ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಳರಿಮೆಯಿಂದ ಕನ್ನಡವನ್ನು ಕಡೆಗಣಿಸದಿರಿ

Last Updated 24 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿ ರುವ ಮಗನ ಬಳಿ, ‘ಕ್ಷಮಿಸು’ ಎಂದು ಕೇಳುತ್ತಿರುವ ಸಹನಾ ಕಾಂತಬೈಲು (ಪ್ರ.ವಾ. ಅ.22) ಅವರಂಥ  ತಾಯಂ ದಿ­­­­­ರಿಂದ ಭಾಷಾ ಕೀಳರಿಮೆ ವ್ಯಾಧಿಯಂತೆ ಹರಡುತ್ತಿದೆ. ಭಾಷೆ ಒಂದು ಅಭಿವ್ಯಕ್ತಿ. ಸಂವಹನಕ್ಕೆ ಮಾತೇ ಬೇಕಂತಿಲ್ಲ.

ಈ ಕಂಪ್ಯೂಟರ್ ಯುಗದಲ್ಲೂ  ಸಾಫ್ಟ್‌ವೇರ್ ಎಂಜಿನಿಯರ್‌ ಗಳಿಂದ ಹಿಡಿದು ಎಂಟನೇ ತರಗತಿ ಓದಿರುವ ಯಲಹಂಕದ ವಿ.ಆರ್. ಕಾರ್ಪೆಂಟರ್ ಎಂಬ ಕವಿಯವರೆಗೆ ಎಷ್ಟೋ ಜನ ಕಂಪ್ಯೂಟರ್‌ನಲ್ಲೂ ಕನ್ನಡವನ್ನು ಪಸರಿಸುತ್ತಿದ್ದಾರೆ. ಅಷ್ಟೇ ಯಾಕೆ? ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದ ನನಗೆ ಅಲ್ಲಿನ ಉಸಿರು ಕಟ್ಟುವ ವಾತಾವರಣದಿಂದ ಮುಕ್ತಿ ದೊರಕಿದ್ದು ನನ್ನನ್ನು ನಾಗರಬಾವಿಯ ಸರ್ಕಾರಿ ಶಾಲೆಗೆ ಸೇರಿಸಿದ ಮೇಲೆಯೇ.

ಸರ್ಕಾರಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕನಾಗಿ, ಕನ್ನಡದ ಕವಿಯಾಗಿ ಬೆಂಗಳೂರಿನಲ್ಲಿದ್ದ ನನ್ನ ಅಪ್ಪ, ನನ್ನನ್ನು ಸರ್ಕಾರಿ ಶಾಲೆಗೆ ಸೇರಿಸಿದಾಗ ಎಲ್ಲರೂ, ‘ನಿಮ್ಮ ಮಗನ ಭವಿಷ್ಯವನ್ನ ಹಾಳು ಮಾಡುತ್ತಿದ್ದೀರಿ, ಮೊದಲು ಯಾವುದಾದರೂ ಇಂಗ್ಲಿಷ್ ಮೀಡಿಯಂ ಸ್ಕೂಲಿಗೆ ಸೇರಿಸಿ’ ಎಂದು ಸಲಹೆ ನೀಡಿದ್ದರು. ಬೆಂಗಳೂರಿನಂತಹ ಹೈಟೆಕ್ ಯುಗಕ್ಕೆ ಕಾಲಿಡುತ್ತಿದ್ದ ಅಂದಿನ ಸಂದರ್ಭದಲ್ಲಿ ಮೇಷ್ಟ್ರ ಮಗನಾಗಿ ಸರ್ಕಾರಿ ಶಾಲೆಗೆ ಹೋಗುವವನೆಂದು ನನ್ನ ಸುತ್ತಲಿನವರು ಯಾರೋ ಅನ್ಯಗ್ರಹದ ಜೀವಿಯೇನೋ ಎಂದು ನನ್ನತ್ತ ನೋಡುತ್ತಿದ್ದರು.

ನಾನು ಇಂದು ಏನಾಗಿದ್ದೇನೋ ಅದಕ್ಕೆ ಕಾರಣ ಸರ್ಕಾರಿ ಶಾಲೆ. ಸಹನಾ ಕಾಂತಬೈಲುರಂತಹ ತಿಳಿದವರು ಯಾವುದೋ ಮಾಲ್‌ನಲ್ಲಿ, ಎಸ್.ಎಸ್.ಎಲ್.ಸಿ ಫೇಲಾದರೂ ಇಂಗ್ಲಿಷ್ ಕಲಿತು ಅಂಗಡಿಯಲ್ಲಿ ಸಂಬಳಕ್ಕಿರುವವನೊಂದಿಗೆ ಇಂಗ್ಲಿಷ್ ಮಾತನಾಡಲು ಸಾಧ್ಯವಾಗದಿರುವ ಬಗ್ಗೆ ಪೇಚಾಡುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಕೀಳರಿಮೆ. ನಾನು ಇಂದಿಗೂ ಯಾವುದೇ ಮಾಲ್‌ಗೆ ಹೋದರೂ ಕನ್ನಡದಲ್ಲೇ ವ್ಯವಹರಿಸುತ್ತೇನೆ, ಹಣ ಕೊಡುವ ಗ್ರಾಹಕನಿಗೆ ಅನುಕೂಲ ವಾಗುವಂತೆ ನಡೆದುಕೊಳ್ಳಬೇಕಾದ ಅನಿವಾರ್ಯ ಮಾಲ್‌ನ ಅಂಗಡಿಗಳ ಮಾಲೀಕರಿಗಿದೆ ಹೊರತು, ಇಂಗ್ಲಿಷ್ ಕಲಿತು ಸಾಮಾನು ಕೊಳ್ಳುವ ದರ್ದು ನಮಗಿರಬೇಕಿಲ್ಲ.

‘ಠಸ್ ಪುಸ್ ಎಂದು ಇಂಗ್ಲಿಷ್ ಮಾತನಾಡುವವರು ಮಾತ್ರ ಬದುಕಲು ಸಾಧ್ಯ, ಇಲ್ಲದಿದ್ದರೆ ಇಲ್ಲಿ ಜೀವನ ಮಾಡುವುದೇ ದುಸ್ತರ’ ಎಂಬ ಸನ್ನಿವೇಶವನ್ನು ನಿಮ್ಮಂತಹವರು ಏಕೆ ಸೃಷ್ಟಿಸುತ್ತಿದ್ದೀರ ಅನ್ನುವುದು ಅರ್ಥವಾಗುತ್ತಿಲ್ಲ. ಮೊಬೈಲ್‌ನಲ್ಲಿ ಸಣ್ಣಪುಟ್ಟ ಸಂದೇಶ ಕಳುಹಿಸಲು ನೀವು ಶಬ್ದಕೋಶದ ಮೊರೆ ಹೋಗುತ್ತೀ ರೆಂದರೆ ನಿಜಕ್ಕೂ ಅದು ನಿಮ್ಮ ಕಲಿಕೆಯ ಕೊರತೆ. ಏಕೆಂದರೆ  ಕಿರು ಸಂದೇಶಕ್ಕೆ ಶಬ್ದಕೋಶದ ಅವಶ್ಯಕತೆಯಿಲ್ಲ. ಇಂಗ್ಲಿಷ್‌ನಲ್ಲಿ ಬರುವ ಕಿರು ಸಂದೇಶಗಳು, ಇಂಗ್ಲಿಷ್ ಶಬ್ದಗಳನ್ನು ತುಂಡರಿಸಿ ಕಳುಹಿಸುವುದರಿಂದ ನಿಮಗೆ ಹಾಗೆ ಅನ್ನಿಸಿದ್ದರೆ ಆಶ್ಚರ್ಯವಿಲ್ಲ.

ಇಂದು ಗೂಗಲ್‌ನಂತಹ ಸಂಸ್ಥೆಗಳು, ನೋಕಿಯಾ, ಸ್ಯಾಮ್‌ಸಂಗ್‌ನಂತಹ ದೈತ್ಯ ಮೊಬೈಲ್ ಕಂಪೆನಿಗಳೂ ಸ್ಥಳೀಯ ಭಾಷೆಯನ್ನು ಗ್ರಾಹಕರಿಗೆ ದೊರುಕವಂತೆ ಮಾಡಿವೆ ಎಂಬ ಅರಿವು ತಮಗಿಲ್ಲವೆನ್ನಿಸುತ್ತದೆ. ನಿಮ್ಮ ಸುತ್ತಲಿನ ಮಕ್ಕಳು ಮಾತನಾಡುವ ಇಂಗ್ಲಿಷ್ ನಿಮ್ಮ ಮಗನಿಗೆ ಬರುವುದಿಲ್ಲವೆಂಬ ಕೀಳರಿಮೆಯನ್ನು ನಿಮ್ಮ ಬರಹದಲ್ಲೇ ನೀವು ವ್ಯಕ್ತಪಡಿಸಿದ್ದೀರಿ.

ಏಳನೇ ತರಗತಿವರೆಗೆ ಕನ್ನಡ ಶಾಲೆಯಲ್ಲಿ ಓದಿದ ನಾನು ಎಂಟನೇ ತರಗತಿಗೆ ಮನೆ ಹತ್ತಿರದಲ್ಲಿ ಯಾವುದೇ ಸರ್ಕಾರಿ ಪ್ರೌಢಶಾಲೆಯಿಲ್ಲದೆ ಇದ್ದ ಕಾರಣ  ಇಂಗ್ಲಿಷ್ ಮೀಡಿಯಂಗೆ ಸೇರಿದೆ. ಈ ಶಾಲೆಯಲ್ಲಿ ಪ್ರಾರಂಭದಲ್ಲಿ ನನಗೆ ಅನುಕೂಲವಾಗಲಿ ಎಂದು ಇಂಗ್ಲಿಷ್ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರ ಬರೆಯಲು ಬಿಟ್ಟಿದ್ದರು. ಎರಡೇ ತಿಂಗಳಲ್ಲಿ ನಾನು ಇಂಗ್ಲಿಷ್‌ನಲ್ಲಿ ವಾಕ್ಯರಚನೆ ಮಾಡುವುದನ್ನು ಕಲಿತೆ.

ಎಲ್‌ಕೆಜಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ  ಓದಿಕೊಂಡುಬಂದಿದ್ದ ಎಷ್ಟೋ ಜನ ಸಹಪಾಠಿಗಳು ಇಂಗ್ಲಿಷ್‌ನಲ್ಲಿ ಬರೆಯಲು ಸ್ಪೆಲ್ಲಿಂಗ್ ಗೊತ್ತಾಗದೆ ನನ್ನ ಹತ್ತಿರ ಕಾಪಿ ಹೊಡೆಯುತ್ತಿದ್ದರು. ನಾನು ಕೀಳರಿಮೆಯಿಂದ ಬಳಲಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ನನ್ನ ಜೊತೆ ಓದಿದ ಕನ್ನಡ ಶಾಲೆಯ ಬಡ ಕುಟುಂಬದ ಮಕ್ಕಳಲ್ಲಿ  ನಾನು ಒಬ್ಬ ಕಟ್ಟಕಡೆಯ ಮನುಷ್ಯನ ಜೀವನ ಹೇಗಿರುತ್ತದೆ ಎಂದು ಕಂಡೆ.

ಬೆಳಿಗ್ಗೆ ಎದ್ದು ಪೇಪರ್ ಹಾಕಿ, ಮನೆ ಕೆಲಸ ಮಾಡಿ, ಸಂಜೆಯಾದರೆ ತಳ್ಳೋಗಾಡಿ ಹೋಟೆಲ್, ಬಾರ್‌ಗಳಲ್ಲಿ ದುಡಿದು ಓದುತ್ತಿದ್ದ ಈ ಹುಡುಗರಿಂದ ಕಲಿತದ್ದು ಅಪಾರ. ಅದೇ, ಇಂಗ್ಲಿಷ್ ಮಾಧ್ಯಮ ಹಿನ್ನೆಲೆಯ ಸುಶಿಕ್ಷಿತ  ಕುಟುಂಬಗಳಿಂದ ಬಂದು ‘ಬರೀ ಮಾತನಾಡುವ’ ಇಂಗ್ಲಿಷ್ ಕಲಿಯಲು ಸಾವಿರಾರು ರೂಪಾಯಿ ಚೆಲ್ಲುತ್ತಿದ್ದ, ತಂದೆ-ತಾಯಿಯರ ದುಡ್ಡಿನಿಂದ ಮಜಾ ಉಡಾಯಿಸುತ್ತಿದ್ದ ಎಷ್ಟೋ ಜನ ಸಹಪಾಠಿಗಳು ಬದುಕಿನಲ್ಲಿ ಸೋತಿರುವುದನ್ನೂ ಕಂಡಿದ್ದೇನೆ.

ಕನ್ನಡ ಶಾಲೆಯಲ್ಲಿ ಓದಿ ಕಾನೂನು ತರಗತಿ ಸೇರಿ ಕನ್ನಡದಲ್ಲಿ ಪರೀಕ್ಷೆ ಬರೆದು ಪದವಿ ಪಡೆದು ವಕೀಲನಾಗಿದ್ದೇನೆ. ನನ್ನ ಕನ್ನಡದ ಮೇಲಿನ ಹಿಡಿತವೇ ಇಂದು ಇಂಗ್ಲಿಷನ್ನು ಅರಗಿಸಿಕೊಳ್ಳಲು ಶಕ್ತಿ ಕೊಟ್ಟಿರುವುದು. ಇಂದು ರಾಜ್ಯದ  ಖ್ಯಾತ ವಕೀಲರಾದ ಸಿ.ಎಚ್.ಹನುಮಂತರಾಯ ಅವರ ಬಳಿ ಕಿರಿಯ ಸಹೋದ್ಯೋಗಿಯಾಗಿರುವ ನನಗೆ ಅವರ ಅನುಭವಗಳೇ ಆಗಾಗ ಹೆಚ್ಚಿನ ಸಾಧನೆ ಮಾಡುವಂತೆ ಹುರಿದುಂಬಿಸುತ್ತವೆ.  ಹಳ್ಳಿಯಲ್ಲಿ ಕನ್ನಡ ಕಲಿತು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿಗೆ ಪಿ.ಯು.ಸಿಗೆ ಸೇರಿದಾಗ ಅದು ಅವರ (ಹನುಮಂತರಾಯ) ಕಲ್ಪನೆಯ ಇಂಗ್ಲೆಂಡ್‌ನಂತೆ ಅನ್ನಿಸುತ್ತದೆ.

ಸೇಂಟ್ ಜೋಸೆಫ್ ಕಾಲೇಜು ಪ್ರಿನ್ಸಿಪಾಲರು ಕರೆದು ಹನುಮಂತರಾಯ ಅವರನ್ನು ಕೇಳಿತ್ತಾರೆ, ‘ವಾಟ್ ಈಸ್ ಯುವರ್ ಫಾದರ್?’. ಕೂಡಲೇ ಏನು ಹೇಳಬೇಕೆಂದು ತೋಚದೆ ‘ಮೈ ಫಾದರ್ ಈಸ್ ಮ್ಯಾನ್’ ಎಂದು ಬಿಡುತ್ತಾರೆ. ಅವರ ಅನುಭವ ಕೇಳಿದಾಗ ಈ ಕೀಳರಿಮೆ ಸಾರ್ವಕಾಲಿಕ ಎಂದು ಮನದಟ್ಟಾಗುತ್ತದೆ.  ಆದರೆ ಅದನ್ನು ಮೆಟ್ಟಿ ನಿಲ್ಲಬೇಕೆಂಬ ಛಲ ನಮ್ಮಲ್ಲಿರಬೇಕು ಅಷ್ಟೇ. ಇಂದು ಕನ್ನಡದ ಮೇಲಿನ ಅವರ ಹಿಡಿತ ನೋಡಿದರೆ,  ಇಂಗ್ಲಿಷ್‌ ಮಾತುಗಳನ್ನು ಕೇಳಿದರೆ ಇವರೆಲ್ಲೋ ಇಂಗ್ಲೆಂಡ್‌ನಲ್ಲಿ ಹುಟ್ಟಿದವರು ಇರಬೇಕೇನೊ ಎನ್ನಿಸಿದರೆ ಆಶ್ಚರ್ಯವಲ್ಲ. ಇಂದಿಗೂ ಗಂಟೆಗಟ್ಟಲೆ ಪ್ರಪಂಚವೇ ಮರೆತವರಂತೆ ನಿಘಂಟಿನಲ್ಲಿ ಮುಳುಗಿರುತ್ತಾರೆ. ಅವರ ಭಾಷಾ ಪ್ರಭುತ್ವ ಈ ಮಟ್ಟಿಗೆ ಏರಲು ಇದೂ  ಕಾರಣ ಇರಬಹುದು. 

ಮೊದಮೊದಲು ನನಗೂ ನನ್ನ ಕಡಿಮೆ ದರ್ಜೆಯ ಇಂಗ್ಲಿಷ್‌ನಿಂದ ನಾನೆಲ್ಲೋ ಕಳೆದು ಹೋಗುತ್ತಿದ್ದೀನಾ ಎಂದೆನಿಸುತ್ತಿತ್ತು. ಆದರೆ, ನನ್ನ ಕನ್ನಡ ಯಾವತ್ತೂ ಕೈ ಕೊಡಲಿಲ್ಲ. ಕನ್ನಡ ಚೆನ್ನಾಗಿ ತಿಳಿದಿದ್ದರಿಂದ ಇಂಗ್ಲಿಷ್ ಕಲಿಯುವುದು ನನಗೆ ಕಷ್ಟವಾಗಲಿಲ್ಲ. ಸಹನಾ ಅವರೇ, ಸರ್ಕಾರಿ ಶಾಲೆಗೆ ನಿಮ್ಮ ಮಗನನ್ನು ಸೇರಿಸಿ ನಿಜಕ್ಕೂ ನಿಮ್ಮ ಮಗನಿಗೆ ಒತ್ತಡವಿಲ್ಲದ ಬಾಲ್ಯ ಕೊಟ್ಟಿದ್ದೀರ. ಕ್ಷಮೆ ಕೋರುವ ಬದಲು ಅವನಿಗೆ ಇಂಗ್ಲಿಷನ್ನು ಓದುವ–ಬರೆಯುವ ಅಭ್ಯಾಸ ಮಾಡಿಸಿದರೆ ಖಾಸಗಿ ಶಾಲೆಯಲ್ಲಿ ಓದಿದವರನ್ನೂ ಮೀರುವ ಜ್ಞಾನ ಸಂಪಾದಿಸುವುದರಲ್ಲಿ ಸಂಶಯವಿಲ್ಲ.

ನಿತ್ಯದ ಬದುಕಿನಲ್ಲಿ ವ್ಯವಹರಿಸಲು ಇಂಗ್ಲಿಷ್ ತಿಳಿಯದಿದ್ದರೆ ಬದುಕುವುದು ದುಸ್ತರ ಎಂಬ ಸನ್ನಿಗೆ ಒಳಗಾಗದೇ ಮೊದಲು ಕನ್ನಡದ ಮೇಲೆ ಹಿಡಿತ ಸಾಧಿಸಿಕೊಳ್ಳವುದು ಅವಶ್ಯ. ಕನ್ನಡ ಕಲಿತರೆ ಜಗತ್ತಿನ ಯಾವುದೇ ಭಾಷೆಯನ್ನು ಸುಲಭವಾಗಿ ಕಲಿಯಬಹುದು. ನನ್ನ ಓರಗೆಯ ಎಷ್ಟೋ ಜನ ಗೆಳೆಯರು ಕನ್ನಡದ ಪದಗಳ ಅರ್ಥ ತಿಳಿಯದೇ ಪೇಚಾಡುವುದನ್ನು ನೋಡಿದಾಗ ನನ್ನ ಕನ್ನಡ ಜ್ಞಾನದ ಬಗ್ಗೆ ಹೆಮ್ಮೆಯಾಗುತ್ತದೆ. ಸರ್ಕಾರಿ ಕನ್ನಡ ಶಾಲೆಗೆ ಸೇರಿಸಿದ ನನ್ನಪ್ಪನಿಗೆ ನನ್ನ ಹೆಮ್ಮೆಯ ಧನ್ಯವಾದ ಗಳನ್ನು ಹೇಳುತ್ತೇನೆ.
-ಸೂರ್ಯ ಮುಕುಂದರಾಜ್, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT