ, ಆದರೆ ಹೆಮ್ಮೆ­ಪಡ­ಬಹುದಾದ ಕಾರಣಕ್ಕಲ್ಲ! ಅಧ್ಯಕ್ಷರಿಲ್ಲದೆ ಎರಡು ವರ್ಷ, ಎರಡು ತಿಂಗಳು ಪೂರೈಸಿದ್ದಕ್ಕಾಗಿ.

1961ರಲ್ಲಿ ಈಗಿನ ಹೆಸರು ಮತ್ತು ಸ್ವರೂಪ ಪಡೆದು­­ಕೊಂಡ ಸಾಹಿತ್ಯ ಅಕಾಡೆಮಿ, ಸತತ ಎರಡು ವರ್ಷ­ಗಳ ಕಾಲ ಅಧ್ಯಕ್ಷರೇ ಇಲ್ಲದ ಪರಿಸ್ಥಿತಿ ಯಾವತ್ತೂ ಎದುರಿಸಿರಲಿಲ್ಲ.

1961ರವರೆಗೆ ಕರ್ನಾಟಕ ಸಾಹಿತ್ಯ ಅಕಾ­ಡೆ­ಮಿ ‘ಸಂಸ್ಕೃತಿ ಪ್ರಸಾರ ಇಲಾಖೆ’ ಎಂಬ ಹೆಸರು ಹೊಂದಿತ್ತು. 1961ರಲ್ಲಿ ಅದು ಈಗಿನ ಹೆಸರು ಪಡೆದುಕೊಂಡಿತು. ಹಿಂದೆ ಗೀತಾ ನಾಗ­ಭೂಷಣ ಅವರ ಅಧಿಕಾರಾವಧಿ ಪೂರ್ಣಗೊಂಡ ನಂತರ ಅಕಾಡೆಮಿಗೆ ಒಂದು ವರ್ಷ ಅಧ್ಯಕ್ಷರ ನೇಮಕ ಆಗಿರಲಿಲ್ಲ.
ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಪ್ರೊ.­ಎಂ.­ಎಚ್‌. ಕೃಷ್ಣಯ್ಯ ಅವರ ಅಧಿಕಾರಾವಧಿ 2011­ರ ನವೆಂಬರ್ 26ರಂದು ಕೊನೆಗೊಂಡಿತು. ಈ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಇತ್ತು. ಆ ಸರ್ಕಾ­­ರದ ಅವಧಿ ಮುಗಿಯುವ ವರೆಗೂ ಹೊಸ ಅಧ್ಯಕ್ಷರ ನೇಮಕ ಆಗಲಿಲ್ಲ.

ನಂತರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 2013ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂತು, ಉಮಾಶ್ರೀ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವ­ರಾದರು. ‘ಅಕಾಡೆಮಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಶೀಘ್ರವೇ ನೇಮಕ ಮಾಡ­ಲಾಗುವುದು’ ಎಂದು ಸಚಿವರು ಹಲವು ಬಾರಿ ಹೇಳಿದ್ದಾರೆ. ಆದರೆ ಕಾರ್ಯರೂಪಕ್ಕೆ ಬಂದಿಲ್ಲ.

‘ನಿಧಾನದ್ರೋಹ’: ‘ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿ­ಸಿ­ದಂತೆ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯವನ್ನು ನಿಧಾನ­ದ್ರೋಹ ಎನ್ನಬೇಕು. ಅಕಾಡೆಮಿಗಳ ಅಧ್ಯಕ್ಷ, ಸದಸ್ಯರ ಸ್ಥಾನವನ್ನು ಯಾವತ್ತೂ ಖಾಲಿ ಬಿಡ­­­­ಬಾರದು. ಹೊಸಬರು ನೇಮಕ ಆಗು­ವ­ವರೆಗೂ ಹಳಬರನ್ನೇ ಮುಂದುವರಿಸುವ ಪದ್ಧತಿ ಜಾರಿಗೆ ಬರಬೇಕು’ ಎಂದು ಸಾಹಿತಿ ಪ್ರೊ. ಬರ­ಗೂರು ರಾಮಚಂದ್ರಪ್ಪ ‘ಪ್ರಜಾವಾಣಿ’ಗೆ ಪ್ರತಿ­ಕ್ರಿಯೆ ನೀಡಿದರು.

ಇದೊಂದೇ ಅಲ್ಲ, ಬೇರೆ ಅಕಾಡೆಮಿಗಳ ಅಧ್ಯಕ್ಷ, ಸದಸ್ಯ­ರಿಂದ ರಾಜೀನಾಮೆ ಪಡೆದಷ್ಟೇ ವೇಗವಾಗಿ ಹೊಸ­­­ಬರ ನೇಮಕ ಆಗಬೇಕಿತ್ತು ಎಂದು ಅವರು ಅನಿಸಿಕೆ ವ್ಯಕ್ತಪಡಿ­ಸಿದರು. ಸಾಹಿತ್ಯ ಅಕಾಡೆಮಿ ಸೇರಿ­ದಂತೆ ವಿವಿಧ ಅಕಾ­­ಡೆಮಿಗಳ ಅಧ್ಯಕ್ಷರ ಸ್ಥಾನಕ್ಕೆ ಸೂಚಿ­ಸಿರುವ ಹೆಸ­ರು­ಗಳಿಗೆ ಸರ್ಕಾರದ ಮಟ್ಟದಲ್ಲಿ ಅನು­ಮೋದನೆ ದೊರೆತಿದೆ. ಆದರೆ ಸದಸ್ಯರ ನೇಮಕ­ವನ್ನೂ ಇದರ ಜೊತೆಗೇ ಮಾಡಬೇಕು ಎಂಬ ಆಲೋಚನೆ ಇರುವುದರಿಂದ ವಿಳಂಬ ಆಗು­ತ್ತಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಖರ್ಚಾಗದೆ ಉಳಿದ ₨ 1 ಕೋಟಿ

ಅಕಾಡೆಮಿಯ ಚಿನ್ನದ ಹಬ್ಬ ಆಚರಣೆಗೆ ಅಂದಾಜು ₨ 30 ಲಕ್ಷ ಬೇಕು ಎಂದು ಪ್ರೊ. ಕೃಷ್ಣಯ್ಯ ಅವರ ಅವಧಿಯಲ್ಲಿ  ಪ್ರಸ್ತಾವನೆ ಸಲ್ಲಿಸ­ಲಾಗಿತ್ತು. ಮುಂದೆ ಕೆಲವೇ ದಿನಗಳಲ್ಲಿ ಅವರ ಅಧಿಕಾರಾವಧಿ ಕೊನೆಗೊಂಡಿತು. ಚಿನ್ನದ ಹಬ್ಬಕ್ಕೆ ಸಂಬಂಧಿಸಿದ ಯೋಜನೆಗಳು ಅನುಷ್ಠಾನಕ್ಕೆ ಬರಲಿಲ್ಲ.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಅಕಾ­ಡೆಮಿಗೆ ದೊರೆತ ₨ 80 ಲಕ್ಷ ಅನುದಾನ ಸೇರಿದಂತೆ ಒಟ್ಟು ₨ 1 ಕೋಟಿ ಖರ್ಚಾಗದೆ ಉಳಿ­ದಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.ಅಕಾಡೆಮಿಯ ಮೂಲಕ ಜಾರಿಗೊಳಿಸಲು ಯೋಜಿಸಿದ್ದ ‘ಪ್ರಾಚೀನ ಕಾವ್ಯದ ಓದು’ ಯೋಜನೆಯನ್ನು ಕೈಗೆತ್ತಿಕೊಳ್ಳಲು ಹಂಪಿ ಕನ್ನಡ ವಿಶ್ವವಿದ್ಯಾಲಯ ಮುಂದೆ ಬಂದಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT