ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ನಾಳೆಗಳು ಆತಂಕದಲ್ಲಿ...

Last Updated 5 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಕನ್ನಡಕ್ಕೆ ದೊರೆತಿರುವ ಕ್ಲಾಸಿಕಲ್ (ಶಾಸ್ತ್ರೀಯ) ಸ್ಥಾನಮಾನ ಭಾಷೆಯ ಮುನ್ನಡೆಗೆ ಪ್ರೋತ್ಸಾಹ ಕೊಟ್ಟಂತೆ, ಅಲ್ಲವೇ?

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ್ದು ನ್ಯಾಯೋಚಿತ. ಇದು ರಾಜಕೀಯವಾಗಿ ಹೆಮ್ಮೆಯ ವಿಷಯ. ಇದರಿಂದ ಕನ್ನಡಿಗರ ಹೊಣೆ ಹೆಚ್ಚಿದೆ. ಅಭಿಮಾನ-ಹೆಮ್ಮೆ ತೋರಿಸುವುದು ಕೇವಲ ಪ್ರಾಥಮಿಕ ಪ್ರತಿಕ್ರಿಯೆ. ಕನ್ನಡಕ್ಕಿರುವ ಪ್ರಬುದ್ಧತೆ ಕನ್ನಡಿಗರನ್ನು ಎಲ್ಲ ನೆಲೆಗಳಲ್ಲಿ ಬೆಳೆಸಬೇಕಾಗಿದೆ. ಶ್ರೀಮಂತ ಸಾಹಿತ್ಯ, ಅತೀ ಶ್ರೀಮಂತ ಸಾಧನೆಗಳು ಕನ್ನಡಿಗರಿಂದಾಗಿವೆ. ಕನ್ನಡದ ಉಳಿವು, ಬಳಕೆ, ಬೆಳವಣಿಗೆಗೆ ಸರ್ಕಾರ ಕಾನೂನು ಜಾರಿಗೆ ತಂದಿದೆ. ಅಪಾರ ಪ್ರಮಾಣದ ಹಣ ಕನ್ನಡದ ಕೆಲಸಗಳಿಗಾಗಿ ವ್ಯಯವಾಗುತ್ತಿದೆ. ಕಂಡಾಪಟ್ಟೆ ಅಧ್ಯಯನ ಯೋಜನೆಗಳು ರೂಪುಗೊಂಡಿವೆ. ಹೀಗಿದ್ದೂ, ಕನ್ನಡದ ಭವಿಷ್ಯ ಆತಂಕಕಾರಿಯಾಗಿದೆ.

ಭಾಷೆಯ ಬೆಳವಣಿಗೆ ಹಾದಿ ತಪ್ಪಿದೆಯೇ?

ಹೌದು. ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಸ್ವಾತಂತ್ರ್ಯ ಬೇಕು, ಅವಕಾಶ ಬೇಕು. ಅದಕ್ಕೂ ಮುಖ್ಯವಾಗಿ ಪ್ರತಿಭೆ, ಪರಿಶ್ರಮಗಳು ಬೇಕೇ ಬೇಕು. ಇವುಗಳದೇ ಕೊರತೆ. ಜಾಗತೀಕರಣ, ಖಾಸಗೀಕರಣದ ನೆಪದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಕನ್ನಡತನಕ್ಕೆ ವಿಮುಖರಾಗಿ ವರ್ತಿಸುತ್ತಾರೆ. ಇದು ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಅನ್ವಯವಾಗುತ್ತದೆ. ರಾಜಕೀಯ ಇಚ್ಛಾಶಕ್ತಿ ಇಲ್ಲದ್ದರಿಂದ ಕನ್ನಡ ಕಲಿಕೆಗೆ ಮೊದಲ ಪೆಟ್ಟು ಈಗ ಬಿದ್ದಿದೆ. ಮೂರೂವರೆ ಸಾವಿರ ಕನ್ನಡ ಶಾಲೆಗಳು ಅಧಿಕೃತವಾಗಿ ಮುಚ್ಚಲಿವೆ. ಎರಡನೆಯದು ಕನ್ನಡ ಮಾಧ್ಯಮ ವಿಷಯದಲ್ಲಿ ಖಚಿತವಾದ ರೀತಿ, ನಿಲುವು ತಾಳದ ಸರಕಾರ ಹಿಂದೇಟು ಹಾಕುತ್ತಿದೆ. ದೋಷಪೂರ್ಣ ಶಿಕ್ಷಣ ನೀತಿಯಿಂದಾಗಿ ಭಾವೀ ತಲೆಮಾರಿನ ಕನ್ನಡಿಗರು ಕನ್ನಡತನ ಉಳಿಸಿಕೊಳ್ಳುವುದು ಅಸಾಧ್ಯವಾಗಿದೆ.
ಪ್ರಾದೇಶಿಕ ಭಾಷೆ ನಾಡಿನ ಮಾತೃಭಾಷೆ. ಅದನ್ನು ಏಳನೆಯ ತರಗತಿಯವರೆಗಿನ ಎಲ್ಲ ವಿದ್ಯಾರ್ಥಿಗಳು ಕಡ್ಡಾಯ ಕಲಿಯಬೇಕು. ಕೇಂದ್ರ ಶಾಲೆಗಳು ಮತ್ತು ಖಾಸಗೀ ಇಂಗ್ಲಿಷ್ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳಲ್ಲಿ ಅಸಮಾನತೆ ತರುತ್ತಿವೆ. ಏಕರೂಪದ ಶಿಕ್ಷಣ ಎಲ್ಲರಿಗೂ, ಎಲ್ಲ ಮಟ್ಟಗಳಲ್ಲಿಯೂ ಕೊಟ್ಟಾಗ ಬಡವರು, ಹಳ್ಳಿಗರು ಉದ್ಧಾರವಾಗುತ್ತಾರೆ. ಇದಕ್ಕಾಗಿ ಸರ್ಕಾರವನ್ನು ಅವಲಂಬಿಸಿ ಬದಲಾವಣೆ ಮಾಡುವುದು ಅಸಾಧ್ಯದ ಸಂಗತಿಯಾಗಿದೆ. ಹೈಟೆಕ್ ಭ್ರಮೆಯಲ್ಲಿ ಭಾಷಾ ಕಲಿಕೆ ಮತ್ತು ಸಾಹಿತ್ಯದ ಅಭ್ಯಾಸ ಕೈಬಿಟ್ಟು ಹೋಗುವ ಪರಿಸ್ಥಿತಿಯನ್ನು ಎಲ್ಲ ಶಿಕ್ಷಣ ತಜ್ಞರು ಮುಖ್ಯವಾಗಿ ಭಾಷಾ ಶಿಕ್ಷಕರು ಒಗ್ಗಟ್ಟಿನಿಂದ ಎದುರಿಸಬೇಕಾಗಿದೆ.

ತ್ರಿಭಾಷಾ ಸೂತ್ರ ಅನ್ವಯಿಸಬೇಕು ಎನ್ನುತ್ತೀರೇನು?

ಹೌದು. ಕರ್ನಾಟಕದಲ್ಲಿ ಕನ್ನಡ ಏಳನೆಯ ತರಗತಿಯವರೆಗೆ ಮಾಧ್ಯಮವಾಗಿರತಕ್ಕದ್ದು. ಎರಡನೆಯ ಭಾಷೆಯಾಗಿ ಇಂಗ್ಲಿಷ್/ಹಿಂದಿ ಕಲಿಯಬಹುದು. ಮೂರನೆಯ ಭಾಷೆಯಾಗಿ ಅವರವರ ಮಾತೃಭಾಷೆ ಅಭ್ಯಾಸ ಮಾಡಬಹುದು. ಭಾಷಾ ಕಲಿಕೆಗೆ ಸರ್ಕಾರ ಆದ್ಯತೆ ಕೊಟ್ಟು ಮಕ್ಕಳನ್ನು ಸುಸಂಸ್ಕೃತರಾಗಿ ರೂಪಿಸಲು ಖರ್ಚು ಮಾಡಬೇಕು. ಉಳಿದೆಲ್ಲ ಸುಧಾರಣೆಗಿಂತ ಇದು ಮೊದಲ ಆದ್ಯತೆಯಾಗಬೇಕು. ಅಂತೆಯೇ ಕರ್ನಾಟಕ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ತತ್‌ಕ್ಷಣ ಕೈಬಿಡಬೇಕು.
ಭಾಷಾ ಶಿಕ್ಷಕರು ಶಿಕ್ಷಣದ ಮೂಲದಲ್ಲಿರುವ ಭಾಷೆ-ಸಾಹಿತ್ಯದ ಕಲಿಕೆಯ ಬಗ್ಗೆ ಕಾಳಜಿವಹಿಸಿ ಕ್ರಾಂತಿಕಾರಕ ರೀತಿಯಲ್ಲಿ ಕೆಲಸ ಮಾಡಬೇಕು. ತರಗತಿಗೆ ನಿಷ್ಠೆ ಮತ್ತು ಸಮಾಜಕ್ಕೆ ನಿಷ್ಠೆ ಇವೆರಡೂ ಶಿಕ್ಷಕರ ಗುರಿಯಾದಾಗ ಮುಂದಿನ ತಲೆಮಾರಿನ ಯುವಕರಿಗೆ ಸರಿಯಾದ ಹಾದಿ ತೋರಿಸಿದಂತಾಗುತ್ತದೆ. ಉನ್ನತ ಶಿಕ್ಷಣದಲ್ಲಿ ಶಿಕ್ಷಕರ ಪಗಾರ ಹೆಚ್ಚಾಗಿ ಸೋಮಾರಿತನ ಬೆಳೆಯಿತು. ಅಧ್ಯಯನ ಯೋಜನೆಗಳು ಬಂದು ಭ್ರಷ್ಟತೆ ಹೆಚ್ಚಾಯಿತು. ಇದನ್ನು ತಪ್ಪಿಸುವ ಜವಾಬ್ದಾರಿ ಶಿಕ್ಷಕನದೇ.

ಧರ್ಮ, ಮತ, ಜಾತಿಗಳನ್ನು ನೀವು ಹೇಗೆ ಅರ್ಥೈಸುತ್ತೀರಿ?

ಧರ್ಮ ಯಾವತ್ತೂ ಒಂದು ಆದರ್ಶ ಕಲ್ಪನೆ. ಮನುಷ್ಯಪ್ರಜ್ಞೆಯಿಂದ ಮೂಡಿ ಮಾನವಿಕ ಮೌಲ್ಯಗಳಾದ ಸತ್ಯ, ಅಹಿಂಸೆ, ಶಾಂತಿ, ಸಹಬಾಳ್ವೆಯಂತಹ ಮೂಲಾಂಶಗಳನ್ನು ಆಧಾರವಾಗಿಟ್ಟುಕೊಂಡಿರುವ ನಿರ್ವಿವಾದಿತ ಕಲ್ಪನೆ. ವೈದಿಕ, ಕ್ರೈಸ್ತ, ಇಸ್ಲಾಂ ಮುಂತಾದ ಧರ್ಮಗಳು ಒಂದೊಂದು ದೇಶ ಪ್ರದೇಶಗಳಲ್ಲಿ ನಾಗರಿಕ ಲಕ್ಷಣಗಳೊಂದಿಗೆ ಹುಟ್ಟಿದವು ಗ್ರಂಥಸ್ಥವಾದವು, ಇಂದಿಗೂ ದೇಶಕಾಲಾತೀತವಾಗಿ ಸ್ಮೃತಿಯಲ್ಲಿ ಉಳಿದುಬಂದಿವೆ. ಅವೆಲ್ಲ ಜಾತಿ, ಮತಗಳಾಗಿ ಮಾರ್ಪಟ್ಟಿವೆ. ಕನ್ನಡ ನಾಡಿನಲ್ಲಿ ವೈದಿಕ ಮತದ ಜೊತೆಗೆ ಅವೈದಿಕ ಮತಗಳಾದ ಜೈನ ಹಾಗೂ ವೀರಶೈವಗಳು ಬಂದವು. ನಾವಿಂದು ವೈಯಕ್ತಿಕ ಸ್ವಾರ್ಥ ಸಾಧನೆಗಾಗಿ ವ್ಯಕ್ತಿಗಳಿಗೆ ಮತ ಜಾತಿಗಳನ್ನು ಅಂಟಿಸಿಕೊಂಡು ಧರ್ಮ, ತತ್ವದ ಆದರ್ಶಗಳನ್ನು ಮರೆತಿದ್ದೇವೆ. ಇದರ ಮೂಲಕಾರಣ ಧರ್ಮಗಳು ಸಾಮಾಜಿಕವಾಗಿ ವ್ಯಕ್ತಿತ್ವ ನಿರಸನಗೊಂಡು ಬೆಳೆಯದೇ ಇರುವುದು.

ಕರ್ನಾಟಕ `ಧರ್ಮ~ವನ್ನು ಪ್ರತಿಪಾದಿಸಲಿಕ್ಕೆ ಸಿದ್ಧವಾದಂತಿದೆ?

ಹೌದು. ಲಿಂಗಾಯತ ಧರ್ಮ ವಚನ ಸಾಹಿತ್ಯದ ಜೊತೆಗೆ ಜಾರಿಯಲ್ಲಿ ಬಂದದ್ದನ್ನು ಕನ್ನಡಿಗರಾಗಿ ನಾವು ಎತ್ತಿಹಿಡಿಯಬೇಕಾಗಿದೆ. ಅದು ಅವೈದಿಕ ಮಾರ್ಗ ಅನುಸರಿಸಿ, ಕನ್ನಡತ್ವದ ಲಕ್ಷಣಗಳನ್ನು ವಿಸ್ತರಿಸಿದೆ.

ಜೈನ ವೀರಶೈವಗಳೂ ಅವೈದಿಕವೇ ಆಗಿದ್ದವಲ್ಲ?

ಇವು ಸಂಪ್ರದಾಯನಿಷ್ಠ (ಶಾಸ್ತ್ರಬದ್ಧ) ನಾಮಾಂಕಿತದೊಂದಿಗೆ ಈಗಲೂ ಉಳಿದಿವೆ. ಲಿಂಗಾಯತವು ಮಾತ್ರ ಸಮಾಜನಿಷ್ಠ ಕನ್ನಡ ಸಂಸ್ಕೃತಿಯ ಲಕ್ಷಣಗಳೊಂದಿಗೆ ಚಾರಿತ್ರಿಕವಾಗಿ ಬೆಳೆದಿದೆ. ಒಮ್ಮಮ್ಮೆ ರಾಜಕೀಯ ಒತ್ತಡಗಳಿಂದ, ವ್ಯಾವಹಾರಿಕ ಕಾರಣಗಳಿಂದ ಜೈನ, ವೀರಶೈವಗಳಲ್ಲಿ ಮತಾಂತರ ಪ್ರಕ್ರಿಯೆ ನಡೆಯಿತು. ವೈದಿಕರ ರಿಚುವಲ್‌ಗಳನ್ನು ಆಚರಿಸುತ್ತ, ಅನೇಕ ದೇವರುಗಳ ಆರಾಧನೆಯನ್ನು ಒಪ್ಪಿಕೊಂಡು ಅವು ಬಂದಿವೆ. ಅವುಗಳಿಗೆ ಸಾಮಾಜಿಕ ಆಯಾಮ ಇರುವುದೇ ಇಲ್ಲ. ವೈಜ್ಞಾನಿಕ ಸಮಾಜ ಅಪೇಕ್ಷಿಸುವ ಪರಿವರ್ತನೆಗಳಿಗೆ ಬಾಗಿಲು ಮುಚ್ಚಿ, ಸಂಪ್ರದಾಯ ಸ್ಥಿತಿಗೆ ಉಳಿದುಬಿಟ್ಟಿವೆ. ಆದ್ದರಿಂದ ಇವುಗಳಿಗೆ ಭಿನ್ನವಾಗಿ ಶಿವಶರಣರು ಕಟ್ಟಿಕೊಂಡ ಧರ್ಮ, ಲಿಂಗಾಯತ ತತ್ವದ ನಿಷ್ಠುರ ಆಚರಣೆಗೆ ಬದ್ಧವಾಗಿ ಹುಟ್ಟಿತು ಪರಂಪರೆಯಾಗಿ ಬೆಳೆದಿದೆ.

ಲಿಂಗಾಯತ ಧರ್ಮ ಆಧುನಿಕವಾಗಿ ಬೆಳೆದ ಧರ್ಮ ಎಂದು ಯಾವ ನೆಲೆಯಿಂದ ಸಮರ್ಥಿಸುವಿರಿ?

ಲಿಂಗಾಯತ ಧರ್ಮ ಹನ್ನೆರಡನೆಯ ಶತಮಾನದ ಕನ್ನಡ ಸಮಾಜಕ್ಕೆ ಆಧುನಿಕತೆ ತಂದದ್ದು ಗಮನಿಸಬೇಕಾದ ಲಕ್ಷಣ. ಕಾಯಕವನ್ನು ಆಧರಿಸಿದ ಈ ಧರ್ಮ ಜಾತಿನಿರಪೇಕ್ಷ ರೀತಿಯಲ್ಲಿ ಬೆಳೆಯುವಂತೆ ಬಸವಣ್ಣ ಮೊದಲಾದ ಶಿವಶರಣರು ಅಕ್ಷರಶಃ ಆಚರಣೆಗೆ ತಂದರು. ವೃತ್ತಿಗಳು ಜಾತಿಸೂಚಕವಾಗಿದ್ದುದನ್ನು ಮರೆಸಿ, ಕಾಯಕತತ್ವ-ಷಟ್‌ಸ್ಥಲಗಳ ಸಿದ್ಧಾಂತದಿಂದ ಧಾರ್ಮಿಕಗೊಳಿಸಿದವು. ಅಂದರೆ, ಜನನ ಆಧಾರಿತ ಜಾತಿ-ಮತ ಮರೆಯಾಗಿ ಕಾಯಕತತ್ವ ಆಧಾರಿತ ಧರ್ಮ ತಲೆಯೆತ್ತಿತು. ಸಮಾಜದ ಉತ್ಪಾದಕ ಶಕ್ತಿಗಳ ಜಾತಿ ನಿರಪೇಕ್ಷ ಸಂಘಟನೆ ಅದಾಯಿತು. ಗಾಂಧೀಜಿ `ಹಿಂದ್ ಸ್ವರಾಜ್~ ಅಂದದ್ದು ಇಂತಹದನ್ನೇ.

ಈ ಧರ್ಮದ ಪರಿಕಲ್ಪನೆ ಬಸವಣ್ಣನವರಲ್ಲಿ ಹೇಗಿದ್ದಿತು?

`ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯೊ~ ಎಂದ ಬಸವಣ್ಣ, ವ್ಯಕ್ತಿವಾದವನ್ನು ಹಿಂದಿಟ್ಟು ಶರಣ ಸಮಾಜದ ಸಮಷ್ಟಿವಾದವನ್ನು ಮುಂದೆ ತಂದರು. ಜಂಗಮತತ್ವ, ಜಂಗಮ ನಡೆಯುವ ದೇವರು, ಅಂದರೆ ಸ್ಥಿರ, ಜಡ ಮತ್ತು ವೈಯಕ್ತಿಕತೆಯನ್ನು ನಿವಾರಿಸಿಕೊಂಡವರು. ಇದಕ್ಕೆ ವ್ಯತಿರಿಕ್ತವಾಗಿ `ಸೋಹಂ~ ಎಂದುಕೊಳ್ಳುವ ಭಕ್ತ, ಸಾಂಪ್ರದಾಯಿಕ ಧರ್ಮ ಬೋಧನೆಯಲ್ಲಿ ಉಳಿದು ಯಥಾಸ್ಥಿತಿಯನ್ನು ಮುಂದುವರೆಸುತ್ತಾ ಹೋಗುತ್ತಾರೆ. `ಸೋಹಂ~ ಅನ್ನುತ್ತ ಭಕ್ತರಿಂದ `ಮಹಾತ್ಮ~ ಅನ್ನಿಸಿಕೊಳ್ಳುವುದು ಸುಲಭ. ಆದರೆ ದಾಸೋಹಂ ಭಾವವನ್ನು ತಾಳಿ ತತ್ವದಿಂದ ಮುನ್ನಡೆಯುವವ ಹುತಾತ್ಮನಾಗುವ ಪರಿಸ್ಥಿತಿ ಬರುತ್ತದೆ. ಬಸವಣ್ಣನವರಿಗೆ ಬಂದುದು ಅಂತಹ ಸ್ಥಿತಿ.

ಅಂದರೆ ಮತೀಯ - ಮಠೀಯ ಆಗುವದು ಧರ್ಮಕ್ಕೆ ವಿಮುಖವಾದಂತೆ ಅಲ್ಲವೇ?

ಹೌದು. ನಮ್ಮ ಮಠ ವ್ಯವಸ್ಥೆ ಇದನ್ನು ಅರಿತು ವರ್ತಮಾನದ ಧರ್ಮಕ್ಕೆ ಸ್ಪಂದಿಸಬೇಕಾಗಿದೆ. ಇದು ಪ್ರಜಾಸತ್ತೆಗೆ ಅನುಗುಣವಾದದ್ದು. ಬಸವಣ್ಣನವರು ಕಾಯಕನಿಷ್ಠೆ ಉಳ್ಳ ಎಲ್ಲರಿಗೂ ಲಿಂಗದೀಕ್ಷೆ ಕೊಟ್ಟು ಅಸಮಾನತೆ, ಲಿಂಗತಾರತಮ್ಯ ನಿವಾರಿಸಿದರು. ಕೆಡುತ್ತಿದ್ದ ಸಾಂಪ್ರದಾಯಿಕ ಸಮಾಜವನ್ನು ಹೊಸ ನೀತಿ ನಡತೆಗಳಿಂದ ಸರಿಪಡಿಸಿದರು. ಇದು ಕರ್ನಾಟಕದಲ್ಲಿ ಸಾಧ್ಯವಾದ ಸುಸಂಸ್ಕೃತ ಅಭಿವೃದ್ಧಿ ಅನ್ನಬಹುದು.     

ಸ್ಪರ್ಶಮಣಿ ಕಲಬುರ್ಗಿ

ಕಳೆದ 50 ವರ್ಷಗಳಿಂದ ಕನ್ನಡತನವನ್ನು ಕಟ್ಟುವುದಕ್ಕೆ ಬೇರೆ ಬೇರೆ ವಿಧಾನಗಳನ್ನು ರೂಪಿಸುತ್ತ, ಅನುಸರಿಸುತ್ತ ಬಂದಿರುವ ಪ್ರೊ.ಎಂ.ಎಂ.ಕಲಬುರ್ಗಿ (ಜ.1938) ಕನ್ನಡದ ಒಬ್ಬ ಮಹತ್ವದ ಸಾಧಕರು. ಇವರಿಗೀಗ `ನೃಪತುಂಗ ಸಾಹಿತ್ಯ ಪ್ರಶಸ್ತಿ~. ಒಂಬತ್ತನೇ ಶತಮಾನದ `ಕವಿರಾಜಮಾರ್ಗ~ಕಾರ ನೃಪತುಂಗನಿಗಿದ್ದ ನಾಡು-ನುಡಿ ಕುರಿತ ಧ್ಯೇಯ-ಧೋರಣೆಗಳನ್ನು ಅಕ್ಷರಶಃ ಅಂಗೀಕರಿಸಿಕೊಂಡು, ತಮ್ಮ ಅಧ್ಯಯನ-ಅಧ್ಯಾಪನ, ಲೇಖನ-ಭಾಷಣ ಮಾರ್ಗವನ್ನು ರೂಪಿಸಿಕೊಂಡು ಒಂದು ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಅವರು ಕ್ರಿಯಾಶೀಲರಾಗಿರುವುದು ಗಮನಾರ್ಹ.

`ಸಂಶೋಧನೆ ಎನ್ನುವುದು ಕೇವಲ ಇತಿಹಾಸದ ಶೋಧವಲ್ಲ. ಸುಳ್ಳು ಇತಿಹಾಸವನ್ನು ಮುಂದು ಮಾಡಿಕೊಂಡು ವರ್ತಮಾನವನ್ನು ದುರುಪಯೋಗ ಮಾಡಿಕೊಳ್ಳುವವರೊಂದಿಗೆ ನಡೆಸುವ ಹೋರಾಟವೇ ಆಗಿದೆ~ ಎಂದು ನಂಬಿರುವ ಕಲಬುರ್ಗಿಯವರು ತಮ್ಮ ಕೃತಿಗಳ ಮೂಲಕ ಸಾಹಿತ್ಯ, ಇತಿಹಾಸ, ಸಂಸ್ಕೃತಿ, ಸಂಪ್ರದಾಯ ಮತ್ತು ಜನಪದ ಜೀವನದ ಒಳಮುಖಗಳನ್ನು ತೆರೆದುತೋರಿಸಿದ್ದಾರೆ. `ಸಂಶೋಧನೆ ಎನ್ನುವುದು ವಿಶ್ಲೇಷಣಾತ್ಮಕ ವಿಮರ್ಶೆ, ವಿಮರ್ಶೆ ಎನ್ನುವುದು ವ್ಯಾಖ್ಯಾನಾತ್ಮಕ ಸಂಶೋಧನೆ~ ಎಂಬ ನಿಚ್ಚಳ ತಿಳಿವಳಿಕೆಯೊಂದಿಗೆ ಇವರು ತುಳಿದ ಸಾಹಿತ್ಯ ಮಾರ್ಗ ವಿವಿಧ ಹೆಜ್ಜೆಗಳನ್ನು ರೂಪಿಸಿದೆ ಮತ್ತು ಇವರನ್ನು ಕನ್ನಡತನದ ಮಾರ್ಗದಲ್ಲಿ ಮುನ್ನಡೆಸಿದೆ.

ವಿದ್ಯಾರ್ಥಿಯಿದ್ದಾಗಲೇ ಡಿ.ಎಲ್.ನರಸಿಂಹಾಚಾರ್ಯರ `ಶಬ್ದಮಣಿದರ್ಪಣ~ ಗ್ರಂಥ ಸಂಪಾದನಾ ರೀತಿಯನ್ನು ಆಕ್ಷೇಪಣೆಗಳ ಸಮೇತ ಪ್ರಶ್ನಿಸುವ ಮೂಲಕ, ತಮ್ಮ ಚಿಕಿತ್ಸಕ ಮತ್ತು ತೀಕ್ಷ್ಣದೃಷ್ಟಿಯನ್ನು ಕಲಬುರ್ಗಿಯವರು ಪ್ರಕಟಗೊಳಿಸಿದರು. ಭಾಷೆ- ವ್ಯಾಕರಣದ ಬಗೆಗಿನ ಅವರ ವಿಶ್ಲೇಷಣೆಗಳು ಕನ್ನಡ ಜಾಯಮಾನದ ಭಾಷಾ ವಿಜ್ಞಾನವನ್ನು ರೂಪಿಸುವಂತಿವೆ. ಅಂದರೆ ಸಾಂಪ್ರದಾಯಿಕ ಮತ್ತು ಆಧುನಿಕ ದೃಷ್ಟಿಯಿಂದ ಗ್ರಾಂಥಿಕ ಕನ್ನಡವನ್ನು ಮರುರೂಪಿಸುವ ಅಂಶಗಳು ಇವರಿಂದ ಪ್ರತಿಪಾದಿತವಾಗಿವೆ. ಉತ್ತರ ಕರ್ನಾಟಕದ ಜಾನಪದ ಸಾಹಿತ್ಯವನ್ನು ಬಗೆದು ನೋಡುವ ಕಲಬುರ್ಗಿಯವರ ವಿಧಾನದಿಂದ ಅನೇಕ ಹೊಸ ಅಂಶಗಳು, ಕಲ್ಪನೆಗಳು ಸಾಹಿತ್ಯಾಭ್ಯಾಸಕ್ಕೆ ದಕ್ಕಿವೆ. `ನಾಮವಿಜ್ಞಾನ~ವನ್ನು ಕನ್ನಡಕ್ಕೆ ವಿಶಿಷ್ಟವಾಗಿ ಹೇಗೆ ಅನ್ವಯಿಸಬಹುದು ಎಂಬುದಕ್ಕೆ ಇವರ ಒಂದು ಕೃತಿ ಮೂಲವೂ ಆಗಿದೆ, ಮಾದರಿಯೂ ಆಗಿದೆ. ಫ.ಗು.ಹಳಕಟ್ಟಿಯವರು ವಚನ ವಾಙ್ಮಯಕ್ಕಾಗಿ ಮಾಡಿದ ಕೆಲಸವನ್ನು ಕಲಬುರ್ಗಿಯವರು ಹೆಚ್ಚು ಆಧುನಿಕವೂ - ಬಹುಜನ ಪ್ರಯೋಜನಕಾರಿಯೂ ಆಗಿಸುವ ದಿಸೆಯಲ್ಲಿ ಕೆಲಸಮಾಡಿದ್ದಾರೆ. ಗ್ರಂಥಪಾಠ ವಿಮರ್ಶೆಯನ್ನು ಡಿ.ಎಲ್.ಎನ್ ಅವರ ನಂತರ ತಿ.ನಂ.ಶ್ರೀ, ಆರ್.ಸಿ.ಹಿರೇಮಠ, ಸಂ.ಶಿ.ಭೂಸನೂರಮಠ, ಬಸವಾರಾಧ್ಯ, ವೆಂಕಟಾಚಲಶಾಸ್ತ್ರೀ ಮತ್ತು ಎಲ್.ಬಸವರಾಜು ಅವರಂಥ ವಿದ್ವಾಂಸರು ಮುಂದುವರಿಸಿ ಹಳೆಯ ಹಸ್ತಪ್ರತಿಗಳನ್ನು ಗ್ರಂಥರೂಪಕ್ಕೆ ತಂದದ್ದು ಒಂದು ವಿಧವಾದರೆ, ಕಲಬುರ್ಗಿಯವರು ವೈಜ್ಞಾನಿಕ ವಿಧಾನವನ್ನು ಅನುಸರಿಸಿ ಮಾಡಿದ ಕೆಲಸಗಳು ಅನುಕರಣಾರ್ಹವಾಗಿವೆ.

ಹಳಗನ್ನಡ ಮತ್ತು ನಡುಗನ್ನಡ ಭಾಷೆಯ ರೂಪ, ಶೈಲಿ, ವ್ಯಾಕರಣಾತ್ಮಕ ಅಂಶಗಳನ್ನು ವಿಶ್ಲೇಷಿಸುವಲ್ಲಿ ಕಲಬುರ್ಗಿಯವರು ಸಂಶೋಧಕರೂ ವ್ಯಾಖ್ಯಾನಕಾರರೂ ವಿಮರ್ಶಕರೂ ಮತ್ತು ಸೌಂದರ್ಯೋಪಾಸಕರೂ ಆಗಿ ಕಾರ್ಯನಿರ್ವಹಿಸುತ್ತಾರೆ. ಛಂದಸ್ಸು, ಅಲಂಕಾರದಂತಹ ಕಾವ್ಯಾಂಗಗಳನ್ನು ಶಾಸ್ತ್ರೀಯವಾಗಿ ಅರಿತು, ಅದಕ್ಕಿರುವ ಔಚಿತ್ಯಪೂರ್ಣವಾದ ಹೊಸ ಅರ್ಥವನ್ನೂ ದೃಷ್ಟಿಕೋನಗಳನ್ನೂ ಜೋಡಿಸಬಲ್ಲರು. ಸಂಶೋಧನೆ ಮಾರ್ಗಕ್ಕೆ ಹೊರಳುವ ಪೂರ್ವದಲ್ಲಿ ಅವರು ಹಳಗನ್ನಡದ ಕೆಲವು ಕೃತಿಗಳ ಬಗ್ಗೆ ಬರೆದ ಬಿಡಿ ವಿಮರ್ಶೆಯಲ್ಲಿ ಇದನ್ನು ಕಾಣಬಹುದು. ಪಂಪನ ಹಲವು ಪದ್ಯಗಳನ್ನು ಅರ್ಥೈಸುವ ಅವರ ರೀತಿ, ನಾಗಚಂದ್ರನ ಕಾವ್ಯದ ಪ್ರತಿನಾಯಕನು `ಜಲರಾವಣ~ನಾಗಿ ಚಿತ್ರಣಗೊಂಡ ವಿಶೇಷ ಪರಿಗಳನ್ನು ಅವರು ಮನೋಜ್ಞ ಶೈಲಿಯಲ್ಲಿ ಮಂಡಿಸಿದ್ದರು. ವಚನ ಸಾಹಿತ್ಯವನ್ನು ಶೋಧಿಸಿ, ಸಂಪಾದಿಸಿ ಪ್ರಕಟಿಸುವಲ್ಲಿ ವಿಶೇಷ ಆಸಕ್ತಿಯನ್ನು ತಾಳಿದ ಇವರು ಶುದ್ಧ ಪಾಠವನ್ನು ಕೊಡುವುದರ ಜೊತೆಗೆ ವಚನಗಳ ಸಾಹಿತ್ಯಕ, ಸಾಮಾಜಿಕ, ಐತಿಹಾಸಿಕ ಪ್ರಭಾವಗಳನ್ನು ಗಮನಿಸಿ ವ್ಯಾಖ್ಯಾನಿಸುತ್ತಾರೆ. ಇಂಥ, ನುಡಿಯ ಸಂಪನ್ಮೂಲವನ್ನೇ ಮೂಲಧನವನ್ನಾಗಿ ಮಾಡಿಕೊಂಡು `ಸಮೂಹ ಸಂಸ್ಕೃತಿ~ ರೂಪಿಸುವ ಕೆಲಸದಲ್ಲಿ ತೊಡಗಿರುವ ಕಲಬುರ್ಗಿಯವರ ಸಾಧನೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ `ನಾಡೋಜ~ ಪದವಿ ಕೂಡ ಒಲಿದು ಬಂದಿದೆ.

ಚಿತ್ರಗಳು: ಬಿ.ಎಂ.ಕೇದಾರನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT