ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2012 ನನ್ನ ಇಷ್ಟದ ಪುಸ್ತಕ

Last Updated 29 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ವೈದ್ಯರ ವಿಶಿಷ್ಟ ಕಥೆಗಳು

   2012ರಲ್ಲಿ ಹಿರಿಯ ಲೇಖಕ ಶ್ರೀನಿವಾಸ ವೈದ್ಯರ ಕಥಾ ಸಂಕಲನ `ಕಪ್ಪೆ ನುಂಗಿದ ಹುಡುಗ' ನನ್ನ ಮನ ಮೆಚ್ಚಿದ ಪುಸ್ತಕ. ಇಲ್ಲಿ ಐದು ನೀಳ್ಗತೆಗಳಿವೆ. ವೈದ್ಯರು ಕಥಾ ಬರವಣಿಗೆಯಲ್ಲಿ ಉತ್ತರ ಕರ್ನಾಟಕದ ದೇಶಸ್ಥ ಬ್ರಾಹ್ಮಣರ ಆಡುಮಾತಿನ ಶೈಲಿಯೊಂದನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ರೂಢಿಸಿಕೊಂಡಿದ್ದಾರೆ.

ಉತ್ತರ ಕರ್ನಾಟಕದ ಅವರು ಆರಿಸಿಕೊಳ್ಳುವ ಜೀವನದ ಸನ್ನಿವೇಶಕ್ಕೆ ಆ ಭಾಷೆ ಬಹು ಅಚ್ಚುಕಟ್ಟಾಗಿ ಹೊಂದಿಕೊಳ್ಳುತ್ತದೆ. ಇಲ್ಲಿ `ಕೆಲವಂ ಬಲ್ಲವರಿಂದ' ಕಥೆಯಲ್ಲಿ ಬಾಲಿಶನೊಬ್ಬನ ಜಗತ್ತು ಅರಳಿದರೆ `ಉದ್ಯೋಗಪರ್ವ'ದಂಥ ಕಥೆಯಲ್ಲಿ ಮುಂಬಯಿಯ ಕಾರ್ಪೊರೇಟ್ ಜಗತ್ತಿನ ಸಂಕೀರ್ಣತೆಯೊಂದು ಕಥಾರೂಪವನ್ನು ಪಡೆಯುತ್ತದೆ. ಇದರಿಂದ ವೈದ್ಯರ ಕಥಾಬೀಸಿನ ಹರಹು ಗಮನಕ್ಕೆ ಬರುತ್ತದೆ.

`ತರಬೇತಿಯ ದಿನಗಳು' ಕಥೆಯಲ್ಲಿ ಐವತ್ತರ ದಶಕದ ಧಾರವಾಡ ಮತ್ತು ಮುಂಬಯಿಯ ಜೀವನ ಕ್ರಮದ ಚಿತ್ರದೊಂದಿಗೆ ಮುಕ್ತ ಪ್ರೇಮಕ್ಕೆ ಅವಕಾಶವಿಲ್ಲದಾಗ ಉಂಟಾಗುವ ಆ ಕಾಲದ ನಿರಾಶೆಯ ಚಿತ್ರವಿದೆ. `ಕಪ್ಪೆ ನುಂಗಿದ ಹುಡುಗ' ಕಥೆಯಲ್ಲಿ ಜೀವನದಲ್ಲಿ ಮೇಲೆ ಬರಬೇಕೆಂದು ಪ್ರಯತ್ನಿಸುವವನಿಗೆ ಅವನ ಗೌಪ್ಯ ಪ್ರೇಮ ಪ್ರಕರಣವೇ ಅಡ್ಡಿಯಾಗುವ ನಿರಾಶೆಯ ಚಿತ್ರಣವಿದೆ.

ಇಲ್ಲಿ ಬರುವ ಕೋರ್ಟಿನ ಚಿತ್ರಣ ಮಾತ್ರ ಬಹುವಾಸ್ತವಿಕತೆಯಿಂದ ಕೂಡಿದೆ. ಕಥೆಗಾರನಾದ ನನಗೆ ಇಲ್ಲಿಯ ಕೆಲವು ಕಥೆಗಳು ಭಾಷೆಯ ಮೂಲಕ ತಾವು ಹಬ್ಬಿಸುವ ನಿರೀಕ್ಷೆಗಳನ್ನು ಪೂರ್ತಿಯಾಗಿ ಪೂರೈಸುವುದಿಲ್ಲವೆಂತಲೂ ಅನ್ನಿಸಿದೆ. ಆದರೆ ಕೇವಲ `ರಚನೆ'ಗಳ ಪರಿಧಿಯನ್ನು ದಾಟಿ `ಕೃತಿ'ಯಾಗುವ ಈ ಕಥೆಗಳನ್ನು ನನ್ನ ಮನಸ್ಸು ಮೆಚ್ಚಿಕೊಂಡಿದೆ.
-ಮಾಧವ ಕುಲಕರ್ಣಿ

ಕಥೆಯ ಚೌಕಟ್ಟಿನಲ್ಲಿ ಅದ್ಭುತ ಕಲಾತ್ಮಕತೆ

  ಈ ವರ್ಷ ಹಲವು ಭಾಷೆಗಳ ಒಳ್ಳೆಯ ಪುಸ್ತಕಗಳನ್ನು ಓದಿದ್ದರೂ ವರ್ಷದ ಕೊನೆಗೆ ಬಂದ ದೇವನೂರ ಮಹಾದೇವರ `ಎದೆಗೆ ಬಿದ್ದ ಅಕ್ಷರ' ಮೆಲ್ಲನೆ ನನ್ನನ್ನು ಆವರಿಸಿಕೊಳ್ಳತೊಡಗಿತು. ಇಪ್ಪತ್ತನೆಯ ಶತಮಾನ ಹಾಗೂ ಅದರಾಚೆಗೂ ಈ ದೇಶದ ಆರೋಗ್ಯಕರ ಪ್ರಜ್ಞೆಯನ್ನು ರೂಪಿಸುತ್ತಿರುವ ಗಾಂಧಿ, ಅಂಬೇಡ್ಕರ್, ಲೋಹಿಯಾ ಕಳೆದ ನಲವತ್ತು ವರ್ಷಗಳಲ್ಲಿ ಮಹಾದೇವರ ಮೂಲಕ ಪಡೆದ ಹೊಸ ಆಯಾಮಗಳು ಈ `ಮಾತು-ಬರಹ'ಗಳಲ್ಲಿವೆ.

ಈ ಮೂರೂ ಚಿಂತಕರು ಬಳಸದ ಕಥೆಯ ಚೌಕಟ್ಟಿನಲ್ಲಿ ಮಹಾದೇವ ಸಾಧಿಸಿರುವ ಅದ್ಭುತ ಕಲಾತ್ಮಕತೆ ಹಾಗೂ ವ್ಯವಧಾನದ ಹುಡುಕಾಟ ಕೂಡ ಇಲ್ಲಿನ ಚಿಂತನೆಗಳು ನಿರಂತರ ಒಳಪರೀಕ್ಷೆಯಿಂದ ವಿಕಾಸಗೊಳ್ಳಲು ನೆರವಾದಂತಿವೆ.

ಚಳವಳಿಗಳ ಜೊತೆಜೊತೆಗೇ ಯೋಚಿಸಿದ ಮಹಾದೇವರ ಚಿಂತನೆಗಳ ಭಿತ್ತಿಯಲ್ಲಿ ಹಲವು ತಾತ್ವಿಕರ ಸಿದ್ಧಾಂತಗಳು ಇದ್ದರೂ ಅವು ಎದ್ದು ಕಾಣದೆ ಒಳಗೇ ಹರಿಯುತ್ತವೆ. ನೇರ ಗದ್ಯಕ್ಕಿಂತ ಕತೆ, ರೂಪಕ, ನಿಜ ಘಟನೆಗಳ ಮೂಲಕ ಸತ್ಯ ಹುಡುಕುವ ಅವರ ಚಿಂತನೆಯ ಮಾದರಿ ಓದುಗರಲ್ಲಿ ನಿಧಾನಕ್ಕೆ ಬೆಳೆದು, ನೆಲೆಸಿ ಆಲೋಚಿಸುವಂತೆ ಮಾಡಬಲ್ಲದು.

ಜ್ಞಾನದ ಬಲದಿಂದ ವಾದಿಸುವುದಕ್ಕಿಂತ ಸತ್ಯದ ಬಲದಿಂದ ಮನ ಒಲಿಸಿಕೊಳ್ಳುವ ಒಳ ಆಸೆ ಇರುವ ಈ ಬರಹಗಳಲ್ಲಿ ಗಾಂಧೀಜಿ ಹಾಗೂ ಬುದ್ಧರ ದನಿ ಹೆಚ್ಚು ಕಂಡರೆ ಆಶ್ಚರ‌್ಯವಲ್ಲ. ದೇವನೂರರು ಸಾಹಿತ್ಯ ಕುರಿತು ಮಾಡುವ ಚಿಂತನೆ, ಲೇಖಕರ ಆಯ್ಕೆಗಳು, `ಮಲೆಗಳಲ್ಲಿ ಮದುಮಗಳು ಶತಮಾನದ ಕೃತಿ' ಎಂಬ ನಿಲುವು -ಇವೆಲ್ಲ ಅವರ ಸಾಹಿತ್ಯಕ ಆಯ್ಕೆ, ಆದ್ಯತೆಗಳನ್ನು ಖಚಿತವಾಗಿ ಹೇಳುತ್ತವೆ.

ಅದಕ್ಕಿಂತ ಮುಖ್ಯವಾಗಿ ಅವರ ಸಾಮಾಜಿಕ, ಸಾಂಸ್ಕೃತಿಕ ಗ್ರಹಿಕೆಗಳು ಹಾಗೂ ಚಳವಳಿಗಳನ್ನು ಮುನ್ನಡೆಸುವುದನ್ನು ಕುರಿತ ಅವರ ನಿಸ್ವಾರ್ಥ ಚಿಂತನೆಗಳು ಕರ್ನಾಟಕವನ್ನು ಸದಾ ಎಚ್ಚರದಲ್ಲಿಡಬಲ್ಲವು. ಈ ಬರಹಗಳಲ್ಲಿರುವ ಅನುಕಂಪ, ನಿಷ್ಠುರತೆ, ದುಃಖ, ಒಳನೋಟಗಳು ಬಹುಕಾಲ ಕೇಳುಗರ, ಓದುಗರ ನೋಟಗಳನ್ನು ತಿದ್ದಿವೆ; ತಿದ್ದಬಲ್ಲವು. ಮಹಾದೇವರ ಚಿಂತನೆಯ ಪ್ರಾಮಾಣಿಕತೆ, ಆಳವಾದ ಆಲೋಚನೆ ಹಾಗೂ ತಾವು ಬಳಸುವ ಶಬ್ದದಲ್ಲಿ ಹುಸಿಯನ್ನು ನಿಯಂತ್ರಿಸುವ ಎಚ್ಚರ ಕೂಡ ವಿಶಿಷ್ಟವಾಗಿವೆ.

`ಎದೆಗೆ ಬಿದ್ದ ಅಕ್ಷರ'ದಲ್ಲಿ ಈ ಕಾಲದ ಹಲವು ಬಿಕ್ಕಟ್ಟುಗಳಿಗೆ ಕನ್ನಡದ ದೊಡ್ಡ ಲೇಖಕನೊಬ್ಬ ಕಾಲಕಾಲಕ್ಕೆ ಕಂಡುಕೊಂಡಿರುವ ಉತ್ತರಗಳನ್ನು ಒಂದು ವ್ಯಾಪಕ ಸಿದ್ಧಾಂತದ ಚೌಕಟ್ಟಿಗೆ ತಂದು ಕನ್ನಡಿಗರ ಎದೆಗೆ ಮತ್ತೆ ದಾಟಿಸುವ ಅಗತ್ಯವೂ ಇದೆ. ಗಾಂಧೀಜಿಯವರ `ಹಿಂದ್‌ಸ್ವರಾಜ್' ಹಾಗೂ ಅಂಬೇಡ್ಕರ್ ಅವರ `ಜಾತಿವಿನಾಶ' ಪುಸ್ತಕಗಳ ಚಿಂತನೆಗಳನ್ನು ಚಿಂತಕರು, ಹೋರಾಟಗಾರರು ಕಾಲಕಾಲಕ್ಕೆ ವಿವರಿಸಿಕೊಂಡಂತೆ ಈ ಪುಸ್ತಕದ ಆಶಯಗಳನ್ನೂ ಜವಾಬ್ದಾರಿಯುಳ್ಳ ಓದುಗರು ವಿಸ್ತರಿಸಿಕೊಳ್ಳಬೇಕಾಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ, ಎಪ್ಪತ್ತರ ದಶಕದಿಂದೀಚೆಗೆ ಕರ್ನಾಟಕದ ಸಾಮಾಜಿಕ ಚಳವಳಿಗಳು ಯಾವ ವಿಶಾಲ ಉದ್ದೇಶದಿಂದ ಹೊರಟವೋ ಅವುಗಳ ಮೂಲಸತ್ವಕ್ಕೆ ಬರಹಗಾರರು, ಹೋರಾಟಗಾರರು ಮರಳಿ ಹೋಗುವಂತೆ ಆತ್ಮಪರೀಕ್ಷೆ ಮಾಡಿಕೊಳ್ಳಲು ಪ್ರೇರೇಪಿಸುವ ಬರಹಗಳು ಇವು. ತೊಂಬತ್ತು ಲೇಖನಗಳುಳ್ಳ ಇಂಥ ಮಹತ್ವದ ಪುಸ್ತಕವೊಂದು ಪ್ರಕಟವಾದ ಒಂದೇ ವಾರಕ್ಕೆ ಮರುಮುದ್ರಣ ಕಾಣುತ್ತಿರುವುದು ಕನ್ನಡ ಸಂಸ್ಕೃತಿಯ ದಾಹ ಹಾಗೂ ಆರೋಗ್ಯಗಳೆರಡಕ್ಕೂ ಸಾಕ್ಷಿಯಂತಿದೆ.
-ನಟರಾಜ್ ಹುಳಿಯಾರ್

ಜೀವಂತ ಬರಹ

   ಕಲ್ಕುಳಿ ವಿಠಲ ಹೆಗ್ಗಡೆಯವರ `ಮಂಗನ ಬ್ಯಾಟೆ' ಪುಸ್ತಕ ಇಷ್ಟವಾಗುವುದು ಹಲವು ಕಾರಣಗಳಿಗೆ. ಮೊದಲಿಗೆ ಇಡೀ ಕೃತಿಯ ಕಥಾನಕದಲ್ಲಿರುವ ಜೀವಂತಿಕೆಗಾಗಿ. ನಂತರ ಇಲ್ಲಿನ ನಿರೂಪಣೆಯಲ್ಲಿರುವ ಸಾದಾತನಕ್ಕಾಗಿ. `ಲೇಖಕ'ನ ಠೇಂಕಾರವಿಲ್ಲದ, `ಸಾಹಿತಿ'ಯ ಶೈಲಿಯಿಲ್ಲದ ಮತ್ತು `ಕೃತಿ'ರಚನೆಯ ಹಮ್ಮು ಹಣಿಕಿಕ್ಕದ ಬರವಣಿಗೆಯ ಲಯಕ್ಕಾಗಿ.

ತುಸು ಕಷ್ಟವಾದರೂ ಅದರ ಹೊಸತನದಿಂದಾಗಿ ಇಷ್ಟವಾಗುವ ಶ್ರಿಮಂತವಾದ ಭಾಷೆಗಾಗಿ. ಹಲವು ಮಗ್ಗುಲುಗಳ ನೋಟವನ್ನು ಒದಗಿಸಬಲ್ಲ ಪ್ರಕಾರವೊಂದನ್ನು ಕಲ್ಕುಳಿಯವರೇ ರೂಢಿಸಿಕೊಂಡು ವಿವರಿಸುವ ಬಗೆಗಾಗಿ.

ಒಟ್ಟಾರೆಯಾಗಿ ಈ ಪುಸ್ತಕ ಒದಗಿಸುವ ಒಂದು ವಿಶಿಷ್ಟ ಸಾಮಾಜಿಕ- ಆರ್ಥಿಕ- ರಾಜಕೀಯ ಮತ್ತು ಸಾಂಪ್ರದಾಯಿಕ ಜನಜೀವನದ ನೋಟಕ್ಕಾಗಿ. ತಂತ್ರ, ಭಾಷೆ, ಆಕೃತಿ, ಆಶಯ ಎಂದೆಲ್ಲ ನಾವು ಪರಿಭಾಷೆಯ ಹಳಿಗಳ ಮೇಲೆಯೇ ಸಾಗುತ್ತ ಹಾದಿತಪ್ಪಬಹುದೆಂಬುದನ್ನು ತಣ್ಣಗೆ ತೋರಿಸಿಕೊಡುವ ಕನ್ನಡ ಪುಸ್ತಕವಾಗಿಯೂ ಇದು ಗಮನಾರ್ಹವಾದ ಕೃತಿ.
-ನರೇಂದ್ರ ಪೈ

ಅಡಿಗರ ಮಾನವೀಯ ಋಜುಜೀವನ

   2012ರಲ್ಲಿ ಪ್ರಕಟವಾದ ಪುಸ್ತಕಗಳಲ್ಲಿ `ಗೋಪಾಲಕೃಷ್ಣ ಅಡಿಗರ ಪತ್ರಗಳು' ಬಹು ಮುಖ್ಯವಾದುದು. ಇದು ಕವಿ ಅಡಿಗರು ಇತರರಿಗೆ ಬರೆದ ಪತ್ರಗಳನ್ನಲ್ಲದೆ ಇತರರು ಅಡಿಗರಿಗೆ ಬರೆದ ಪತ್ರಗಳನ್ನೂ ಒಳಗೊಂಡಿವೆ. ಆದರೆ ಅಡಿಗರ ಪತ್ರವ್ಯವಹಾರದಲ್ಲಿ ಕಾಲು ಪಾಲಿನಷ್ಟೂ ಲಭ್ಯವಾಗಿಲ್ಲ ಎಂದು ಇವುಗಳನ್ನು ಸಂಪಾದಿಸಿದ ಸುಮತೀಂದ್ರ ನಾಡಿಗರು ಹೇಳುತ್ತಾರೆ.

ನಾಡಿಗರು ತುಂಬ ಶ್ರಮದಿಂದ ಮತ್ತು ಪ್ರೀತಿಯಿಂದ ಸಂಪಾದಿಸಿದ ಪುಸ್ತಕ ಇದು. ನಮ್ಮಲ್ಲಿ ಮಾಹಿತಿಗಳನ್ನು ಸಂಗ್ರಹಿಸಿಡುವ ಪರಿಪಾಠ ಕಡಿಮೆ. ಆದ್ದರಿಂದಲೇ ಜೀವನ ಚರಿತ್ರೆಯಲ್ಲಿ, ಇತಿಹಾಸದಲ್ಲಿ, ಮುಖ್ಯವಾಗಿ ವಸ್ತುನಿಷ್ಠತೆಯಲ್ಲಿ, ಆಸಕ್ತಿ ಕಡಿಮೆ.

ಆದರೆ ಕವಿಯೊಬ್ಬನನ್ನು ತಿಳಿಯಬೇಕಾದರೆ ಆತನ `ಅಂತರಂಗ'ದ ಪರಿಚಯವೂ ಬೇಕಾಗುತ್ತದೆ. ಖಾಸಗಿ ಪತ್ರಗಳು ಬಹುಮಟ್ಟಿಗೆ ಇಂಥ ಒಳನೋಟಗಳನ್ನು ನಮಗೆ ನೀಡುತ್ತವೆ, ಯಾಕೆಂದರೆ ಅವು ಮುಂದೆ ಪ್ರಕಟಣೆಗೆಂದು ಬರೆದ ಪತ್ರಗಳಲ್ಲ. ಅದೂ ಅಲ್ಲದೆ ಅವು ಆಯಾ ಕಾಲಕ್ಕೆ ಹಿಡಿದ ಕನ್ನಡಿಗಳೂ ಹೌದು.

ನನಗೆ ಈ ಪತ್ರಗಳ ಅವಲೋಕನದಿಂದ ಅನಿಸುವುದು, ಅಡಿಗರು ಅದೆಷ್ಟು ಮಾನವೀಯ ಋಜುಜೀವನ ನಡೆಸಲು ಪ್ರಯತ್ನಿಸಿದರು ಎನ್ನುವುದು. ಅವರ ಕವಿತೆಗಳಲ್ಲಿ ಒಂದು ರೀತಿಯ ನಿಷ್ಠುರತೆ ಕಂಡುಬರುತ್ತದೆ ನಿಜ; ತಮ್ಮ ಬದುಕಿನಲ್ಲೂ ಅವರು ರಾಜಿ ಮಾಡಿಕೊಂಡಿರಲಿಲ್ಲ. ಆದರೆ ಒಬ್ಬ ವ್ಯಕ್ತಿಯಾಗಿ ಅವರು ನಿಷ್ಠುರರಾಗಿ ಇರಲಿಲ್ಲ, ತತ್ವನಿಷ್ಠರಾಗಿದ್ದರು.

3.2.1970ರಂದು ಅವರು ತಮ್ಮ ಪ್ರಿಯ ಯುವ ಗೆಳೆಯ ಅನಂತಮೂರ್ತಿಗೆ ಬರೆದ ಪತ್ರವೊಂದಿದೆ. ಇದು ಅನಂತಮೂರ್ತಿ 20.1.70ರಂದು ಅವರಿಗೆ ಬರೆದ ಪತ್ರಕ್ಕೆ ಉತ್ತರ. ವಿಷಯ ಲಂಕೇಶ್‌ರ ಕತೆ `ಅಕ್ಟೋಪಸ್'. ಅದು ಅಡಿಗರ `ಸಾಕ್ಷಿ' ಪತ್ರಿಕೆಯಲ್ಲಿ ಆಗ ತಾನೆ ಪ್ರಕಟವಾಗಿತ್ತು.

ಕತೆಯ ಮುಖ್ಯಪಾತ್ರವಾದ ಆನಂದು ಅನಂತಮೂರ್ತಿಯೇ ಎಂಬ ಭಾವನೆ ಬರುವಂತೆ ಇತ್ತು. ಜನ ಹಾಗೆ ಮಾತಾಡಿಕೊಳ್ಳುತ್ತಿದ್ದರು ಕೂಡ. ಅದೊಬ್ಬ ಸ್ವಾರ್ಥಕ್ಕಾಗಿ ತತ್ವವನ್ನು ಬಲಿಗೊಟ್ಟ ಯುವ ಅಕಡಿಮಿಶಿಯನ್ ಬಗೆಗಿನ ಕತೆ. ಅನಂತಮೂರ್ತಿ ಅಡಿಗರಿಗೆ ಬರೆದ ಪತ್ರ ಮತ್ತು ಅಡಿಗರ ಉತ್ತರ ಎರಡೂ ಓದಲು ಯೋಗ್ಯವಾಗಿವೆ.

ಅದರಲ್ಲೂ ಅಡಿಗರ ಉತ್ತರ. ಯಾಕೆಂದರೆ ಕತೆ ಅಡಿಗರಿಗೆ ಅರಿವಿಲ್ಲದೆ ಪ್ರಕಟವಾಗಿದ್ದರೂ, ಅದಕ್ಕೆ ಅವರು ಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ ಮಾತ್ರವಲ್ಲ, ಕತೆ ಪ್ರಕಟವಾದದ್ದಕ್ಕೆ ವಿಷಾದವನ್ನೇನೂ ವ್ಯಕ್ತಪಡಿಸುವುದಿಲ್ಲ. ಅಡಿಗರೆನ್ನುವುದು, ಕತೆ ವಿಡಂಬನಾತ್ಮಕವಾದ ಕಾರಣ ಕೆಳ ದರ್ಜೆಯದು, ಆದರೆ ಒಂದು ಕತೆಯಾಗಿ ಅದು ಚೆನ್ನಾಗಿಯೇ ಇದೆ ಎಂಬುದಾಗಿ.

ಅಲ್ಲದೆ, ಅಡಿಗರ ಕಾಳಜಿ ಲಂಕೇಶರ ಕುರಿತಾಗಿಯೂ ಇದೆ: `ನಿಜವಾಗಿ ನೋಡಿದರೆ `ಆಕ್ಟೋಪಸ್' ಬರೆದು ಲಂಕೇಶ ತನ್ನನ್ನು ತಾನೇ ್ಚಟ್ಞಛಿಞ್ಞ ಮಾಡಿಕೊಂಡರಲ್ಲವೇ?' ಎನ್ನುತ್ತಾರೆ ಅವರು. ಇಂಥ ಉದಾಹರಣೆಗಳು ಅನೇಕ ಇದ್ದು ಇವೆಲ್ಲವೂ ಅಡಿಗರ ವ್ಯಕ್ತಿತ್ವವನ್ನು ಆದರಣೀಯವಾಗಿ ಮಾಡುತ್ತವೆ. ಅಡಿಗರನ್ನು ಅರಿತುಕೊಳ್ಳಬಯಸುವವರು ಓದಲೇಬೇಕಾದ ಪುಸ್ತಕ ಇದು.
-ಕೆ.ವಿ. ತಿರುಮಲೇಶ್

ಕನ್ನಡ ಸಾಹಿತ್ಯದ ಅತ್ಯುತ್ತಮ ಸಂವಾದ

  ಕರ್ಣನು ದುರ್ಯೋಧನನ ಮಡದಿ ಭಾನುಮತಿಯ ಜೊತೆ ನೆತ್ತವನಾಡಿದ ಪ್ರಸಂಗವೊಂದನ್ನು ಪಂಪನ `ವಿಕ್ರಮಾರ್ಜುನ ವಿಜಯ'ದ ಪದ್ಯವೊಂದು ವರ್ಣಿಸುತ್ತದೆ. ಇಲ್ಲಿ ಯಾರು ಯಾರ ಜೊತೆ ನೆತ್ತವನಾಡಿದರು, ಪಣಕ್ಕಿದ್ದುದೇನೆನ್ನುವುದರಿಂದ ಹಿಡಿದು ಈ ಪದ್ಯದ ಅರ್ಥವ್ಯಾಪ್ತಿಯ ಕುರಿತು ಕಳೆದ ಎಂಬತ್ತು ವರ್ಷಗಳಲ್ಲಿ ಕನ್ನಡದಲ್ಲೊಂದು ದೀರ್ಘವಾದ ಸಂವಾದ, ಚರ್ಚೆ ನಡೆದಿದೆ.

1930ರಲ್ಲಿ ಎಸ್.ವಿ.ರಂಗಣ್ಣನವರ ಲೇಖನದಿಂದ ಆರಂಭವಾದ ಚರ್ಚೆಯಲ್ಲಿ ಕುವೆಂಪು, ಡಿಎಲ್‌ಎನ್, ಮುಳಿಯ ತಿಮ್ಮಪ್ಪಯ್ಯ, ಸೇಡಿಯಾಪು ಹೀಗೆ ನಾನಾ ಹಿನ್ನೆಲೆ ಮತ್ತು ಶಿಸ್ತಿನ ವಿದ್ವಾಂಸರು, ಬರಹಗಾರರು ಪಾಲ್ಗೊಂಡಿದ್ದಾರೆ.

ಇತ್ತೀಚಿನ ಬರಹ ಪ್ರಕಟವಾಗಿದ್ದು 2012ರಲ್ಲಿ. ಇಷ್ಟೊಂದು ದೀರ್ಘಕಾಲ ಕನ್ನಡ ಮನಸ್ಸನ್ನು ಕೆಣಕಿದ ಈ ಪದ್ಯದ ಕುರಿತಾದ ಬರಹಗಳನ್ನೂ ಸೃಜನಾತ್ಮಕ ಪ್ರತಿಕ್ರಿಯೆಗಳನ್ನೂ ಪಾದೇಕಲ್ಲು ವಿಷ್ಣು ಭಟ್ಟರು ಪ್ರಸ್ತುತ ಪುಸ್ತಕದಲ್ಲಿ ಒಟ್ಟಿಗೇ ತಂದಿದ್ದಾರೆ.

ಇದು ಕೇವಲ ಪದ್ಯವೊಂದರ ಅರ್ಥದ ಕುರಿತಾದ ಚರ್ಚೆ ಮಾತ್ರವಲ್ಲ, ಕನ್ನಡದಲ್ಲಿ ಜರುಗಿದ ಒಂದು ಅತ್ಯುತ್ತಮ ಸಾಹಿತ್ಯ ಸಂವಾದಕ್ಕೆ, ಪರಸ್ಪರ ಛೇಡಿಸಿಯೂ ಗೌರವದಿಂದ ಅಭಿಪ್ರಾಯಭೇದ ವ್ಯಕ್ತಪಡಿಸುವ ರೀತಿಗೆ ಉದಾಹರಣೆಯೂ ಆಗಿದೆ. ಕಾವ್ಯ ಹಾಗೂ ಭಾಷೆಯ ಕುರಿತಾದ ಅಪೂರ್ವ ಒಳನೋಟಗಳು ಇಲ್ಲಿವೆ.  
       -ವಿವೇಕ ಶಾನಭಾಗ

`ದುರ್ಗಮ' ಹಾದಿಯ `ದೈತ್ಯ' ಪಯಣಿಗರು

  ಕವಿತೆ, ಕತೆ, ಕಾದಂಬರಿ, ವೈಚಾರಿಕತೆ ಇದಾವುದರ ಟ್ಯಾಗೂ ಇಲ್ಲದೆ, ಆದರೆ ಈ ಎಲ್ಲ ಸಾಹಿತ್ಯದ ಪ್ರಭೇದದಾಚೆಗೂ ಚಾಚಿರುವ ಬದುಕಿನ ವೃತ್ತಾಂತವನ್ನೇ ಅವಲಂಬಿಸಿರುವ ವಿಭಿನ್ನ ಕೃತಿ ಟಿ.ಕೆ. ದಯಾನಂದ ಅವರ `ರಸ್ತೆ ನಕ್ಷತ್ರ'. ಸಮಾಜಕ್ಕೆ ಅನಿವಾರ್ಯವಾಗಿ ಬೇಕಾಗಿರುವ ಆದರೆ ಸಮಾಜವೆಂದೂ ಆದರಿಸಿ ಗೌರವಿಸದ ಕಸುಬುಗಳಲ್ಲೇ ತಮ್ಮ ಬದುಕಿನ ಬಂಡಿಗಳನ್ನೆಳೆಯುತ್ತಿರುವ, ಕಣ್ಣಿಗೆ ತಕ್ಷಣ ಬೀಳದ 24 ವಿವಿಧ ಕಸುಬಿನವರ ಆತ್ಮ ವೃತ್ತಾಂತ ಈ ಪುಸ್ತಕ.

ಕೆಳಸ್ತರದವರ ಜೀವ ಮಿಡಿತಗಳನ್ನು ಅಭ್ಯಸಿಸಿರುವ ಲೇಖಕ ತಮ್ಮ ಸೂಕ್ಷ್ಮ ದೃಷ್ಟಿ ಮತ್ತು ಸೂಕ್ಷ್ಮ ಸಂವೇದನೆಗಳಲ್ಲಿ ಅವರವರ ಮಾತುಗಳಲ್ಲೇ ಅವರ ಬದುಕನ್ನು ಬರಹದಲ್ಲಿ ಹಿಡಿದಿಟ್ಟಿದ್ದಾರೆ. ಸದ್ದುಗದ್ದಲಗಳಲ್ಲೇ ಮುಳುಗಿಹೋಗಿರುವ ಬೆಂಗಳೂರಿನ ಹಾದಿ ಬೀದಿಗಳಲ್ಲಿ, ಫುಟ್‌ಪಾತ್, ಗಲ್ಲಿಗಲ್ಲಿಗಳಲ್ಲಿ, ಕಡೆಗೆ ಸಾರ್ವಜನಿಕ ಶೌಚಾಲಯವನ್ನೇ ಮನೆಯನ್ನಾಗಿ ಮಾಡಿಕೊಂಡಿರುವವರ ಆತ್ಮಕಥನ ಈ ಪುಸ್ತಕ.

ಚೂರಿ ಚೂಪು ಮಾಡುವ, ಚಿಂದಿ ಆಯುವ, ಕರಡಿ ಆಡಿಸುವ, ಸೆಕ್ಸ್ ವರ್ಕರ್, ಬಸವನ ಆಡಿಸುವ, ಟಾಯ್ಲೆಟ್ ಕ್ಲೀನರ್, ಭಿಕ್ಷುಕ, ಚರಂಡಿ ಮಣ್ಣಲ್ಲಿ ಚಿನ್ನ ಶೋಧಿಸುವವರು ಸೇರಿದಂತೆ ಇಪ್ಪತ್ತನಾಲ್ಕು ವಿವಿಧ ಬಗೆಯ ಕಸುಬುಗಳಲ್ಲಿ ತೊಡಗಿಕೊಂಡವರ ಬದುಕನ್ನು ದಯಾನಂದ ದಾಖಲಿಸಿದ್ದಾರೆ. ಓದುತ್ತಾ ಹೋದಂತೆ ಸಮಾಜದ ಅನಿಷ್ಟದಲ್ಲಿ ಸೇರಿಕೊಂಡಿರುವ ಎಲ್ಲ ಮನಸ್ಸುಗಳಲ್ಲಿ, ಆ ಕ್ಷಣಕ್ಕಾದರೂ ತಮ್ಮ ಸಾಮಾಜಿಕ ಜವಾಬ್ದಾರಿಯ ಕಡೆಗೆ ಆಲೋಚಿಸುವಂತೆ ಮಾಡುವ ಶಕ್ತಿ ಈ ಪುಸ್ತಕಕ್ಕಿದೆ. 
-ಡಿ.ಎಸ್. ರಾಮಸ್ವಾಮಿ

ನೋಟವೆಂಬುದು ನೇತ್ರದೆಂಜಲು...

ಒಂದೂವರೆ ವರುಷ `ಪ್ರಜಾವಾಣಿ' ಸಾಪ್ತಾಹಿಕ ಪುರವಣಿಯಲ್ಲಿ ರಹಮತ್ ತರೀಕರೆ ಅವರು ಬರೆದ ತಿರುಗಾಟದ ಲೇಖನಗಳು ಇವು. ಎಲ್ಲಿಗಾದರೂ ಹೋಗಿ ಏನನ್ನಾದರೂ ನೋಡಲು ಹೋಗುವವರೆಲ್ಲ, `ಅಲ್ಲಿರುವುದನ್ನು' ನೋಡಿಬರುವುದಿಲ್ಲ. ನೋಡುವುದೆಲ್ಲ ನೋಡುವವರ ಕಣ್ಣಿನ ಮತ್ತು ಈವರೆಗೆ ಲೋಕದಲ್ಲಿ ಅವರು ಏನೇನನ್ನು ನೋಡಿದ್ದಾರೋ ಆ ವಂದರಿಯ ಮೂಲಕವೇ ಹಾದು ಬರಬೇಕಾಗಿರುವುದರಿಂದ ಯಾರೂ ಅಲ್ಲಿರುವುದನ್ನು ನೋಡಿ ಬರುವುದಿಲ್ಲ.

ತಿನ್ನುವ ಅನ್ನ, ಕುಡಿಯುವ ನೀರು, ಮಾಡುವ ಪ್ರೀತಿ, ನೋಡುವ ನೋಟ, ತೋರುವ ಭಕ್ತಿ, ಒಟ್ಟಾರೆ ಬದುಕುವ ಕ್ರಮವನ್ನೇ ಒಂದೆರಡು ಸಾವಿರ ವರುಷಗಳಲ್ಲಿ ಹೊಲೆಗೆಡಿಸಿಕೊಂಡು ಬಾಳುತ್ತಿರುವವರು ನಾವು. ನೋಡಿದ್ದಕ್ಕೆಲ್ಲ ಈ ಕೊಳಕು ಮೆತ್ತಿಕೊಂಡೇ ಇರುತ್ತದೆ. ಇದನ್ನೆಲ್ಲ ಸರಿಪಡಿಸಿಕೊಳ್ಳಲು ತುಂಬಾ ಸರಳ ದಾರಿಗಳನ್ನು ಅನೇಕರು ತೋರಿಸಿಕೊಟ್ಟಿದ್ದಾರೆ.

ಅದರಲ್ಲಿ ಸರಳಾತಿ ಸರಳ ಎಂದರೆ `ಅನ್ನ ತಿನ್ನೋರ್ ಥರಾ ಬದುಕೋದು'. ಇದು ತುಂಬಾ ಕಠಿಣವೂ ಇರಬಹುದು! ರಹಮತ್‌ರ `ನಡೆದಷ್ಟೂ ನಾಡು' ಪುಸ್ತಕವೂ ಕೂಡ ಒಬ್ಬ ಅನ್ನ ತಿನ್ನೋ ಮನುಷ್ಯ- ಒಂದಷ್ಟು ದೂರ ಹಿಂದಕ್ಕೆ ಹೋಗಿ ಬರೋಣ ಬನ್ನಿ- ಎಂದು ಬರುವವರನ್ನೆಲ್ಲ ಕರೆದುಕೊಂಡು ಹೋದ ಹಾಗಿದೆ.

ತಿರುಗಾಟಕ್ಕೆಂದು ವಿಶ್ವವಿದ್ಯಾಲಯದ ಆವರಣದಿಂದ ಕಳಚಿಕೊಂಡಾಕ್ಷಣ ಶುದ್ಧ ಫಕೀರನಂತಾಗುವ ರಹಮತ್ ತಮ್ಮ ಜೋಳಿಗೆಯನ್ನು, ನೀಡಬಲ್ಲಂಥ ದಾತರ ಎದುರಿಗೆ ಒಡ್ಡಿದ್ದಾರೆ, ನೀಡಿದ್ದನ್ನು ಬ್ಯಾಡ ಎನ್ನದೆ ನಿರ್ಮಮಕಾರದಿಂದ ಸ್ವೀಕರಿಸಿ ನಮ್ಮೆದುರಿಗೆ ತಂದು ಹರಡಿದ್ದಾರೆ.

ಹೀಗೆ ನೀಡಿದವರಲ್ಲಿ ಕಿರಂ, ಜೋಳದ ರಾಶಿ ದೊಡ್ಡನಗೌಡರು, ಸಂಜಯ ಛತ್ರೆ, ರಂಗನಟಿ ಫ್ಲೋರಿನಾ, ಹಂಪಿಯ ಸದಾಶಿವಯೋಗಿ, ಸೂಡಿಯ ಅಬ್ಬಿಗೇರಿ, ಇನ್ನೂ ಅದೆಷ್ಟೋ ಜನರಿದ್ದಾರೆ. ರಹಮತ್ ಇಸುಕಂಡು ಬಂದು ನಮಗೆ ಕೊಟ್ಟ ಸಂಗತಿಗಳಲ್ಲಿ- ಭೂಗಂಧರ್ವ ರೆಹಮತ್ ಖಾನ್, ಅವರನ್ನು ಎದುರಿಗೆ ಕೂರಿಸಿ ಹಾಡಿಸಿದ ಕನ್ನಡಿ, ತ್ರಿಪುರಸುಂದರಿ ಟಾಕೀಸು, ಎಸ್‌ಇಜೆಡ್‌ಗೆಂದು ಹೊಲಮನೆ ಕಳಕೊಂಡವರ ಪ್ರತಿನಿಧಿ ಗ್ರೆಗರಿ ಪೆತ್ರಾವೋ, ಬನಶಂಕರಿ ಜಾತ್ರೆಯ ಹತ್ತು ನಾಟಕ ಕಂಪನಿಗಳ `ಗಂಡಿಗೆ ಹಟ ಹೆಣ್ಣಿಗೆ ಚಟ' ಇತ್ಯಾದಿ ನಾಟಕಗಳು, ಧರ್ಮಶಾಲೆಯಲ್ಲಿ ಪಾರಿವಾಳಗಳು ಗುಟುಕರಿಸುವಂತೆ ಪಠಿಸುವ ಭಿಕ್ಕುಗಳು, ಕನ್ನಡದ ಶಿವ ತೆಲುಗಿನ ಪಾರ್ವತಿ, ಲೂಟಿಯಾಗುತ್ತಿರುವ ಕೊಡಚಾದ್ರಿಯ ಶೋಲಾ ಕಾಡುಗಳು- ಇವೆಲ್ಲ ಇವೆ.

ಕನ್ನಡದ ನಿನ್ನೆಗಳನ್ನು ಓದಿಕೊಡುವ ಅನೇಕ ಓದುಗಳಿವೆ. ಆಹಾ, ಓಹೋ ಎಂದು ಸ್ವಾಟೆಯಲ್ಲಿ ರಸ ಜಿನುಗಿಸುವ ಆಸ್ಥಾನ ಕವಿಗಳ ಓದುಗಳು ಮತ್ತು ಕನ್ನಡದ ಬದುಕಿನ ಸಮಸ್ತ ಕೊಳಕನ್ನೂ ಅನಾವರಣ ಮಾಡುವ ವಚನಕಾರರು, ಅನೇಕ ಸಂತರು, ಸೂಫಿಗಳು, ತಮ್ಮನ್ನೂ ಮನುಷ್ಯರಂತೆ ನೋಡಲಿ ಎಂದು ಹಂಬಲಿಸಿದವರು ಇವರ ಓದುಗಳನ್ನು ಎದುರಾಬದುರಾ ಇಟ್ಟಾಗ, ಅರೆ, ಇಲ್ಲಿ ಯಾವಾಗಲಾದರೂ ಸಾಮಾನ್ಯರು ಒಂದು ಒಳ್ಳೆಯ ಬಾಳನ್ನು ಬಾಳಿದ್ದುಂಟೆ? ಎಂದು ಬೇಜಾರಾಗುತ್ತದೆ.

ಕೊಂಚ ಸಾವರಿಸಿಕೊಂಡು ಹೋಗುವ ಶಕ್ತಿಯನ್ನು ಕೊಟ್ಟಂತಹ ಸಂಗೀತಗಾರರು, ಅನುಭಾವಿಗಳು, ದಾರ್ಶನಿಕರು, ಕಲಾವಿದರು ಈ ಪುಣ್ಯಜೀವಿಗಳನ್ನಾದರೂ ಈ ನೆಲ ಸರಿಯಾಗಿ ನಡೆಸಿಕೊಂಡಿದೆಯೆ? ಎಂದು ಕೇಳಿಕೊಂಡರೆ ಅದೂ ಇಲ್ಲ ಎಂದೆನಿಸುತ್ತದೆ. ಇವೆಲ್ಲ ಈ ಪುಸ್ತಕದ ಓದಿನ ಓಡಾಟದಲ್ಲಿ ಅಕ್ಕ ಪಕ್ಕ ಕಾಣಿಸುತ್ತವೆ. ಇವು ಕೇವಲ ತಿರುಗಾಟದ ಬರವಣಿಗೆಗಳಲ್ಲ, ತುಸು ಹಿಂದೆ ಹೋಗಿ ತಂದ ಕಪ್ಪು-ಬಿಳಿ ಬಣ್ಣದ ಫೊಟೋಗಳು.

ಸೀದಾ ಬೇಲಿ ಮೇಲಿಂದಲೇ ಹೆಕ್ಕಿ ತಂದ ಹೂಗಳಂತಿರುವ ಉಪಮೆ ರೂಪಕಗಳಂತೂ ಇಲ್ಲೆಲ್ಲ ಇಟ್ಟಾಡಿವೆ. ಏನನ್ನಾದರೂ ಹೊಸದನ್ನು ತುಂಬಿಕೊಳ್ಳಲು ರೆಡಿಯಾಗಿ ಕೂತವರಿಗೆ ಕಳಕೊಳ್ಳುವುದನ್ನು ಕಲಿಸಿಕೊಟ್ಟ ಬರಹಗಳು ಇವು. ಒಂಚೂರು ಬೇಜಾರು: ಇನ್ನೂ ಅಷ್ಟು ದೂರ ಹೋಗುವ ಮನಸ್ಸಿದ್ದಾಗಲೇ `ನಾನಿನ್ನು ಬರಲೇ?' ಎನ್ನುವ ರಹಮತ್, `ಆಂ, ಹೋಗ್ತೀರಾ?' ಎನ್ನುವುದರೊಳಗೆ ಹೋಗೇಬಿಟ್ಟಿರುತ್ತಾರೆ!

-ಎಸ್. ನಟರಾಜ ಬೂದಾಳು

`ಜೀವಕ್ಕೆ ಒಳ್ಳೆಯದು' ಕಾಯ್ಕಿಣಿ ಕಥೆಗಳು

  `ಚಾರ್‌ಮಿನಾರ್'- ಮುಗಿಯುತ್ತಿರುವ ವರ್ಷದ ಮುಖ್ಯ ಕೃತಿಗಳಲ್ಲೊಂದು. ಅಖಂಡ ಜೀವನ ಪ್ರೀತಿಯ ಈ ಕವಿ, ಕತೆಗಾರ ಬದುಕಿನ ಅತಿಪುಟ್ಟ ವಿವರಗಳೆಂದು ಭಾಸವಾಗುವ ಸನ್ನಿವೇಶಗಳಲ್ಲೇ ಥಟ್ಟನೆ ಬೆಳಗುವ ಮಾನವೀಯ ಕಾಂತಿಯ ಕ್ಷಣಗಳನ್ನು ಉಜ್ವಲವಾಗಿ ಸೆರೆಹಿಡಿದಿಡಬಲ್ಲರು.

ಅವರ ಕನಸುಗಳ ಒಂದು ತುದಿಯಲ್ಲಿ ಗೋಕರ್ಣ ಮಂಡಲ ತನ್ನ ರಾಮತೀರ್ಥ, ಗಂಗೆಕೋಡಿ, ಸಮುದ್ರಘೋಷ, ತಂಗಾಳಿ ಬೀಸುವ ಬಿಳಿರೇವೆಯ ಹಾಸಿನ ಕಿನಾರೆ, ಭಗೀರಥ ಮಾಸ್ತರು, ನಿರ್ಮಲಕ್ಕರ ಜೊತೆ ಇದ್ದರೆ ಇನ್ನೊಂದು ತುದಿಯಲ್ಲಿ ಮುಂಬಯಿ ಇದೆ.

ಎಲ್ಲರನ್ನೂ ಒಳಗೊಳ್ಳುತ್ತ, ಸಾಮಾನ್ಯ ಜನರೇ ತಮ್ಮ ಅಸಾಮಾನ್ಯ ವಿವೇಕ, ತಿಳಿವಳಿಕೆಯಿಂದ ಕಟ್ಟಿದ ಜೀವನಧರ್ಮ ಆ ನಗರಕ್ಕಿದೆ. ಗುಂತಕಲ್ ಜಂಕ್ಷನ್ ಸನಿಹದ ಮಕ್ಕಳೇ ಯಾಕೆ ಮನೆಬಿಟ್ಟು ಓಡಿಬರುವರೋ? `ಗಿರಾಕಿ'ಗಳಿಗೇಕೆ ಹೆಸರು ಕೇಳುವ ವ್ಯಸನವೋ? `ಎಲ್ರೂ ಸಾರಿ ಹೇಳ್ತಾ ಹೋದ್ರೆ ಪ್ರಾಯಶ್ಚಿತ್ತಕ್ಕೆ ಜಾಗಾ ಎಲ್ಲ!'- ಜಯಂತರ ಕಥೆಗಳ ಮೂಲೆ ಮಗ್ಗುಲುಗಳಿಂದ ಹುಟ್ಟಿಬಿಡುವ ಪ್ರಶ್ನೆ, ಆತಂಕ, ಉದ್ಗಾರಗಳು ಈ ಸ್ವರೂಪದವು.

ದೈನ್ಯವೊಂದು ದಿವ್ಯವಾಗುವ ಕ್ಷಣ ಕಣ್ಣೆದುರಿನ ಜಗತ್ತಿನಲ್ಲಿ ನಮ್ಮ ದೈನಿಕ ವಹಿವಾಟುಗಳ ನಡುವೆಯೇ ಹುಟ್ಟುವುದೆಂಬ ಖಚಿತ ತಿಳಿವಳಿಕೆಯಿಂದ ಜಯಂತ್ ಬರೆಯುತ್ತಿದ್ದಾರೆ. ರಾತ್ರಿ ತಂದ ಹೊಸ ಆಟಿಕೆಯನ್ನು ನೋಡುವ ಖುಷಿಯಲ್ಲೇ ಬೆಳಿಗ್ಗೆ ನಗುತ್ತ ಏಳುವ ಮಗು, ಎತ್ತರದ ಕಟ್ಟಡಕ್ಕೆ ಬಣ್ಣ ಬಳಿಯುತ್ತ ಒಳಜಗತ್ತು ಹೊರಜಗತ್ತಿನ ಸಮೀಕರಣ ಸೃಷ್ಟಿಸಿಬಿಡುವ ರುಕ್ಮಾಂಗದ, `ನಿಮಗೆ ಈ ಮಗು ನಿಜಕ್ಕೂ ಬೇಕಾ ಸರ್?' ಎಂದು ದಾರುಣವಾಗಿ ಕೇಳುವ ಗೊಂಬೆ ಮಾರುವ ಹೆಂಗಸು- ತಕ್ಷಣ ನೆನಪಿಗೆ ಬರುವ ರೂಪಕಗಳು.

ಶ್ರಿಮಂತರ ಆತ್ಮಕ್ಕೇ ಬೊಜ್ಜು ಬಂದಿರ್ತದೆ ಎಂದು ಹೇಳುವ ಜಯಂತರ ಕಥೆಗಳು ನಿಜಕ್ಕೂ `ಜೀವಕ್ಕೆ ಚಲೋದು'. ಇದು ಗೋಕರ್ಣ ಸೀಮೆಯಲ್ಲಿ ಬಳಕೆಯ್ಲ್ಲಲಿರುವ ಒಂದು ಭಾಷಾ ಪ್ರಯೋಗ. ಮನುಷ್ಯನ ದೇಹಕ್ಕಿಂತ ಹೆಚ್ಚಿನದಿನ್ನೇನನ್ನೋ ಸೂಚಿಸುವ ಈ ಪದದ `ಜೀವಾಳ'ವನ್ನು ಜಯಂತರ ಕಥೆಗಳು ಹಿಡಿದಿವೆ.

ಅಧ್ಯಾತ್ಮದ ಅಮೂರ್ತವನ್ನು ಅನುಮಾನಿಸುವ ಜಯಂತ, ಅಧ್ಯಾತ್ಮದ ಅತೀತದಲ್ಲೆಲ್ಲೋ ಅನಂತದ ಮಿಂಚಿನ ನೋಟಕ್ಕಾಗಿ ಕಾದಿರುವ ನಾನು- ಸೃಜನಶೀಲತೆಯ ನೆಲೆಯಲ್ಲಿ ಸಂಧಿಸುವ `ಜೀವ' ಜಗತ್ತು ಇಲ್ಲಿದೆ. ಪ್ರೀತಿ, ವಿಶ್ವಾಸ, ನಂಬಿಕೆಗಳ ಜಗತ್ತಿನ ಬಗ್ಗೆ ವಿಶ್ವಾಸ ಹೋದವರು ಒಮ್ಮೆ ಜಯಂತ ಕಾಯ್ಕಿಣಿಯವರ ಕತೆಗಳನ್ನು ಓದಬೇಕು. ಒಮ್ಮೆ ನಿಜಕ್ಕೂ ಆ ಹಾದಿಗುಂಟ ಚಲಿಸಿದರೆ ಅಂಥ ಓದುಗರು ಮತ್ತೆ `ನಿರ್ದಯರಾಗಿ' ಬದುಕಲಾರರು.  
-ಚಿಂತಾಮಣಿ ಕೊಡ್ಲೆಕೆರೆ

ಆತ್ಮಕಥೆಯೇ ದೇಶದ ಕಥೆಯಾಗುವ ಬರವಣಿಗೆ
ಕುಲದೀಪ್ ನಯ್ಯರ್ ಅವರ `ಒಂದು ಜೀವನ ಸಾಲದು' (ಅನು: ಆರ್. ಪೂರ್ಣಿಮಾ) ನಾನು ಈ ವರ್ಷ ಓದಿದ ಉತ್ತಮ ಪುಸ್ತಕ. ಇದು ರಾಷ್ಟ್ರೀಯತೆಯ ಕಲ್ಪನೆಯನ್ನು ಚೆನ್ನಾಗಿ ಹಿಡಿದಿದೆ; ರಾಷ್ಟ್ರರಾಜಕಾರಣದ ಬಿಕ್ಕಟ್ಟುಗಳನ್ನು ಕೂಡ.

ಬ್ರಿಟಿಷರು ಭಾರತವನ್ನು ಬಿಟ್ಟುಹೋಗುವಾಗ ಇರುವ ಸಮಸ್ಯೆಗಳು, ಭಾರತ ಎನ್ನುವುದು ಬೇಡವಾದ ಮಗು ಎಂಬುದನ್ನು ಗಾಢವಾಗಿ ಚಿತ್ರಿಸುತ್ತದೆ. ಆತ್ಮಕಥೆ ಒಂದು ಸಮಾಜದ, ದೇಶದ ಕಥೆ ಎನ್ನುವಂತೆ ನಯ್ಯರ್ ಹೇಳುತ್ತಾರೆ. ಆತ್ಮಕಥೆಯ ನೆಪದಲ್ಲಿ ಅವರು ದೇಶದ ಕಥೆಯನ್ನು ಹೇಳುತ್ತಾರೆ.

ಎಲ್ಲೂ ಆತ್ಮಕಥೆಯನ್ನು ಬರೆಯವ ಲೇಖಕನೊಬ್ಬನ ಆತ್ಮರತಿ ಇಲ್ಲ. ಅವರು ತಮ್ಮ ಬರವಣಿಗೆಯಲ್ಲಿ ಎಲ್ಲೂ ತಮ್ಮ ಸಮತೋಲನವನ್ನು ಕಳೆದುಕೊಳ್ಳುವುದಿಲ್ಲ. ಭಾರತ- ಪಾಕಿಸ್ತಾನದ ವಿಭಜನೆಯ ಸಂದರ್ಭದ ಜನರ ಸಮಸ್ಯೆಗಳನ್ನು ಸಹಾನುಭೂತಿ ಹಾಗೂ ಶ್ರದ್ಧೆಯಿಂದ ಹೇಳುತ್ತಾರೆ.

ವಿಭಜನೆಯ ಸಂದರ್ಭದ ಹಿಂಸಾಚಾರಗಳು ಮನಮುಟ್ಟುವಂತಿವೆ. ಅವರು ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಬರೆದಿರುವುದು ಕಾಣುತ್ತದೆ. ನಯ್ಯರ್ ಅವರ ನೆನಪುಗಳು ಬಹಳ ಚೆನ್ನಾಗಿವೆ. ಬರವಣಿಗೆಯಲ್ಲಿ ತಮ್ಮ ನೆನಪುಗಳನ್ನು ಆಧರಿಸಿ ಹಿಂದಕ್ಕೂ ಮುಂದಕ್ಕೂ ಅವರು ತುಯ್ಯುವ ರೀತಿ ಕೂಡ ವಿಶಿಷ್ಟವಾಗಿದೆ.
-ಡಿ.ವಿ. ಪ್ರಹ್ಲಾದ್

ಯುಗಧರ್ಮದ ಗ್ರಹಿಕೆ
2012ರಲ್ಲಿ ಒಟ್ಟು ಏಳು ಸಾವಿರ ಕನ್ನಡ ಪುಸ್ತಕಗಳು ಪ್ರಕಟವಾಗಿವೆ ಎಂದು ಸ್ನೇಹಿತರೊಬ್ಬರು ಹೇಳಿದರು. ಅವುಗಳಲ್ಲಿ ಹೆಚ್ಚು ಕಮ್ಮಿ 250 ಪುಸ್ತಕಗಳನ್ನು ನೋಡಿರಬಹುದಾದರೂ ಸುಮಾರು ಐವತ್ತು ಪುಸ್ತಕಗಳನ್ನು ಮಾತ್ರ ಓದಿದ್ದೇನೆ. ಇವುಗಳಿಂದ ಒಂದು ಪುಸ್ತಕ ಆರಿಸುವುದು ಸುಲಭವಲ್ಲ.

ಜಿ.ಕೆ.ಗೋವಿಂದರಾವ್ ಅವರ `ಷೇಕ್ಸ್‌ಪಿಯರ್ ಸಂವಾದ', ಕೆ.ಸತ್ಯನಾರಾಯಣ ಅವರ ಹೊಸ ಕಥಾಸಂಕಲನ `ಹೆಗ್ಗುರುತು', ಪ್ರದೀಪ್ ಕೆಂಜಿಗೆ ಅವರ `ಹೆಬ್ಬಾವಿನೊಡನೆ ಹೋರಾಟ' ಕಥಾಸಂಕಲನ, ಓ.ಎಲ್. ನಾಗಭೂಷಣ ಸ್ವಾಮಿ ಅವರ ಅನುವಾದಗಳು (ಎ.ಕೆ.ರಾಮಾನುಜನ್ ಹಾಗೂ ಟಾಲ್‌ಸ್ಟಾಯ್), ತಾರಿಣಿ ಶುಭದಾಯಿನಿ ಅವರ `ಗಳಿಗೆ ಬಟ್ಟಲು', ಎಸ್.ದಿವಾಕರ್ ಅವರ ಪ್ರಬಂಧ ಸಂಕಲನ, ಹೀಗೆ ಅನೇಕ ನೆನಪುಗಳು ನುಗ್ಗಿಬಂದರೂ ನನ್ನ ಆಯ್ಕೆ ಪ್ರೊ. ಡಿ. ರಘುನಾಥರಾವ್ ಅವರ ನಾಲ್ಕನೇ ವಿಮರ್ಶಾ ಸಂಕಲನ `ಪರಿಪ್ರೇಕ್ಷ್ಯ'.

ಹದಿನೈದು ವರ್ಷಗಳ ಬಳಿಕ ಹೊರ ಬಂದ ಅವರ ವಿಮರ್ಶಾ ಸಂಕಲನದಲ್ಲಿ ಒಟ್ಟು 15 ಲೇಖನಗಳಿವೆ. ಪಠ್ಯವನ್ನು ಬಿಡದೆ ಸಾಹಿತ್ಯದ ಯುಗಧರ್ಮವನ್ನು ಹೇಗೆ ಗ್ರಹಿಸಬಹುದೆಂಬುದನ್ನು ಅವು ಕಲಿಸಿಕೊಡುತ್ತವೆ.

ಅಧ್ಯಾತ್ಮ-ವಿಜ್ಞಾನ ಎರಡೂ ಮುಖ್ಯ ಎನ್ನುವ ಕುವೆಂಪು ಹಾಗೂ ವೈಜ್ಞಾನಿಕ ಚಿಂತನೆಯನ್ನು ಎತ್ತಿಹಿಡಿಯುವ ಶಿವರಾಮ ಕಾರಂತ ಇಬ್ಬರ ಚಿಂತನೆಯನ್ನೂ ನವೋದಯ ಸಂದರ್ಭದಲ್ಲಿ ಹತ್ತಿರ ತಂದು ಚರ್ಚಿಸುವ ಅವರ ಈ ಸಂಕಲನದಲ್ಲಿರುವ ಲೇಖನ, ಆಳವಾದ ಓದು, ಚಿಂತನೆ, ವಿಶ್ಲೇಷಣೆಗಳ ಮೂಲಕ ಸಮಗ್ರವಾಗಿ ಕೃತಿಯನ್ನು ಗ್ರಹಿಸುವ ಪ್ರೊ. ಡಿ. ರಘುನಾಥರಾಯರ ವಿಮರ್ಶೆಯ ಒಳನೋಟಕ್ಕೆ ಉತ್ತಮವಾದೊಂದು ಉದಾಹರಣೆ.
-ಎಸ್.ಆರ್. ವಿಜಯಶಂಕರ್

ಸುಡುವ ಕಾಲದ ಸಾಕ್ಷಿ

ಈ ವರ್ಷದ ಕೆಲ ಉತ್ತಮ ಪುಸ್ತಕ ಕೊಳ್ಳಲಾಗಲಿಲ್ಲ, ಕೊಂಡವನ್ನೆಲ್ಲ ಓದಲಾಗಲಿಲ್ಲ.
ಓದಿದ್ದರಲ್ಲಿ ರುದ್ರಮೂರ್ತಿ ಚೇರನ್ ಅವರ `ಎ ಸೆಕೆಂಡ್ ಸನ್‌ರೈಸ್' ಒಳ್ಳೆಯ ಪುಸ್ತಕ. ಶ್ರಿಲಂಕಾದ ತಮಿಳು ಕವಿ ಚೇರನ್ ಪ್ರೀತಿ, ಯುದ್ಧ, ಕಡಲ ಕವಿತೆಗಳ ನಡುವೆ ಓದುಗನನ್ನು ಸಂಧಿಸುತ್ತಾರೆ. ಅವರ ಕವನಗಳು ನೆಲೆ ಕಳೆದುಕೊಳ್ಳುತ್ತಿರುವ ಮನುಷ್ಯನ ನೋವಿನ ಹಾಡುಗಳು. ಗಡಿಗೆರೆಗಳ ಮಾನವಪ್ರಜ್ಞೆ ಸೃಷ್ಟಿಸುವ ಬಿಕ್ಕಟ್ಟುಗಳೇ ಸಂಘರ್ಷಕ್ಕೆ ಕಾರಣವಾಗಿರುವ ನಾಗರಿಕತೆಯ ಕಾಲಘಟ್ಟದಲ್ಲಿ, ಸುಡುವ ಕಾಲದ ಸಾಕ್ಷಿಯಾಗಿ ಚೇರನ್ ಕವಿತೆಗಳಿವೆ.

ಒಂದೇ ನೆಲದಲ್ಲಿ ಎರಡು ರಾಷ್ಟ್ರೀಯತೆಗಳು ಸಂಘರ್ಷಕ್ಕಿಳಿದರೆ ಏನಾಗಬಹುದೆನ್ನುವುದಕ್ಕೆ ಶ್ರಿಲಂಕಾ ಒಂದು ಉದಾಹರಣೆ. ತನ್ನೆಲ್ಲ ಕವಿತೆಗಳನ್ನು ಸುಟ್ಟು ಆತ್ಮಹತ್ಯೆ ಮಾಡಿಕೊಂಡ 23 ವರ್ಷದ ಕವಿ ಶಿವರಮಣಿ; 90 ಸಾವಿರ ತಮಿಳುಗ್ರಂಥಗಳು ಮತ್ತು ತಮಿಳರ ಸಹಿತ ಹೊತ್ತುರಿದ ಜಾಫ್ನಾ; `ನಾಪತ್ತೆ' ಲಿಸ್ಟಿನಲ್ಲಿದ್ದವರು ಚೆನ್ನಣಿಯ ಗೋರಿಗಳಲ್ಲಿ ಮರುಪತ್ತೆಯಾದದ್ದು;

ಗಾಯದ ಮೇಲೆ ಬರೆ ಎಳೆದ ಸುನಾಮಿ; ಇದರೊಡನೆಯೇ ಉಸಿರಾಡುವ ಪ್ರೇಮ-ವಿರಹ-ಮಿಲನ - ಇವು ಚರಿತ್ರೆಯಾಗಲಿರುವ ದಾಖಲೆಗಳಂತೆ ಅವರ ಕವಿತೆಯಲ್ಲಿ ಮೂಡಿವೆ. ದುರಂತ-ದಾರುಣ ಬದುಕಿನಲ್ಲೂ ಏನೋ ಹೊಸದು ಸಂಭವಿಸಬಹುದೆಂದು ಕಾಯುವ; ಬೆಂಕಿಯಿಂದ ಏಳುವ ಜ್ವಾಲೆಯನ್ನೂ ಎರಡನೆಯ ಸೂರ್ಯೋದಯ ಎಂದು ಭಾವಿಸುವ; ಚಿಗುರಲಿರುವ ಮರವನ್ನು ತದೇಕವಾಗಿ ದಿಟ್ಟಿಸುವ ನೊಂದವರ ಎದ್ದು ನಿಲ್ಲುವ ಛಲವು ಕವಿತೆಗಳಾಗಿ ಸಾಕಾರಗೊಂಡಿವೆ. ಎಂದೇ ಮನಮುಟ್ಟುತ್ತವೆ.
-ಡಾ. ಎಚ್.ಎಸ್. ಅನುಪಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT