ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನೆಲ್ಲಾ @ ಬೆಂಗಳೂರು !

Last Updated 29 ಮೇ 2014, 19:30 IST
ಅಕ್ಷರ ಗಾತ್ರ

‘ನಮ್ಮೂರು ನಮಗೇ ಚೆಂದ’ ಎಂಬ ನಾಣ್ಣುಡಿಯನ್ನು ಎಷ್ಟು ಉಜ್ಜಿದರೂ ಅದು ಕ್ಲೀಷೆ ಅಂತನಿಸುವುದಿಲ್ಲ. ಅದು ಹಳ್ಳಿಯಾಗಿರಬಹುದು, ದೊಡ್ಡ ಪಟ್ಟಣವಾಗಿರಬಹುದು. ಆ ನೆಲದ ಮಣ್ಣಿನ ಸೊಗಡು ನಮ್ಮ ಹೃದಯಕ್ಕೆ ಸದಾ ಹತ್ತಿರ. ಹಾಗಾಗಿ, ಹುಟ್ಟಿದ ಊರಿಗೂ ನಮಗೂ ಇರುವುದು

ಕಳ್ಳು–ಬಳ್ಳಿಯ ಸಂಬಂಧ.
ಬೆಂಗಳೂರೆಂಬ ಮಾಯಾಂಗನೆಯನ್ನು ಅಪ್ಪಿ ಮುದ್ದಾಡುತ್ತಿರುವ ಪೊಲ್ಯೂಷನ್ನೂ, ಟ್ರಾಫಿಕ್‌ ಜಾಮ್‌ ಮೊದಲಾದ ಸಂಗತಿಗಳು ಇಲ್ಲಿನ ಮೂಲ ನಿವಾಸಿಗಳನ್ನೂ ಮತ್ತು ಬೆರಗಿನಿಂದ ಬೆಂಗಳೂರಿಗೆ ಬರುವ ವಲಸಿಗರನ್ನು ಹೈರಾಣಾಗಿಸಿವೆ. ಬೆಂಗಳೂರಿನ ವಾಸ ಈಗ ಕಿರಿಕಿರಿ ಅನಿಸಬಹುದು. ಆದರೆ, ಹಿಂದೊಮ್ಮೆ ಈ ನಗರಿ ಹಲವರ ಹೃದಯ ಗೆದ್ದಿತ್ತು. ಇಲ್ಲಿ ಮನೆ ಮಾಡಿಕೊಂಡು ನೆಮ್ಮದಿಯ ಜೀವನ ಸಾಗಿಸುವುದು ಬಹು ಜನರ ಕನಸಾಗಿತ್ತು. ಇಷ್ಟೆಲ್ಲಾ ಕಷ್ಟಗಳು–ಕಿರಿಕಿರಿಗಳು ಈ ನಗರಿಯನ್ನು ಕಾಡುತ್ತಿದ್ದರೂ ಇಂದಿಗೂ ಬೆಂಗಳೂರು ತನ್ನ ಹಳೆಯ ಆಕರ್ಷಣೆ ಉಳಿಸಿಕೊಂಡಿದೆ. ಇವತ್ತಿಗೂ ಬೆಂಗಳೂರು ನಗರಿ ಮನಮೋಹಕವಾದುದು ಎಂದು ಪರಿಗಣಿಸಲು ಕಾರಣಗಳು ಸಾಕಷ್ಟಿವೆ. 

ಬೆಳ್ಳಂಬೆಳಿಗ್ಗೆ ಎದ್ದು ಕಬ್ಬನ್‌ಪಾರ್ಕ್‌ ಹೊಕ್ಕರೆ ಸ್ವರ್ಗದಿಂದ ಧರೆಗೆ ಮುತ್ತಿಕ್ಕುವಂತೆ ಕಾಣಿಸುವ ಹಿಮದ ಬಿಂದುಗಳು ನಮ್ಮ ಮೈಮೇಲೆ ಬಿದ್ದು ಮೈಮನಸ್ಸನ್ನು ಪ್ರಫುಲ್ಲವಾಗಿಸುತ್ತವೆ. ಗಗನಮುಖಿ ಮರಗಳ ಸೊಗಸು, ಮೈಮನ ಆವರಿಸಿಕೊಳ್ಳುವ ಹಿತಕರ ಹವೆ ಇವೆಲ್ಲವೂ ನಮ್ಮನ್ನು ಬೆಂಗಳೂರು ನಗರಿಯ ಮೇಲೆ ಪ್ರೀತಿ ಬೆಳೆಸಿಕೊಳ್ಳುವಂತೆ ಪ್ರೇರೇಪಿಸುತ್ತವೆ. ಇಲ್ಲಿನ ಪ್ರಕೃತಿಯ ರಮ್ಯತೆಯನ್ನು ಕಣ್ತುಂಬಿಕೊಂಡಾಗ ಮನಸ್ಸು ‘ಲವ್‌ ಯೂ ಬೆಂಗಳೂರು’ ಅನ್ನದೇ ಇರಲಾರದು.

ಬೆಂಗಳೂರು ನಗರಿಗೆ ‘ಉದ್ಯಾನ ನಗರಿ’ ಎಂಬ ಗರಿ ಸಿಕ್ಕಿಸಿದ್ದು ಇದೇ ಕಬ್ಬನ್‌ಪಾರ್ಕ್‌ ಮತ್ತು ಲಾಲ್‌ಬಾಗ್‌ ಉದ್ಯಾನಗಳು. ನೂರು ಎಕರೆಗೂ ಮಿಕ್ಕಿ ಚಾಚಿಕೊಂಡಿರುವ ಕಬ್ಬನ್‌ ಉದ್ಯಾನದ ಸೊಬಗು ಕಣ್ತುಂಬಿಕೊಳ್ಳಲು ಒಂದು ದಿನ ಸಾಲದು. ಈ ಎರಡೂ ಉದ್ಯಾನಗಳಲ್ಲಿ ನೂರಾರು ಬಗೆಯ ಮರಗಿಡಗಳು ಮತ್ತು ಸಸ್ಯಸಂಕುಲಗಳಿವೆ. ಲಾಲ್‌ಬಾಗ್‌ ಕೇವಲ ಹೂ ಪ್ರದರ್ಶನಕ್ಕಷ್ಟೇ ಪ್ರಸಿದ್ಧಿಯಾಗಿಲ್ಲ. ಬದಲಾಗಿ, ಇದು ದೇಶದಲ್ಲೇ ಅತ್ಯಂತ ಅಧಿಕ ಬಗೆಯ ಉಷ್ಣವಲಯದ ಸಸ್ಯಗಳ ಸಂಗ್ರಹ ಹೊಂದಿರುವ ತಾಣ ಎಂಬ ಅಗ್ಗಳಿಕೆಗೂ ಪಾತ್ರವಾಗಿದೆ. ಟ್ರಾಫಿಕ್‌ ಜಂಜಾಟ, ಕಿರಿಕಿರಿಗಳನ್ನು ಬದಿಗಿರಿಸಿ ಒಮ್ಮೆ ಈ ಉದ್ಯಾನಗಳನ್ನು ಹೊಕ್ಕರೆ ಬೆಂಗಳೂರು ನಗರಿ ಮೊದಲಿನಂತೆಯೇ ನಮ್ಮ ಹೃದಯಕ್ಕೆ ಹತ್ತಿರಾಗುತ್ತದೆ.

ಉದ್ಯಾನದೊಳಗೆ ಅಡ್ಡಾಡಿಕೊಂಡು ಹಾಗೆಯೇ ವಿದ್ಯಾರ್ಥಿ ಭವನ, ಮತ್ಸ್ಯ, ಅಡಿಗಾಸ್‌ ಹೋಟೆಲ್‌ಗೆ ಕಾಲಿಟ್ಟರೆ ವಿಶ್ವವಿಖ್ಯಾತ ದೋಸೆಗಳನ್ನು ಸವಿಯುವ ಭಾಗ್ಯ ನಮ್ಮದಾಗುವುದು. ವಿಶ್ವದ ಯಾವ ಭಾಗದಲ್ಲೂ ಸಿಕ್ಕದ ದೋಸೆ ರುಚಿ ಬೆಂಗಳೂರಿನ ಹಲವು ಕಡೆಗಳಲ್ಲಿ ಲಭ್ಯವಿದೆ. ನಾಲಗೆಯ ರುಚಿ ಮೊಗ್ಗುಗಳನ್ನು ಅರಳಿಸುವ ದೋಸೆಯ ಜೊತೆಗೆ ಅದ್ಭುತ ಕಾಫಿಯನ್ನು ಇಲ್ಲಿ ಸವಿಯಬಹುದು. ಬೆಂಗಳೂರು ನಗರಿ ‘ಕಾಫಿ ಡೇ’ಗಳ ಜನ್ಮಸ್ಥಳ. ನಗರದ ಪ್ರತಿ ಮೂಲೆ ಮೂಲೆಯಲ್ಲೂ ಕೆಫೆ ಕಾಫಿ ಡೇಗಳು ತಲೆ ಎತ್ತಿವೆ. ನಗರದ ಕಾಫಿಪ್ರಿಯರ ರುಚಿ ತಣಿಸುತ್ತಿವೆ. ಆದರೂ, ಹೊಸ ಬಗೆಯ ಸ್ವಾದ ಕೊಡುವ ಹಿಂದಿನ ಕಾಲದಲ್ಲಿ ಖ್ಯಾತಿ ಪಡೆದಿದ್ದ ಫಿಲ್ಟರ್‌ ಕಾಫಿ ರುಚಿ ನಮ್ಮನ್ನು ಈಗಲೂ ಮನಸೋಲುವಂತೆ ಮಾಡುತ್ತವೆ. ಇಲ್ಲಿರುವ ಅನೇಕ ಭಟ್ಟರ ಹೋಟೆಲ್‌ಗಳು, ಕಲ್ಮನೆ ಕಾಫಿ, ಹಟ್ಟಿ ಕಾಫಿ ಮೊದಲಾದ ಕಾಫಿ ಶಾಪ್‌ನಲ್ಲಿ ಒಳ್ಳೆ ಫಿಲ್ಟರ್‌ ಕಾಫಿಯನ್ನು ವಿವಿಧ ಸ್ವಾದದಲ್ಲಿ ಸವಿಯಬಹುದು. ₨8ರಿಂದ ಆರಂಭಗೊಳ್ಳುವ ಫಿಲ್ಟರ್ ಕಾಫಿಯನ್ನು ಗೆಳೆಯನೊಂದಿಗೆ ಬೈಟೂ ಮಾಡಿಕೊಂಡು ಕುಡಿದು ಸಂತೃಪ್ತರಾಗಬಹುದು.

ಸಂಗೀತ ಮತ್ತು ನೃತ್ಯ ಪ್ರಕಾರಕ್ಕೆ ಬಂದರೆ ಮೊದಲಿನಿಂದಲೂ ಕರ್ನಾಟಕದ್ದು ದೊಡ್ಡಹೆಸರು. ಈ ಎರಡೂ ಪ್ರಕಾರದಲ್ಲಿ ನಮ್ಮ ನೆಲ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಇಲ್ಲಿನ ಬಹುತೇಕ ಹೆಣ್ಣು ಮಕ್ಕಳು ಒಂದಿಲ್ಲೊಂದು ನೃತ್ಯ ಪ್ರಕಾರಕ್ಕೆ ತಮ್ಮನ್ನು ಒಗ್ಗಿಸಿಕೊಂಡವರೇ. ನಗರದಲ್ಲಿರುವ ನೃತ್ಯಗ್ರಾಮ ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಈ ಗ್ರಾಮದೊಳಕ್ಕೆ ಕಾಲಿಟ್ಟರೆ ಅದು ನಮ್ಮೊಳಗೆ ಒಂದು ವಿಭಿನ್ನ ಅನುಭವ ದಕ್ಕಿಸಿಕೊಡುತ್ತದೆ. ಇಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಾದ ಒಡಿಸ್ಸಿ, ಮೋಹಿನಿಯಾಟ್ಟಂ, ಕಥಕ್‌, ಭರತನಾಟ್ಯಂ, ಕೂಚಿಪುಡಿ, ಕಥಕ್ಕಳಿ ಮತ್ತು ಮಣಿಪುರಿ ನೃತ್ಯವನ್ನು ಶಾಸ್ತ್ರೀಯವಾಗಿ ಕಲಿಸಿಕೊಡಲಾಗುತ್ತದೆ.

ಒಂದು ಕಾಲದಲ್ಲಿ ದೇಶದ ಎಲ್ಲ ನಗರಗಳಲ್ಲೂ ನಾಟಕ ಥಿಯೇಟರ್‌ಗಳು ಉಚ್ಚ್ರಾಯ ಸ್ಥಿತಿಯಲ್ಲಿದ್ದವು. ಕ್ರಮೇಣ ಅನೇಕ ಊರುಗಳಲ್ಲಿ ಥಿಯೇಟರ್‌ಗಳೇ ಕಣ್ಮರೆಯಾಗುತ್ತಾ ಬಂದವು. ಆದರೆ, ಬೆಂಗಳೂರು ನಗರಿ ಇಂದಿಗೂ ಥಿಯೇಟರ್‌ಗಳನ್ನು ತನ್ನ ಒಡಲಲ್ಲಿಟ್ಟುಕೊಂಡು ಜೀಕುತ್ತಿದೆ. ರಂಗ ಶಂಕರ ಥಿಯೇಟರ್‌ ಅದಕ್ಕೆ ಅತ್ಯುತ್ತಮ ಉದಾಹರಣೆ. ಇಲ್ಲಿ ವಿಶ್ವದ ಅನೇಕ ಭಾಷೆಯ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ಇಲ್ಲಿವರೆಗೂ 2,700ಕ್ಕೂ ಅಧಿಕ ನಾಟಕಗಳು ಪ್ರದರ್ಶನ ಕಂಡಿರುವುದು ಥಿಯೇಟರ್‌ ಜೀವಂತಿಕೆಗೆ ಸಾಕ್ಷಿ. ರಂಗ ಶಂಕರ ತಂಡದಂತೆ ಜಾಗೃತಿ ಥಿಯೇಟರ್‌, ಚೌಡಯ್ಯ ಮೆಮೊರಿಯಲ್‌ ಹಾಲ್‌, ರವೀಂದ್ರ ಕಲಾಕ್ಷೇತ್ರ ಮೊದಲಾದ ತಾಣಗಳು ರಂಗ ಚಟುವಟಿಕೆಯಲ್ಲಿ ನಿರತವಾಗಿವೆ.

ಬೆಂಗಳೂರು ನಗರಿ ಈಗ ದೇಶ ವಿದೇಶದ ಜನರಿಗೆ ಆಶ್ರಯ ನೀಡಿದೆ. ಬ್ರಿಗೇಡ್‌ ರಸ್ತೆಯಲ್ಲಿ ಕಣ್ಣುಹಾಯಿಸಿದಷ್ಟೂ ದೂರ ಯುವಕ ಯುವತಿಯರ ದಂಡು ಕಾಣಿಸುತ್ತದೆ. ಸೊಂಟ ಬಳಸಿ ನಡೆಯುತ್ತಿರುವ ಪ್ರೇಮಿಗಳು, ಕೈಯಲ್ಲಿ ಸಿಗರೇಟಿನ ತುಂಡು ಉರಿಸುತ್ತಾ ಸಾಗುವ ಶಾಪಿಂಗ್‌ ಮೋಹಿಗಳು ಹೀಗೆ ಎಲ್ಲ ಬಗೆಯ ಜನರು ಬ್ರಿಗೇಡ್‌ ರಸ್ತೆಯ ಪ್ರತಿ ಓಣಿಯಲ್ಲೂ ಕಾಣಿಸಿಕೊಳ್ಳುತ್ತಾರೆ. ಒಂದು ಸಮೀಕ್ಷೆಯ ಪ್ರಕಾರ ಬೆಂಗಳೂರಿನಲ್ಲಿ ಶೇ 48 ಕನ್ನಡಿಗರಿದ್ದರೆ, ತಮಿಳರು ಶೇ 25, ತೆಲುಗರು ಶೇ 14, ಮಲೆಯಾಳಿಗಳು ಶೇ 10, ಯುರೋಪಿಯನ್ಸ್‌ ಶೇ 8 ಮತ್ತು ಇಲ್ಲಿರುವ ಶೇ 6 ಜನರು ವಿಶ್ವದ ಇತರೆ ಜನಾಂಗಕ್ಕೆ ಸೇರಿದವರು ಎಂದು ತಿಳಿದುಬಂದಿದೆ.

ಪ್ರತಿಯೊಬ್ಬರಿಗೂ ಸ್ಪೇಸ್‌ ನೀಡುವ ಹಾಗೆಯೇ ಬೆಂಗಳೂರು ನಗರಿಯನ್ನು ಹೊರನೋಟಕ್ಕೆ ಸುಂದರವಾಗಿ ಕಾಣಿಸುವ ಅನೇಕ ತಾಣಗಳಿವೆ. ಅದರಲ್ಲಿ ಪ್ರಮುಖವಾದುದು ಎಂ.ಜಿ.ರಸ್ತೆಯಲ್ಲಿರುವ ಬುಲೆವಾರ್ಡ್‌. ಇಲ್ಲಿರುವ ಆಟದ ತಾಣಗಳು ಮಕ್ಕಳು ದೊಡ್ಡವರೆನ್ನದೇ ಎಲ್ಲರನ್ನು ಸೆಳೆಯುತ್ತಿವೆ. ಇನ್ನು ಎರಡು ವರ್ಷಕ್ಕೊಮ್ಮೆ ನಡೆವ ಏರ್‌ ಷೋ ವಿಶ್ವ ವಿಖ್ಯಾತ. ಹಾಗೆಯೇ, ಐಟಿ ಸಿಟಿ ಎಂಬ ವಿಶೇಷಣದೊಂದಿಗೆ ಬೆಳೆಯುತ್ತಿರುವ ಬೆಂಗಳೂರು ನಗರಿ ಈಗ ಸ್ಟಾರ್ಟ್ಅಪ್‌ ಹಬ್‌ ಅಂತ ಕರೆಯಿಸಿಕೊಳ್ಳುತ್ತಿದೆ. ತಿಂಗಳಿಗೊಂದರಂತೆ ಹೊಸ ಹೊಸ ಕಂಪೆನಿಗಳು ಇಲ್ಲಿ ಬೇರು ಬಿಡುತ್ತಿವೆ. ಕೆಲವು ಎಂಜಿನಿಯರ್‌ಗಳು, ಪದವೀಧರರು ಕೈತುಂಬ ಸಂಬಳ ಎಣಿಸುತ್ತಿದ್ದಾರೆ. ವಾರದ ಐದು ದಿನ ಕಷ್ಟಪಟ್ಟು ದುಡಿವ ಟೆಕ್ಕಿಗಳು ವಾರಾಂತ್ಯವನ್ನು ಪಾರ್ಟಿ, ಮೋಜು–ಮಸ್ತಿಯಲ್ಲಿ ಕಳೆಯುತ್ತಾರೆ. ಒಂದು ಅಂದಾಜಿನ ಪ್ರಕಾರ ಬೆಂಗಳೂರು ನಗರಿಯಲ್ಲಿ ಅತಿಹೆಚ್ಚು ಪಬ್‌ಗಳಿವೆ.

ಈ ಎಲ್ಲ ಸಂಗತಿಗಳು ಇಂದಿಗೂ ನಾವು ಬೆಂಗಳೂರು ನಗರಿಯನ್ನು ಪ್ರೀತಿಸಲು ಇರುವ ಕಾರಣಗಳಾಗಿವೆ. ಅಯ್ಯೋ, ಇದೆಂಥಾ ಬೆಂಗಳೂರು? ಎಂಬ ಭಾವ ಬೆಳೆಸಿಕೊಂಡವರು ಒಮ್ಮೆ ಇವುಗಳತ್ತ ಗಮನ ಹರಿಸಿದರೆ ಪ್ರತಿ ವಾರಾಂತ್ಯವನ್ನು ಖುಷಿ ಖುಷಿಯಿಂದ ಕಳೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT