ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ವರ್ಷದ ಪದವಿ ತರಗತಿ: ವಿರೋಧ

ದೆಹಲಿ ವಿಶ್ವವಿದ್ಯಾಲಯ
Last Updated 28 ಮೇ 2014, 11:20 IST
ಅಕ್ಷರ ಗಾತ್ರ

ಮಂಗಳೂರು: ವಿದೇಶಿ ವಿಶ್ವವಿದ್ಯಾಲಯಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ತರಗತಿಗಳನ್ನು ನಾಲ್ಕು ವರ್ಷದ ಅವಧಿಗೆ ವಿಸ್ತರಿಸಿ ಕಡ್ಡಾಯಗೊಳಿಸಿದ್ದು ಇದರಿಂದ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನ­ಗತ್ಯ ಹೊರೆಯಾಗುತ್ತಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ರಾಜ್ಯ ಕಾರ್ಯದರ್ಶಿ, ದೆಹಲಿಯ ಸಾಕೇತ್‌ ಬಹುಗುಣ ಹೇಳಿದ್ದಾರೆ.

ನಾಲ್ಕು ದಿನಗಳ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯು ಮಂಗಳೂರಿನಲ್ಲಿ ಸೋಮವಾರದಿಂದ ನಡೆಯುತ್ತಿದ್ದು, ಇದರ ಭಾಗವಾಗಿ ಮಂಗಳವಾರ ಸಂಘನಿಕೇತನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಈ ಹೊಸ ಶಿಕ್ಷಣ ಪದ್ಧತಿಯನ್ನು ವಿರೋಧಿಸುವ ನಿರ್ಣಯ ಅಂಗೀಕರಿಸಿದೆ ಎಂದರು.

ಈ ಪದ್ಧತಿಯು ರಾಷ್ಟ್ರೀಯ ಶಿಕ್ಷಣ ನೀತಿಯ ಸ್ಪಷ್ಟ ಉಲ್ಲಂಘನೆಯಾಗಿದ್ದು ದೇಶದಲ್ಲಿ ಎರಡು ರೀತಿಯ ಪದವಿ ಶಿಕ್ಷಣ ಪದ್ಧತಿ ಜಾರಿಗೊಳಿಸಿದಂತಾಗಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿ ಪ್ರವೇಶಾವಕಾಶಗಳನ್ನು ಮತ್ತು ಸಂಪನ್ಮೂಲಗಳನ್ನು ಹೆಚ್ಚಿಸುವ ಬದಲಾಗಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ಹೆಚ್ಚಿಸುವ ಪದ್ಧತಿ ಇದಾಗಿದೆ ಎಂದು ಹೇಳಿದರು.

ಈಗಿರುವ ಕೋರ್ಸಿಗೆ ಒಂದು ವರ್ಷದ ಫೌಂಡೇಷನ್‌ ಕೋರ್ಸನ್ನು ಸೇರಿಸಿ ನಾಲ್ಕು ವರ್ಷಗಳವರೆಗೆ ವಿಸ್ತರಿಸಲಾಗಿದೆ. ವಿದೇಶಗಳಲ್ಲಿ ಇಂತಹ ಪದ್ಧತಿಯಿದೆ ಎಂಬ ಕಾರಣಕ್ಕಾಗಿ ಈ ರೀತಿ ಕೋರ್ಸ್‌ ವಿನ್ಯಾಸ ಮಾಡಲಾಗಿದೆ. ಆದರೆ ವಾಸ್ತವವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಅಂತಾರಾಷ್ಟ್ರೀಯ ಮಾನದಂಡವನ್ನು ಸೃಷ್ಟಿಸುವ ಸಾಮರ್ಥ್ಯ ಭಾರತಕ್ಕೆ ಇದೆ ಎಂದು ಅವರು ವಿವರಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿಯೂ ನಾಲ್ಕು ವರ್ಷಗಳ ಪದವಿ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಇದರ ಸಾಧಕ ಬಾಧಕಗಳನ್ನು ಗಮನಿಸಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು. ಕೋರ್ಸುಗಳ ವಿನ್ಯಾಸ ಹಾಗೂ ವಿವಿಗಳ ಅನುದಾನ ಹೆಚ್ಚಳಕ್ಕೆ ಸಂಬಂಧಿಸಿ ಕೇಂದ್ರ ಮಾನವ ಸಂಪನ್ಮೂಲ ಸಚಿವರನ್ನು ಎಬಿವಿಪಿ ನಿಯೋಗ ಭೇಟಿ ಮಾಡಲಿದೆ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ವಿನಯ್‌ ಬಿದ್ರೆ ಹೇಳಿದರು.

ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಆರ್ಥಿಕ ಅನುದಾನ ಬಿಡುಗಡೆ ಮಾಡುವಂತೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮತ್ತೊಂದು ನಿರ್ಣಯ ಅಂಗೀಕರಿಸಲಾಗಿದೆ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ನಿಖಿಲ್‌ ರಂಜನ್‌ ಹೇಳಿದರು. ‘ಐಐಟಿ, ಐಐಎಂ ಮತ್ತು ಕೇಂದ್ರೀಯ ವಿವಿಗಳನ್ನು ಸ್ಥಾಪಿಸಿ ರಾಜ್ಯ ಸರ್ಕಾರಿ ವಿವಿಗಳನ್ನು ಕಡೆಗಣಿಸಲಾಗಿದೆ.

ಆರ್ಥಿಕ ಸಂಕಷ್ಟದಲ್ಲಿ ಇರುವ ರಾಜ್ಯ ಸರ್ಕಾರಿ ವಿವಿಗಳು ಯುಜಿಸಿಯ ಗಮನ ಸೆಳೆಯುವಲ್ಲಿ ವಿಫಲವಾಗಿವೆ. ಇದೂ ಕೂಡ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಮಾಡಿದ ಅನ್ಯಾಯವೇ ಆಗಿದೆ. ಆದ್ದರಿಂದ ಸರ್ಕಾರಿ ವಿವಿಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಗೆ ಆಗ್ರಹಿಸಲಾಗುವುದು’ ಎಂದು ಅವರು ಹೇಳಿದರು. 

ನೇಪಾಳದಲ್ಲಿ ಪ್ರಾಜ್ಞಿಕ್‌ ವಿದ್ಯಾರ್ಥಿ ಪರಿಷದ್‌ನ ಕಾರ್ಯಚಟುವಟಿಕೆಗಳ ಬಗ್ಗೆ ನೇಪಾಳದ ನಾರಾಯಣ ಪ್ರಸಾದ್‌ ಢಾಕಲ್‌ ಹಾಗೂ ಮಹಿಳಾ ಸುರಕ್ಷತೆಯ ಬಗ್ಗೆ ಒರಿಸ್ಸಾದ ಗೀತಾಂಜಲಿ ಜನಾ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT