ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಲಿಂಗವಿದ್ದ ಮೇಲೆ ದೇಗುಲದ ಹಂಗೇಕೆ?

ವಚನ ಚಳವಳಿ ವಿಚಾರ ಸಂಕಿರಣದ ಸಮಾರೋಪದಲ್ಲಿ ಷ. ಶೆಟ್ಟರ್‌ ಪ್ರಶ್ನೆ
Last Updated 20 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಸವಾದಿ ಶರಣರ ವಚನ­ಗಳ ತತ್ವಸಾರವೇ ಬೇರೆ. ವೀರಶೈವರ ಇಂದಿನ ಜೀವನಶೈಲಿಯೇ ಬೇರೆ. ವಚನಗಳನ್ನು ಪಠಿಸುವುದಕ್ಕಿಂತ ಅದರ ತತ್ವಗಳನ್ನು ಆಚರಣೆಗೆ ತರುವುದು ಮುಖ್ಯ’ ಎಂದು ಹಿರಿಯ ಸಂಶೋಧಕ ಡಾ.ಷ.ಶೆಟ್ಟರ್‌ ಅಭಿಪ್ರಾಯಪಟ್ಟರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ನಡೆದ ‘ಹನ್ನೆರಡನೆಯ ಶತಮಾನದ ವಚನ ಚಳವಳಿ ಗುರಿ–ಪರ್ಯಾಯ ಸಂಸ್ಕೃತಿ’ ರಾಜ್ಯ ಮಟ್ಟದ ಚಿಂತನ ಸಮಾವೇಶದಲ್ಲಿ ಸಮಾರೋಪ ಭಾಷಣ ಮಾಡಿದರು.

‘ವೀರಶೈವರ ಇತಿಹಾಸ ಹಾಗೂ ಅವರು ಹೊಂದಾಣಿಕೆ ಮಾಡಿಕೊಳ್ಳಲು ಕಾರಣವಾದ ಅಂಶಗಳನ್ನು ಅಧ್ಯಯನ ನಡೆಸುವ ಅವಶ್ಯಕತೆ ಇದೆ’ ಎಂದು ಹೇಳಿದರು.

‘ಲಿಂಗಾಯತರಲ್ಲಿ ಆತ್ಮಲಿಂಗ ಇದೆ. ಆದರೆ, ಅವರು ದೇವಸ್ಥಾನಕ್ಕೆ ಯಾಕೆ ಹೋಗುತ್ತಾರೆ’ ಎಂದು ನನ್ನ ಮೊಮ್ಮಕ್ಕಳು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗೆ ಉತ್ತರ ಕೊಡಲು ಕಷ್ಟ ಆಗುತ್ತದೆ. ಅಲ್ಲದೆ ಕಾಯಕವೇ ಕೈಲಾಸ ಕಲ್ಪನೆ ಈಗಲೂ ಉಳಿದುಕೊಂಡಿದೆಯೇ’ ಎಂದು ಪ್ರಶ್ನಿಸಿದರು.
‘ವಚನಕಾರರು ಜಾತಿಯೇ ಇಲ್ಲ ಎಂದರು. ಆದರೆ, ಲಿಂಗಾಯತರಲ್ಲಿ ಜಾತಿ–ಉಪಜಾತಿಯ ಕಲ್ಪನೆ ಇದೆ. ನಾವು ಸ್ತ್ರೀಯರಿಗೆ ತಾತ್ವಿಕವಾಗಿ ಸಮಾನತೆ ನೀಡಿದ್ದೇವೆ. ವಾಸ್ತವವಾಗಿ ಸಮಾನತೆ ನೀಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘16ನೇ ಶತಮಾನದ ಬಳಿಕ ವೀರಶೈವರಲ್ಲಿ ಸಂಸ್ಕೃತ ಕಲಿಯುವ ಆಸಕ್ತಿ ಮೂಡಿತು. ನಾವು ವೈದಿಕರ ಹಾಗೆ ಸಂಸ್ಕೃತ ಬಲ್ಲವರು ಆಗಬೇಕು ಎಂಬ ಕೀಳರಿಮೆಯೇ ಇದಕ್ಕೆ ಕಾರಣ. ಆಚಾರ ವಿಚಾರ ವಿಕೃತ ರೂಪ ಪಡೆಯುವುದೇ 16ನೇ ಶತಮಾನದ ಬಳಿಕ’ ಎಂದು ಅವರು ವಿಶ್ಲೇಷಿಸಿದರು.

‘ವಚನಕಾರರ ಪೂರ್ವದ ಯುಗ ಯಾವ ರೀತಿ ಇತ್ತು ಎಂಬುದನ್ನು ನಾವು ಅರಿಯಬೇಕು. ಆಗ ವಚನಕಾರರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.

ರಾಜರೆಲ್ಲ ಬುಡಕಟ್ಟು ಜನರು: ‘ವಚನಕಾರರ ಪೂರ್ವದಲ್ಲಿ ವೈದಿಕ ಯುಗ ಇತ್ತೇ ಎಂಬ ಬಗ್ಗೆ ಸಾಕಷ್ಟು ಸಂಶೋಧನೆಗಳು ಆಗಿವೆ. ವೈದಿಕರು ಕರ್ನಾಟಕದವರು ಅಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

‘ನಮ್ಮ ನಾಡಿನ ರಾಜರು ಕ್ಷತ್ರಿಯ­ರಲ್ಲ, ಅವರೆಲ್ಲ ಹಿಂದುಳಿದ ಹಾಗೂ ಬುಡಕಟ್ಟು ಸಮುದಾಯ­ದಿಂದ ಬಂದವ­ರಾಗಿದ್ದರು. ಅವರು ರಾಜ್ಯ ಕಟ್ಟಿದ ಬಳಿಕ ತಮ್ಮ ಹಿನ್ನೆಲೆ­ಯನ್ನು ಮರೆಯಲು ಹಾಗೂ ತಮ್ಮ ಸ್ಥಿತಿಯನ್ನು ಉತ್ತಮ­ಗೊಳಿಸಲು ಯತ್ನಿಸಿ­ದರು. ಈ ಕಾರಣ­ಕ್ಕಾಗಿ ಮನೆತನಗಳನ್ನು ಸೃಷ್ಟಿಸಿಕೊಂಡರು’ ಎಂದು ಅವರು ವಿಶ್ಲೇಷಿಸಿದರು.

ದಾಸೋಹದ ಕಲ್ಪನೆ: ‘ನಾಡಿನ ರಾಜರು ಬೇರೆ ಬೇರೆ ಕಡೆಯ ವೈದಿಕರನ್ನು ಕರೆಸಿ ಅವರಿಗೆ ಸಕಲ ಸವಲತ್ತುಗಳನ್ನು ನೀಡಿ­ದರು. 6–8ನೇ ಶತಮಾನದ ವರೆಗೆ ಈ ಪ್ರಕ್ರಿಯೆ ಬಹಳ ಸಂಭ್ರಮದಿಂದ ನಡೆ­ಯಿತು. ಇದೇ ವೇಳೆ ‘ಅರ್ಹರಿಗೆ ದಾನ’ ನೀಡುವ ಸಂಸ್ಕೃತಿಯು ಬೆಳೆ­ಯಿತು. ಇಂತಹ ಪರಿಪಾಠದ ವಿರುದ್ಧ ಬಸವಣ್ಣ ಸೇರಿದಂತೆ ಹಲವು ವಚನ­ಕಾರ­ರಲ್ಲಿ ಅತೃಪ್ತಿ ಮೂಡಿತು. ಈ ಕಾರಣ­ಕ್ಕಾ­ಗಿಯೇ ಅವರು ದಾನದ ಬದಲು ದಾಸೋ­ಹದ ಕಲ್ಪನೆಯನ್ನು ತಂದರು’ ಎಂದರು.

ಗೊ.ರು.ಚೆನ್ನಬಸಪ್ಪ ಮಾತನಾಡಿ, ‘ವಚನ ಸಾಹಿತ್ಯದ ಕುರಿತು ಎಲ್ಲ ಜಿಲ್ಲೆ­ಗಳಲ್ಲಿ ಒಂದು ದಿನದ ಚಿಂತನಾ ಗೋಷ್ಠಿ ನಡೆಸಲು ಯೋಜಿಸಲಾಗಿದೆ’ ಎಂದರು.

‘ವಚನದೊಳಗೆ ಸಂಸ್ಕೃತ–ಹೂಜಿ ನೊಣ’
‘ವಚನಗಳೊಳಗೆ ಸಂಸ್ಕೃತ ಶ್ಲೋಕಗಳು ಸೇರಿರುವುದು ರೇಷ್ಮೆ ಗೂಡಿನೊಳಗೆ ಹೂಜಿ ನೊಣ ಮೊಟ್ಟೆ ಇಟ್ಟಂತೆ ಆಗಿದೆ’ ಎಂದು ಬೇಲಿ ಮಠದ ಶಿವರುದ್ರ ಸ್ವಾಮೀಜಿ ಟೀಕಿಸಿದರು. ‘ವಚನಗಳಲ್ಲಿರುವ ಸಂಸ್ಕೃತ ಶ್ಲೋಕಗಳು ನಂತರ ಸೇರ್ಪಡೆಯೇ’ ಎಂಬ ಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ ಅವರು, ‘ಈ ಹುನ್ನಾರದಿಂದ ಬಹಳ ಅವಿವೇಕಗಳು ಹಾಗೂ ಅನಾಹುತಗಳು ನಡೆದು ಹೋಗಿವೆ. ರೇಷ್ಮೆ ಗೂಡುಗಳಿಂದ ಹೂಜಿ ನೊಣಗಳನ್ನು ಗುಡಿಸಿ ಸಂಪೂರ್ಣ ಶುದ್ಧೀಕರಿಸುವ ಕೆಲಸ ಆಗಬೇಕು. ಆ ಮೂಲಕ ವಚನಗಳ ಆರೋಗ್ಯ ರಕ್ಷಣೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಭ್ರಮೆಯಿಂದ ಮುಕ್ತರಾ­ಗಬೇಕು’
‘12ನೇ ಶತಮಾನದ ಬಳಿಕ ಅನುಭಾವ ಸಾಹಿತ್ಯ ಆಚಾರ್ಯರ ಕೈಗೆ ಸಿಕ್ಕಿತು. ಪ್ರೌಢದೇವರಾಯನ ಕಾಲದಲ್ಲಿ ವಚನ ಸಾಹಿತ್ಯಕ್ಕೆ ಸಂಸ್ಕೃತದ ಪ್ರವೇಶ ಆಯಿತು’ ಎಂದು ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅಭಿಪ್ರಾಯ­ಪಟ್ಟರು.

‘ವಚನಗಳಲ್ಲಿರುವ ಸಂಸ್ಕೃತ ಶ್ಲೋಕಗಳು ನಂತರ ಸೇರ್ಪಡೆಯೇ’ ಎಂಬ ಗೋಷ್ಠಿಯಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಪ್ರೌಢದೇವ­ರಾಯನ ಕಾಲ ಲಿಂಗಾಯತರ ವೀರಶೈವೀಕರಣದ ಕಾಲ. ಅದು ಪುನರುಜ್ಜೀನದ ಕಾಲ ಅಲ್ಲ. ಆಗ ಸಂಸ್ಕೃತ ಶ್ಲೋಕದ ಸೇರ್ಪಡೆ ಆಯಿತು’ ಎಂದರು.

‘ಮುಂದಿನ ದಿನಗಳಲ್ಲಿ ವಚನಗಳ ಸಂಪಾದನೆ ಮಾಡುವಾಗ ಅದರಲ್ಲಿ­ರುವ ಸಂಸ್ಕೃತ ಶ್ಲೋಕಗಳನ್ನು ಬಿಟ್ಟು ವಚನಗಳ ಶುದ್ಧಗೊಳಿಸುವ ಕೆಲಸ ಮಾಡಬೇಕು. ಜೊತೆಗೆ ನಾವು ಸಂಸ್ಕೃತ ಭ್ರಮೆಯಿಂದ ಮುಕ್ತರಾಗಬೇಕು’ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT