ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನ ಕಂಡ ಕಸಾಪದ ಚುಕ್ಕಾಣಿ ಯಾರಿಗೆ?

ಅಧ್ಯಕ್ಷರು, ಗಡಿನಾಡ ಘಟಕಗಳ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ
Last Updated 23 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶತಮಾನ ಕಂಡಿರುವ ಕನ್ನಡ ಸಾಹಿತ್ಯ ಪರಿಷತ್ತು ಮತ್ತೊಂದು ಚುನಾವಣೆಯ ಹೊಸ್ತಿಲಲ್ಲಿ ನಿಂತಿದೆ. ಪರಿಷತ್ತಿಗೆ 25ನೇ ಅಧ್ಯಕ್ಷರನ್ನು, ಜಿಲ್ಲಾ ಮತ್ತು ಗಡಿನಾಡ ಘಟಕಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲು ಫೆಬ್ರುವರಿ 28ರಂದು ಚುನಾವಣೆ ನಡೆಯಲಿದೆ.
ಕಣದಲ್ಲಿರುವ ಅಭ್ಯರ್ಥಿಗಳು ಭರದ ಪ್ರಚಾರದಲ್ಲಿ ಮುಳುಗಿದ್ದಾರೆ. ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದು ಕರೆಸಿಕೊಂಡಿರುವ ಸಾಹಿತ್ಯ ಪರಿಷತ್ತಿನ  ಮತದಾರರ ಮನಗೆಲ್ಲುವ ಕಸರತ್ತಿನಲ್ಲಿ ತೊಡಗಿದ್ದಾರೆ.

‘ನಾವೆಲ್ಲ ಬದುಕುತ್ತಿರುವ ಸಮಾಜದಿಂದಲೇ ಸೃಷ್ಟಿಯಾಗಿದೆ ಈ ಸಂಸ್ಥೆ. ನಮ್ಮೆಲ್ಲ ಚುನಾವಣೆಗಳಲ್ಲಿ ಕೆಲಸ ಮಾಡುವ ಜಾತಿ, ಪ್ರಾದೇಶಿಕ ಭಾವನೆ, ಹಣ ಇಲ್ಲಿಯೂ ಕೆಲಸ ಮಾಡುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ’ ಎನ್ನುತ್ತಾರೆ ಪರಿಷತ್ತಿನ ಚುನಾವಣೆಗಳನ್ನು ಹತ್ತಿರದಿಂದ ಕಂಡವರು.

ಪರಿಷತ್ತಿಗೆ ಪ್ರತಿ ಬಾರಿ ಚುನಾವಣೆ ನಡೆದಾಗಲೂ ಜಾತಿ, ಹಣದ ಜೊತೆಗೆ ಪ್ರಾದೇಶಿಕ ಮನೋಭಾವ ತುಸು ಮಟ್ಟಿಗೆ ಕೆಲಸ ಮಾಡಿದೆ. ಆದರೆ ಈ ಬಾರಿ ಪ್ರಾದೇಶಿಕ ಮನೋಭಾವ ಹೆಚ್ಚಾಗಿಯೇ ಕೆಲಸ ಮಾಡುತ್ತಿರುವಂತೆ ಭಾಸವಾಗುತ್ತಿದೆ ಎಂದು ಹಿರಿಯ ಸಾಹಿತಿಯೊಬ್ಬರು ‘ಪ್ರಜಾವಾಣಿ’ ಬಳಿ ಅನಿಸಿಕೆ ಹಂಚಿಕೊಂಡರು.

‘ಪರಿಷತ್ ರಚನೆಯಾದ ನಂತರ 24 ಜನ ಅಧ್ಯಕ್ಷರನ್ನು ಕಂಡಿದೆ. ಆದರೆ ಉತ್ತರ ಕರ್ನಾಟಕ ಭಾಗಕ್ಕೆ ಸಿಕ್ಕ ಪ್ರಾತಿನಿಧ್ಯ ಕಡಿಮೆ. ಹಾಗಾಗಿ, ಈ ಬಾರಿ ತಮ್ಮ ಕಡೆಯವರೊಬ್ಬರನ್ನು ಗೆಲ್ಲಿಸೋಣ ಎಂಬ ಭಾವನೆ ಉತ್ತರ ಕರ್ನಾಟಕ ಭಾಗದವರಲ್ಲಿ ಮೂಡಿದ್ದರೆ ಅದು ಅಸಹಜವೇನೂ ಅಲ್ಲ’ ಎಂದು ಅವರು ವಿಶ್ಲೇಷಿಸಿದರು.

ಈ ಚುನಾವಣೆಯಲ್ಲಿ ಸಾಹಿತ್ಯ ಪರಿಷತ್ತಿನ ಒಟ್ಟು 1.89 ಲಕ್ಷ ಸದಸ್ಯರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ. ಸತತವಾಗಿ ಮೂರು ವರ್ಷಗಳಿಂದ ಸದಸ್ಯರಾಗಿರುವವರಿಗೆ ಮಾತ್ರ ಮತದಾನದ ಹಕ್ಕಿದೆ.

ಖರ್ಚು ಎಷ್ಟು?: ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಂತೆ, ಸಾಹಿತ್ಯ ಪರಿಷತ್ ಚುನಾವಣೆಯಲ್ಲೂ ಅಭ್ಯರ್ಥಿಗಳು ಮಾಡುವ ವೆಚ್ಚಕ್ಕೆ ಮಿತಿ ಇಲ್ಲ. ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಹಣ ಚೆಲ್ಲದೆ ವಿಧಿಯಿಲ್ಲ ಎಂಬ ಸ್ಥಿತಿಯಿದೆ ಎಂದು ಈ ಹಿಂದೆ ಚುನಾವಣೆಗೆ ಸ್ಪರ್ಧಿಸಿದ್ದವರೊಬ್ಬರು ಹೇಳಿದರು.

‘ಚುನಾವಣೆಗೂ ಮುನ್ನ ಪ್ರತಿ ಮತದಾರನಿಗೆ ಅಭ್ಯರ್ಥಿ ಕನಿಷ್ಠ ಒಂದು ಬಾರಿ ಪತ್ರ ಬರೆಯುತ್ತಾರೆ. ಅದರ ವೆಚ್ಚವೇ ಒಟ್ಟು ₹ 15 ಲಕ್ಷ ಆಗುತ್ತದೆ. ಇದು ಕನಿಷ್ಠ ಖರ್ಚು. ಇದನ್ನು ಹೊರತುಪಡಿಸಿ, ಆಪ್ತರಿಗೆ ಕೊಡಿಸುವ ಔತಣ, ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವವರಿಗೆ ಮಾಡುವ ಖರ್ಚು ಸೇರಿದಂತೆ ಆಗೀಗ ಎದುರಾಗುವ ಖರ್ಚುಗಳ ಮೊತ್ತವೂ ಲಕ್ಷ ಲಕ್ಷದಲ್ಲೇ ಇರುತ್ತದೆ’ ಎಂದು ಅವರು ತಿಳಿಸಿದರು.

ಮತದಾರರ ಪೈಕಿ ಅತಿ ಹೆಚ್ಚಿನವರು (ಶೇಕಡ 36.4ರಷ್ಟು) ಬೆಂಗಳೂರು ನಗರ, ಮಂಡ್ಯ, ಹಾಸನ, ಬೆಳಗಾವಿ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಇರುವ ಕಾರಣ, ಅಭ್ಯರ್ಥಿಗಳ ಗಮನ ಈ ಜಿಲ್ಲೆಗಳತ್ತಲೇ ಹೆಚ್ಚು ಕೇಂದ್ರೀಕೃತವಾಗಿದೆ. ಇವಿಷ್ಟು ಜಿಲ್ಲೆಗಳಲ್ಲಿ ಮುನ್ನಡೆಯನ್ನು  ಕಾಯ್ದುಕೊಂಡರೆ, ಗೆಲುವಿನ ಬಾಗಿಲು ಅರ್ಧ ತೆರೆದಂತೆಯೇ ಎಂಬುದು ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರ ಲೆಕ್ಕಾಚಾರ.

ಸ್ಪರ್ಧೆ ಯಾರ ನಡುವೆ?
ಬೆಂಗಳೂರು:
ಅಧ್ಯಕ್ಷ ಸ್ಥಾನಕ್ಕೆ ಈ ಬಾರಿಯ ಸ್ಪರ್ಧೆ ಮನು ಬಳಿಗಾರ್, ಪ್ರೊ.ಬಿ. ಜಯಪ್ರಕಾಶ್ ಗೌಡ, ಬಿ.ಎಂ. ಪಟೇಲ್ ಪಾಂಡು ಮತ್ತು ಡಾ. ಎಚ್.ಎಲ್. ಜನಾರ್ದನ ಅವರ ನಡುವೆ ಎನ್ನಲಾಗಿದೆ.

ಇವರೆಲ್ಲರೂ ತಮ್ಮದೇ ಆದ ಮತಬ್ಯಾಂಕ್‌ ಹೊಂದಿದ್ದಾರೆ ಎನ್ನುತ್ತವೆ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಗಳು.

ಸ್ಪರ್ಧೆಯಲ್ಲಿ ಇರುವ ಕೆಲವರು ಎಷ್ಟೇ ಬಲಾಢ್ಯರಾಗಿರಬಹುದು. ಆದರೆ, ಚುನಾವಣೆಯಲ್ಲಿ ಯಾರನ್ನೂ ನಿರ್ಲಕ್ಷಿಸುವಂತೆ ಇಲ್ಲ. ಪ್ರತಿ ಅಭ್ಯರ್ಥಿಗೂ ಅವರದೇ ಆದ ಲೆಕ್ಕಾಚಾರ ಇರುತ್ತದೆ ಎಂದು ಪರಿಷತ್ತಿನ ನಿಕಟಪೂರ್ವ ಪದಾಧಿಕಾರಿಯೊಬ್ಬರು ಹೇಳಿದರು.

ಅಂದಹಾಗೆ, ಪರಿಷತ್ತು ನೂರು ವರ್ಷಗಳ ಇತಿಹಾಸದಲ್ಲಿ ಮಹಿಳಾ ಅಧ್ಯಕ್ಷರನ್ನು ಕಂಡಿಲ್ಲ. ಅಧ್ಯಕ್ಷ ಸ್ಥಾನದ ಚುನಾವಣಾ ಕಣದಲ್ಲಿ ಈ ಬಾರಿಯೂ ಮಹಿಳೆಯರ ಸ್ಪರ್ಧೆ ಇಲ್ಲ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಇತರರು
ಎನ್.ಪಿ. ಅಮೃತೇಶ್, ಮ.ಚಿ. ಕೃಷ್ಣ, ಆರ್.ಎಸ್.ಎನ್. ಗೌಡ, ಬಸವರಾಜ ಶಿ. ಹಳ್ಳೂರ, ವೈ. ರೇಣುಕ, ಶರಣಬಸಪ್ಪ ಕಲ್ಲಪ್ಪ ದಾನಕೈ, ಶಿವಪ್ಪ ಮಲ್ಲಪ್ಪ ಬಾಗಲ, ಶಿವರಾಜ ಗುರುಶಾಂತಪ್ಪ ಪಾಟೀಲ, ಸಂಗಮೇಶ ಬಾದವಾಡಗಿ, ಸಂಜೀವ ಕುಮಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT