ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲಿ 25ಕ್ಕೂ ಹೆಚ್ಚು ಆಕಾಂಕ್ಷಿಗಳು

ವಿಧಾನಸಭೆಯಿಂದ ಮೇಲ್ಮನೆಗೆ ಚುನಾವಣೆ–ಟಿಕೆಟ್‌ಗಾಗಿ ಪೈಪೋಟಿ
Last Updated 14 ಮೇ 2016, 19:37 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಏಳು ಸದಸ್ಯರನ್ನು  ಆಯ್ಕೆ ಮಾಡುವ ಸಲುವಾಗಿ ಜೂನ್‌ 10ರಂದು ಚುನಾವಣೆ ನಡೆಯಲಿದೆ.  ಟಿಕೆಟ್‌ ಗಿಟ್ಟಿಸಲು ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ  ಪೈಪೋಟಿ ಏರ್ಪಟ್ಟಿದೆ.

ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್‌ ಈ ಬಾರಿ ನಾಲ್ಕು ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಬಹುದು. ಅಲ್ಲದೇ  ಮೂವರು ನಾಮಕರಣ ಸದಸ್ಯರನ್ನು ನೇಮಿಸುವುದಕ್ಕೂ ಆಡಳಿತ ಪಕ್ಷಕ್ಕೆ ಅವಕಾಶ ಇದೆ.

ಕಾಂಗ್ರೆಸ್‌ನಿಂದ 25ಕ್ಕೂ ಅಧಿಕ ಆಕಾಂಕ್ಷಿಗಳು ಟಿಕೆಟ್‌ಗಾಗಿ ಕೆಪಿಸಿಸಿ ವರಿಷ್ಠರಿಗೆ ದುಂಬಾಲು ಬಿದ್ದಿದ್ದಾರೆ. ಜೂನ್‌ 14ರಂದು  ನಿವೃತ್ತರಾಗಲಿರುವ ಆರ್‌.ವಿ.ವೆಂಕಟೇಶ್‌, ವೀರಣ್ಣ ಮತ್ತೀಕಟ್ಟಿ ಅವರೂ ಪುನರಾಯ್ಕೆ ಬಯಸಿದ್ದಾರೆ.  

ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್‌, ಉದ್ಯಮಿ ಕೆ.ಪಿ.ನಂಜುಂಡಿ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಜಿ.ಸಿ.ಚಂದ್ರಶೇಖರ್‌,   ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ,  ಕಾರ್ಯದರ್ಶಿ ಎಂ.ಎಸ್‌.ಬಸವರಾಜು, ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ರಾಮಚಂದ್ರಪ್ಪ, ಮಾಜಿ ಸಂಸದ ಮಂಜುನಾಥ ಕುನ್ನೂರು, ಜಯಪ್ರಕಾಶ ನಾರಾಯಣ ವೇದಿಕೆ ಅಧ್ಯಕ್ಷ  ಮಳವಳ್ಳಿ ಶಿವಣ್ಣ ಅವರು ಪಕ್ಷದ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಮಹಿಳಾ ಆಕಾಂಕ್ಷಿಗಳು: ಹಟ್ಟಿ ಚಿನ್ನದ ಗಣಿ ಅಧ್ಯಕ್ಷೆ ರಾಣಿ ಸತೀಶ್‌, ಮಾಜಿ ಸಂಸದೆ ರಮ್ಯಾ, ಚಿತ್ರನಟಿಯರಾದ  ಭವ್ಯಾ ಹಾಗೂ ಬಾಲ ಭವನ ಸೊಸೈಟಿ ಅಧ್ಯಕ್ಷೆ ಭಾವನಾ, ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಲ್ಲಾಜಮ್ಮಾ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಬಿಜೆಪಿಯಲ್ಲೂ ಪೈಪೋಟಿ: ವಿಧಾನಸಭೆಯಲ್ಲಿ 47 ಸದಸ್ಯ ಬಲವನ್ನು ಹೊಂದಿರುವ ಬಿಜೆಪಿ ಒಬ್ಬ ಅಭ್ಯರ್ಥಿಯನ್ನು ನಿರಾಯಾಸವಾಗಿ ಗೆಲ್ಲಿಸುವ ಸಾಮರ್ಥ್ಯ ಹೊಂದಿದೆ. ಎರಡನೇ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕೆ ಜೆಡಿಎಸ್‌ ಅಥವಾ ಪಕ್ಷೇತರರ ಬೆಂಬಲ ಬೇಕಾಗುತ್ತದೆ.

ಬಿಜೆಪಿಯಿಂದ ಆಯ್ಕೆಯಾಗಿರುವ ವಿಧಾನ ಪರಿಷತ್‌ ಸದಸ್ಯ  ವಿ.ಸೋಮಣ್ಣ ಅವರ ಅವಧಿ 2016ರ ಜೂನ್‌ 14ರಂದು ಕೊನೆಗೊಳ್ಳಲಿದೆ. ಅವರು ಪುನರಾಯ್ಕೆ ಬಯಸಿದ್ದಾರೆ.

ಇನ್ನೊಂದೆಡೆ  ಕಟ್ಟಾ ಸುಬ್ರಹ್ಮಣ್ಯ  ನಾಯ್ಡು ಅವರೂ ಮೇಲ್ಮನೆ ಪ್ರವೇಶಿಸಲು ಉತ್ಸುಕರಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇವರಿಬ್ಬರೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಬೆಂಬಲಿಗರು.

ಹೆಬ್ಬಾಳ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ನಾಯ್ಡು ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದರಿಂದ, ಅವರಿಗೆ 2013ರಲ್ಲಿ  ಬಿಜೆಪಿ  ಟಿಕೆಟ್‌ ನೀಡಿರಲಿಲ್ಲ.  ಆ ಬಳಿಕ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು. 

ಪಕ್ಷದ ಮೊದಲ ಅಭ್ಯರ್ಥಿ ಸ್ಥಾನವನ್ನು ನೀಡಲು ಸಾಧ್ಯವಾಗದಿದ್ದರೆ, ಎರಡನೇ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡುವಂತೆ ನಾಯ್ಡು ಅವರು ಪಕ್ಷದ ವರಿಷ್ಠರನ್ನು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎರಡನೇ ಅಭ್ಯರ್ಥಿಯಾಗಿ ಟಿಕೆಟ್‌ ನೀಡಿದರೂ, ಪಕ್ಷೇತರರು ಹಾಗೂ ಇತರ ಸಣ್ಣ ಪಕ್ಷಗಳ ಬೆಂಬಲ ಪಡೆದು ಗೆಲ್ಲುತ್ತೇನೆ ಎಂಬ ವಿಶ್ವಾಸವನ್ನು ನಾಯ್ಡು  ಹೊಂದಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT