ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣಿವೆ ಒತ್ತುವರಿ: ವರ್ತೂರು ಕೆರೆ ಅಸ್ತಿತ್ವಕ್ಕೆ ಕುತ್ತು

ಕೆರೆಯಂಗಳದಿಂದ...3
Last Updated 7 ಮೇ 2016, 19:33 IST
ಅಕ್ಷರ ಗಾತ್ರ

ಬೆಂಗಳೂರು: ಬೆಳ್ಳಂದೂರು ಕೆರೆ ಹಾಗೂ ವರ್ತೂರು ಕೆರೆಗಳಿಗೆ ಸಂಪರ್ಕ ಕಲ್ಪಿಸುವ ಬೆಳ್ಳಂದೂರು ಅಮಾನಿಕೆರೆ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಒತ್ತುವರಿ ಆಗಿದೆ.  ಬಫರ್‌ ಝೋನ್‌ನಲ್ಲಿ ಕಟ್ಟಡ ನಿರ್ಮಾಣ ಮಾಡಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ.

ಕೆರೆಯಂಚಿನಲ್ಲಿ ಕಟ್ಟಡ ಕಾಮಗಾರಿಗಳಿಗೆ ಅನುಮತಿ ನೀಡಬಾರದು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಾಲ್ಕು ದಿನಗಳ ಹಿಂದೆ ನಿರ್ದೇಶನ ನೀಡಿದೆ.

ಕೆರೆಗೆ ಸೇರಿದ ಜಾಗದಲ್ಲಿ ಎಲ್ಲೆಂದರಲ್ಲಿ ಕಟ್ಟಡದ ತ್ಯಾಜ್ಯ ಹಾಗೂ ಮಣ್ಣು ಸುರಿಯಲಾಗಿದೆ. ಇದರಿಂದಾಗಿ ವರ್ತೂರು ಕೆರೆಗೆ ಕತ್ತು ಹಿಸುಕಿದಂತಾಗಿದೆ.
ಕೆರೆಗೆ ಸೇರಿದ ಜಾಗದ ಸುತ್ತ ಕೆರೆ ಅಭಿವೃದ್ಧಿ ಪ್ರಾಧಿಕಾರವು ಕೆಲವು ತಿಂಗಳ ಹಿಂದೆ ಬೇಲಿ ಹಾಕಿತ್ತು. ಬೇಲಿಯ ಸುತ್ತಮುತ್ತ ಈಗ ಮಣ್ಣು ಸುರಿಯಲಾಗುತ್ತಿದೆ.

ವರ್ತೂರು ಕಣಿವೆಗೆ ಸೇರಿದ ಹತ್ತಾರು ಎಕರೆ ಜಾಗವನ್ನು ಕಬಳಿಸಲಾಗಿದೆ. ಕೆಲವು ದಿನಗಳ ಹಿಂದೆ ಹಸಿರಿನಿಂದ ಕಂಗೊಳಿಸುತ್ತಿದ್ದ ಕೃಷಿಭೂಮಿಗಳು ಕಣ್ಮರೆಯಾಗಿವೆ. ಈಗ ಮಣ್ಣಿನ ರಾಶಿಯೇ ಕಾಣುತ್ತಿದೆ. ತ್ಯಾಜ್ಯ ಹಾಗೂ ಮಣ್ಣು ಸುರಿದ ಕಾರಣ ಹಲವು ಕಡೆಗಳಲ್ಲಿ ಬೇಲಿಗಳೇ ನಾಪತ್ತೆಯಾಗಿವೆ.

ಆರಂಭದಲ್ಲಿ ಸ್ಥಳೀಯ ಕೃಷಿಕರಿಗೆ ಸೇರಿದ ಜಾಗದಲ್ಲಿ ಮಣ್ಣು ಸುರಿಯಲಾಗುತ್ತಿತ್ತು. ಈ ಜಾಗದಲ್ಲಿ ಎಂಟು ಅಡಿಗಳಷ್ಟು ಎತ್ತರಕ್ಕೆ ಮಣ್ಣು ಹಾಕಲಾಯಿತು. ಬಳಿಕ ಒತ್ತುವರಿದಾರರ ಕಣ್ಣು ಕೆರೆಗೆ ಸೇರಿದ ಜಾಗದ ಮೇಲೆ ಬಿತ್ತು. ಅಕ್ಕಪಕ್ಕದಲ್ಲಿ ಮಣ್ಣು ಹೇರಿದ್ದರಿಂದ ಈಗ ಬೇಲಿಯೇ ಕಾಣುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

‘ಕೆರೆಯ ಗಡಿಯನ್ನು ನಾಮಾವಶೇಷ ಮಾಡಿ ಕಬಳಿಸುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ.  ದೊಡ್ಡ ಅಪಾರ್ಟ್‌ಮೆಂಟ್‌ ಯೋಜನೆ ಯೊಂದು ಸಮೀಪದಲ್ಲಿ ಬರುತ್ತಿದೆ. ಅಲ್ಲಿ ತೆಗೆದ ಮಣ್ಣನ್ನು ಕಣಿವೆ ಪ್ರದೇಶದಲ್ಲಿ ಹಾಕಲಾಗುತ್ತಿದೆ. ಶಾಸಕರು, ಸ್ಥಳೀಯ ರಾಜಕಾರಣಿಗಳು ಹಾಗೂ ಕೆಲವು ಬಿಲ್ಡರ್‌ಗಳು ಈ ಅಕ್ರಮದ ಹಿಂದೆ ಇದ್ದಾರೆ’ ಎಂದು ವರ್ತೂರು ಕೆರೆ ಉಳಿಸಲು ಹೋರಾಟ ನಡೆಸುತ್ತಿರುವ ಸ್ಥಳೀಯರು ಹಾಗೂ ಹೋರಾಟಗಾರರು ಆರೋಪಿಸುತ್ತಾರೆ.

30 ಎಕರೆ ಒತ್ತುವರಿ: ವರ್ತೂರು ಕೆರೆಯ ಒಟ್ಟು ವಿಸ್ತೀರ್ಣ 190 ಹೆಕ್ಟೇರ್‌ (471.43 ಎಕರೆ). ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಪ್ರಕಾರ ಕೆರೆಯ ಈಗಿನ ವಿಸ್ತೀರ್ಣ 180 ಹೆಕ್ಟೇರ್‌ (445.35 ಎಕರೆ). ಕೆರೆಯ ದಂಡೆಯಲ್ಲಿ ರಸ್ತೆಗಳು ಹಾಗೂ ಕಟ್ಟಡಗಳ ನಿರ್ಮಾಣ ಆಗಿವೆ. ಕೃಷಿ ಹಾಗೂ ತೋಟಗಾರಿಕಾ ಉದ್ದೇಶಗಳಿಗಾಗಿ ಕೆಲವು ಸ್ಥಳೀಯರು ಕೆರೆಯನ್ನು ಒತ್ತುವರಿ ಮಾಡಿದ್ದಾರೆ. ಒಟ್ಟು 12.4 ಹೆಕ್ಟೇರ್‌ (30.64 ಎಕರೆ) ಒತ್ತುವರಿಯಾಗಿದೆ.

‘ಒತ್ತುವರಿಯಿಂದಾಗಿ ಕೆರೆಗಳ ನಡುವಿನ ಅಂತರ್‌ಸಂಪರ್ಕಕ್ಕೆ ಪೆಟ್ಟು ಬಿದ್ದಿದೆ. ಕೆರೆಯ ಜಲಾನಯನ ಪ್ರದೇಶದ ಸ್ವರೂಪವೇ ಬದಲಾಗಿದೆ. ರಾಜಕಾಲುವೆಗಳಲ್ಲಿ ಮಳೆ ನೀರಿನ ಸರಾಗ ಹರಿವಿಗೆ ಅಡ್ಡಿಯಾಗಿದೆ. ಇದರಿಂದಾಗಿ ಕೆರೆಗೆ ಮಳೆ ನೀರು ಸೇರುತ್ತಿಲ್ಲ. ಮನೆಗಳಿಗೆ ಮಳೆ ನೀರು ನುಗ್ಗಿ ಅವಘಡ ಸಂಭವಿಸುತ್ತಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಅಧ್ಯಯನ ವರದಿ ತಿಳಿಸಿದೆ.


ಕೆರೆಯ ಸಂರಕ್ಷಣೆಗೆ ಕ್ರಮ ಕೈಗೊಳ್ಳದಿದ್ದರೆ ಆಪತ್ತು ಕಟ್ಟಿಟ್ಟ ಬುತ್ತಿ ಎಂದೂ ಭಾರತೀಯ ವಿಜ್ಞಾನ ಸಂಸ್ಥೆ ತನ್ನ ವರದಿಯಲ್ಲಿ ಎಚ್ಚರಿಸಿದೆ.

ಅಂಕಿ ಅಂಶಗಳು ಎಕರೆಗಳಲ್ಲಿ
471.43 ವರ್ತೂರು ಕೆರೆಯ ವಿಸ್ತೀರ್ಣ
30.64 ಕೆರೆಯ ಒತ್ತುವರಿ

***
ನೀವೂ ಮಾಹಿತಿ ನೀಡಿ
ನಗರದ ಕೆರೆಗಳ ಹಾಗೂ ರಾಜಕಾಲುವೆ ಸುತ್ತ ತಲೆ ಎತ್ತಿರುವ ಕಟ್ಟಡಗಳನ್ನು ನಿರ್ದಾಕ್ಷಿಣ್ಯವಾಗಿ ಕೆಡವಬೇಕು ಎಂದು ಹಸಿರು ನ್ಯಾಯಮಂಡಳಿ ಆದೇಶ ಹೊರಡಿಸಿದೆ. ನಗರದ ಹತ್ತಾರು ಕೆರೆಗಳ ಮೇಲೆ ಭೂಮಾಫಿಯಾಗಳು, ಬಿಲ್ಡರ್‌ಗಳ ಕಣ್ಣು ಬಿದ್ದು ಕೆರೆಗಳು ಮಾಯವಾಗಿವೆ. ಕೆರೆ, ರಾಜಕಾಲುವೆ  ಒತ್ತುವರಿ ಮಾಡಿರುವವರ ಬಗ್ಗೆ ಸಾರ್ವಜನಿಕರು ಪೂರಕ ದಾಖಲೆಗಳೊಂದಿಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಬಹುದು. ಅವುಗಳನ್ನು ಪ್ರಕಟಿಸುತ್ತೇವೆ. ಮಾಹಿತಿ ನೀಡಲು 080–25880607, 25880643, 9916240432, 9740231381 ಸಂಪರ್ಕಿಸಬಹುದು. ವಾಟ್ಸ್ ಆ್ಯಪ್‌ ಮೂಲಕವೂ ದಾಖಲೆ ಕಳಿಹಿಸಬಹುದು ಇಮೇಲ್‌ ವಿಳಾಸ: bangalore@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT