ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಡ್ಡಿ ಗೋವಿಂದರಾಜ್‌ ಅತೃಪ್ತ ಸಾಹಿತಿ

ಅನಕೃ ನಿರ್ಮಾಣ್‌ ಸ್ವರ್ಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿ.ಎನ್‌.ರಾಮಚಂದ್ರನ್ ಅಭಿಮತ
Last Updated 27 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಗಿರಡ್ಡಿ ಗೋವಿಂದರಾಜ್‌ ಅವರು ನಾಲ್ಕು ಸಾವಿರ ಪುಟಗಳಷ್ಟು ಸಾಹಿತ್ಯ ಕೃಷಿ ಮಾಡಿ ಅಪಾರ ಜನರ ಅಭಿಮಾನಕ್ಕೆ ಪಾತ್ರರಾ­ಗಿದ್ದಾರೆ. ಆದಾಗ್ಯೂ ತಾನು ಬರೆದಿದ್ದು ಹೆಚ್ಚೇನು ಇಲ್ಲ, ಬರವಣಿಗೆ ಎನ್ನುವುದು ತುಂಬಾ ಕಷ್ಟ ಎಂದು ಹೇಳುತ್ತಾರೆ. ಇದು ಅವರ ವಿನಯದ ಮಾತು. ಕ್ರಿಯಾ­ಶೀಲ ಪ್ರಜ್ಞಾವಂತ ಸಾಹಿತಿಯ ನುಡಿ. ಅವರ ಬರವಣಿಗೆ ಗಮನಿಸಿದರೆ ಅಷ್ಟೇನು ಕಷ್ಟಪಟ್ಟು ಬರೆದಿಲ್ಲ ಎನಿಸುತ್ತದೆ’ -ಹೀಗೆಂದು ಹೇಳಿ ಹಿರಿಯ ಸಾಹಿತಿ ಡಾ.ಗಿರಡ್ಡಿ ಗೋವಿಂದರಾಜ್‌ ಅವರನ್ನು ಕೊಂಡಾಡಿದ್ದು ಹಿರಿಯ ವಿಮರ್ಶಕ ಡಾ.ಸಿ.ಎನ್‌.ರಾಮಚಂದ್ರನ್‌.

ಭಾನುವಾರ ನಗರದ ಜೆ.ಎಸ್‌.ಎಸ್‌. ಸಭಾಂಗಣದಲ್ಲಿ ಗಿರಡ್ಡಿ ಗೋವಿಂದ­ರಾಜ್‌ ಅವರಿಗೆ ‘ಅನಕೃ  ನಿರ್ಮಾಣ್‌ ಸ್ವರ್ಣ ಪ್ರಶಸ್ತಿ- 2014’ ಪ್ರದಾನ ಮಾಡಲು  ಅನಕೃ- ನಿರ್ಮಾಣ್‌ ಪ್ರತಿ­ಷ್ಠಾನ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕಲಾವಿದರು ಸದಾ ಅತೃಪ್ತರು. ಗಿರಡ್ಡಿ ಕೂಡ ಅತೃಪ್ತ ಸಾಹಿತಿ. ನನ್ನ ಪ್ರಕಾರ ಇದು ಒಳ್ಳೆಯ ಗುಣ. ಅವರ ಆ ಅತೃಪ್ತಿ ಸದಾ ಹೀಗೆ ಇರಲಿ. ಆಗ ನಮಗೆ ಓದಲು ಮತ್ತಷ್ಟು ಉತ್ಕೃಷ್ಟ ಸಾಹಿತ್ಯ ಲಭಿಸಲಿದೆ’ ಎಂದರು.

ಗಿರಡ್ಡಿ ಅವರ ‘ಮರ್ಲಿನ್‌ ಮನ್ರೊ’ ಕವನ ಸಂಕಲನ ಹಾಗೂ ‘ಮಣ್ಣು’ ಕಥೆಯನ್ನು ಕೊಂಡಾಡಿದರು. ‘ಗಿರಡ್ಡಿ ಅವರನ್ನು ಎಲ್ಲರೂ ವಿಮ­ರ್ಶಕ ಎನ್ನುತ್ತಾರೆ. ಅವರ ಕವನವನ್ನು ಓದಿದ್ದೇನೆ ಎನ್ನುವವರ ಸಂಖ್ಯೆ ಕಡಿಮೆ. ಮರ್ಲಿನ್‌ ಮನ್ರೊ ಅವರ ದುರಂತ ಬದುಕು, ವೈಭವೋಪೇತ ಜೀವನ, ತೀರದ ದಾಹ, ಕಾಡಿದ ಒಂಟಿತನವನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ‘ನೀನು ನನ್ನ ಪ್ರತಿರೂಪವೇನು?’ ಎಂದು ಪ್ರಶ್ನಿಸಿದ್ದಾರೆ. ಹಾಗೇ, ಮರೆಯಬಾರದಂಥ ಹಾಗೂ ಮರೆತುಹೋಗಿದ್ದ ಕಥೆಗಾರರನ್ನು ಸಾಹಿ­ತ್ಯಾಸಕ್ತರಿಗೆ ಪರಿಚಯಿಸಿದ್ದಾರೆ’ ಎಂದು ಉದಾಹರಣೆ ಸಮೇತ ವಿವರಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗಿರಡ್ಡಿ ಗೋವಿಂದರಾಜ್‌, ‘ನಾನು ಸಾಹಿತ್ಯ ಓದನ್ನು ಆರಂಭಿಸಿದ್ದೇ ಅನಕೃ ಅವರ ಕಾದಂಬರಿ ಮೂಲಕ. ಅವರಿಂದ ಪ್ರಭಾವಿತನಾಗಿ ಹೈಸ್ಕೂಲ್‌­ನಲ್ಲಿದ್ದಾ­ಗಲೇ ಒಂದು ಕಾದಂಬರಿ ಬರೆದಿದ್ದೆ. ಆದರೆ ಅದನ್ನು ಪ್ರಕಟಿಸಿರಲಿಲ್ಲ. ಈಗ ಅವರ ಹೆಸರಿನಲ್ಲಿ ಪ್ರಶಸ್ತಿ ಲಭಿಸಿದೆ. ಹಾಗಾಗಿ ನನ್ನ ಪಾಲಿಗೆ ಇದೊಂದು ಸ್ಮರಣೀಯ ಕ್ಷಣ’ ಎಂದರು.

ಪ್ರಶಸ್ತಿ ಪ್ರದಾನ ಮಾಡಿದ ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್‌, ‘ಅನಕೃ, ಕನ್ನಡಿಗರಲ್ಲಿ ಹೋರಾಟದ ಕೆಚ್ಚನ್ನು ಮೂಡಿಸಿದವರು. ಅನಕೃ ಸ್ಮಾರಕ ಭವನ ನಿರ್ಮಿಸಲು ಸರ್ಕಾರವು ಪ್ರತಿಷ್ಠಾನಕ್ಕೆ ಅಗತ್ಯ ನೆರವು ನೀಡಲಿದೆ’ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಮಾತನಾಡಿ, ‘ಅನಕೃ ಅವರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಲು ಸರ್ಕಾರ ಏನನ್ನೂ ಮಾಡಿಲ್ಲ. ಅವರು ಹುಟ್ಟಿದ ಮನೆಯನ್ನಾದರೂ ಸ್ಮಾರಕ ಮಾಡಲು ಪ್ರಯತ್ನಿಸಬೇಕು’ ಎಂದರು.

ಪ್ರತಿಷ್ಠಾನದ ಕಾರ್ಯಾಧ್ಯಕ್ಷ ವಿ.ಲಕ್ಷ್ಮಿನಾರಾಯಣ, ‘ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನಿವೇಶನ ಮಂಜೂರು ಮಾಡಿದ್ದರು. ಆದರೆ, ಸ್ಥಳ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಈಗ ವಿವಾದ ಬಗೆಹರಿದಿದೆ. ರಂಗ ಶಂಕರ ಹಿಂಭಾಗ ಇರುವ ಈ ಜಾಗದಲ್ಲಿ ಅನಕೃ ಸ್ಮಾರಕ ಭವನ ಕಟ್ಟಲು ಈಗಿನ ಸರ್ಕಾರ ರೂ. 40 ಲಕ್ಷ ನೀಡಿದೆ. ಪ್ರತಿಷ್ಠಾನದಿಂದ ರೂ. 1 ಕೋಟಿ ನೀಡಿದ್ದೇವೆ. ಒಟ್ಟು ರೂ. 4 ಕೋಟಿ ವೆಚ್ಚದಲ್ಲಿ ಭವನ ನಿರ್ಮಿಸಲಾಗುವುದು’ ಎಂದು  ತಿಳಿಸಿದರು.

ಸಾಹಿತಿ ಅ.ನ.ಕೃಷ್ಣರಾಯರ ನೆನಪಿ­ನಲ್ಲಿ ನೀಡಲಾಗಿರುವ 20ನೇ ವರ್ಷದ ಈ ಪ್ರಶಸ್ತಿಯ ಮೊತ್ತ ರೂ.1 ಲಕ್ಷ. ನಗದು, ಸ್ವರ್ಣಫಲಕ ಹಾಗೂ ಅಭಿನಂದನಾ ಪತ್ರ ಒಳಗೊಂಡಿದೆ. ನಿಘಂಟು ತಜ್ಞ ಪ್ರೊ.ಜಿ.ವೆಂಕಟ­ಸುಬ್ಬಯ್ಯ ಕಾರ್ಯ­ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆನಂದ್‌ ನಗರ್‌ಕರ್‌ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಗೌತಮ್‌ ಅನಕೃ, ಅಸಗೋಡು ಜಯಸಿಂಹ, ಎಸ್‌.ಎಂ.­ಪಾಟೀಲ್‌, ಲಲಿತಾ ಕೃಷ್ಣಮೂರ್ತಿ ಹಾಗೂ ಗಿರಡ್ಡಿ ಅವರ ಪತ್ನಿ ಸರೋಜಾ ವೇದಿಕೆ ಮೇಲಿದ್ದರು.

ಜನಪ್ರಿಯ ಕಾದಂಬರಿಕಾರರ ಮೇಲೆ ವಿಮರ್ಶಕರ ಅಸಡ್ಡೆ
‘ನವ್ಯ ಸಾಹಿತ್ಯ ಆರಂಭವಾದ ಮೇಲೆ ಜನಪ್ರಿಯ ಕಾದಂಬರಿಕಾರರ ಮೇಲೆ ವಿಮರ್ಶಾ ವಲಯದಲ್ಲಿ ಅಸಡ್ಡೆ ಇದೆ. ಅನಕೃ ಅವರ ಮೇಲೂ ಇದೇ ಕಾರಣಕ್ಕಾಗಿ ಟೀಕಾ ಪ್ರವಾಹ ಹರಿ­ಸಿದ್ದರು. ಅಶ್ಲೀಲ ಸಾಹಿತ್ಯ ಎಂದು ಜರಿದಿದ್ದರು’ ಎಂದು ಹಿರಿಯ ಸಾಹಿತಿ ಗಿರಡ್ಡಿ ಗೋವಿಂದರಾಜ್‌ ಬೇಸರ ವ್ಯಕ್ತಪಡಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ವೇಶ್ಯೆ­ಯರನ್ನು ಹುಡುಕುವುದು ಹೇಗೆ? ಮೊದಲ ರಾತ್ರಿ ಹೇಗೆ ಕಳೆಯ­ಬೇಕು? ಎಂಬುದರ ಬಗ್ಗೆ ಅನಕೃ ಕಾದಂಬರಿಗಳಲ್ಲಿ ಮಾಹಿತಿ ಸಿಗು­ತ್ತದೆ ಎಂದು ಟೀಕಿಸಿದ್ದರು. ಎಸ್‌.­ಎಲ್‌.­­ಭೈರಪ್ಪ ಅವರನ್ನು ಕೂಡ ಜನಪ್ರಿಯ ಲೇಖಕ ಎಂದು ಅಸಡ್ಡೆ ಮಾಡುತ್ತಾರೆ. ಆದರೆ ಸಾಹಿತ್ಯದ ಬಗ್ಗೆ ಹೆಚ್ಚು ಆಸಕ್ತಿ ಹುಟ್ಟಿಸುವುದು ಜನಪ್ರಿಯ ಕಾದಂಬರಿಕಾರರು’ ಎಂದು ಪ್ರತಿಪಾದಿಸಿದರು.

ಈಗಿನ ವಿಮರ್ಶಕರನ್ನು ಗಿರಡ್ಡಿ ತರಾಟೆಗೆ ತೆಗೆದುಕೊಂಡರು. ‘ಇತ್ತೀ­ಚೆ­­ಗಿನ ವಿಮರ್ಶೆಗಳು ತುಂಬಾ ಬೇಸರ ಉಂಟುಮಾಡುತ್ತವೆ. ಯಾರಿಗೂ ಅರ್ಥವಾಗ­ದಂತೆ ಬರೆ­ಯು­ವುದನ್ನು ಈ ವಿಮರ್ಶಕರು ಹೇಗೆ ರೂಢಿಸಿಕೊಂಡರು ಎಂಬುದು ಗೊತ್ತಾಗುತ್ತಿಲ್ಲ. ಕ್ಲಿಷ್ಟ ವಿಮರ್ಶೆ ಯಾರಿಗೆ ಬೇಕು?’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT