ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಕೆಗೆ ಕ್ಯಾನ್ಸರೇ ತಲೆಬಾಗಿತು

Last Updated 26 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

‘ಸಾ ಮರ್ಥ್ಯವು ದೈಹಿಕ ಬಲದಿಂದ ಬರುವುದಿಲ್ಲ. ಅದಮ್ಯ ಮನೋಬಲದಿಂದ ಬರುತ್ತದೆ’ ಎಂಬ ಮಹಾತ್ಮ ಗಾಂಧೀಜಿ ಅವರ ಮಾತು ಇಪ್ಪತ್ಮೂರರ ಹರೆಯದ ಶ್ರುತಿಯ ಜೀವನದಲ್ಲಿ ಅಕ್ಷರಶಃ  ನಿಜವಾಗಿದೆ. ‘ಆಸ್ಟಿಯೋ ಸರ್ಕೋಮಾ’ ಎಂಬ ಮೂಳೆ ಕಾನ್ಸರ್‌ಗೆ ಕೊರಳೊಡ್ಡಿ, ದೃಢ ಮನೋಸಂಕಲ್ಪದಿಂದ ಸಾವಿನ ದವಡೆಯಿಂದ ಪಾರಾಗಿ ಹೊಸ ಜೀವನ ಆರಂಭಿಸಿದ್ದಾರೆ ಶ್ರುತಿ.

ಕಿರಿಯ ವಯಸ್ಸಿನಲ್ಲೇ ಸಾವನ್ನು ಹತ್ತಿರದಿಂದ ಕಂಡಿರುವ ಹೊಸನಗರ ಸಮೀಪದ ಬಾಣಿಗ ಗ್ರಾಮದ ಶ್ರುತಿ ಅವರ ಜೀವನದ ದಿಕ್ಕನ್ನೇ ‘ಆಸ್ಟಿಯೋ ಸರ್ಕೋಮಾ’ ಬದಲಿಸಿದೆ. ಬದುಕಿನಲ್ಲಿ ಅಪಶ್ರುತಿ­ಯಂತೆ ಕಾಡಿದ್ದ ಕ್ಯಾನ್ಸರ್‌­ನೊಂದಿಗೆ ಸತತ ಒಂಬತ್ತು ತಿಂಗಳುಗಳ ಕಾಲ ಸೆಣ­ಸಾಡಿ ದೇಹದಿಂದಲೇ ಅದನ್ನು ಕಿತ್ತೆಸೆಯಲು ಅವರಿಗೆ ಸಹಾಯ ಮಾಡಿದ್ದು ಮನೋ­ಸ್ಥೈರ್ಯ. ಪೋಷಕರ, ಬಂಧುಗಳ ಪ್ರೀತಿಯ ಆರೈಕೆ. ಸ್ನೇಹಿತರ, ದಾನಿಗಳ ಹಾರೈಕೆ.

ಸುನಾಮಿಯಂತೆ ಅಪ್ಪಳಿಸಿದ ‘ಆಸ್ಟಿಯೋ ಸರ್ಕೋಮಾ’ದೊಂದಿಗಿನ ಹೋರಾಟದಲ್ಲಿ ತಾವು ಅನುಭವಿಸಿದ ಯಮ ಯಾತನೆ, ಸಂಕಷ್ಟಗಳನ್ನು ಕಣ್ಣಿಗೆ ಕಟ್ಟಿಸಿದಂತೆ ವಿವರಿಸುತ್ತಾರೆ ಶ್ರುತಿ ಹಾಗೂ ಅವರ ತಂದೆ ಶ್ರೀಪಾದ ರಾವ್‌.

ಅದು 2008ನೇ ಇಸವಿ. ಶ್ರುತಿಗೆ 18 ವರ್ಷ. ಕನಸುಗಳನ್ನು ಹೊತ್ತ ಹುಡುಗಿ ಶಿವಮೊಗ್ಗದಲ್ಲಿ ಡಿಪ್ಲೊಮಾ ಮಾಡುತ್ತಿದ್ದಾಗ ಎದುರಾಗಿದ್ದು ಮಾರ­ಣಾಂತಿಕ ‘ಆಸ್ಟಿಯೋ ಸರ್ಕೋಮಾ’.

ಒಂದು ದಿನ ಬಲಗಾಲಿನಲ್ಲಿ ಏಕಾಏಕಿ ಸಹಿಸಲಸಾಧ್ಯ ನೋವು ಕಾಣಿಸಿ­ಕೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ, ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯು­ವಂತೆ ಅಲ್ಲಿನ ವೈದ್ಯರು ಸಲಹೆ ನೀಡಿ­ದರು. ಮಣಿಪಾಲದಲ್ಲಿ ಶ್ರುತಿಯನ್ನು ಅಗತ್ಯ  ವೈದ್ಯಕೀಯ ಪರೀಕ್ಷೆಗಳಿಗೆ ಒಳ­ಪಡಿಸಿ­ದಾಗ ಶ್ರೀಪಾದ ರಾವ್‌ ಹಾಗೂ ಅವರ ಕುಟುಂಬಕ್ಕೆ ಎದುರಾಗಿದ್ದು ಆಘಾತ.

ಹೆಚ್ಚಾಗಿ ಮಕ್ಕಳು, ಹದಿ ಹರೆಯದವ­ರಲ್ಲಿ ಕಂಡು ಬರುವ ‘ಆಸ್ಟಿಯೋ ಸರ್ಕೋಮಾ’ ಎಂಬ ಅಸ್ಥಿ ಕ್ಯಾನ್ಸರ್‌ ಶ್ರುತಿಯ ಬಲ­ಮೊಣಕಾಲಿನ ಮೂಳೆ­ಯಲ್ಲಿ ಮನೆ ಮಾಡಿತ್ತು. ಮೂಳೆಯ ತಿರುಳಿನಲ್ಲಿ ಬೆಳೆದಿದ್ದ ಕ್ಯಾನ್ಸರ್‌ ಗೆಡ್ಡೆ ಎಲುಬನ್ನು ಭೇದಿಸಿ ಹೊರ ಬಂದು, ಶ್ರುತಿಯ ಪ್ರಾಣಕ್ಕೆ ಕುತ್ತು ತಂದಿತ್ತು.

ಕ್ಯಾನ್ಸರ್‌ ಎಂಬ ಪದ ಎಂಥವರ ಧೈರ್ಯವನ್ನೂ ಉಡುಗಿಸುತ್ತದೆ. ಅಂತ­ಹದ್ದರಲ್ಲಿ ಆರ್ಥಿಕ ಪರಿಸ್ಥಿತಿ ಹೇಳು­ವಷ್ಟೇನು ಉತ್ತಮವಿಲ್ಲದ ಶ್ರೀಪಾದ ರಾವ್‌ ಅವರಿಗೆ ಕೂಡ ವೈದ್ಯಕೀಯ ಪರೀಕ್ಷೆಯ ವರದಿ ದುಃಖದೊಂದಿಗೆ ಭಯವನ್ನು ಸೃಷ್ಟಿಸಿತ್ತು. ಆದರೆ ಅವರು ಧೈರ್ಯ ಕಳೆದು­ಕೊಳ್ಳಲಿಲ್ಲ. ವೈದ್ಯರೊಂದಿಗೆ ದೀರ್ಘ­ವಾಗಿ ಸಮಾಲೋಚಿಸಿದರು. ‘ಆಸ್ಟಿಯೋ ಸರ್ಕೋಮಾ’ದ ಲಕ್ಷಣಗಳು, ಚಿಕಿತ್ಸೆ, ಅದರ ಪರಿಣಾಮಗಳ ಬಗ್ಗೆ ಚರ್ಚಿಸಿದರು. ತಮ್ಮ ಗೆಳೆಯರು, ನೆಂಟರಿಷ್ಟರ ಸಲಹೆ­ಯನ್ನೂ ಪಡೆದರು.

ಇದು ಗುಣಪಡಿಸಬಹುದಾದ ಕ್ಯಾನ್ಸರ್‌ ಎಂಬ ಭರವಸೆಯನ್ನು ವೈದ್ಯರು ನೀಡಿದರಾದರೂ, ತಮ್ಮ ಮಾತಿನಲ್ಲಿ ಅವರಿಗೂ ಪೂರ್ಣ ನಂಬಿಕೆ ಇರಲಿಲ್ಲ. ಯಾಕೆಂದರೆ, ಆ ಆಸ್ಪತ್ರೆಯಲ್ಲಿ ಈ ಮೊದಲು ದಾಖಲಾಗಿದ್ದ ಎಲ್ಲಾ ‘ಆಸ್ಟಿಯೋ ಸರ್ಕೋಮಾ’ ಪ್ರಕರಣಗಳು ನಿರಾಸೆಯನ್ನೇ ತಂದಿದ್ದವು.

ಕ್ಯಾನ್ಸರ್‌ಗೆ ಚಿಕಿತ್ಸೆ ಕೊಡಿಸುವು­ದೆಂದರೆ ಸುಲಭದ ಮಾತೇ? ಲಕ್ಷಾಂತರ ರೂಪಾಯಿಗಳ ಖರ್ಚಿನ ವ್ಯವಹಾರ. ವೈದ್ಯರು ಖಂಡಿತವಾಗಿ ಗುಣಪಡಿಸ­ಬಹುದು ಎಂಬ ಭರವಸೆ­ಯನ್ನು ನೀಡದೇ ಇರುವಾಗ, ಹಣ ಹೊಂದಿಸಿ ಚಿಕಿತ್ಸೆ ಕೊಡಿಸುವುದಾದರೂ ಹೇಗೆ? ಶ್ರೀಪಾದ ರಾವ್‌ ಅವರನ್ನೂ ದ್ವಂದ್ವ ಕಾಡಿತು. ಮತ್ತೆ ಗುರು–ಹಿರಿಯರ ಸಲಹೆ ಕೇಳಿದರು. ಗಟ್ಟಿ ಮನಸ್ಸು ಮಾಡಿ ಚಿಕಿತ್ಸೆ ಕೊಡಿಸಲು ಮುಂದಾದರು.
ಇದಕ್ಕೆ ಪೂರಕ­ವಾಗಿ ದಾನಿಗಳು ಸಹಾಯ ಮಾಡಿ­ದರು. ಅದರ ಫಲವಾಗಿ ತಮ್ಮ ಹಿರಿಯ ಮಗಳ ನಗುವ ಮುದ್ದು ಮುಖ ಅವರ ಮುಂದೆ ಇದೆ.

ಇದು ಪೋಷಕರ ಕತೆ ಆಯಿತು. ‘ಆಸ್ಟಿಯೋ ಸರ್ಕೋಮಾ’ದ ಉರುಳಿಗೆ ಕೊರಳೊಡ್ಡಿದ ಶ್ರುತಿಯ ಕತೆ ಇದೆ­ಯಲ್ಲಾ, ಅದು ಸ್ಫೂರ್ತಿ­ಯ ಒರತೆ.

ವೈದ್ಯಕೀಯ ವರದಿ ದೊರೆತ ತಕ್ಷಣ ವೈದ್ಯರು ಶ್ರೀಪಾದ ರಾವ್‌ ಅವರಿಗೆ ಕೇಳಿದ್ದು, ಈ ವಿಷಯವನ್ನು ಮಗಳಿಗೆ ಹೇಳುತ್ತೀರಾ? ಎಂಬುದಾಗಿ. ಅಷ್ಟೇ ಅಲ್ಲ, ಈಗಲೇ ಹೇಳಬೇಡಿ ಎಂಬ ಸಲಹೆ­ಯನ್ನೂ ಇತ್ತಿದ್ದರು. ಆದರೆ ಇದಕ್ಕೆ ಒಪ್ಪದ ರಾವ್‌, ತಾವೇನೋ ಧೈರ್ಯ­ ತಂದುಕೊಳ್ಳಬಹುದು. ಆದರೆ ಇದನ್ನು ಎದುರಿಸಬೇಕಾಗಿರುವುದು ಶ್ರುತಿ. ಹಾಗಾಗಿ ಹೇಳಲೇಬೇಕು ಎಂದು ತೀರ್ಮಾನಿಸಿದರು.  
ಆಸ್ಪತ್ರೆಯ ಹಾಸಿಗೆಯಲ್ಲಿದ್ದ ಮಗಳಿಗೆ ಎಲ್ಲಾ ವಿಷಯವನ್ನು ಅರುಹಿದರು. ಚಿಕಿತ್ಸೆ ನೀಡಿದರೆ ಗುಣ ಆಗುತ್ತದೆ ಎಂಬ ಭರವಸೆಯನ್ನು ವೈದ್ಯರು ನೀಡಿದ್ದಾರೆ ಎಂದು ಧೈರ್ಯ ಹೇಳಿ ಅಲ್ಲಿಂದ ಹೊರ ಬಂದರು.

ಒಂದೂವರೆ ಗಂಟೆ ಕಾಲ ಆಸ್ಪತ್ರೆಯ ಕೊಠಡಿಯಲ್ಲಿ ಶ್ರುತಿ ಏಕಾಂಗಿಯಾಗಿ ಕುಳಿತರು. ಕ್ಯಾನ್ಸರ್‌ ಎಂಬ ಪಾಶ ತನ್ನ ಬದುಕನ್ನೇ ಮುಗಿಸಿತು ಎಂದು ಅತ್ತರು. ಕಣ್ಣೀರೆಲ್ಲ ಬತ್ತಿ ಹೋದ ಮೇಲೆ ಯೋಚಿಸುವುದಕ್ಕೆ ಪ್ರಾರಂಭಿಸಿದರು. ತನ್ನಿಂದಾಗಿ ಮನೆಯವರೆಲ್ಲಾ ಯಾಕೆ ಮಾನಸಿಕವಾಗಿ ನರಳಬೇಕು ಎಂಬ ಪ್ರಶ್ನೆ ಮೂಡಲಾರಂಭಿಸಿತು. ತಾನು ಧೈರ್ಯ­ವಾಗಿದ್ದರೆ ಅವರೂ ಧೈರ್ಯ­ವಾಗಿರು­ತ್ತಾರೆ ಎಂಬ ಸತ್ಯವೂ ಅರಿವಾಗತೊಡ­ಗಿತು. ಮಹಾಮಾರಿ ಕಾಯಿಲೆ ಬಂದ ಕೂಡಲೇ ಜೀವನ ಮುಗಿಯಿತಾ? ಧೈರ್ಯದಿಂದ ಎದುರಿಸುತ್ತೇನೆ. ನೀರಿಗೆ ಇಳಿದ ಮೇಲೆ ಮಳೆಯಾದರೆ ಏನು? ಚಳಿಯಾದರೆ ಏನು? ಎಂದುಕೊಂಡು ಚಿಕಿತ್ಸೆಗೆ ಮಾನಸಿಕವಾಗಿ ಸಿದ್ಧರಾದರು ಶ್ರುತಿ.

ಅಲ್ಲಿಂದ ಶುರು ಆಯಿತು ಒಂಬತ್ತು ತಿಂಗಳ ಕಾಲ ಯಮಯಾತನೆಯ ಚಿಕಿತ್ಸೆ. ಮೊದಲ ಮೂರು ತಿಂಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಗಿತ್ತು. ಮೊದಲೇ ಕೃಶ­ವಾಗಿದ್ದ ಶ್ರುತಿಯನ್ನು ಕಿಮೊಥೆರಪಿ ಇನ್ನಷ್ಟು ಜರ್ಜರಿತರನ್ನಾಗಿಸಿತ್ತು. ಆಹಾರ ಸೇರುತ್ತಿರಲಿಲ್ಲ. ಪ್ರತಿ 21 ದಿನಕ್ಕೊಮ್ಮೆ ಈ ಚಿಕಿತ್ಸೆಗೆ ಒಳಗಾಗಬೇಕಿತ್ತು. ಕಿಮೊಥೆರಪಿಯ ಅಡ್ಡ ಪರಿಣಾಮಗಳು ನಂತರದ ದಿನಗಳಲ್ಲಿ 18ರ ಬಾಲೆ­ಯನ್ನು ಮತ್ತಷ್ಟು ಕಾಡಿತು. ಅಡ್ಡಪರಿಣಾಮಗಳಿಗೆ ಪ್ರತ್ಯೇಕ ಚಿಕಿತ್ಸೆ ನೀಡಲಾಗುತ್ತಿತ್ತು.

ಎಲ್ಲವನ್ನೂ ಧೈರ್ಯವಾಗಿ ಎದುರಿ­ಸಿದ ಶ್ರುತಿಗೆ ಶುಭ ಸುದ್ದಿಯೊಂದು ನಾಲ್ಕನೇ ಬಾರಿ ಕಿಮೊಥೆರಪಿಗೆ ಒಳ­-ಪಡುವ ಸಂದರ್ಭದಲ್ಲಿ ಕಾದಿತ್ತು. ಕ್ಯಾನ್ಸರ್‌ ಗೆಡ್ಡೆ ನಿಯಂತ್ರಣಕ್ಕೆ ಬಂದಿತ್ತು. ಶ್ರುತಿ ಸಂಪೂರ್ಣವಾಗಿ ಗುಣಮುಕ್ತ­ರಾಗುವರು ಎಂಬ ನಂಬಿಕೆ ವೈದ್ಯರಿಗೆ ಹುಟ್ಟಿದ್ದು ಆಗಲೇ. ಚಿಕಿತ್ಸೆಯ ಕೊನೆ ಹಂತದಲ್ಲಿ ಶ್ರುತಿಯ ಬಲಕಾಲಿನಲ್ಲಿದ್ದ ಮುಕ್ಕಾಲು ಅಡಿ ಉದ್ದದಷ್ಟು ಕ್ಯಾನ್ಸರ್‌ ಪೀಡಿತ ಮೂಳೆ­ಯನ್ನು ವೈದ್ಯರು ತುಂಡರಿಸಿ ಆ ಜಾಗಕ್ಕೆ ಕೃತಕ ಮೂಳೆಯನ್ನು ಅಳ­ವಡಿಸಿ­ದರು.

ಚಿಕಿತ್ಸೆ ಮುಗಿದ ನಂತರ ಶ್ರುತಿ ಕ್ಯಾನ್ಸರ್‌ ಮುಕ್ತಳಾಗಿ ಮನೆಗೆ ಹಿಂದಿರು­ಗು­ವಾಗ ಆಸ್ಪತ್ರೆಯ ವೈದ್ಯರೂ ಖುಷಿ ಪಟ್ಟಿದ್ದರು. ಕಠಿಣ ಹಾಗೂ ಅತಿ ನಾಜೂಕಿನ ಚಿಕಿತ್ಸೆಯನ್ನು ಧೈರ್ಯವಾಗಿ ಎದುರಿಸಿದ ಶ್ರುತಿ ಹಾಗೂ ಆಕೆಯ ಮನೋಬಲಕ್ಕೆ ಶಹಬ್ಬಾಸ್‌ ಹೇಳಲು ವೈದ್ಯರು ಮರೆಯಲಿಲ್ಲ.

ಚಿಕಿತ್ಸೆ ಆರಂಭವಾದಾಗಿನಿಂದ ಮುಗಿ­ಯು­ವರೆಗಿನ ಅವಧಿಯಲ್ಲಿ ಶ್ರುತಿ ಸಾಕಷ್ಟು ಬದಲಾಗಿದ್ದರು. ಜೀವನದ ಹಲವು ಮಟ್ಟುಗಳನ್ನು ಅವರು ಕಲಿತಿ­ದ್ದರು. ಬದುಕು ನೀರಿನ ಮೇಲಿನ ಗುಳ್ಳೆ­ಯಂತೆ ಎಂಬುದನ್ನು ಪ್ರತ್ಯಕ್ಷವಾಗಿ ಅರಿತಿ­ದ್ದರು. ಏನೇ ಬಂದರೂ ಧೈರ್ಯವಾಗಿ ಎದುರಿಸಿದರೆ ಗೆಲುವು ಖಂಡಿತ ಎಂಬ ಜ್ಞಾನೋದಯವೂ ಆಗಿತ್ತು.

ಪೂರ್ಣ ಆರೋಗ್ಯವಂತರಾದ ಶ್ರುತಿ ಅರ್ಧ­ದಲ್ಲೇ ಮೊಟಕುಗೊಂಡಿದ್ದ ಶಿಕ್ಷಣ­ವನ್ನು ಮುಂದುವರಿಸಲು ಯೋಚಿಸಿ­ದರು. ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಹಲವು ದಾನಿಗಳು ಆಕೆಯ ಜ್ಞಾನಾ­ರ್ಜನೆಗೆ ನೆರವಾದರು. ಶಿಕ್ಷಣಕ್ಕೆ ಅಗತ್ಯವಾದ ಲ್ಯಾಪ್‌ಟ್ಯಾಪ್‌ ಸೇರಿದಂತೆ ಇತರ ಪರಿಕರಗಳನ್ನು ಪೂರೈಸಿದರು.

ಮನೆಯಲ್ಲಿದ್ದುಕೊಂಡೇ ಶ್ರುತಿ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಮನಃಶಾಸ್ತ್ರ ವಿಷಯದಲ್ಲಿ ಪದವಿ ಮುಗಿಸಿ, ಈಗ ಅದೇ ವಿಷಯದಲ್ಲಿ ಎಂಎಸ್‌ಸಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮನಃಶಾಸ್ತ್ರದಲ್ಲಿ ಪಿಎಚ್‌ಡಿ ಮಾಡುವ ಕನಸೂ ಅವರಿಗಿದೆ.
ಆಸ್ಟಿಯೋ ಸರ್ಕೋಮಾವನ್ನು ಬಗ್ಗು ಬಡಿದಿರುವ ಸಂಭ್ರಮದಲ್ಲಿರುವ ಶ್ರುತಿ, ಕಾನ್ಸರ್‌ ಜೊತೆಗಿನ ತಮ್ಮ ಒಡನಾಟ, ಅನುಭವಿಸಿದ ಯಾತನೆಗಳಿಗೆ ಈಗ ಅಕ್ಷರ ರೂಪ ಕೊಟ್ಟಿದ್ದಾರೆ.

ಅವರು ಬರೆದಿರುವ ‘ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ’ ಪುಸ್ತಕ ಫೆಬ್ರುವರಿ 23ರಂದು ತುಮಕೂರಿನಲ್ಲಿ ಬಿಡುಗಡೆ­ಗೊಂಡಿದೆ. ‘ಒಳ್ಳೆಯ ಲೇಖಕಿ’ ಎಂದು ಭವಿಷ್ಯದಲ್ಲಿ ಗುರುತಿಸಿ­ಕೊಳ್ಳ­ಬೇಕು ಎಂಬ ಮಹ­ದಾಸೆಯೂ ಅವರಿಗಿದೆ. ಆ ನಿಟ್ಟಿನಲ್ಲಿ, ಈ ಪುಸ್ತಕವು ಶ್ರುತಿ ಹಾಕಿದ ಮೊದಲ ಹೆಜ್ಜೆ. ಶ್ರುತಿ ಇ–ಮೇಲ್‌ ವಿಳಾಸ: shreevirama@gmail.com

ಆಸ್ಟಿಯೋ ಸರ್ಕೋಮಾ ಎಂದರೇನು?
ಆಸ್ಟಿಯೋ ಸರ್ಕೋಮಾ, ಮೂಳೆಯಲ್ಲಿ ಕಂಡು ಬರುವ ಒಂದು ವಿಧದ ಕ್ಯಾನ್ಸರ್‌. ಸಾಮಾನ್ಯವಾಗಿ ಇದು ಮಕ್ಕಳು ಮತ್ತು ಪ್ರೌಢರಲ್ಲಿ ಕಂಡು ಬರುತ್ತದೆ. ಹಾಗಿದ್ದರೂ, ಯಾವುದೇ ವಯೋಮಾನದವರನ್ನು ಈ ಕಾಯಿಲೆ ಬಾಧಿಸಬಹುದು.

ವೇಗವಾಗಿ ಮೂಳೆ ಬೆಳೆಯುವ ಪ್ರದೇಶದಲ್ಲಿ (ಉದ್ದವಾದ ಮೂಳೆಯ ತುದಿಯಲ್ಲಿ ಉದಾ: ತೊಡೆಯಲ್ಲಿರುವ ಮೂಳೆಯ ಕೆಳಭಾಗ, ಮೊಣಕಾಲಿನ ಮೂಳೆ, ಭುಜಾಸ್ಥಿ ಇತ್ಯಾದಿ) ಇದು ಹೆಚ್ಚಾಗಿ ಕಂಡು ಬರುತ್ತದೆ. ವೈದ್ಯರ ಪ್ರಕಾರ, ಈ ಕ್ಯಾನ್ಸರ್‌ಗೆ ಚಿಕಿತ್ಸೆಗಳಿದ್ದರೂ ಸಂಪೂರ್ಣವಾಗಿ ಗುಣಪಡಿಸುವ ಸಾಧ್ಯತೆ ಕಡಿಮೆ. ಶತಮಾನದ ಲೆಕ್ಕದಲ್ಲಿ ಹೇಳುವುದಾದರೆ ಶೇ 30ರಷ್ಟು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT