ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಪದಸಂಸ್ಕೃತಿಯ ಅನಾವರಣ

Last Updated 26 ಸೆಪ್ಟೆಂಬರ್ 2015, 19:35 IST
ಅಕ್ಷರ ಗಾತ್ರ

ಕುವೆಂಪು ಸಾಹಿತ್ಯ ಪದವಿವರಣ ಕೋಶ
ಸಂ:
2 ಕಥೆ ಮತ್ತು ಪ್ರಬಂಧ
ಸಂ: 6 ಕಾದಂಬರಿ
ಲೇ: ಪ್ರೊ. ಸಿ.ಎಸ್‌. ಶಿವಕುಮಾರ ಸ್ವಾಮಿ (ಕುಮಾರ ಚಲ್ಯ)
ಪ್ರ: ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾನಿಲಯ ಜ್ಞಾನ ಸಹ್ಯಾದ್ರಿ, ಶಂಕರಘಟ್ಟ–577851.

ಕುವೆಂಪು ವಿಶ್ವವಿದ್ಯಾನಿಲಯದ ‘ಕನ್ನಡ ಭಾರತಿ’ ರೂಪಿಸಿದ ‘ಕುವೆಂಪು ಸಾಹಿತ್ಯ ಪದವಿವರಣ ಕೋಶ’ ಸರಣಿಯ ಪರಿಕಲ್ಪನೆ ಹಾಗೂ ಅದನ್ನು ಮೂರ್ತಗೊಳಿಸಿದ ಬಗೆ ಎರಡೂ ಕನ್ನಡ ನಿಘಂಟು ರಚನಾ ಚರಿತ್ರೆಯಲ್ಲಿ ಹೊಸ ಬಗೆಯದು. ‘ಕನ್ನಡ ಭಾರತಿ’ಯ ಪ್ರಾಧ್ಯಾಪಕ ಸದಸ್ಯರ ಸಂಘಟಿತ ಪ್ರಯತ್ನದ ಫಲವಾಗಿ ಹೊರಬಂದ ಎಂಟು ಸಂಪುಟಗಳಲ್ಲಿ ಪ್ರೊ. ಸಿ.ಎಸ್‌. ಶಿವಕುಮಾರ ಸ್ವಾಮಿಯವರು ಕುವೆಂಪು ಅವರ ಕಥೆ ಮತ್ತು ಪ್ರಬಂಧ (ಸಂ. 2) ಹಾಗೂ ‘ಕಾದಂಬರಿ’ (ಸಂಪುಟ 6) ಗಳೊಳಗಿನ ‘ಪದ ಸಂಸ್ಕೃತಿ’ಯನ್ನು ಎರಡು ಸಂಪುಟಗಳಲ್ಲಿ ಅನಾವರಣಗೊಳಿಸಿದ್ದಾರೆ.

ಈ ‘ಕೋಶ’ ಬರಿಯ ಅರ್ಥವಿವರಣೆ, ವ್ಯಾಕರಣಾಂಶಗಳ ಸೂಚನೆ, ಪ್ರಯೋಗಗಳಲ್ಲಷ್ಟೇ ವಿರಮಿಸದೆ ಒಂದು ಪದದ ಹಿಂದೆ ಪದದ ಕಟ್ಟುಗರಾದ ಕುವೆಂಪು ಪರಿಕಲ್ಪಿಸಿಕೊಂಡ ಎಲ್ಲ ಸಾಮಾಜಿಕ, ಭಾಷಿಕ, ಸಾಂಸ್ಕೃತಿಕ ಅರ್ಥವಲಯವನ್ನು ಶೋಧಿಸುವುದರ ಜತೆಗೆ ನೆಲೆಸಿದ ಕಾಲದ ಅರ್ಥದ ಹುಡುಕಾಟವನ್ನೂ ಲೇಖಕ/ ಸಂಪಾದಕರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇಲ್ಲಿ ನಿಘಂಟುಕಾರನ ಬೌದ್ಧಿಕ ಶ್ರಮ ಹಾಗೂ ಪಾಂಡಿತ್ಯವಷ್ಟೇ ದುಡಿದಿಲ್ಲ. ಪದಶಿಲ್ಪಿಯ ಮನೋಕೋಶದೊಳಗಿನ ಅರ್ಥವಲಯದ ಹುಡುಕಾಟವೂ ನಡೆದಿದೆ.

ಈ ಎರಡು ಸಂಪುಟಗಳ ಸಂಪಾದಕ, ಲೇಖಕ ಕುಮಾರಚಲ್ಯರು ಸಂಪುಟಗಳ ಧ್ಯೇಯವನ್ನು ಹೀಗೆ ನಿರೂಪಿಸಿದ್ದಾರೆ: ‘‘ಕುವೆಂಪು ಕೃತಿಗಳಲ್ಲಿ ಬಳಕೆಗೊಂಡಿರುವ ವಿಶಿಷ್ಟ ಪದಗಳನ್ನು ಆಯ್ದು; ಅವುಗಳ ಸಾಮಾನ್ಯ ಅರ್ಥವನ್ನು ನೀಡಿ; ಆ ಪದಗಳು ಬಳಕೆಗೊಂಡಿರುವ ಸಂದರ್ಭವನ್ನು ಉಲ್ಲೇಖಿಸಿ, ಆ ಪದಗಳಿಗಿರುವ ಭಾಷಿಕ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಅರ್ಥವನ್ನು ವಿವರಿಸುವುದು ಈ ಸಂಪುಟದ ಧ್ಯೇಯವಾಗಿದೆ’’. ಇಲ್ಲಿ ಸಾಂಪ್ರದಾಯಿಕ ನಿಘಂಟು ರಚನಾ ವಿನ್ಯಾಸ ಹೊಸ ಅರ್ಥಪೂರ್ಣ ಆವಿಷ್ಕಾರಕ್ಕೆ ಗುರಿಯಾಗಿದೆ.

ಹಲವು ಕಾರಣಗಳಿಗಾಗಿ ಈ ಕೋಶ ಮುಖ್ಯವಾಗುತ್ತದೆ. ಒಂದು, ಕುವೆಂಪು ಅವರೇ ಸೃಜಿಸಿದ ನುಡಿನಾಣ್ಯ (ಸಂಸ್ಕೃತ, ಕನ್ನಡ)ಗಳನ್ನು ಅರಿಯುವ ಕುತೂಹಲ. ಉದಾಹರಣೆಗೆ–  ಪ್ರತಿಮಾಗವಾಕ್ಷ (1000–6), ಧರ್ಮ ಶ್ರವಣರಂಗ (1023–6), ಭಾವಗೋಪನ (1056–6), ಸದ್ಯೋ ಮುಖ್ಯ (1103–6), ಪ್ರಣಯ ಫಣಿಬಂಧನ (520–6), ಮನ್ಮಥ ಕುತೂಹಲ (1173–6), ಶಯನಸಂವಿಧಾನ (1189–6), ಔದಾರ್ಯ ಗೋಪುರ (582–6), ಸುಖರ ಸಪ್ಲವಿತ (670–6), ಭೀತಿಮೂಕೆ (635–6) ಭೀಷಣ ಕುಬ್ಧ (1358–6), ಕಣ್‌ ಬೇಟದ ಮನ್ಮಥ ಚೇಷ್ಟೆ (1414–6), ಹಾಸಿಗೆ ಅನುಕೂಲ (1425–6), ಅಜ್ಞಾತೋಹಮ ವಲಯ (1477–6), ಆಕಾರರತಿ (511–6) ಆಸೆಭೀಮ ಸಾಮರ್ಥ್ಯ ಸುದಾಮ (ನುಡಿಗಟ್ಟು 1801–2), ಇನಿದೋಳು (992–6), ಕನ್ಯಾ ಮುಗ್ಧತೆ– ಇಂಥ, ನಮ್ಮ ದಿನ ಬಳಕೆಯ ಅನೇಕ ದೇಸೀ ಪದಗಳು ಇಂದು ಬಳಕೆ ತಪ್ಪಿವೆ. ಅಲ್ಲಿಗೆ ಸಂಸ್ಕೃತವೋ, ಇಂಗ್ಲಿಷ್‌ನದೋ ಪದಗಳು ಬಂದು ಕುಳಿತಿವೆ. ಅವುಗಳನ್ನು ಮತ್ತೆ ಬಳಕೆಗೆ ತರುವ ಪ್ರಯತ್ನ ಮಾಡಬಹುದು.

ಉದಾ: ಬಚ್ಚಗಾನಿ (1018–6), ಕಾವಣ (1038–6), ಹೂಕೂತು (1072–6) ಗಿಬರು (1218–6), ಯಾಪೆ (1364), ಜಿಬ್ಬಳಿಕೆ (550–6), ಹಲುಬಿನ ಎತ್ತು (1102–6), ಮರಸು (1035–2), ಮುದುಗು (1168–6) ಮುರುಮ (617–6) ಸೋಸಲು, ಬದ್ದೆ (1180–6), ಪಚ್ಚಿ (1239–6), ಬದ್ದೆ (1180–6), ಒತ್ತುಗ (1316–6), ತಗರು ಬಿಗರು (1443–6), ಇತ್ಯಾದಿ ಪದಗಳನ್ನು ಗಮನಿಸಬಹುದು.

ಅನ್ಯ ದೇಶೀಯ ಪದವೊಂದು ನಮ್ಮ ಸಾಂಸ್ಕೃತಿಕ ವಲಯದೊಳಗೆ ಉಸಿರಾಡತೊಡಗಿದಾಗ ಪಡೆದುಕೊಳ್ಳುವ ಹೊಸ ರೂಪವನ್ನು ತಿಳಿದುಕೊಳ್ಳಲು ಈ ಕೋಶ ಅನುಕೂಲವಾಗುತ್ತದೆ. ಉದಾ: ಕುಶಾ ಮತ್ತು (493–6), ಬೂಟೀಸು (498), ಬೀಸೆಕಲ್ಲು ಸವಾರಿ (409–6), ದರಾಮು (538–6), ಬುರ್ನಾಸು (543–6) ಇತ್ಯಾದಿ.

ಈ ಕೋಶವನ್ನು ಸಿದ್ಧಪಡಿಸುವಲ್ಲಿ ಸಂಪಾದಕ/ ಲೇಖಕರು ಅಪಾರ ಶ್ರಮಪಟ್ಟಿದ್ದಾರೆ, ಅನ್ಯಾನ್ಯ ಮೂಲಗಳನ್ನು ತಡಕಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಪದದ ಮೂಲವನ್ನು ಗುರುತಿಸುವಲ್ಲಿ, ವ್ಯಾಕರಣಾಂಶವನ್ನು ನಿರ್ಧರಿಸುವಲ್ಲಿ ಸಾಕಷ್ಟು ಎಡಹುಗಳಾಗಿವೆ. ನಮೂದುಗಳ ರೂಪ ನಿರ್ಧಾರದಲ್ಲೂ ಸಾಕಷ್ಟು ಗೊಂದಲಗಳೇರ್ಪಟ್ಟಿವೆ.

ಉದಾ: ಕೋದು (664–6) (ಕೋ), ಹಂದದೆ (633–6) (ಹಂದು), ನೆರಪಿ (598–6) (ನೆರಪು), ಬಡರು ಬಿದ್ದು (695–6) (ಬಡರು ಬೀಳು). ಆಕ್‌್ಸಫರ್ಡ್‌ ನಿಘಂಟಿನ (ಇಂಗ್ಲಿಷ್‌) ಸಂಪಾದಕರು ತಮ್ಮ ನಿಘಂಟಿನೊಳಗೆ ತಪ್ಪು ತೋರಿಸಿಕೊಟ್ಟವರಿಗೆ ಒಂದು ಶಿಲ್ಲಿಂಗ್‌ ಕಳುಹಿಸಿಕೊಡುವುದಾಗಿ ಪ್ರಕಟಿಸುತ್ತಿದ್ದಾರೆ. ಈ ದಿಟ್ಟ ಸಂಪ್ರದಾಯ ಕನ್ನಡ ನಿಘಂಟು ವಲಯದೊಳಗೆ ಏಕೆ ಚಾಲ್ತಿಗೆ ಬರಬಾರದು? ಇದರಿಂದ ನಮ್ಮ ಎಷ್ಟೋ ಕೋಶಗಳು ದೋಷ ದೂರಗೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT