ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಲು ದಾರಿಯಲ್ಲಿ ಮಹಿಳಾ ಅಧ್ಯಯನ..!

Last Updated 29 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಭಾಷೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಪ್ರಮುಖ ಮಾನವಿಕ ಅಧ್ಯಯನ ವಿಭಾಗಗಳಾದ ಸಮಾಜಶಾಸ್ತ್ರ, ಮಾನವಶಾಸ್ತ್ರ, ಮನಃಶಾಸ್ತ್ರ, ರಾಜ್ಯಶಾಸ್ತ್ರ ಹಾಗೂ ಇತಿಹಾಸ ಸೇರಿದಂತೆ ಪ್ರಮುಖ ವಿಭಾಗಗಳನ್ನು ಮಹಿಳಾ ದೃಷ್ಟಿಕೋನದಿಂದ ಅಧ್ಯಯನ ಮಾಡಲು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಆರಂಭಿಸಿರುವ ‘ಮಹಿಳಾ ಅಧ್ಯಯನ’ ಕೋರ್ಸ್ (Women’s Studies) ಕವಲು ದಾರಿಯತ್ತ ಸಾಗುತ್ತಿದೆ. ಸ್ನಾತಕೋತ್ತರ ಪದವಿ, ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿ ಪಡೆದಿರುವ ಸುಮಾರು ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಮಹಿಳಾ ಅಧ್ಯಯನಕ್ಕೆ ಏಳು ದಶಕಗಳ ಇತಿಹಾಸವಿದ್ದು, ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬಹು ಶಿಸ್ತಿನ ಅಧ್ಯಯನವಾಗಿ ಬೆಳೆದು ಬಂದಿದೆ. ಮಹಿಳಾ ಅಧ್ಯಯನದ ಅಗತ್ಯವನ್ನು ಯುನೆಸ್ಕೋ ಕೂಡ ಒತ್ತಿ ಹೇಳಿದ್ದು, ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಅಗತ್ಯ ಅನುದಾನ ಬಿಡುಗಡೆ ಮಾಡುತ್ತಿದೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯು ಎಲ್ಲ ಹಂತಗಳಲ್ಲಿ ಮಹಿಳಾ ಅಧ್ಯಯನ ಬೋಧಿಸಲು ಸಲಹೆ ನೀಡಿದೆ.

ಮಹಿಳಾ ಅಧ್ಯಯನ ಶೈಕ್ಷಣಿಕ ಶಿಸ್ತಾಗಿ ಎಲ್ಲ ಹಂತಗಳಲ್ಲಿ ಒಂದು ವಿಷಯವಾಗಿ ಅನುಷ್ಠಾನವಾಗಬೇಕು ಎಂದು ಎನ್‌ಸಿಇಆರ್‌ಟಿ ನಿರ್ದೇಶಿಸಿದೆ. 1986ರ ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣದ ಎಲ್ಲ ಹಂತಗಳಲ್ಲೂ ಮಹಿಳಾಪರ ಧೋರಣೆ ಬೆಳೆಸಬೇಕಾದ ಅಗತ್ಯತೆಯನ್ನು ಒತ್ತಿ ಹೇಳಿದೆ. ಅಂತೆಯೇ, ಈ ಎಲ್ಲ ಆಶಯಗಳೊಂದಿಗೆ ರಾಜ್ಯದ ಮೈಸೂರು, ಮಂಗಳೂರ, ಧಾರವಾಡ, ವಿಜಾ­ಪುರ, ಹಂಪಿ ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯ­ಗಳಲ್ಲಿ ‘ಮಹಿಳಾ ಅಧ್ಯಯನ’ ಕೋರ್ಸ್‌ ಆರಂಭಿಸಲಾಗಿದೆ. ರಾಜ್ಯದ ಏಳು ವಿಶ್ವವಿದ್ಯಾಲಯಗಳಲ್ಲಿ ಸ್ನಾತಕ, ಸ್ನಾತಕೋತ್ತರ, ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿ ನೀಡಲಾ­ಗುತ್ತಿದೆ.

ಸರ್ಕಾರಿ, ಅನುದಾ­ನಿತ ಮತ್ತು ಅನುದಾನರಹಿತ 15 ಪದವಿ ಕಾಲೇಜುಗಳಲ್ಲಿ ಮಹಿಳಾ ಅಧ್ಯಯನ ಐಚ್ಛಿಕ ವಿಷಯ ಬೋಧಿಸಲಾಗುತ್ತಿದೆ. 1991 ರಿಂದ 2012 ರ ವರೆಗೆ ಸುಮಾರು ಐದು ಸಾವಿರ ವಿದ್ಯಾರ್ಥಿ­ಗಳು ಪದವಿ ಪಡೆದಿದ್ದಾರೆ. ಆದರೆ, ಈ ಪೈಕಿ ಸರ್ಕಾರಿ ಕೆಲಸ ಸಿಕ್ಕಿದ್ದು ಕೇವಲ ನಾಲ್ಕು ಜನರಿಗೆ ಮಾತ್ರ!

ಕವಲು ದಾರಿ ಏಕೆ?: ಮಹಿಳಾ ಅಧ್ಯಯನ ಕೋರ್ಸ್‌ನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳ ಲಭ್ಯತೆ ಕಡಿಮೆ. ಮಹಿಳಾ ಅಧ್ಯಯನ ವಿಷಯದಲ್ಲಿ ಸ್ನಾತ­ಕೋ­ತ್ತರ ಪದವಿ, ಪಿಎಚ್.ಡಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳನ್ನು ರಾಜ್ಯದ ಯಾವ ವಿಶ್ವವಿದ್ಯಾನಿಲಗಳಲ್ಲೂ ಕಾಯಂ ಆಗಿ ನೇಮಕ ಮಾಡಿಕೊಂಡಿಲ್ಲ. ಪದವೀ­ಧರರು ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಪಿಎಚ್.ಡಿ ಮಾಡಿ­ಕೊಂ­ಡ­­ವರು ವಿ.ವಿಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ಪಿಎಚ್.ಡಿ ಮಾಡಿದವರ ಸಂಖ್ಯೆ 50ಕ್ಕೂ ಹೆಚ್ಚಾಗಿದೆ. ಈ ಎಲ್ಲ ಕಾರಣಗಳಿಂದ ಮಹಿಳಾ ಅಧ್ಯಯನದತ್ತ ಮುಖ ಮಾಡಲು ಸ್ವತಃ ಮಹಿಳೆಯರೇ ಹಿಂಜರಿಯುತ್ತಿದ್ದಾರೆ.

ಸುಧಾರಣೆ ಹೇಗೆ?: ರಾಜ್ಯ ಸರ್ಕಾರದ 17 ಪ್ರಮುಖ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳ (ಸಿ ಅಂಡ್ ಆರ್) ತಿದ್ದುಪಡಿ ಮಾಡುವ ಮೂಲಕ ಮಹಿಳಾ ಅಧ್ಯಯನ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಅಧ್ಯಯನ ವಿದ್ಯಾರ್ಥಿ ಅಸೋಸಿಯೇಷನ್‌ ಹಲವು ವರ್ಷಗಳಿಂದ ಹೋರಾಟ ಆರಂಭಿಸಿದೆ.

ಕಾಲೇಜು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಸಾಮಖ್ಯ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಮಾಜ ಕಲ್ಯಾಣ, ಕಾರ್ಮಿಕ, ಪೌರಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು, ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಇಲಾಖೆ, ಅಂಗವಿಕಲರ ಕಾರ್ಪೋರೇಷನ್, ಮೈಸೂರು ಮಿನರಲ್ಸ್‌ ಲಿಮಿ­ಟೆಡ್ ಮತ್ತು ನೀರು ಸರಬರಾಜು ಮತ್ತು ನೈರ್ಮಲ್ಯ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ನೀರು ಮತ್ತು ನೈರ್ಮಲ್ಯ ಮಿಷನ್ ಸಂಸ್ಥೆಗಳಲ್ಲಿ ಮಹಿಳಾ ಅಧ್ಯಯನ ಪದವಿ ಪಡೆದಿರುವ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಬೇಕು ಎಂಬುದು ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಡಾ.ಈ.ಯರ್ರಿಸ್ವಾಮಿ ಆಶಯ.

ಸರ್ಕಾರಿ ಮತ್ತು ಸರ್ಕಾರೇತರ ಪದವಿ ಕಾಲೇಜುಗಳಲ್ಲಿ ಮಹಿಳಾ ಅಧ್ಯಯನವನ್ನು ಐಚ್ಛಿಕ ವಿಷಯವಾಗಿ ಆರಂಭಿಸಬೇಕು. ಕರ್ನಾಟಕ ರಾಜ್ಯ ಉಪನ್ಯಾಸಕರ ಪರೀಕ್ಷೆ (ಕೆ–ಸೆಟ್) ಮತ್ತು ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಮುಖ್ಯ ಪರೀಕ್ಷೆಯ ಆಯ್ಕೆ ವಿಷಯಗಳಲ್ಲಿ ಮಹಿಳಾ ಅಧ್ಯಯನ ವಿಷಯ ಪರಿಚಯಿಸಬೇಕು ಎಂಬುದು ವಿದ್ಯಾರ್ಥಿಗಳ ಪ್ರಮುಖ ಬೇಡಿಕೆ. ಇದಕ್ಕೆ ಸ್ಪಂದಿಸಿರುವ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸಿಡಿಪಿಒ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಅಲ್ಲದೇ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಲ್ಲಿ 16 ಹುದ್ದೆಗಳಲ್ಲಿ ಮಹಿಳಾ ಅಧ್ಯಯನ ಪದವೀಧದರಿಗೂ ಆದ್ಯತೆ ನೀಡಿದೆ.

ಬೆಳಗಾವಿಯಲ್ಲಿ ಈಚೆಗೆ ನಡೆದ ಅಧಿವೇಶನದಲ್ಲೂ ಈ ಬಗ್ಗೆ ಚರ್ಚೆ ನಡೆ­ದಿದ್ದು, ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಬೇರೆ ಕೋರ್ಸ್‌ಗಳಲ್ಲಿ ಪದವಿ ಓದಿರುವ ವಿದ್ಯಾರ್ಥಿಗಳಿಗೆ ಯಾವ ರೀತಿಯ ಉದ್ಯೋಗಾವಕಾಶ ನೀಡಲಾಗುತ್ತಿದೆಯೋ ಅದೇ ರೀತಿಯಲ್ಲಿ ಮಹಿಳಾ ಅಧ್ಯಯನ ಪದವಿ ಪಡೆದವರಿಗೂ ಉದ್ಯೋಗ ಕೊಡುವ ಬಗ್ಗೆ ಪ್ರಯತ್ನಿಸಲಾ­ಗುವುದು ಎಂದು ಉನ್ನತ ಶಿಕ್ಷಣ ಸಚಿವರು ಭರವಸೆ ನೀಡಿರು­ವುದು ಮಹಿಳಾ ಅಧ್ಯಯನ ಪದವೀಧರರಲ್ಲಿ ಭರವಸೆ ಮೂಡಿಸಿದೆ. ಕವಲು ದಾರಿಯಲ್ಲಿರುವ ಕೋರ್ಸ್ ಮನ್ವಂತರದ ಹಾದಿಯತ್ತ ಸಾಗುವ ನಿರೀಕ್ಷೆಗಳು ಗರಿಗೆದರಿವೆ.

ಉದ್ಯೋಗಾವಕಾಶ ಕಲ್ಪಿಸಬೇಕು

ಮಹಿಳೆಯರ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ದೌರ್ಜನ್ಯ ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ‘ಮಹಿಳಾ ಅಧ್ಯಯನ’ ಕೋರ್ಸ್ ಖಂಡಿತವಾಗಿಯೂ ಬೇಕು. ಪದವಿ ಕಾಲೇಜುಗಳಲ್ಲಿ ಮಹಿಳಾ ಅಧ್ಯಯನವನ್ನು ಐಚ್ಛಿಕ ವಿಷಯವಾಗಿ ಅಳವಡಿಸಬೇಕು. ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಮಹಿಳಾ ಸಮಾಲೋಚಕರನ್ನು ನೇಮಕ ಮಾಡಿಕೊಳ್ಳಬೇಕು. ಕೆ–ಸೆಟ್ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಉದ್ಯೋಗಾವಕಾಶ ಲಭ್ಯವಾದಾಗ ಮಾತ್ರ ಮಹಿಳಾ ಅಧ್ಯಯನಕ್ಕೆ ಹೆಚ್ಚಿನ ಬೆಲೆ ಬರುತ್ತದೆ. ಆದ್ದರಿಂದ, ಸರ್ಕಾರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಎಲ್ಲ ಇಲಾಖೆಗಳಲ್ಲಿ ಮಹಿಳಾ ಅಧ್ಯಯನ ಪದವೀಧರರನ್ನು ನೇಮಕಕ್ಕೆ ಮುಂದಾಗಬೇಕು.
–ಪ್ರೊ.ಛಾಯಾ ದೇಗಾಂವಕರ, ಮುಖ್ಯಸ್ಥರು, ಮಹಿಳಾ ಅಧ್ಯಯನ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT