ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲರ್ಸ್ ಕನ್ನಡಕ್ಕೆ ಮೊದಲ ಸ್ಥಾನ

ದೇಶೀ ಟಿ.ವಿ. ರೇಟಿಂಗ್ ಏಜನ್ಸಿ ಬಾರ್ಕ್ ಕಾರ್ಯಾರಂಭ; ಉದಯಾಧಿಪತ್ಯ ಅಂತ್ಯ
Last Updated 30 ಏಪ್ರಿಲ್ 2015, 19:49 IST
ಅಕ್ಷರ ಗಾತ್ರ

ಬೆಂಗಳೂರು: ಟೆಲಿವಿಷನ್ ಕಾರ್ಯಕ್ರಮಗಳ ವೀಕ್ಷಕರ ಪ್ರಮಾಣವನ್ನು ಅಳೆಯುವ ದೇಶೀ ರೇಟಿಂಗ್ ಏಜನ್ಸಿ ಬಾರ್ಕ್ (ಬ್ರಾಡ್‌ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ ) ಕನ್ನಡ ಮನರಂಜನಾ ಚಾನೆಲ್‌ಗಳ ಜನಪ್ರಿಯತೆಯ ಲೆಕ್ಕಾಚಾರವನ್ನು ಬುಡಮೇಲಾಗಿಸಿದೆ. ಟ್ಯಾಮ್ ನೀಡುವ ಜಿಆರ್‌ಪಿಯಂತೆ (ಗ್ರಾಸ್ ರೇಟಿಂಗ್ ಪಾಯಿಂಟ್ಸ್) ದಶಕಗಳಿಂದ ಕನ್ನಡ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿದ್ದ ‘ಉದಯ’ ಬಾರ್ಕ್ ರೇಟಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಎರಡನೇ ಸ್ಥಾನದಲ್ಲಿದ್ದ ‘ಕಲರ್ಸ್ ಕನ್ನಡ’ (ಈಟಿವಿ ಕನ್ನಡ) ಮೊದಲ ಸ್ಥಾನಕ್ಕೇರಿದೆ. ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿದ್ದ ‘ಸುವರ್ಣ’ ಮತ್ತು ‘ಜೀ ಕನ್ನಡ’ ಚಾನೆಲ್‌ಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೇರಿವೆ.

ಬಾರ್ಕ್ ಮತ್ತು ಟ್ಯಾಮ್ ರೇಟಿಂಗ್‌ಗಳ ನಡುವೆ ಭಾರತದ ಯಾವುದೇ ಮಾರುಕಟ್ಟೆಯಲ್ಲಿ ಕಾಣಿಸದ ವ್ಯತ್ಯಾಸ ಕರ್ನಾಟಕ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಟೆಲಿವಿಷನ್ ಉದ್ಯಮ ಬಹುಮುಖ್ಯವೆಂದು ಪರಿಗಣಿಸುವ  ಹಿಂದಿ, ಬಂಗಾಳಿ, ಮರಾಠಿ, ತೆಲುಗು, ತಮಿಳು, ಮಲಯಾಳಂ ಮಾರುಕಟ್ಟೆಗಳಲ್ಲಿ ಟ್ಯಾಮ್ ಮತ್ತು ಬಾರ್ಕ್ ರೇಟಿಂಗ್‌ಗಳ ಮಧ್ಯೆ ಹೆಚ್ಚಿನ ವ್ಯತ್ಯಾಸವಿಲ್ಲ. ಭಾರೀ ಅಂತರದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದ ಯಾರೂ ತಮ್ಮ ಸ್ಥಾನವನ್ನು ಕಳೆದುಕೊಂಡಿಲ್ಲ. ಟ್ಯಾಮ್ ರೇಟಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದ್ದ ಚಾನೆಲ್  ನಾಲ್ಕನೇ ಸ್ಥಾನಕ್ಕೆ ಕುಸಿದಿರುವುದು ಕರ್ನಾಟಕದಲ್ಲಿ ಮಾತ್ರ.

ಗುರುವಾರ ಬಿಡುಗಡೆಯಾಗಿರುವ ಟ್ಯಾಮ್ ರೇಟಿಂಗ್‌ನಂತೆ ಏಪ್ರಿಲ್ 25ಕ್ಕೆ ಕೊನೆಗೊಂಡ ವಾರದಲ್ಲಿ 539 ಜಿಆರ್‌ಪಿಗಳೊಂದಿಗೆ ‘ಉದಯ’ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ‘ಕಲರ್ಸ್ ಕನ್ನಡ’ 371 ಜಿಆರ್‌ಪಿ ಪಡೆದಿದೆ. ಮೂರನೇ ಸ್ಥಾನದಲ್ಲಿರುವ ತಮಿಳಿನ ‘ಸನ್’ 251 ಜಿಆರ್‌ಪಿ ಗಳಿಸಿದ್ದರೆ. ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದ ‘ಸುವರ್ಣ’ ಮತ್ತು ‘ಜೀ ಕನ್ನಡ’ ಚಾನೆಲ್‌ಗಳು ಕ್ರಮವಾಗಿ 214 ಮತ್ತು 208 ಜಿಆರ್‌ಪಿಗಳನ್ನು ತಮ್ಮದಾಗಿಸಿಕೊಂಡಿವೆ.

ಬುಧವಾರ ಬಿಡುಗಡೆಯಾಗಿರುವ ಬಾರ್ಕ್ ರೇಟಿಂಗ್‌ನಲ್ಲಿ ಈ ಲೆಕ್ಕಾಚಾರವಿಡೀ ತಲೆಕೆಳಗಾಗಿದೆ. ಏಪ್ರಿಲ್ 24ಕ್ಕೆ ಕೊನೆಗೊಂಡ ವಾರದಲ್ಲಿ  ಕಲರ್ಸ್ ಕನ್ನಡ 459 ಜಿಆರ್‌ಪಿಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಟ್ಯಾಮ್ ರೇಟಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಸುವರ್ಣ 309 ಜಿಆರ್‌ಪಿಗಳೊಂದಿಗೆ ಎರಡನೇ ಸ್ಥಾನಕ್ಕೇರಿದೆ. ಐದನೇ ಸ್ಥಾನದಲ್ಲಿದ್ದ ‘ಜೀ ಕನ್ನಡ’ 276 ಜಿಆರ್‌ಪಿಗಳೊಂದಿಗೆ ಮೂರನೇ ಸ್ಥಾನಕ್ಕೇರಿದೆ. ಮೊದಲ ಸ್ಥಾನದಲ್ಲಿದ್ದ ಉದಯ 255 ಜಿಆರ್‌ಪಿಗಳನ್ನು ಪಡೆದು ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ಕರ್ನಾಟಕದ ಮಾರುಕಟ್ಟೆಯಲ್ಲಿ ಸಂಭವಿಸಿರುವ ಈ ವ್ಯತ್ಯಾಸ ಈ ಮೊದಲು ರೇಟಿಂಗ್ ಕ್ಷೇತ್ರದ ಏಕಸ್ವಾಮ್ಯವನ್ನು ಹೊಂದಿದ್ದ ಟ್ಯಾಮ್‌ನ ಮೇಲೆ ಎನ್‌ಡಿಟಿವಿ ಮಾಡಿದ ಆರೋಪಗಳನ್ನು ಸಮರ್ಥಿಸುವಂತಿದೆ. ಟ್ಯಾಮ್‌ನ ಪ್ರವರ್ತಕ ಸಂಸ್ಥೆ ಎ.ಸಿ.ನೀಲ್ಸನ್‌ ವಿರುದ್ಧ ಎನ್‌ಡಿಟಿವಿ ನ್ಯೂಯಾರ್ಕ್‌ನ ನ್ಯಾಯಾಲಯದಲ್ಲಿ ಹೂಡಿದ್ದ ಮೊಕದ್ದಮೆಯಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ‘ಟಿಆರ್‌ಪಿ ಫಿಕ್ಸಿಂಗ್’ ಅನ್ನು ಬಹುಮುಖ್ಯ ಅಂಶವಾಗಿ ಉಲ್ಲೇಖಿಸಲಾಗಿತ್ತು.

ಕರ್ನಾಟಕದ ಮನರಂಜನಾ ಚಾನೆಲ್‌ಗಳಿಗೆ ಸಂಬಂಧಿಸಿದಂತೆ ಬಾರ್ಕ್ ಮತ್ತು ಟ್ಯಾಮ್ ರೇಟಿಂಗ್‌ಗಳಲ್ಲಿ ಕಾಣಿಸಿಕೊಂಡಿರುವ ಬಹುಮುಖ್ಯ ವ್ಯತ್ಯಾಸ ಧಾರಾವಾಹಿಗಳ ಜನಪ್ರಿಯತೆಗೆ ಸಂಬಂಧಿಸಿದ್ದು. ಟ್ಯಾಮ್ ರೇಟಿಂಗ್‌ನ ಪ್ರಕಾರ ಜನಪ್ರಿಯವಾಗಿರುವ ‘ಉದಯ’ದ ಧಾರಾವಾಹಿಗಳು ಬಾರ್ಕ್ ರೇಟಿಂಗ್‌ನ ಪ್ರಕಾರ ನಗಣ್ಯ ಪ್ರಮಾಣದ ವೀಕ್ಷಕರನ್ನಷ್ಟೇ ಹೊಂದಿವೆ. ಉಳಿದ ಚಾನೆಲ್‌ಗಳ ಧಾರಾವಾಹಿಗಳಲ್ಲಿ ಈ ಮಟ್ಟದ ಏರು ಪೇರುಗಳು ಕಂಡುಬಂದಿಲ್ಲ.

‘ಉದಯ’ದಲ್ಲಿ ಪ್ರಸಾರವಾಗುವ ‘ಕಾದಂಬರಿ ಕಣಜ’ ಧಾರಾವಾಹಿ ಟ್ಯಾಮ್‌ನ ಪ್ರಕಾರ ಸರಾಸರಿ 4.18ರಷ್ಟು ರೇಟಿಂಗ್ ಹೊಂದಿದೆ. ಬಾರ್ಕ್ ರೇಟಿಂಗ್‌ನಂತೆ ಇದಕ್ಕಿರುವ ಸರಾಸರಿ ರೇಟಿಂಗ್ ಕೇವಲ 0.62 ಮಾತ್ರ. ಟ್ಯಾಮ್ ರೇಟಿಂಗ್‌ನ ಪ್ರಕಾರ ಏಪ್ರಿಲ್ 25ಕ್ಕೆ ಕೊನೆಗೊಂಡಿರುವ ವಾರದಲ್ಲಿ ಈ ಧಾರಾವಾಹಿಗೆ ಏಪ್ರಿಲ್ 20ರಂದು 6.1 ರೇಟಿಂಗ್ ಇದೆ. ಅದೇ ದಿನ ಈ ಧಾರಾವಾಹಿಗೆ ದೊರೆತಿರುವ ಬಾರ್ಕ್ ರೇಟಿಂಗ್ 0.46 ಮಾತ್ರ. ಟ್ಯಾಮ್‌ನ ಪ್ರಕಾರ ವಾರದ ಐದು ದಿನಗಳಲ್ಲಿ ಈ ಧಾರಾವಾಹಿಗೆ ಯಾವತ್ತೂ 3.1ಕ್ಕಿಂತ ಕಡಿಮೆ ರೇಟಿಂಗ್ ಇಲ್ಲ. ಬಾರ್ಕ್‌ನ ಲೆಕ್ಕಾಚಾರದಂತೆ ಈ ಧಾರಾವಾಹಿಯ ರೇಟಿಂಗ್ ಯಾವತ್ತೂ 0.74ನ್ನು ಮೀರಿಲ್ಲ. ‘ಸರಿಗಮಪದನಿ’ ಧಾರಾವಾಹಿ ಟ್ಯಾಮ್‌ನ ಪ್ರಕಾರ ಗರಿಷ್ಠ 5 ಮತ್ತು ಕನಿಷ್ಠ 2.5 ರೇಟಿಂಗ್ ಹೊಂದಿದೆ. ಇದು ಬಾರ್ಕ್‌ನ ಪ್ರಕಾರ ಗರಿಷ್ಠ 0.66 ಮತ್ತು ಕನಿಷ್ಠ 0.48 ರೇಟಿಂಗ್ ಅಷ್ಟೇ ಹೊಂದಿದೆ.

‘ಉದಯ’ದ ಅನೇಕ ಧಾರಾವಾಹಿಗಳ ಸ್ಥಿತಿ ಇದುವೇ. ಏಪ್ರಿಲ್ 19ರಂದು ಪ್ರಸಾರವಾದ ‘ಶ್ರೀ ಶಿರಡಿ ಸಾಯಿಬಾಬ’ ಗಳಿಸಿದ 1.05 ರೇಟಿಂಗ್,  20ರಂದು ಪ್ರಸಾರವಾದ ‘ಮಹಾಭಾರತ’ ಪಡೆದ 1.15 ರೇಟಿಂಗ್,  21ರಂದು ಪ್ರಸಾರವಾದ ‘ಅನುರಾಗ ಸಂಗಮ’ಕ್ಕೆ ದೊರೆತ 1.01 ರೇಟಿಂಗ್ ಹೊರತು ಪಡಿಸಿದರೆ ಯಾವ ದಿನವೂ ಯಾವುದೇ ಧಾರಾವಾಹಿಯ ಯಾವುದೇ ಕನಿಷ್ಠ 1 ಪಾಯಿಂಟ್‌ನ ರೇಟಿಂಗ್‌ಗೆ ಕೂಡಾ ಅರ್ಹವಾಗಿಲ್ಲ ಎಂದು ಬಾರ್ಕ್ ಅಂಕಿ–ಅಂಶಗಳು ಹೇಳುತ್ತವೆ. ಟ್ಯಾಮ್‌ ಒದಗಿಸುವ ಅಂಕಿ–ಅಂಶಗಳಂತೆ ‘ಉದಯ’ದ ಧಾರಾವಾಹಿಗಳು 1ಕ್ಕಿಂತ ಕಡಿಮೆ ರೇಟಿಂಗ್ ಪಾಯಿಂಟ್ ಪಡೆಯುವುದು ಮಧ್ಯಾಹ್ನದ ಮರುಪ್ರಸಾರಗಳ ಸಂದರ್ಭದಲ್ಲಿ ಮಾತ್ರ.
*
ಟಿಆರ್‌ಪಿ ಮತ್ತು ಜಿಆರ್‌ಪಿ
ಟಿಆರ್‌ಪಿ. ಅಥವಾ ಟಾರ್ಗೆಟ್ ರೇಟಿಂಗ್ ಪಾಯಿಂಟ್ ಎಂಬುದು ನಿರ್ದಿಷ್ಟ ಟಿ.ವಿ. ಕಾರ್ಯಕ್ರಮವೊಂದರ ವೀಕ್ಷಕರ ಪ್ರಮಾಣವನ್ನು ಅಳೆಯುವ ಮಾನದಂಡ. ನಿರ್ದಿಷ್ಟ ಪ್ರದೇಶದಲ್ಲಿ ನಿರ್ದಿಷ್ಟ ಅವಧಿಯಲ್ಲಿ ಎಷ್ಟು ಮಂದಿ ಕಾರ್ಯಕ್ರಮವನ್ನು ವೀಕ್ಷಿಸಿದರು ಎಂಬುದರ ಅಂದಾಜನ್ನು ಟಿಆರ್‌ಪಿ ಒದಗಿಸುತ್ತದೆ. ಒಟ್ಟು ವೀಕ್ಷಕರ ಸಂಖ್ಯೆಯನ್ನು ಅವರು ವೀಕ್ಷಿಸಿದ ಅವಧಿಯಿಂದ ಗುಣಿಸಿ ಒಟ್ಟು ಪ್ರಸಾರದ ಅವಧಿಯಿಂದ ಭಾಗಿಸಿದಾಗ ದೊರೆಯುವ ಸಂಖ್ಯೆಯೇ ಟಿಆರ್‌ಪಿ. ಟಿ.ವಿ.ಕಾರ್ಯಮಕ್ರಗಳನ್ನು ಸಾಮಾನ್ಯವಾಗಿ 30 ನಿಮಿಷಗಳ ಘಟಕದಂತೆ ವಿಭಜಿಸಲಾಗಿರುತ್ತದೆ. ಈ ಟಿಆರ್‌ಪಿಗಳ ಒಟ್ಟು ಮೊತ್ತವನ್ನು ಜಿಆರ್‌ಪಿ ಅಥವಾ ಗ್ರಾಸ್ ರೇಟಿಂಗ್ ಪಾಯಿಂಟ್ಸ್ ಎನ್ನುತ್ತಾರೆ.

ಮಾದರಿ ಸಮೀಕ್ಷೆ: ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಬಳಸುವ ಮಾದರಿಯನ್ನೇ ಟಿ.ವಿ. ಕಾರ್ಯಕ್ರಮಗಳ ಜನಪ್ರಿಯತೆಯನ್ನು ಅಳೆಯುವುದಕ್ಕೂ ಬಳಸಲಾಗುತ್ತದೆ. ಆದರೆ ಇಲ್ಲಿ ಆಯ್ದ ವೀಕ್ಷಕರ ಮನೆಯ ಟಿ.ವಿ.ಗಳಿಗೆ ‘ಪೀಪಲ್ ಮೀಟರ್’ ಎಂಬ ಯಂತ್ರವನ್ನು ಅಳವಡಿಸಲಾಗಿರುತ್ತದೆ. ಆ ಮನೆಯವರು ಯಾವ ಕಾರ್ಯಕ್ರಮಗಳನ್ನು ಎಷ್ಟು ಹೊತ್ತು ವೀಕ್ಷಿಸುತ್ತಾರೆ ಎಂಬುದನ್ನು ದಾಖಲಿಸಿರುತ್ತದೆ. ಟ್ಯಾಮ್ ದೇಶವ್ಯಾಪಿಯಾಗಿ ಇಂಥ ಸುಮಾರು 10,000 ಮನೆಗಳನ್ನು ಸಮೀಕ್ಷೆಗೆ ಆರಿಸಿಕೊಂಡಿದ್ದರೆ ಬಾರ್ಕ್‌ನ ಮಾದರಿ ಪ್ರಮಾಣ ಇದರ ದುಪ್ಪಟ್ಟಿದೆ.
*
ರೇಟಿಂಗ್‌ ಏಜೆನ್ಸಿಗಳು
ಟ್ಯಾಮ್ :
ಟಿ.ವಿ. ಕಾರ್ಯಕ್ರಮಗಳ ಜನಪ್ರಿಯತೆಯ ಪ್ರಮಾಣವನ್ನು ಅಳೆಯುವುದಕ್ಕೆ ಈ ತನಕ ಇದ್ದದ್ದು ಒಂದೇ ಸಂಸ್ಥೆ. ಟ್ಯಾಮ್ ಮೀಡಿಯಾ ರೀಸರ್ಚ್ ಎಂಬ ಹೆಸರಿನ ಈ ಸಂಸ್ಥೆಯನ್ನು ಎಸಿ ನೀಲ್ಸನ್, ಕಾಂಟರ್ ರೀಸರ್ಚ್ ಮತ್ತು ಡಬ್ಲ್ಯುಪಿಪಿ ಎಂಬ ಮೂರು ಬಹುರಾಷ್ಟ್ರಿಯ ಕಂಪೆನಿಗಳು ಜೊತೆಗೂಡಿ ಸ್ಥಾಪಿಸಿದ್ದವು. ದಶಕಗಳಿಂದ ಇದೊಂದೇ ಸಂಸ್ಥೆ ಭಾರತೀಯ ಟಿ.ವಿ.ವೀಕ್ಷಕರು ಏನನ್ನು ನೋಡುತ್ತಿದ್ದಾರೆ ಎಂಬುದನ್ನು ಮಾದರಿ ಸಮೀಕ್ಷೆಯ ಮೂಲಕ ಹೇಳುತ್ತಿದ್ದವು.

ಬಾರ್ಕ್: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ ದೇಶೀ ರೇಟಿಂಗ್ ಏಜೆನ್ಸಿಯೊಂದರ ಅಗತ್ಯದ ಬಗ್ಗೆ ಹೇಳಿದ ನಂತರ ಟಿ.ವಿ. ಮತ್ತು ಜಾಹೀರಾತು ಉದ್ಯಮದ ಪಾಲುದಾರಿಕೆಯೊಂದಿಗೆ ಸ್ಥಾಪನೆಯಾದ ಸಂಸ್ಥೆಯಿದು. ಇದು ಈ ವರ್ಷ ಕಾರ್ಯಾರಂಭ ಮಾಡಿದೆ. ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಫೌಂಡೇಶನ್, ಇಂಡಿಯನ್ ಸೊಸೈಟಿ ಆಫ್ ಅಡ್ವರ್ಟೈರ್ಸ್, ಅಡ್ವರ್ಟೈಸಿಂಗ್ ಏಜೆನ್ಸೀಸ್ ಅಸೋಸಿಯೇಷನ್–ಇಂಡಿಯಾಗಳು ಒಟ್ಟಾಗಿ ಬಾರ್ಕ್ ಅಥವಾ ಬ್ರಾಡ್‌ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ ಸಂಸ್ಥೆಯನ್ನು ಪ್ರವರ್ತಿಸಿವೆ. ಮಾದರಿ ಸಮೀಕ್ಷೆಗೆ ಟ್ಯಾಮ್‌ಗಿಂತ ದೊಡ್ಡ ಪ್ರಮಾಣದ ಮಾದರಿಗಳನ್ನು ಬಳಸುತ್ತಿದ್ದೇನೆಂದು ಬಾರ್ಕ್ ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT