ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

98 ಬಸ್‌ಗಳಿಂದ ₨30 ಕೋಟಿ ನಷ್ಟ

ಬಿಎಂಟಿಸಿಗೆ ಮಾರ್ಕೊಪೋಲೊ ಹೊರೆ
Last Updated 20 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಕಳೆದ ನಾಲ್ಕು ವರ್ಷಗಳಲ್ಲಿ 98 ಮಾರ್ಕೊಪೋಲೊ ಬಸ್‌ಗಳ ಸಂಚಾರದಿಂದ ₨30 ಕೋಟಿ ನಷ್ಟ ಅನುಭವಿಸಿದೆ. ಸಂಸ್ಥೆ ಸಿದ್ಧಪಡಿಸಿದ ಆಂತರಿಕ ವರದಿಯಿಂದ ಈ ಅಂಶ ಬೆಳಕಿಗೆ ಬಂದಿದೆ.

ಮಾರ್ಕೊಪೋಲೊ ಸೇವೆ ಬಗ್ಗೆ ವ್ಯಾಪಕ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸಂಸ್ಥೆ ಆಂತರಿಕ ವರದಿಯನ್ನು ಸಿದ್ಧಪಡಿಸಿತ್ತು. ಒಪ್ಪಂದದ ಪ್ರಕಾರ ಈ ಬಸ್‌ಗಳು 8 ವರ್ಷಗಳ ಕಾಲ ಸಂಚಾರ ನಡೆಸಬೇಕಿದೆ. ನಾಲ್ಕು ವರ್ಷಗಳ ಸಂಚಾರದಿಂದಲೇ ಸಂಸ್ಥೆ ಭಾರಿ ಪ್ರಮಾಣದಲ್ಲಿ ನಷ್ಟ ಅನುಭವಿಸಿದೆ. ಒಂದು ವೇಳೆ ಉಳಿದ ನಾಲ್ಕು ವರ್ಷಗಳ ಕಾಲ ಮಾರ್ಕೊಪೋಲೊ ಸೇವೆ ಮುಂದುವರಿಸಿದರೆ ಸಂಸ್ಥೆ ಇನ್ನೂ ₨60ರಿಂದ 70 ಕೋಟಿ ನಷ್ಟ ಅನುಭವಿಸಲಿದೆ ಎಂದು ವರದಿಯಲ್ಲಿ ಎಚ್ಚರಿಸ­ಲಾಗಿದೆ. ಈ ಕಾರಣದಿಂದ ಈ ಬಸ್‌ಗಳ ಸೇವೆ ಸ್ಥಗಿತಗೊಳಿಸಲು ಸಂಸ್ಥೆ ಮುಂದಾಗಿದೆ. ಜೆನರ್ಮ್‌ ಅನುದಾನದಿಂದ ಬಸ್‌ಗಳ ಖರೀದಿ ಮಾಡಿರುವುದರಿಂದ ಸೇವೆ ಸ್ಥಗಿತಗೊಳಿಸಲು ಸಚಿವ ಸಂಪುಟದ ಒಪ್ಪಿಗೆ ಬೇಕಿದೆ.

ವೈಫಲ್ಯದ ಹಾದಿ: ನಗರದ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಮಾರ್ಕೊ­ಪೋಲೊ ಬಸ್‌ಗಳನ್ನು 2008–09ನೇ ಸಾಲಿನಲ್ಲಿ ಖರೀದಿ ಮಾಡಲಾಗಿತ್ತು. ಖರೀದಿಗೆ ಕೇಂದ್ರ ಸರ್ಕಾರದ ಶೇ 35, ರಾಜ್ಯ ಸರ್ಕಾರದ ಶೇ 15 ಅನುದಾನ ಸಿಕ್ಕಿತ್ತು. ಉಳಿದ ಶೇ 50 ಮೊತ್ತ­ವನ್ನು ಬಿಎಂಟಿಸಿ ಭರಿಸಿತ್ತು. ಪ್ರತಿ ಬಸ್‌ಗೆ ₨30 ಲಕ್ಷ ನೀಡಿ ಖರೀದಿ ಮಾಡಲಾಗಿತ್ತು. 98 ಬಸ್‌ಗಳ ಖರೀದಿಗೆ ₨31 ಕೋಟಿ ಖರ್ಚು ಮಾಡಲಾಗಿತ್ತು. ಮೈಲೇಜ್‌ ಕಡಿಮೆ, ಹೊಗೆ ಜಾಸ್ತಿ ಬರುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಟಾಟಾ ಕಂಪೆನಿಯೇ ಉಚಿತವಾಗಿ 96 ಬಸ್‌ಗಳ ಎಂಜಿನ್‌ ಅನ್ನು ಬದಲಿಸಿತ್ತು.

ಈ ಬಸ್‌ಗಳ ಕಾರ್ಯಾಚರಣೆ ಬಗ್ಗೆ ಆರಂಭ­ದಿಂದಲೇ ಪ್ರಯಾಣಿಕ­ರಿಂದ ಅಸಮಾಧಾನ ವ್ಯಕ್ತವಾಗಿತ್ತು. ಜಾಸ್ತಿ ಹೊಗೆ ಉಗುಳುತ್ತದೆ

ಎಂಬ ದೂರು ಇತ್ತು. ಎಂಜಿನ್‌ ಕೈಕೊಟ್ಟು ಪದೇ ಪದೇ ನಡು ಹಾದಿಯಲ್ಲಿ ನಿಲ್ಲುತ್ತಿತ್ತು. ಈ ನಡುವೆ ಪ್ರಯಾಣಿಕರ ಸಂಖ್ಯೆಯು ನಿರೀಕ್ಷಿತ ಪ್ರಮಾಣದಲ್ಲಿ ಇರಲಿಲ್ಲ. ಈ ಬಸ್‌ಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಬಿಎಂಟಿಸಿ ಈ ಬಸ್‌ಗಳ ಪ್ರಯಾಣ ದರವನ್ನು ವೋಲ್ವೊ ಬಸ್‌ಗಿಂತ ಶೇ 50ರಷ್ಟು ಕಡಿಮೆ ಮಾಡಿತ್ತು.

ಅಲ್ಲದೆ ವೋಲ್ವೊ ಮಾರ್ಗದಲ್ಲಿ ಈ ಬಸ್‌ಗಳ ಓಡಿಸಲಾಯಿತು. ಈ ಪ್ರಯೋಗ ಕೂಡಾ ವಿಫಲ­ವಾಯಿತು. ಬಸ್ ಹಳೆಯದಾಗುತ್ತಾ ಬಂದಂತೆ ಮಾಲಿನ್ಯ ಪ್ರಮಾಣ ವ್ಯಾಪಕವಾಗಿ ಹೆಚ್ಚಾಯಿತು. ಪದೇ ಪದೇ ರಿಪೇರಿ ಮತ್ತಿತರ ಕಾರಣಗಳಿಂದಾಗಿ ಆದಾಯಕ್ಕಿಂತ ಖರ್ಚಿನ ಮೊತ್ತವೇ ಬೆಟ್ಟದಂತೆ ಏರುತ್ತಾ ಹೋಯಿತು. ಈ ಬಸ್‌ ಸೇವೆ ಸ್ಥಗಿತಗೊಳಿಸುವಂತೆ ಆಗ್ರಹ ಕೂಡಾ ಕೇಳಿ ಬಂತು.

ಬಿಎಂಟಿಸಿ ಇತ್ತೀಚೆಗೆ 4–5 ಬಸ್‌ಗಳನ್ನು ಪ್ರಾಯೋಗಿಕವಾಗಿ ಹವಾನಿಯಂತ್ರಿತ­ರಹಿತವನ್ನಾಗಿ ಮಾಡಿತ್ತು. ಕಳೆದ 3–4 ವರ್ಷಗಳಲ್ಲಿ ಬಿಎಂಟಿಸಿ ಅನುಭವಿಸಿರುವ ನೂರಾರು ಕೋಟಿ ನಷ್ಟಕ್ಕೆ ಮಾರ್ಕೊಪೋಲೊ ಕೊಡುಗೆ ಸಹ ದೊಡ್ಡ ಪ್ರಮಾಣದಲ್ಲಿತ್ತು. ಈ ಎಲ್ಲ ಕಾರಣಗಳಿಂದ ಮಾರ್ಕೊಪೋಲೊ ಸೇವೆಯ ಸಾಧಕ ಬಾಧಕಗಳ ಬಗ್ಗೆ ಆಂತರಿಕ ವರದಿ ಸಿದ್ಧಪಡಿಸಿತ್ತು.

ರಾಜ್ಯ ಸರ್ಕಾರದಿಂದ ಶೀಘ್ರ ಒಪ್ಪಿಗೆ: ‘ಮಾರ್ಕೊಪೋಲೊ ಸೇವೆಯನ್ನು ಪ್ರಯಾಣಿಕ ಸ್ನೇಹಿಯನ್ನಾಗಿ ಮಾಡಲು ಎಲ್ಲ ಪ್ರಯೋಗ ಮಾಡಲಾಗಿದೆ. ಹವಾನಿಯಂತ್ರಿತ ರಹಿತ ಸೇವೆಯನ್ನಾಗಿಯೂ ಪರಿವರ್ತಿಸಿ ನೋಡ­ಲಾಯಿತು. ಆದರೆ, ಫಲ ನೀಡಲಿಲ್ಲ. ಆದಾಯ­ಕ್ಕಿಂತ ಖರ್ಚೇ ದುಪ್ಪಟ್ಟು ಆಯಿತು. ಹೀಗಾಗಿ ಬಸ್‌ ಸೇವೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸ ಲಾಗಿದೆ. ಅರ್ಧದಲ್ಲೇ ಸೇವೆ ಸ್ಥಗಿತಗೊಳಿಸಲು ರಾಜ್ಯ ಸರ್ಕಾರದ ಒಪ್ಪಿಗೆ ಬೇಕು. ಹೀಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಏಕ್‌ರೂಪ್‌ ಕೌರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿ ಕಿ.ಮೀಗೆ ₨27 ನಷ್ಟ
ಮಾರ್ಕೊಪೋಲೊ ಬಸ್‌ಗಳ ಸಂಚಾರದಿಂದ ಬಿಎಂಟಿಸಿ ಪ್ರತಿ ಕಿ.ಮಿಗೆ ಸರಾಸರಿ ₨27 ನಷ್ಟ ಅನುಭವಿಸುತ್ತಿದೆ. ಕೆಲವು ಮಾರ್ಗಗಳಲ್ಲಿ ನಷ್ಟ ಪ್ರಮಾಣ ₨22 ಇದ್ದರೆ, ಮತ್ತೆ ಹಲವು ಮಾರ್ಗಗಳಲ್ಲಿ ನಷ್ಟ ಪ್ರಮಾಣ ₨35 ಇದೆ. ಮಾರ್ಕೊ­ಪೋಲೋ ಬಸ್‌ಗಳು ಒಂದು ಲೀಟರ್‌ ಡೀಸೆಲ್‌ಗೆ ಗರಿಷ್ಠ 1.8 ಕಿ.ಮೀ. ಮೈಲೇಜ್‌ ನೀಡುತ್ತವೆ. ಆದರೆ, ನಗರದಲ್ಲಿ ಈ ಬಸ್‌ಗಳು ನೀಡಿರುವ ಮೈಲೇಜ್‌ 1.5 ಕಿ.ಮೀ. ಈ ಬಸ್‌ಗಳ ನಿರ್ವಹಣಾ ವೆಚ್ಚವೂ ದುಬಾರಿ. ಹಳೆಯ ಮಾದರಿಯ ವೋಲ್ವೊ ಬಸ್‌ಗಳು ಒಂದು ಲೀಟರ್‌ ಡೀಸೆಲ್‌ಗೆ 2.2 ಕಿ.ಮೀ.ಯಿಂದ 2.5 ಕಿ.ಮೀ. ವರೆಗೆ ಮೈಲೇಜ್‌ ನೀಡುತ್ತಿದ್ದವು. ಹೊಸ ಮಾದರಿಯ ವೋಲ್ವೊಗಳು 3.5 ಕಿ.ಮೀ. ವರೆಗೆ ಮೈಲೇಜ್‌ ನೀಡುತ್ತಿವೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT