ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೇ ರಾಗ ಅದೇ ಹಾಡು!

ಸರ್ಕಾರಿ ಜಾಲತಾಣ
Last Updated 6 ನವೆಂಬರ್ 2013, 6:53 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಿಗೆ ಸೇರಿರುವ ಒಟ್ಟು 79 ಅಧಿಕೃತ ಜಾಲತಾಣಗಳಲ್ಲಿ ಕನ್ನಡ ಇರುವುದು ಎಂಟರಲ್ಲಿ ಮಾತ್ರ.

ಇವು­ಗಳಲ್ಲಿ ಮೂರರಲ್ಲಿ ಮಾತ್ರ ಯೂನಿಕೋಡ್ ಶಿಷ್ಟತೆಯ ಅನ್ವಯ ಕನ್ನಡ ಬಳಸಲಾಗುತ್ತಿದೆ ಎಂದು ಸರ್ಕಾರವೇ ನೀಡಿರುವ ಅಂಕಿ­ಅಂಶಗಳು ಹೇಳುತ್ತಿವೆ.

ಸೆಂಟರ್ ಫಾರ್ ಇಂಟರ್‌ನೆಟ್ ಅಂಡ್ ಸೊಸೈಟಿ ಮಾಹಿತಿ ಹಕ್ಕು ಕಾಯ್ದೆ­ಯನ್ವಯ ಕೇಳಿದ್ದ ಮಾಹಿತಿಗೆ ಉತ್ತರಿಸಿರುವ ಕರ್ನಾಟಕ ಸರ್ಕಾರದ ಇ-ಆಡಳಿತ ವ್ಯವಸ್ಥೆಯನ್ನು ನೋಡಿ­ಕೊಳ್ಳುವ ‘ಇ-ಆಡಳಿತ’ ಕೇಂದ್ರ ಮಾಹಿತಿ ಅಧಿಕಾರಿ ನೀಡಿರುವ ಈ ಮಾಹಿತಿಯೂ ಸಂಪೂರ್ಣ ನಿಜವಲ್ಲ. ಕರ್ನಾಟಕ ಸರ್ಕಾರದ ಅಧಿಕೃತ ಪೋರ್ಟಲ್ karunadu.gov.inನಲ್ಲಿರುವ ಮಾಹಿತಿಯನ್ನು ಸೂಕ್ಷ್ಮವಾಗಿ
ವಿಶ್ಲೇಷಿ­ಸುತ್ತಾ ಹೋದರೆ ಸಿಗುವ ಚಿತ್ರಣವೇ ಬೇರೆ.

2012ರ ನವೆಂಬರ್ ಒಂದರಂದು ‘ಪ್ರಜಾವಾಣಿ’ ಪ್ರಕಟಿಸಿದ್ದ ‘ಸರ್ಕಾರಿ ಜಾಲತಾಣ: ಕನ್ನಡಕ್ಕೆ ಏಳರ ಕಾಟ’ ಒಂದು ವರ್ಷದ ನಂತರವೂ ಪ್ರಸ್ತುತ­ವಾಗಿಯೇ ಉಳಿದಿರುವ ಸ್ಥಿತಿ ಇದೆ. ಈ ಜಾಲತಾಣಗಳ ವಿಭಾಗ ಪುಟಗಳನ್ನು ಪರಿಶೀಲಿಸಿದರೆ ಅಲ್ಲಿ ಇಂಗ್ಲಿಷ್ ನುಸುಳಿ­­ರುವುದಲ್ಲದೆ ಪಿಡಿಎಫ್ ಕಡತ­ಗಳೂ ಸೇರಿಕೊಂಡಿವೆ.

ಈ ಜಾಲತಾಣಗಳ ವಿಭಾಗಗಳಲ್ಲಿ 249 ಪುಟಗಳು, 30 ಪಿಡಿಎಫ್ ಕಡ­ತ­­­ಗಳಿವೆ. ಅದರಲ್ಲಿ 227 ಕನ್ನಡ ಪುಟ­ಗಳಿದ್ದು, 22 ಪುಟಗಳು
ಇಂಗ್ಲಿಷ್‌­ನಲ್ಲಿವೆ. ಪಿಡಿಎಫ್ ಕಡತಗಳಲ್ಲಿ 21 ಕಡತಗಳು ಇಂಗ್ಲಿಷ್‌­ನಲ್ಲಿದ್ದು, ಕೇವಲ 9 ಕಡತಗಳು ಕನ್ನಡದಲ್ಲಿವೆ.

ಎಲ್ಲದಕ್ಕಿಂತ ಹೆಚ್ಚಾಗಿ ಈ ಪಿಡಿಎಫ್ ಪುಟಗಳೂ ಯೂನಿಕೋಡ್ ಶಿಷ್ಟತೆ ಬಳಸಿಕೊಳ್ಳದೇ ಇರುವುದರಿಂದ ಗೂಗಲ್‌ನಂಥ ಮಾಹಿತಿ ಶೋಧ ಸೌಲಭ್ಯದ ಮೂಲಕವೂ ಇವುಗಳನ್ನು ಕಂಡುಕೊಳ್ಳಲೂ ಸಾಧ್ಯವಿಲ್ಲ.

ತಪ್ಪು ಮಾಹಿತಿ: ಕನ್ನಡದಲ್ಲಿ 8 ಜಾಲತಾಣಗಳಿವೆ ಎಂದು ನೀಡಿರುವ ಮಾಹಿತಿಯೂ ತಪ್ಪಾಗಿದೆ. 6 ಜಾಲತಾಣಗಳು ಮಾತ್ರ ಕನ್ನಡದಲ್ಲಿವೆ. ಕರ್ನಾಟಕ ರಾಜ್ಯ ಬಾಲ ಕಾರ್ಮಿಕರ ಇಲಾಖೆ ಜಾಲತಾಣದಲ್ಲಿ ಕನ್ನಡ ಆಯ್ಕೆಯ ಅವಕಾಶವೇ ಇಲ್ಲ. ಹಾಗೆಯೇ ರಾಜ್ಯ ಪುನರ್ ರಚನಾ ಸಮಿತಿ ಜಾಲತಾಣದ ಒಂದು ಪುಟ ಮಾತ್ರ ಕನ್ನಡದಲ್ಲಿ (ಅದೂ ಪಿಡಿಎಫ್) ಇದೆ. ಉಳಿದಂತೆ ಎಲ್ಲಾ ಮಾಹಿತಿಗಳೂ ಇಂಗ್ಲಿಷ್‌ನಲ್ಲಿವೆ.

ಯೂನಿಕೋಡ್‌ ಜಾಲತಾಣ: ಯೂನಿಕೋಡ್‌ನಲ್ಲಿ ಮೂರು ಜಾಲ ತಾಣಗಳಿವೆ ಎಂಬುದು ಸರ್ಕಾರ ನೀಡುತ್ತಿರುವ ಮಾಹಿತಿ. ಇದನ್ನು

ಪರಿಶೀಲಿಸ ಹೊರಟರೆ ನಮಗೆ ಸಿಗುವುದು ಎರಡು ಯೂನಿಕೋಡ್ ಜಾಲ ತಾಣಗಳು ಮಾತ್ರ. ಕರ್ನಾಟಕ ಔಷಧಿ ಸಸ್ಯಗಳ ಪ್ರಾಧಿಕಾರ ಜಾಲತಾಣವು ಯೂನಿಕೋಡ್‌ನಲ್ಲಿಲ್ಲ. ಫ್ಲಾಷ್ ತಂತ್ರಜ್ಞಾನ ಬಳಸಿ ಮಾಹಿತಿ ಸಂಗ್ರಹಿಸಲಾಗಿದೆ.  ಆದರೆ ಸರ್ಕಾರ ಇದನ್ನು ಯೂನಿಕೋಡ್ ಜಾಲತಾಣದ ಪಟ್ಟಿಗೆ ಸೇರಿಸಿದೆ.

ಇನ್ನೊಂದೆಡೆ ತುಮಕೂರು ಜಿಲ್ಲಾ ಪಂಚಾಯತ್ ಜಾಲತಾಣವು ಯೂನಿಕೋಡ್‌ನಲ್ಲಿದೆ. ಆದರೆ ಸರ್ಕಾರದ ಮಾಹಿತಿಯಲ್ಲಿ ಅದನ್ನು ಯೂನಿಕೋಡ್ ಅಲ್ಲದ ಜಾಲತಾಣದ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಂತೆಯೇ, ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಜಾಲತಾಣವು ಯೂನಿಕೋಡ್‌­ನಲ್ಲಿದೆ. ಆದರೆ, ಅದನ್ನು ಕನ್ನಡ ಲಿಪಿಯಲ್ಲಿರುವ ಜಾಲತಾಣಗಳ ಪಟ್ಟಿಯಿಂದಲೇ ಕೈಬಿಡಲಾಗಿದೆ.

ಸಂಪೂರ್ಣ ಕನ್ನಡ ಜಾಲತಾಣಗಳು: ಕೆಲವು ಇಲಾಖೆಗಳು ಸಂಪೂರ್ಣ­ವಾಗಿ ಕನ್ನಡದಲ್ಲಿ ಮಾಹಿತಿ ಒದಗಿಸುವ ಪ್ರಯತ್ನ ಮಾಡಿವೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ, ಕರ್ನಾಟಕ ಔಷಧಿ ಸಸ್ಯಗಳ ಪ್ರಾಧಿಕಾರ, ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜಾಲತಾಣಗಳು ಸಂಪೂರ್ಣವಾಗಿ ಕನ್ನಡದಲ್ಲಿ ಮಾಹಿತಿ ಒದಗಿಸುತ್ತವೆ. ಪಶು ಸಂಗೋಪನೆ ಮತ್ತು ವೈದ್ಯಕೀಯ ಇಲಾಖೆ, ತುಮಕೂರು ಜಿಲ್ಲಾ ಪಂಚಾಯತ್ ಹಾಗೂ ರೇಷ್ಮೆ ಇಲಾಖೆ  ಜಾಲತಾಣ­ಗಳಲ್ಲಿ ಕೆಲವು ಇಂಗ್ಲಿಷ್ ಪುಟಗಳು, ಪಿಡಿಎಫ್ ಕಡತಗಳಿವೆ.

ಸಂಪೂರ್ಣ ಯೂನಿಕೋಡ್‌: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಸಂಪೂರ್ಣವಾಗಿ ಯೂನಿಕೋಡ್‌ನಲ್ಲಿವೆ. ಇವೆಲ್ಲವುಗಳ ಜತೆಗೆ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಾಲತಾಣದ ಮುಖ್ಯ ಪುಟಗಳು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿವೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಾಲತಾಣ ಸಹ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾಹಿತಿ ಒದಗಿಸುತ್ತವೆ.

ಸಮಸ್ಯೆಗಳು: ಸರ್ಕಾರದ ಜಾಲತಾಣಗಳು ಪುಟಗಳಿ­ಗಿಂತ ಹೆಚ್ಚಾಗಿ ಪಿಡಿಎಫ್ ಕಡತಗಳನ್ನೇ ಒಳಗೊಂಡಿದೆ. ಇದರಲ್ಲಿ ಸಾಕಷ್ಟು ಕಡತಗಳ ಮಾಹಿತಿ ಲಭ್ಯವಿಲ್ಲ.

ರೇಷ್ಮೆ ಇಲಾಖೆಯ ಅಂತರ್ಜಾಲ ತಾಣವು ಕನ್ನಡದಲ್ಲಿ ಇದೆಯಾದರೂ ಯೂನಿಕೋಡ್‌ನಲ್ಲಿರದೆ ಬರಹದಲ್ಲಿದೆ. ಇದರಿಂದಾಗಿ ಕಂಪ್ಯೂಟರ್‌ನಲ್ಲಿ ಬರಹ ತಂತ್ರಾಂಶ ಇಲ್ಲದೆ ಮಾಹಿತಿಗಳನ್ನು ಓದಲು ಸಾಧ್ಯವಿಲ್ಲ. ಇನ್ನೂ ಕೆಲವು ಮಾಹಿತಿಗಳು ಪಿಡಿಎಫ್‌ನಲ್ಲಿದ್ದು ಇಂಗ್ಲಿಷ್‌ನಲ್ಲಿವೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ತಾಣದಲ್ಲಿ ಯೂನಿಕೋಡ್ ಹಾಗೂ ನುಡಿ ತಂತ್ರಾಂಶ ಎರಡನ್ನೂ ಬಳಸಿ ಮಾಹಿತಿ ಸಂಗ್ರಹಿಸಲಾಗಿದೆ. ಹೀಗಾಗಿ ಕಂಪ್ಯೂಟರ್‌ನಲ್ಲಿ ನುಡಿ ಅಕ್ಷರಗಳು ಇಲ್ಲದೆ ಕೆಲವು ಪುಟಗಳ ಮಾಹಿತಿಗಳು ಲಭ್ಯವಾಗುವುದಿಲ್ಲ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಜಾಲತಾಣದಲ್ಲಿ ಅನೇಕ ಲೇಖಕರ ಹೆಸರು ವಿಳಾಸಗಳ ಪಟ್ಟಿಯೊಂದಿತ್ತು. ಹೊಸ ಬ್ರೌಸರ್‌ಗಳಲ್ಲಿ ಇದನ್ನು ತೆರೆಯಲು ಸಾಧ್ಯವಾಗುವು­ದಿಲ್ಲ. ಫ್ಲ್ಯಾಷ್‌ ತಂತ್ರಜ್ಞಾನ ಬಳಸಿ ರೂಪಿಸಿದ ಈ ಜಾಲತಾಣ ಈಗ ಯಾವ ಪ್ರಯೋಜನಕ್ಕೂ ಬರುತ್ತಿಲ್ಲ.

ದೃಷ್ಟಿಹೀನರನ್ನು ಮರೆತ ಸರ್ಕಾರ
ಸರ್ಕಾರಿ ಕಚೇರಿಗಳು ಅಂಗವಿಕಲರಿಗೆ ಪ್ರವೇಶವನ್ನೇ ನಿರಾಕರಿಸುವಂಥ ಕಟ್ಟಡ­ಗಳಲ್ಲಿ­ರುವಂತೆ ಸರ್ಕಾರಿ ಜಾಲತಾಣಗಳೂ ದೃಷ್ಟಿಯಿಂದ ವಂಚಿತ­ರಾ­ದವರನ್ನು ಸಂಪೂರ್ಣವಾಗಿ ಮರೆತು­ಬಿಟ್ಟಿವೆ.

ಕನ್ನಡ ಅಥವಾ ಇಂಗ್ಲಿಷ್‌ನಲ್ಲಿರುವ ಯಾವ ಜಾಲತಾಣಗಳನ್ನೂ ಸ್ಕ್ರೀನ್ ರೀಡರ್ ತಂತ್ರಾಂಶಗಳಿಗೆ ಓದಲು ಅನುಕೂಲವಾಗುವಂತೆ ರೂಪಿಸಲಾಗಿಲ್ಲ. ಇಂಥದ್ದೊಂದು ತಂತ್ರಜ್ಞಾನದ ಬಗ್ಗೆ ಸರ್ಕಾರಕ್ಕೆ ತಿಳಿದಿಲ್ಲ ಎಂದುಕೊಳ್ಳು­ವಂತೆಯೂ ಇಲ್ಲ.

ಏಕೆಂದರೆ ಸರ್ಕಾರದ ಅಧೀನದಲ್ಲೇ ಇರುವ ‘ಕಣಜ’ ಜಾಲತಾಣ ಕನ್ನಡದಲ್ಲಿ ಪ್ರಥಮ ಬಾರಿಗೆ ದೃಷ್ಟಿ ವಂಚಿತರಿಗೂ ಓದುವ ಸವಲತ್ತು ನೀಡಿದ ತಾಣವಾಗಿತ್ತು. ‘ಪ್ರಜಾವಾಣಿ’ ಕೂಡಾ ದೃಷ್ಟಿ ವಂಚಿತರಿಗೆ ಓದಲು ಅನುಕೂಲವಾಗುವಂಥ ಶಿಷ್ಟತೆಗಳನ್ನು ಹಂತಹಂತವಾಗಿ ಅಳವಡಿಸಿಕೊಳ್ಳುತ್ತಾ ಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT