ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾದೇವಿ ಕಟ್ಟಿದ ನಾಟಕ ಶಾಲೆ

ಅಕ್ಷರ ಗಾತ್ರ

ಕೆಲವು ವರ್ಷಗಳ ಹಿಂದೆ ಕರ್ನಾಟಕದ ರಂಗ­ಕರ್ಮಿಗಳೆಲ್ಲ ಸೇರಿ, ಕರ್ನಾಟಕಕ್ಕೊಂದು ರಾಷ್ಟ್ರೀಯ ನಾಟಕ ಶಾಲೆ ಬೇಕು, ಕನ್ನಡ ರಂಗ­ಭೂಮಿಯೂ ರಾಷ್ಟ್ರೀಯ ರಂಗಭೂ­ಮಿಯೇ ಸರಿ, ಎಂಬ ಬೇಡಿಕೆಯನ್ನಿಟ್ಟು ಹೋರಾಟ ನಡೆಸಿ­ದರು. ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲ­ಯವು ಕನ್ನಡಿಗರ ಒತ್ತಾಯಕ್ಕೆ ಮಣಿದು ಬೇಡಿಕೆ­ಯನ್ನು ಒಪ್ಪಿಕೊಂಡಿತು.

ಕರ್ನಾಟಕ ಸರ್ಕಾರವು ನಾಟಕ ಶಾಲೆಯ ನಿರ್ಮಾಣಕ್ಕೆಂದು ಬೆಂಗ­ಳೂರು ನಗರದ ಜ್ಞಾನಭಾರತಿ ಆವರಣದಲ್ಲಿ, ಎರಡು ಎಕರೆ ಜಾಗವನ್ನು ಮಂಜೂರು ಮಾಡಿತ್ತು. ಬೆಂಗಳೂರಿನ ಗುರುನಾನಕ ಭವನ­ದಲ್ಲಿ ಕನ್ನಡ ಭಾಷಿಕ ರಾಷ್ಟ್ರೀಯ ನಾಟಕ ಶಾಲೆಯ ಉದ್ಘಾಟನೆಯು ಏಳು ವರ್ಷಗಳ ಹಿಂದೆಯೇ ನೆರವೇರಿತ್ತು.

‘ದೇವರು ವರ ಕೊಟ್ಟರೂ ಪೂಜಾರಿ ವರ ಕೊಡ’ ಎಂಬಂತೆ, ಆಳುವ ಪ್ರಭುಗಳು ಒಲಿ­ದರೂ ದೆಹಲಿಯ ನಾಟಕ ಶಾಲೆಯ ಪ್ರಭುಗಳು ಒಲಿಯಲಿಲ್ಲ, ಏಳು ವರ್ಷಗಳಿಂದ ಕನ್ನಡಿಗರ ಕನಸನ್ನು ಕಾಲಕಸವಾಗಿಸುತ್ತಲೇ ಬಂದಿದ್ದಾರೆ. ಭಾರತವೆಂದರೆ ದೆಹಲಿ ಮಾತ್ರ, ಭಾರತೀಯ ರಂಗ­ಭೂಮಿಯೆಂದರೆ ಇಂಗ್ಲಿಷ್‌ ಹಾಗೂ ಹಿಂದಿ ರಂಗಭೂಮಿಗಳು ಮಾತ್ರ ಎಂದೇ ತಿಳಿದಿದ್ದಾರೆ ಇವರು.

ರಾಷ್ಟ್ರೀಯ ನಾಟಕಶಾಲೆಗಳ ಇತಿಹಾಸ ಕೂಡ ಇವರಿಗೆ ತಿಳಿಯದು. ಸದೃಢವಾದ ಭಾರತೀಯ ರಂಗಚಳವಳಿಯೊಂದನ್ನು ಬೆಳೆಸುವ ಸಲುವಾಗಿ, ಸ್ವಾತಂತ್ರ್ಯ ಬಂದ ಹೊಸತರಲ್ಲಿ, ದೆಹಲಿ­ಯಲ್ಲಿ ಮೊದಲ ರಾಷ್ಟ್ರೀಯ ನಾಟಕ­ಶಾಲೆಯನ್ನು ಆರಂಭಿಸಲಾಯಿತು. ಆಗ ಈ ಕೆಲ­ಸದ ಮುಂದಾಳತ್ವ ವಹಿಸಿಕೊಂಡು ದುಡಿದ­ವರು ಕಮಲಾದೇವಿ ಚಟ್ಟೋಪಾಧ್ಯಾಯ ಅವರು.

ಕಮಲಾದೇವಿ ನಮ್ಮವರು, ಮಂಗಳೂರಿನ­ವರು. ಕರ್ನಾಟಕದ ಉದ್ದಗಲ ಅಲೆದಾಡಿ ರಾಷ್ಟ್ರೀಯ ಚಳವಳಿಯನ್ನು ಕಟ್ಟಿದ್ದವರು ಕಮಲಾ­ದೇವಿ. ಗಾಂಧೀಜಿಯವರ ಸಹವರ್ತಿ, ಕಾಂಗ್ರೆಸ್ಸಿನ ಜೊತೆಗಿದ್ದೂ ಎಡಪಂಥೀಯರಾಗಿ ಉಳಿದವರು, ಕುಶಲಕರ್ಮಿಗಳ ದನಿಯಾಗಿದ್ದವರು, ಮಹಿಳೆ­ಯರ ದನಿಯಾಗಿದ್ದವರು. ನಟಿ ಹಾಗೂ ನೇತಾ­ರರು. ಗಂಡನ ಮನೆಯ ಹೆಸರಿನಿಂದಾಗಿ ಚಟ್ಟೋ­ಪಾ­ಧ್ಯಾಯ ಆದವರು. ಇಂದು ದೆಹಲಿಯ ನಾಟಕ ಶಾಲೆಯ ಆವರಣದಲ್ಲಿ ಕಮಲಾದೇವಿ ಚಟ್ಟೋ­ಪಾಧ್ಯಾಯ ಅವರ ಒಂದು ಭಾವ­ಚಿತ್ರವೂ  ಕಾಣುವುದಿಲ್ಲ.

ಕಮಲಾದೇವಿಯವರ ಜನ್ಮ­ಶತಾಬ್ದಿ ವರ್ಷವನ್ನು ದೆಹಲಿಯ ನಾಟಕ­ಶಾಲೆಯು ಸಂಪೂರ್ಣವಾಗಿ ಕಡೆಗಣಿಸಿತು. ಕಮಲಾದೇವಿಯವರ ಬಗೆಗಿನ ಅನಾದರ ಹಾಗೂ ಕನ್ನಡ ಭಾಷಿಕ ರಾಷ್ಟ್ರೀಯ ನಾಟಕ ಶಾಲೆಯ ಬಗೆಗಿನ ಅನಾದರಕ್ಕೆ ಕಾರಣವಾದರೂ ಏನು?
ಸಂಸ್ಥೆ ರೂಪಿಸಿದವರ ಕನಸು ಬೇರೆಯದೇ ಇತ್ತು, ದೆಹಲಿಯ ಶಾಲೆ ಹಿಡಿದಿರುವ ಹಾದಿ ಬೇರೆಯದೇ ಆಗಿದೆ ಇಂದು. ದೆಹಲಿಯ ಶಾಲೆ ನಾಟಕಶಾಲೆಯಾಗಿ ಉಳಿದೇ ಇಲ್ಲ ಎಂದರೆ ತಪ್ಪಾಗಲಾರದು.

ಸಿನಿಮಾ ಸ್ಟಾರ್‌ಗಳು, ಟಿ.ವಿ. ನಟರು, ಮಾಧ್ಯಮಗಳ ವಸ್ತ್ರವಿನ್ಯಾಸಕಾರರು, ಗೀತರಚನಕಾರರು, ಸ್ಕ್ರಿಪ್ಟ್‌ರಚನಕಾರರು, ಇತ್ಯಾ­ದಿ­­ಯಾಗಿ ಮನರಂಜನೆಯ ಮಾನವ ಸಂಪ­ನ್ಮೂಲ­ವನ್ನು ಸಿದ್ಧಪಡಿಸುವ ಕಾರ್ಖಾನೆಯಾಗಿದೆ ದೆಹಲಿಯ ಶಾಲೆ. ಭಾರತೀಯ ರಂಗಚಳವಳಿ ಎಂಬುದು ಅಲ್ಲಿ ಕನಸು ಮಾತ್ರವೇ ಆಗಿ ಉಳಿದಿದೆ.

ರಂಗಚಳವಳಿಯ ಬಗ್ಗೆ ಕಮಲಾದೇವಿಯವರ ನಿಲುವು ಸ್ಪಷ್ಟವಿತ್ತು. ಅದು ಶ್ರಮಮೂಲದ್ದಾ­ಗಿತ್ತು. ಜನಪರ ಚಳವಳಿ, ಕುಶಲಕರ್ಮ, ರಂಗ­ಚಳವಳಿ ಎಲ್ಲವೂ ಶ್ರಮಮೂಲದ ಅಭಿವ್ಯಕ್ತಿಗಳು ಎಂದು ನಂಬಿದ್ದರು ಅವರು. ಗಾಂಧೀಜಿಯವರ ಗರಡಿಯಲ್ಲಿ ಬೆಳೆದಿದ್ದ ಕಮಲಾದೇವಿಗೆ ಸ್ವಯಂಭು ಸೃಜನಶೀಲತೆಯ ಬಗ್ಗೆ ನಂಬಿಕೆ­ಯಿರ­ಲಿಲ್ಲ. ಶ್ರಮವು ಪರಿಶ್ರಮವಾಗಬೇಕು. ಪರಿಶ್ರ­ಮವು ಕೌಶಲವಾಗಬೇಕು. ಆಗ ಸೃಜನಶೀಲತೆ ಮೂಡುತ್ತದೆ ಎಂದು ನಂಬಿದ್ದರು ಕಮಲಾದೇವಿ. ಅವರಿಗೆ, ಮಾಡುವ ನಾಟಕದಲ್ಲಿ ನಂಬಿಕೆಯಿತ್ತೇ ಹೊರತು ನೋಡುವ ಮನರಂಜನೆಯಲ್ಲಲ್ಲ.

ನಟನೆಯ ಕಾಯಕವೆಂದರೇನು? ಸುಳ್ಳು ಮನರಂಜನೆಯೆ? ಅಥವಾ ಕಳ್ಳ ಗ್ರಾಹಕ­ಪದಾ­ರ್ಥವೇ? ಬಸವಣ್ಣ ತನ್ನ ವಚನದಲ್ಲಿ, ‘ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಶವಯ್ಯ’ ಎಂದಾಗ, ಆತ ವರ್ಣಿಸಿದ್ದು ಆತ್ಮ­ಲಿಂಗದ ಆರಾಧನೆಯನ್ನು ಮಾತ್ರವೇ ಅಲ್ಲ,  ರಂಗ­ಕಲಾವಿದನೊಬ್ಬನ ಕಾಯಕದ ವರ್ಣ­ನೆಯೂ ಆಗಬಲ್ಲದು ಅದು. ತನ್ನ ದೇಹವನ್ನೇ ದೇಗುಲವಾಗಿಸಿಕೊಂಡು, ತನ್ನೊಳಗಿನ ದೇವರ­ದರ್ಶನ ಮಾಡಿಸಬೇಕಾದವನು ನಟ.

ನಟರು, ಮತ್ತೊಂದು ವೇಷ ಧರಿಸುವುದು ಮತ್ತೊಬ್ಬರ ಮಾತುಗಳನ್ನು ಧ್ವನಿಸುವುದು, ಅಹಂಕಾರವನ್ನು ಮಣಿಸುವ ತಂತ್ರಗಾರಿಕೆಯಾಗಿ ಮಾತ್ರವೇ ಆಗಿದೆ. ಕಮಲಾದೇವಿ ಬಯಸಿದ್ದ ನಟನೆಯ ತರ­ಬೇತಿ ಅಥವಾ ಕನ್ನಡಿಗರು ಈಗ ಬಯಸುತ್ತಿರುವ ನಟನೆಯ ತರಬೇತಿ ಈ ರೀತಿಯದ್ದು. ಕನ್ನಡ ಭಾಷಿಕ ರಾಷ್ಟ್ರೀಯ ನಾಟಕ ಶಾಲೆ, ದೆಹಲಿ ಶಾಲೆಯ ಅಡಿಯಾಳಾಗಬಾರದು ಅಥವಾ ಪಡಿಯಚ್ಚೂ ಆಗಬಾರದು ಅಥವಾ ಮನರಂಜನೆಯ ಕಾರ್ಖಾನೆಗಳಿಗೆ ಮಾನವ ಸಂಪ­ನ್ಮೂಲವನ್ನು ಒದಗಿಸುವ ತರಬೇತಿ ಕೇಂದ್ರವೂ ಆಗಬಾರದು.

ಹಾಗಿದ್ದರೆ ಕನ್ನಡ ಭಾಷಿಕ ರಾಷ್ಟ್ರೀಯ ನಾಟಕ ಶಾಲೆ ಹೇಗಿರಬೇಕು? ಕನ್ನಡ ರಂಗಭೂಮಿಯ ಇಂದಿನ ಅಗತ್ಯಗಳೇನು? ಈ ಸಂಸ್ಥೆಯ ಸಾಮಾಜಿಕ ಉಪಯುಕ್ತತೆ ಎಂಥ­ದ್ದಿರ­ಬೇಕು? ಗಂಭೀರವಾಗಿ ಚಿಂತಿಸಬೇಕಾದ ವಿಷಯಗಳಿವು. ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಕನ್ನಡ ರಂಗಭೂಮಿಗಿದ್ದ ಸಾಮಾಜಿಕ ಜರೂರು ಹವ್ಯಾಸಿ ರಂಗಚಳವಳಿಯಾಗಿತ್ತು. ಈಗಿನ ಜರೂರು ಬೇರೆಯದೇ ಇದೆ.

ಇತ್ತೀಚೆಗೆ, ಕನ್ನಡ ರಂಗಭೂಮಿಯು ಶೈಕ್ಷಣಿಕ ರಂಗದಲ್ಲಿ ಮಹತ್ತ­ರ­ವಾದ ಕೆಲಸವನ್ನು ಮಾಡಿದೆ. ಮಕ್ಕಳ ರಂಗ­ಭೂಮಿ, ಶಾಲಾರಂಗಭೂಮಿ, ಶಿಕ್ಷಣದಲ್ಲಿ ರಂಗ­ಭೂಮಿ ಎಂಬಿತ್ಯಾದಿ ಹೆಸರುಗಳಿಂದ ಕರೆಸಿ­ಕೊಳ್ಳುವ ಹಲವು ಬಗೆಯ ಶೈಕ್ಷಣಿಕ ಕೆಲಸಗಳಲ್ಲಿ ಕನ್ನಡದ ರಂಗಕರ್ಮಿಗಳು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮಕ್ಕಳ ಮನಸ್ಸನ್ನು ಸೃಜನ­ಶೀಲವಾಗಿಸುವತ್ತ ಕನ್ನಡ ರಂಗಭೂಮಿ ದುಡಿಯುತ್ತಿದೆ.

ಶೈಕ್ಷಣಿಕ ರಂಗಭೂಮಿಯು ಕನ್ನಡಿಗರ ಅಗತ್ಯ ಮಾತ್ರವೇ ಅಲ್ಲ ಸಮಗ್ರ ಭಾರತೀಯರ ರಾಷ್ಟ್ರೀಯ ಅಗತ್ಯವೂ ಹೌದು. ಹಾಗಾಗಿ, ಬೆಂಗ­ಳೂರಿ­ನಲ್ಲಿ ಆರಂಭವಾಗಬೇಕಿರುವ ರಾಷ್ಟ್ರೀಯ ನಾಟಕ ಶಾಲೆಯು ಶೈಕ್ಷಣಿಕ ರಂಗಭೂಮಿ ಕ್ಷೇತ್ರದಲ್ಲಿ ಕೆಲಸ ಮಾಡುವ ತಜ್ಞ ರಾಷ್ಟ್ರೀಯ ಸಂಸ್ಥೆಯಾಗಿ ರೂಪುಗೊಳ್ಳಲಿ ಎಂಬುದು ಕನ್ನಡ ರಂಗಕರ್ಮಿಗಳ ಬಯಕೆಯಾಗಿದೆ.

ಇದು ಎಲ್ಲ ತಂದೆತಾಯಂದಿರ ಬಯಕೆಯೂ ಹೌದು. ತಮ್ಮ ಮಕ್ಕಳು, ಬೆನ್ನು ಮುರಿಯುವಷ್ಟು ಪುಸ್ತಕ ಹೊತ್ತು, ಬಾಯಿಪಾಠದ ಕಲಿಕೆ ಮಾಡುವುದು ಯಾವ ತಾಯಿತಂದೆಯರಿಗೆ ಬೇಕಿದೆ ಹೇಳಿ? ಕರ್ನಾಟಕದಲ್ಲಿ ನಟರ  ತರಬೇತಿಯ ನಾಟಕ­ಶಾಲೆಗಳು ಈಗಾಗಲೇ ಹಲವಾರು ಇವೆ. 

ದೆಹಲಿಯ ನಾಟಕ ಶಾಲೆಯ ಪಟ್ಟಭದ್ರ ಹಿತಾ­ಸಕ್ತಿಗಳು ಬೆಂಗಳೂರು ಕೇಂದ್ರದಿಂದ ದೂರ ಉಳಿ­ಯಲಿ. ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆ ಬೇಗ ಕಾರ್ಯಾರಂಭ ಮಾಡಲಿ. ಇಲ್ಲ­ದಿ­ದ್ದರೆ, ಮತ್ತೊಂದು ಚಳವಳಿಗೆ ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಂತಾಗುತ್ತದೆ. ಹಾಗಾಗದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT