ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನೇಕ ಭಂಗಗಳ ಸ್ವಾಭಿಮುಖೀ ಕಥನ

ವಿಮರ್ಶೆ
Last Updated 25 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ, ವಿವೇಕ ಶಾನಭಾಗ ಅವರ ಹೆಚ್ಚಿನ ಕಥೆ-ಕಾದಂಬರಿಗಳು ಅನೇಕ ಸ್ತರಗಳಲ್ಲಿ ಚಲಿಸುತ್ತವೆ; ಅನೇಕ ಪರಸ್ಪರ ಪೂರಕ ಕಥೆಗಳನ್ನು ಒಟ್ಟಿಗೇ  ಹೆಣೆಯುತ್ತವೆ. ಈ ಹೇಳಿಕೆಯನ್ನು ಪ್ರಬಲವಾಗಿ ಸಮರ್ಥಿಸುವ ಕೃತಿಯೆಂದರೆ ಇತ್ತೀಚೆಗೆ ಪ್ರಕಟವಾಗಿರುವ ಅವರ ಕಾದಂಬರಿ ‘ಊರು ಭಂಗ’.

ಇದರ ಭಿನ್ನ ಸ್ತರಗಳನ್ನು ಪರೋಕ್ಷವಾಗಿ ವಿವೇಕರೇ ತಮ್ಮ ಅರಿಕೆಯಲ್ಲಿ ಹೀಗೆ ಗುರುತಿಸುತ್ತಾರೆ: ‘‘ಊರು ಎಂದರೆ ಕನ್ನಡದಲ್ಲಿ ವಾಸಸ್ಥಳ, ಹಳ್ಳಿ, ಗ್ರಾಮ, ಪಟ್ಟಣ ಎಂಬುದಲ್ಲದೇ ತೊಡೆ ಎಂಬ ಅರ್ಥವೂ ಇದೆ. ಎರಡೂ ಅರ್ಥಗಳನ್ನು ಧ್ವನಿಸುವ ಈ ಶಬ್ದ ಕಾದಂಬರಿಗೆ ಅತ್ಯಂತ ಸಮರ್ಪಕವೂ ಆಗಿರುವುದು ನನ್ನ ಅದೃಷ್ಟವೇ ಸರಿ’’. ಹೀಗೆ ಸಮಾನಾಂತರ ಸ್ತರಗಳಲ್ಲಿ ಚಲಿಸುವ ಭಿನ್ನ ಕಥನಗಳನ್ನು ವಿವೇಕ್ ತಮ್ಮದೇ ಆದ ಮೆಲುದನಿಯ ವ್ಯಂಗ್ಯ–ವೈನೋದಿಕ ಶೈಲಿಯಲ್ಲಿ ಸಮರ್ಥವಾಗಿ ಕಥಿಸುತ್ತಾರೆ.

ನಲವತ್ತೆರಡು ವರ್ಷದ, ಒಂದು ಪ್ರಸಿದ್ಧ ಕಾರ್ಪೊರೇಟ್ ಸಂಸ್ಥೆಯಲ್ಲಿ ಅಧಿಕಾರಿಯಾಗಿರುವ ವ್ಯಕ್ತಿ ಮನಮೋಹನ್; ಅವನೇ ಒಟ್ಟಾರೆ ಕಥೆಯ ಅವಿಶ್ವಸನೀಯ ನಿರೂಪಕ. ಉತ್ತಮ ಪುರುಷ ನಿರೂಪಣೆಯಲ್ಲಿರುವ ಈ ವ್ಯಕ್ತಿಯ ಕಥೆಯನ್ನು ಒಂದು ಆವರಣದಂತೆ ಪರಿಗಣಿಸಿದರೆ, ಆ ಆವರಣದೊಳಗೆ ಇತರ ಕಥೆಗಳು ಬರುತ್ತವೆ: ಹೆಚ್ಚಿನ ಸಂದರ್ಭಗಳಲ್ಲಿ ನಿರೂಪಿತೆಯಾಗಿರುವ ಶಮಿ, ಗಾಂಧಿವಾದಿ ಕಿಮಾನಿ ವಕೀಲರು, ಕ್ರಾಂತಿಕಾರರಾದ ಚಂದು ಮತ್ತು ಚಿರಾಗ್, ಆತ್ಮಕಥೆಯನ್ನು ಬರೆಯಲು ಪ್ರಯತ್ನಿಸುತ್ತಿರುವ ಸುಂಕಾಪೂರ ಮಾಸ್ತರ್, ಮುಂತಾದವರ ಕಥೆಗಳು ಬರುತ್ತವೆ. 

ಈ ಎಲ್ಲಾ ಕಥೆಗಳ ಮೂಲಕ, ಒಬ್ಬ ವ್ಯಕ್ತಿಯ, ಒಂದು ಊರಿನ, ಹಾಗೂ ಕಥನಕ್ರಿಯೆಯ ಭಂಗ–ಬವಣೆಗಳನ್ನು  ಕಾದಂಬರಿಕಾರರು ಆಪ್ತವಾಗಿ ದಾಖಲಿಸುತ್ತಾರೆ. ಮೊದಲಿಗೆ ವ್ಯಕ್ತಿಯ ಕಥೆ. ಬಡತನದಲ್ಲಿ ಒಂದು ಚಿಕ್ಕ ಗ್ರಾಮದಲ್ಲಿ ಬೆಳೆಯುವ ಮನಮೋಹನ್ ಅನಂತರ ಉಚ್ಚ ಶಿಕ್ಷಣವನ್ನು ಪಡೆದು, ಅದೃಷ್ಟವಶಾತ್ ಒಂದು ದೊಡ್ಡ ಕಂಪೆನಿಯನ್ನು ಸೇರಿ, ತನ್ನ ತಾರುಣ್ಯದ ಕ್ರಾಂತಿಕಾರಿ ವಿಚಾರಗಳೆಲ್ಲವನ್ನೂ ಮರೆತು, ಕಾಲಕ್ರಮೇಣ ಉನ್ನತ ಅಧಿಕಾರವನ್ನು ಗಳಿಸಿ, ಮದುವೆಯೂ ಆಗಿರುವವನು.

ಒಂದು ಸಂದರ್ಭದಲ್ಲಿ ಅವನು ಶಮಿ ಎಂಬ ತರುಣಿಯನ್ನು ಭೇಟಿ ಮಾಡಿ, ಅವಳ ಯೌವನದಿಂದ ಆಕರ್ಷಿತನಾಗಿ, ಅವಳಿಗೆ ತನ್ನ ಬಾಲ್ಯದ ರೋಚಕ ಕಥೆಗಳನ್ನು ಹೇಳುತ್ತಾ, ತನ್ನ ಪರಿಚಯವನ್ನು ಗಾಢವಾಗಿಸಿಕೊಳ್ಳುತ್ತಾನೆ. ಒಂದು ಸಂದರ್ಭದಲ್ಲಿ ಅವಳೊಡನೆ ದೈಹಿಕ ಸಂಪರ್ಕವನ್ನೂ ಪಡೆಯುತ್ತಾನೆ. ಸ್ವಲ್ಪ ಕಾಲದ ನಂತರ ಅವಳು ಸಮವಯಸ್ಕನೊಬ್ಬನೊಡನೆ ಸಖ್ಯವನ್ನು ಬೆಳೆಸಿ, ತನ್ನನ್ನು ದೂರ ಮಾಡಿದರೂ ಅವನು ಅವಳನ್ನು, ಅವಳ ಯೌವನವನ್ನು ಮರೆಯಲಾಗದೆ ಅವಳಿಗಾಗಿ ಹಂಬಲಿಸುತ್ತಾನೆ.

ಕೊನೆಗೆ, ಒಂದು ರಾತ್ರಿ ಅವಳನ್ನು ಭೇಟಿ ಮಾಡಲು ಅವಳ ಮನೆಯ  ಬಳಿ ಹೋಗಿ, ಗೇಟಿಗೆ ಬೀಗ ಹಾಕಿದ್ದುದರಿಂದ, ಒಂದು ಮರ ಹತ್ತಿ ಅಲ್ಲಿಂದ ಒಳಗೆ ಹಾರುತ್ತಾನೆ; ಹಾಗೆ ಹಾರಿದಾಗ ಕೆಳಗೆ ಬಿದ್ದು ಮೈಯನ್ನೆಲ್ಲಾ ಗಾಯ ಮಾಡಿಕೊಳ್ಳುತ್ತಾನೆ. ಇದು ಮಧ್ಯ ವಯಸ್ಸಿನಲ್ಲಿ ದೈಹಿಕ ಕಾಮನೆಗಳ ಒತ್ತಡದಿಂದ ವ್ಯಕ್ತಿಯೊಬ್ಬನಿಗೆ ಆಗುವ ಊರು ಭಂಗ. ವ್ಯಕ್ತಿಗಿಂತ ಹೆಚ್ಚು ವ್ಯಾಪಕವಾಗಿರುವ ಎರಡನೆಯ ಸ್ತರದಲ್ಲಿ ಭಂಗವಾಗುವುದು ಒಂದು ಊರು– ಮನಮೋಹನ್ ಹುಟ್ಟಿ ಬೆಳೆದ ಊರಾದ ತೆಂಕಣ ಕೇರಿ, ಭಾರತದ ಸಾವಿರಾರು ಹಳ್ಳಿಗಳ ಪ್ರಾತಿನಿಧಿಕ ಊರು. ಮನಮೋಹನನ ಬಾಲ್ಯದಲ್ಲಿ ಅದೊಂದು ಸಾಂಪ್ರದಾಯಿಕ ನೈತಿಕ ಚೌಕಟ್ಟನ್ನು ಬೆಳೆಸಿಕೊಂಡು ಅದನ್ನು ಯಾರೂ ಮೀರಲಾರದಂತೆ ರಕ್ಷಿಸಿಕೊಂಡಿದ್ದ ಊರು.

ತಮ್ಮ ಬೋಧನ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದ, ಇದು ನಫೆಯಿಲ್ಲದ ವ್ಯವಹಾರ ಎಂದು ಎಂದೂ ಚಿಂತಿಸದ ಇಂಗ್ಲೀಷ್ ಶಿಕ್ಷಕ ಸೌಕೂರ ಮಾಸ್ತರ, ಸಂಸ್ಕೃತ ಶಿಕ್ಷಕ ಭಟ್ ಮಾಸ್ತರ;  ಗಿರಾಕಿಗಳು ಕೊಟ್ಟ ಹೆಚ್ಚಿಗೆ ಹಣವನ್ನು ಓಡಿ ಬಂದು ವಾಪಸ್ ಮಾಡುತ್ತಿದ್ದ ತರಕಾರಿ ಮಾರುವವಳು; ಅಪರೂಪಕ್ಕೆ ಹುಡುಗನೊಬ್ಬನು ಮಾತನಾಡಿಸಲು ಹತ್ತಿರ ಹೋದರೆ ಹುಲಿ ಕಂಡಂತೆ ಹೆದರಿ ಓಡುತ್ತಿದ್ದ ಹೈಸ್ಕೂಲ್ ಹುಡುಗಿಯರು– ಇವರೆಲ್ಲರೂ ಆ ನೈತಿಕ ಚೌಕಟ್ಟನ್ನು ಒಪ್ಪಿಕೊಂಡು ಬದುಕುತ್ತಿದ್ದವರು (ಇದನ್ನೇ ‘ತೆಂಕಣಕೇರಿ ಇಫೆಕ್ಟ್’ ಎಂದು ನಿರೂಪಕನು ಆಗಾಗ್ಗೆ ಗುರುತಿಸುತ್ತಾನೆ). ನಿರೂಪಕನೂ ಈ ಇಫೆಕ್ಟ್‌ಗೆ ಒಳಗಾದವನೇ; ಆದರೆ ಕ್ರಮೇಣ ಆ ‘ತೆಂಕಣಕೇರಿ ಇಫೆಕ್ಟ್’ ಕಮ್ಮಿಯಾಗುತ್ತಾ, ಕೊನೆಗೆ ರಾತ್ರಿ ತನ್ನ ಪ್ರೇಮಿಯನ್ನು ಭೇಟಿ ಮಾಡಲು ನಿರೂಪಕನು ಗೋಡೆ ಹಾರುವಾಗ ಪೂರಾ ಮಾಯವಾಗುತ್ತದೆ.

ಕಾಲಕ್ರಮದಲ್ಲಿ ‘ತೆಂಕಣಕೇರಿ ಇಫೆಕ್ಟ್’ ನಿರೂಪಕನಲ್ಲಿ ಮಾಯವಾಗುವುದನ್ನು ವೈನೋದಿಕ ಶೈಲಿಯಲ್ಲಿ ಕಾದಂಬರಿ ನಿರೂಪಿಸಿದರೆ, ಅದನ್ನು ಗಂಭೀರವಾಗಿ, ವ್ಯಾಪಕ ನೆಲೆಯಲ್ಲಿ ಕಿಮಾನಿ ವಕೀಲರ ಪಾತ್ರದ ಮೂಲಕ ಕಟ್ಟಿಕೊಡುತ್ತದೆ. ಅಪ್ಪಟ ಗಾಂಧಿವಾದಿಯಾದ, ತನ್ನ ಕಕ್ಷಿದಾರರಿಂದ ಎಂದೂ ಫೀ ತೆಗೆದುಕೊಳ್ಳದ, ಅನ್ಯಾಯವು ಎಲ್ಲಿ ಕಂಡರೂ ಅದರ ವಿರುದ್ಧ ಸಿಡಿದೇಳುವ ಕಿಮಾನಿ ವಕೀಲರು ಕಾದಂಬರಿಯ ಕೊನೆಗೆ ಹಾಸ್ಯಾಸ್ಪದ ವ್ಯಕ್ತಿಯಾಗುತ್ತಾರೆ.

ಸ್ವಾತಂತ್ರ್ಯ ದಿನಾಚರಣೆಯಂದು ಅವರು ಸ್ಕೂಲಿನಲ್ಲಿ ಭಾಷಣ ಮಾಡುವ ಸಂಪ್ರದಾಯ ವಿಠೋಬನಂತಹ ಮರಿ ಫುಡಾರಿಗಳ ಕಾರಣದಿಂದ ನಿಂತು ಹೋಗುತ್ತದೆ; ಯಾರಿಗೂ ಅವರ ಪ್ರತಿಭಟನೆ ಬೇಡವಾಗುತ್ತದೆ; ಮತ್ತು ತಮ್ಮ ಗಾಂಧಿವಾದದ ಪರಿಣಾಮದಿಂದ ರಾಮರಹೀಮ್ ಎಂದು ಹೆಸರಿಟ್ಟಿದ್ದ ಅವರ ಮಗನೇ ದೊಡ್ಡವನಾದಂತೆ ತನ್ನ ಹೆಸರನ್ನು ಅಶೋಕ ಎಂದು ಬದಲಾಯಿಸಿಕೊಂಡು ಊರು ಬಿಟ್ಟು ಕಳ್ಳ ನಾಟಾ ವ್ಯಾಪಾರ ಮಾಡುವ ಕಾಂಟ್ರಾಕ್ಟರ್ ಒಬ್ಬನ ಬಳಿ ಪಟ್ಟಣದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಊರಿನಲ್ಲಿಕಳ್ಳ ನಾಟಾ ವ್ಯಾಪಾರ ಮಾಡುವವರು ಹೆಚ್ಚುತ್ತಾರೆ.

ಕೊನೆಗೆ, ದೇಶದಲ್ಲಿ ಎಮರ್ಜೆನ್ಸಿ ಘೋಷಣೆಯಾದಾಗ, ಅದನ್ನು ವಿರೋಧಿಸಿ ಕಿಮಾನಿ ವಕೀಲರು ಸಾರ್ವಜನಿಕವಾಗಿ ಮೂರ್ನಾಲ್ಕು ಬಾರಿ ಭಾಷಣ ಮಾಡುತ್ತಾರೆ; ಆದರೆ, ಅವರನ್ನು ಅರೆಸ್ಟ್ ಮಾಡಿ ಜೈಲಿಗೆ ಹಾಕುವ ಬದಲಿಗೆ ಪೋಲೀಸರು ‘ಇವರ ಮಾತು ಯಾರು ಕೇಳ್ತಾರೆ?’ ಎಂದು ನಿರ್ಲಕ್ಷಿಸುತ್ತಾರೆ. ಎಂದರೆ, ಬದಲಾದ ಸನ್ನಿವೇಶದಲ್ಲಿ ಗಾಂಧಿವಾದ  ಹಾಸ್ಯಾಸ್ಪದವಾಗುತ್ತದೆ. ಇಲ್ಲಿಗೆ ಊರು, ದೇಶ, ಅವುಗಳ ಪರಂಪರೆ, ಸಂಸ್ಕೃತಿ ಇತ್ಯಾದಿ ಸಂಪೂರ್ಣವಾಗಿ ಭಂಗವಾಗುತ್ತವೆ.

ನನಗೆ ತೋರುವಂತೆ, ಈ ಕಾದಂಬರಿಯ ಕೇಂದ್ರಾಶಯ ಸ್ವಾಭಿಮುಖತೆ. ಎಂದರೆ, ಕೃತಿಯುದ್ದಕ್ಕೂ ಅಸಮಾನ ಭಾಷೆಗಳ ನಡುವಿನ ಸಮಸ್ಯೆ, ಕಥನಕ್ರಿಯೆಯ ಸಮಸ್ಯೆ, ಶಬ್ದ-ಅರ್ಥಗಳ ಸಂಬಂಧದ ಸಮಸ್ಯೆ, ಇತ್ಯಾದಿಗಳನ್ನು ಈ ಕಾದಂಬರಿ ಎತ್ತುತ್ತಾ ಹೋಗುತ್ತದೆ. ಮತ್ತು, ಕಥೆಯ ನಿರೂಪಕ ಮನಮೋಹನ್ ಕನ್ನಡದ ಕಥೆಗಾರನೂ ಆಗಿರುವುದರಿಂದ ಈ ಪ್ರಶ್ನೆಗಳು ಅತ್ಯಂತ ಸಹಜವಾಗಿ ಕಥೆಯ ನೇಯ್ಗೆಯಲ್ಲಿ ಸೇರಿಹೋಗುತ್ತವೆ. ಪರಿಣಾಮತಃ, ಇಂದಿನ ಕಾಲಘಟ್ಟದಲ್ಲಿ ಕನ್ನಡ ಲೇಖಕನು ಎದುರಿಸುವ ಸಮಸ್ಯೆಗಳೆಲ್ಲವೂ ನಿರೂಪಕನ ಸಮಸ್ಯೆಗಳಾಗುತ್ತವೆ.

ಮೊದಲಿಗೆ, ಇಂದು ಕನ್ನಡದಲ್ಲಿ ಬರೆಯುವ ಪ್ರತಿಯೊಬ್ಬ ಲೇಖಕನೂ ಎದುರಿಸುವ ಸಮಸ್ಯೆಯೆಂದರೆ ತಾನು ಕನ್ನಡದಲ್ಲಿ ಬರೆಯಬೇಕೆ ಅಥವಾ ಇಂಗ್ಲೀಷ್‌ನಲ್ಲೇ ಎಂಬುದು. ಒಂದು ಸಂದರ್ಭದಲ್ಲಿ, ನಿರೂಪಕನನ್ನು ಪ್ರಸಿದ್ಧ ಕನ್ನಡ ಕತೆಗಾರನೆಂದು ಇತರರಿಗೆ ಪರಿಚಯಿಸಿದಾಗ, ಬರುವ ಪ್ರತಿಕ್ರಿಯೆಯೆಂದರೆ ‘ನಿಮ್ಮಂಥವರು  ಇಂಗ್ಲೀಷಿನಲ್ಲಿ ಬರೆಯಬೇಕಪ್ಪ... ಇಂಗ್ಲೀಷಿನಲ್ಲಿ ಬಂತು ಎಂದರೆ ಬಹಳ ಜನರಿಗೆ ತಲಪುತ್ತದೆ ನೋಡಿ’. ಈ ಭ್ರಮೆ ಅನೇಕ ಲೇಖಕರಿಗೂ ಇರುತ್ತದೆ.

ಆದರೆ, ವ್ಯಾಪಾರ-ವ್ಯವಹಾರ ಮಾಡಲು ಹೊರಟಾಗ ಇಲ್ಲದ ಸಮಸ್ಯೆ ಹುಡುಗಿಯೊಬ್ಬಳನ್ನು ಒಲಿಸಿಕೊಳ್ಳಲು ಇಂಗ್ಲೀಷಿನಲ್ಲಿ ಮಾತನಾಡಲು ಹೊರಟರೆ ಧುತ್ತೆಂದು ಎದುರಾಗುತ್ತದೆ, ನಿರೂಪಕನು ಒಪ್ಪಿಕೊಳ್ಳುವಂತೆ, ಯಾವಾಗಲೂ ನನ್ನ ಗಮನ ಅದರ ವ್ಯಾಕರಣ ಬದ್ಧ ಪ್ರಯೋಗದತ್ತಲೇ ಹೊರತು ಸಹಜ ಅಭಿವ್ಯಕ್ತಿಯತ್ತ ಹೋಗುವುದೇ ಇಲ್ಲ. ಅಷ್ಟೇ ಅಲ್ಲದೆ, ಶಮಿಗೆ ತನ್ನ ಊರಿನ ಬಗ್ಗೆ, ತನ್ನ ಬಾಲ್ಯದ ಬಗ್ಗೆ ಇಂಗ್ಲೀಷ್‌ನಲ್ಲಿ ಹೇಳಬೇಕಾದಾಗ, ನಿರೂಪಕನಿಗೆ ತಾನು ಹೇಳುವುದೆಲ್ಲವೂ ಕೃತಕವಾಗಿ, ‘ಪೀಟ್ಸಾಗೆ ಮೈದಾ ರೊಟ್ಟಿ ಅಂದ ಹಾಗೆ’ ಕಾಣುತ್ತದೆ. ನಮ್ಮ ತೊಟ್ಟಿಲಿನ ಭಾಷೆಯನ್ನು ಬಿಟ್ಟು ಉಳಿದ ಭಾಷೆಗಳಲ್ಲಿ ಬಯ್ಯಲೂ ಆಗುವುದಿಲ್ಲ.

ಇನ್ನು ಕಥನಕ್ರಿಯೆಯ ಸಮಸ್ಯೆಯೇ ಬೇರೆ; ಯಾವ ಭಾಷೆಯಲ್ಲಿ ಬರೆದರೂ ಆ ಸಮಸ್ಯೆ ಉಳಿದೇ ಉಳಿಯುತ್ತದೆ. ‘ಎಲ್ಲವನ್ನೂ ಹೇಳುತ್ತೇನೆ....’ ಎಂಬುದೇ ಈ ಕೃತಿಯ ಮೊದಲ ವಾಕ್ಯ. ಆದರೆ, ಯಾರಿಗಾದರೂ ಎಲ್ಲವನ್ನೂ ಹೇಳುವುದು ಸಾಧ್ಯವೆ? ಏಕೆಂದರೆ ಅಲ್ಲಿ ಆಯ್ಕೆಯ ಪ್ರಶ್ನೆ ಬರುತ್ತದೆ. ಕಿಮಾನಿ ವಕೀಲರ ಕಥೆ ಹೇಳುವ ಸಂದರ್ಭದಲ್ಲಿ ನಿರೂಪಕನು ಹೀಗೆ ತನ್ನನ್ನೇ ಕೇಳಿಕೊಳ್ಳುತ್ತಾನೆ: ‘ನಿಜವಾಗಿಯೂ ಎಲ್ಲವನ್ನೂ ಹೇಳಲಿಕ್ಕೆ ಸಾಧ್ಯವೆ? ಹೆಜ್ಜೆ ಹೆಜ್ಜೆಗೂ ಇರುವ ಅಸಂಖ್ಯ ಆಯ್ಕೆಗಳಲ್ಲಿ ಯಾವುದನ್ನು ಆರಿಸಿದೆವೆಂದು ಯಾವುದನ್ನು ಬಿಟ್ಟೆವೆಂದು ಕಾಲಾಂತರದಲ್ಲಿ ನಿಂತು ನೋಡುವಾಗ ಸರಿಯಾಗಿ ಗೊತ್ತಾಗುತ್ತದೆಯೆ?’’. ‘ಎಲ್ಲವನ್ನೂ ಹೇಳುತ್ತೇನೆ’ ಎಂದು ಘೋಷಿಸಿದ ನಿವೃತ್ತನಾಗಲಿರುವ ಭಾಸ್ಕರ ರಾವ್ ಕೊನೆಗೆ ಏನೂ ಹೇಳಲಾಗದೆ ಸುಮ್ಮನಾಗುತ್ತಾನೆ.

ಕಥನದಲ್ಲಿ ಆಯ್ಕೆಯ ಪ್ರಶ್ನೆಯೊಡನೆ ಸತ್ಯದ ಪ್ರಶ್ನೆಯೂ ತಳಕುಹಾಕಿಕೊಳ್ಳುತ್ತದೆ. ತನ್ನ ಕ್ರಾಂತಿಕಾರಿ ದಿನಗಳ ಬಗ್ಗೆ, ಕಿಮಾನಿ ವಕೀಲರ ಬಗ್ಗೆ ಶಮಿಗೆ ಹೇಳತೊಡಗಿದಾಗ, ತನ್ನ ನೆನಪು ಸರಿಯಾಗಿದೆಯೇ ಅಥವಾ ತಾನು ಅದನ್ನು ರೋಚಕವಾಗಿಸಲು ಪ್ರಯತ್ನಿಸುತ್ತಿದ್ದೇನೆಯೆ? ಎಂದು ನಿರೂಪಕ ತನ್ನ ಕಥನವನ್ನೇ ಸಂದೇಹಿಸುತ್ತಾನೆ. ತನ್ನ ಸ್ನೇಹಿತ ಚಂದು ಅನೇಕ ವರ್ಷಗಳ ನಂತರ ಭೇಟಿಯಾದಾಗ ಇಬ್ಬರೂ ನೆನಪುಗಳನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ, ಚಂದು ಹೇಳುತ್ತಾನೆ: ‘ಪಾಲಿಟಿಕ್ಸ್ ಆಫ್ ಮೆಮೊರಿ ಕಣೋ ಇದು.

ಯಾವುದನ್ನು ನೆನೆಸಿಕೊಳ್ತೀವಿ ಯಾವುದನ್ನು ಬಿಡ್ತೀವಿ ಅನ್ನೋದರಲ್ಲೇ ಒಂದು ರಾಜಕೀಯ ಇದೆ.... ಅನುಕೂಲಕ್ಕೆ ತಕ್ಕಂತೆ ಭೂತಕಾಲವನ್ನು ಸತತವಾಗಿ ಮರುಸೃಷ್ಟಿಸೋದು’. ಭಾಸನ ‘ಊರುಭಂಗ’ದಲ್ಲಿ ತೊಡೆ ಮುರಿದ ದುರ್ಯೋಧನನಿಗೆ ಒಂದು ದುರಂತ ನಾಯಕನ ಛವಿಯಾದರೂ ಇದೆ. ಆದರೆ, ಆಧುನಿಕ ದುರ್ಯೋಧನರಾದ ಮನಮೋಹನ, ಭಾಸ್ಕರರಾವ್, ಮುಂತಾದವರಿಗೆ, ಮತ್ತು ಅಮೂರ್ತ ಭಾಷೆಯ ಮೂಲಕವೇ ಏನಾದರೂ ಮೂರ್ತ ಅನುಭವವನ್ನು ದಾಖಲಿಸಬೇಕಾದ ಲೇಖಕರಿಗೆಲ್ಲರಿಗೂ ಊರುಭಂಗವಾಗುತ್ತದೆ, ಅಷ್ಟೇ!    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT