ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ್ತೂರಿರಂಗನ್‌ ವರದಿಗೆ ಒಕ್ಕೊರಲ ವಿರೋಧ

Last Updated 31 ಜನವರಿ 2015, 19:30 IST
ಅಕ್ಷರ ಗಾತ್ರ

ಮಡಿಕೇರಿ: ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತಂತೆ ಕಸ್ತೂರಿ ರಂಗನ್‌ ಸಮಿತಿ ನೀಡಿರುವ ವರದಿಯ ಶಿಫಾರಸುಗಳನ್ನು ಕೊಡಗು ಜಿಲ್ಲೆಯಲ್ಲಿ ಜಾರಿಗೊಳಿಸಬಾರದು ಎಂದು ಬಹುತೇಕ ಜನಪ್ರತಿನಿಧಿಗಳು, ಸಾರ್ವಜನಿಕರು ಸಚಿವ ಸಂಪುಟ ಉಪಸಮಿತಿಗೆ ಒಕ್ಕೊರಲಿನಿಂದ ಒತ್ತಾಯಿಸಿದರು.

ಇಲ್ಲಿನ ಕೋಟೆ ವಿಧಾನ ಸಭಾಂಗಣ­ದಲ್ಲಿ ಶನಿವಾರ ಅರಣ್ಯ ಸಚಿವ ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ಉಪಸಮಿತಿಯು ಅಭಿಪ್ರಾಯ ಸಂಗ್ರಹಿ­ಸಿತು. ಸಭೆಯ ಕೊನೆಯ ಹಂತದಲ್ಲಿ ಪರಿಸರವಾದಿಗಳು ಅಭಿಪ್ರಾಯ ಹೇಳಲು ಮುಂದಾದಾಗ ಸಾರ್ವಜ­ನಿಕರು, ಜನ­ಪ್ರತಿನಿಧಿ­ಗಳು ವಿರೋಧ ವ್ಯಕ್ತಪಡಿಸಿದರು.

ಪರಿಸ್ಥಿತಿಯನ್ನು ಅರಿತ ರಮಾನಾಥ ರೈ ಅವರು, ಇನ್ನುಳಿದವರು ಅಭಿಪ್ರಾಯ­ಗಳನ್ನು ಲಿಖಿತವಾಗಿ ತಮಗೆ ಕಳುಹಿಸಿಕೊ­ಡಬಹುದು ಎಂದು ಹೇಳಿ ಸಭೆಗೆ ತೆರೆ ಎಳೆದರು.

ಜನಜೀವನಕ್ಕೆ ಧಕ್ಕೆ: ಸಭೆಯ ಆರಂಭ­ದಲ್ಲಿ ಮಾತನಾಡಿದ ವಿಧಾನ ಪರಿಷತ್‌ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ, ಪಶ್ಚಿಮ ಘಟ್ಟ ವ್ಯಾಪ್ತಿಯ ಬಗ್ಗೆ ಇದುವರೆಗೆ ಸ್ಪಷ್ಟ ಚಿತ್ರಣ ಇಲ್ಲ. ಇದರ ಗಡಿಯನ್ನು ಕೂಡ ಗುರುತಿಸಿಲ್ಲ. ಇಂತಹ ಸ್ಥಿತಿಯಲ್ಲಿ ನ್ಯಾಚುರಲ್‌ ಲ್ಯಾಂಡ್‌ಸ್ಕೇಪ್‌ (ಸಹಜವಾದ ಅರಣ್ಯ ಪ್ರದೇಶ) ಹಾಗೂ ಕಲ್ಚರಲ್‌ ಲ್ಯಾಂಡ್‌­ಸ್ಕೇಪ್‌ (ಜನವಸತಿ ಇರುವ ಪ್ರದೇಶದಲ್ಲಿ­ರುವ ಅರಣ್ಯ) ಎಂದು ಕಸ್ತೂರಿ ರಂಗನ್‌ ಸಮಿತಿಯು ಗುರುತಿಸಿರುವುದು ಅವೈಜ್ಞಾನಿ­ಕ­ವಾಗಿದೆ. ಪಶ್ಚಿಮ ಘಟ್ಟದ ಗಡಿಯನ್ನು ಗುರುತಿಸದೇ ಇರುವಾಗ ಅರಣ್ಯದ ಸುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು (ಇಎಸ್‌ಎ) ರಾಜ್ಯದ 1555 ಗ್ರಾಮಗಳನ್ನು  ಗುರುತಿಸಿದ್ದು ಹೇಗೆ? ಎಂದು ಆಕ್ಷೇಪ ವ್ಯಕ್ತಪಡಿಸಿದರು.

ನ್ಯಾಚುರಲ್‌ ಲ್ಯಾಂಡ್‌ಸ್ಕೇಪ್‌ ಪ್ರದೇಶಕ್ಕೆ ಮಾತ್ರ ಕಸ್ತೂರಿ ರಂಗನ್‌ ವರದಿಯನ್ನು ಅನ್ವಯಿಸಿದರೆ ನಮ್ಮ ಅಭ್ಯಂತರವಿಲ್ಲ. ಆದರೆ, ಜನವಸತಿ ಪ್ರದೇಶ ಒಳಗೊಂಡಿರುವ ಕಲ್ಚರಲ್‌ ಲ್ಯಾಂಡ್‌ಸ್ಕೇಪ್‌ಗೆ ಶಿಫಾರಸುಗಳನ್ನು ಅನ್ವಯಿಸಿದರೆ ಇಲ್ಲಿನ ಜನರ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಳ್ಳಲಿದೆ ಎಂದು ಹೇಳಿದರು.

ರಾಜ್ಯ ವ್ಯಾಪ್ತಿಯಲ್ಲಿರುವ ಪಶ್ಚಿಮ ಘಟ್ಟದ ವ್ಯಾಪ್ತಿ, ಗಡಿ  ಗುರುತಿ­ಸಬೇಕು ಹಾಗೂ ನಕ್ಷೆ ತಯಾರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮೊದಲು ಮಾಡಬೇ­ಕಾಗಿದೆ. ಇದಲ್ಲದೇ, ಈಗಾಗಲೇ ಜಾರಿಯಲ್ಲಿರುವ ಅರಣ್ಯ ಕಾನೂನು­ಗಳಿಂದ ನಾವು ಪಶ್ಚಿಮ ಘಟ್ಟವನ್ನು ರಕ್ಷಣೆ ಮಾಡಿಕೊಳ್ಳುತ್ತೇವೆ. ಮಾಧವ ಗಾಡ್ಗೀಳ್‌ ಅಥವಾ ಕಸ್ತೂರಿ ರಂಗನ್‌ ವರದಿಯ ಅವಶ್ಯಕತೆ ನಮಗಿಲ್ಲವೆಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ಕೇಂದ್ರ ಸರ್ಕಾರಕ್ಕೆ ಹೇಳಬೇಕು ಎಂದರು.

‘ಜನರ ಅಭಿಪ್ರಾಯದಂತೆ ಕೇಂದ್ರಕ್ಕೆ ವರದಿ’
ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯದ 10 ಜಿಲ್ಲೆಗಳ ಪೈಕಿ ಈಗಾಗಲೇ 8 ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಇನ್ನುಳಿದ ಎರಡು ಜಿಲ್ಲೆಗಳಲ್ಲಿ ಜನರ ಅಭಿಪ್ರಾ­ಯವನ್ನು ಸಂಗ್ರಹಿಸಿದ ನಂತರ ಒಟ್ಟು ಅಭಿಪ್ರಾಯ­ವನ್ನು ಕ್ರೋಡೀಕರಿಸಿ ಸಚಿವ ಸಂಪುಟ ಸಭೆಯಲ್ಲಿ ಮಂಡಿಸ­ಲಾಗುವುದು. ನಂತರ ಕೇಂದ್ರ ಸರ್ಕಾರಕ್ಕೆ ಏ. 15ರೊಳಗೆ ಅಭಿಪ್ರಾಯವನ್ನು ಸಲ್ಲಿಸಲಾಗುವುದು ಎಂದು ಉಪಸಮಿತಿಯ ಅಧ್ಯಕ್ಷ, ಸಚಿವ ರಮಾನಾಥ್‌ ರೈ ಸುದ್ದಿಗಾರರಿಗೆ ತಿಳಿಸಿದರು.

ಪರಿಸರ ಉಳಿಯಬೇಕು ಎನ್ನುವುದು ಎಲ್ಲರ ಆಶಯ. ಇದರ ಜತೆಗೆ ಸ್ಥಳೀಯರ ಬದುಕು ಕೂಡ ಮುಖ್ಯವಾಗಿದೆ. ಇವೆರಡನ್ನೂ ಪರಿಶೀಲಿಸಿ, ಸರ್ಕಾರ ತನ್ನ ಅಭಿಪ್ರಾಯವನ್ನು ಕೇಂದ್ರಕ್ಕೆ ಸಲ್ಲಿಸಲಿದೆ. ವರದಿ ಅನುಷ್ಠಾನದ ಬಗ್ಗೆ ಕೇಂದ್ರ ಸರ್ಕಾ­ರವೇ ಅಂತಿಮ ತೀರ್ಮಾನವನ್ನು ಕೈಗೊಳ್ಳಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತ­ನಾಡಿ, ಪರಿಸರ ಸೂಕ್ಷ್ಮ ವಲಯದ (ಇಎಸ್‌ಎ) ಪಟ್ಟಿಗೆ ಕೊಡಗಿನ ಭಾಗ­ಮಂಡಲ, ತಲಕಾವೇರಿ, ಕುಶಾಲನಗರ ಬಳಿಯ ಜೇನುಕಲ್ಲು ಬೆಟ್ಟ ಸೇರಿದಂತೆ ಹಲವು ಜನವಸತಿ ಪ್ರದೇಶವನ್ನು ಸೇರಿಸು­ವಲ್ಲಿ ಜಿಲ್ಲೆಯ ಅರಣ್ಯ ಅಧಿಕಾರಿಗಳ ಕೈವಾಡ­ವಿದೆ. ಯಾವುದೇ ರೀತಿಯಲ್ಲಿ ಸ್ಥಳದ ಸಮೀಕ್ಷೆ ನಡೆಸಿಲ್ಲ. ಪರಿಸರ­ವಾದಿ­ಗಳು ಹಾಗೂ ಅರಣ್ಯ ಇಲಾಖೆಯ ಅಧಿ­ಕಾರಿ­ಗಳ ಜತೆ ಹೋಟೆಲ್‌, ರೆಸಾರ್ಟ್‌­ಗಳಲ್ಲಿ ಕುಳಿತು ಇಎಸ್‌ಎ ನಿರ್ಧರಿಸ­ಲಾಗಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಸಿ. ನಾಣಯ್ಯ ಮಾತನಾಡಿ, ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಯಿಂದ ಖಾಸಗಿ ಜಮೀನುಗಳನ್ನು ಕೈಬಿಡಬೇಕು. ಸಂರಕ್ಷಿತ ಅರಣ್ಯ ಪ್ರದೇಶ, ವನ್ಯಧಾಮಗಳು, ರಾಷ್ಟ್ರೀಯ ಉದ್ಯಾನ ಹಾಗೂ ಈಗಾ­ಗಲೇ ಘೋಷಿಸಲಾಗಿರುವ ಅರಣ್ಯ ಪ್ರದೇಶಕ್ಕೆ ಮಾತ್ರ ಇದನ್ನು ಅನ್ವಯಿಸಲಿ ಎಂದು ಹೇಳಿದರು.

ಶಾಸಕ ಅಪ್ಪಚ್ಚು ರಂಜನ್‌, ಸಣ್ಣ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಚೇರಂಡ ನಂದ ಸುಬ್ಬಯ್ಯ, ಕಾಫಿ ಬೆಳೆಗಾರ ತಿಮ್ಮಯ್ಯ, ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಮಾಚಯ್ಯ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ವಿ.ಪಿ. ಶಶಿಧರ್‌ ಇತರರು ಮಾತನಾಡಿದರು.

ವರದಿಯ ಶಿಫಾರಸಿನಂತೆ ಮರಳು, ಕ್ವಾರಿ ಗಣಿಗಾರಿಕೆಯನ್ನು ನಿಷೇಧಿಸಿದರೆ ಇಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಹೊಡೆತ ಬೀಳುತ್ತದೆ. ಅರಣ್ಯ ಪ್ರದೇಶ­ದಲ್ಲಿ ವಾಸವಾಗಿರುವ ಮೂಲನಿವಾಸಿ­ಗಳ ಮೇಲೆ ಹಲವು ರೀತಿಯ ನಿರ್ಬಂಧಗಳನ್ನು ಹೇರಲಾಗುತ್ತದೆ. ಅವರನ್ನು ಒಕ್ಕಲೆಬ್ಬಿಸುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT