ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5,8ನೆ ತರಗತಿಗೆ ಕಡ್ಡಾಯ ಪರೀಕ್ಷೆ

ಓದದ ಮಕ್ಕಳ ಅನುತ್ತೀರ್ಣ: ಸಚಿವ ಕಿಮ್ಮನೆ
Last Updated 9 ಸೆಪ್ಟೆಂಬರ್ 2014, 20:09 IST
ಅಕ್ಷರ ಗಾತ್ರ

ನವದೆಹಲಿ: ಸರಿಯಾಗಿ ಓದದ ಮಕ್ಕಳನ್ನು ಅನುತ್ತೀರ್ಣಗೊಳಿಸುವ ಪದ್ಧತಿಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಉದ್ದೇಶಿಸಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದ ಐದು ಮತ್ತು ಎಂಟನೇ ತರಗತಿಗೆ ಕಡ್ಡಾಯವಾಗಿ ಪರೀಕ್ಷೆ ನಡೆಸಿ, ಫಲಿ­ತಾಂಶ ಪ್ರಕಟಿಸುವ ಪದ್ಧತಿ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮಂಗಳ­ವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹೊಸ ಶಿಕ್ಷಣ ನೀತಿಯಡಿ ಅಳವಡಿಸ­ಲಾಗಿರುವ ‘ನಿರಂತರ ಸಮಗ್ರ ಶಿಕ್ಷಣ’ (ಸಿಸಿಇ) ಕಾರ್ಯಕ್ರಮದಡಿ ಒಂದ­ರಿಂದ ಒಂಬತ್ತನೇ ತರಗತಿವರೆಗಿನ ಮಕ್ಕಳನ್ನು ಅನುತ್ತೀರ್ಣ ಮಾಡು­ವಂತಿಲ್ಲ. ಇದರಿಂದ ಶಿಕ್ಷಣ ಗುಣಮಟ್ಟ ಕಡಿಮೆಯಾಗುತ್ತಿದ್ದು, ಯಾವು­ದಾ­ದರೂ ಹಂತದಲ್ಲಿ ಮಕ್ಕಳನ್ನು ಅನು­ತ್ತೀರ್ಣಗೊಳಿಸುವ ಪದ್ಧತಿ ಜಾರಿಗೆ ತರಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಐದು ಮತ್ತು ಎಂಟನೇ ತರಗತಿಗೆ ಜಿಲ್ಲಾ ಮಟ್ಟದಲ್ಲಿ ಅಥವಾ ತಾಲೂಕು ಮಟ್ಟದಲ್ಲಿ ಪರೀಕ್ಷೆ ನಡೆಸಬೇಕೇ ಎಂದು ಪರಿಶೀಲಿಸಿ ನಿರ್ಧಾರ ಮಾಡಲಾಗು­ವುದು  ಎಂದು ಅವರು ವಿವರಿಸಿದರು.

ಪಠ್ಯ ಪುಸ್ತಕ  ಪರಿಷ್ಕರಣೆ: ಶಾಲಾ, ಕಾಲೇಜು ಪಠ್ಯ ಪುಸ್ತಕಗಳ ಪರಿಷ್ಕರ­ಣೆಗೆ ಶೀಘ್ರ ಹೊಸ ತಜ್ಞರ ಸಮಿತಿ ರಚಿಸಲಾಗುವುದು. ಹಿಂದಿನ ಸಮಿತಿ ಅವಧಿ ಏಪ್ರಿಲ್‌ನಲ್ಲಿ ಮುಗಿದಿದೆ. ಸಮಿತಿ ಅಧ್ಯಕ್ಷರು ಮತ್ತು ಸದಸ್ಯರನ್ನು ಅಂತಿಮಗೊಳಿಸಲಾಗುತ್ತಿದ್ದು, ಒಂದೆರಡು ವಾರದಲ್ಲಿ ಅಧಿಕೃತ ಪ್ರಕಟಣೆ ಹೊರ ಬೀಳಲಿದೆ.

ಶಿಕ್ಷಣ ಸಲಹಾ ಮಂಡಳಿ ಶಿಫಾರಸು
ಐದು ಹಾಗೂ ಎಂಟನೇ ತರಗತಿ ಮಕ್ಕಳಿಗೆ ಪರೀಕ್ಷೆ ಕಡ್ಡಾಯಗೊಳಿಸುವ ಪ್ರಕ್ರಿಯೆಗೆ ಹರಿಯಾಣ, ಪಂಜಾಬ್‌, ರಾಜಸ್ತಾನ ಹಾಗೂ ಹಿಮಾಚಲ ಪ್ರದೇಶ ಸರ್ಕಾರಗಳು  ಈಗಾಗಲೇ ಚಾಲನೆ ನೀಡಿವೆ.

ಕೇಂದ್ರ ಶಿಕ್ಷಣ ಸಲಹಾ ಮಂಡಳಿಯ ಉಪ ಸಮಿತಿ, ಶಿಕ್ಷಣದ ಗುಣಮಟ್ಟ ಕಡಿಮೆ ಆಗುತ್ತಿರುವುದರಿಂದ ಐದು ಮತ್ತು ಎಂಟನೇ ತರಗತಿ ಮಕ್ಕಳಿಗೆ ಪರೀಕ್ಷೆ ಕಡ್ಡಾಯ ಮಾಡಿ, ಅನುತ್ತೀರ್ಣ ಪದ್ಧತಿ ಜಾರಿಗೆ ತರ­ಬೇಕು ಎಂದು ಶಿಫಾರಸು ಮಾಡಿದೆ.

ಹಿಂದಿನ ಯುಪಿಎ ಸರ್ಕಾರ ಹರಿಯಾಣ ಶಿಕ್ಷಣ ಸಚಿವರಾದ ಗೀತಾ ಬುಕ್ಕಲ್‌ ನೇತೃತ್ವದಲ್ಲಿ ಉಪ ಸಮಿತಿ ರಚಿಸಿತ್ತು. ಈ ಸಮಿತಿ ಕೇಂದ್ರ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದೆ. ಐದು, ಎಂಟನೇ ತರಗತಿ ಮಟ್ಟದಲ್ಲಿ ಪರೀಕ್ಷೆ ನಡೆಸುವುದರಿಂದ ಮಕ್ಕಳು ಓದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಶಿಕ್ಷಕರಿಗೂ ಹೊಣೆ­ಗಾರಿಕೆ ಹೆಚ್ಚ­ಲಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ರಾಜ್ಯವೂ ಪಂಜಾಬ್‌ ಮತ್ತಿತರ ರಾಜ್ಯಗಳನ್ನು ಅನುಸರಿಸಲು ಉದ್ದೇಶಿ­ಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT