ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಳೆಯ ಇನ್ನು ನೆನಪು ಮಾತ್ರ...

Last Updated 23 ಅಕ್ಟೋಬರ್ 2013, 5:25 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ನಾನು ತೀರ್ಥಹಳ್ಳಿಗೆ ಬಂದಾಗ ಏಕವಚನದಲ್ಲಿ ಮಾತನಾಡಲು ಇರುತ್ತಿದ್ದ ಏಕೈಕ ವ್ಯಕ್ತಿ ಎಂದರೆ ಗಂಗಾಧರ್‌ ಮಾತ್ರ’ ಎಂದು ಜ್ಞಾನಪೀಠ ಪುರಸ್ಕೃತ ಸಾಹಿತಿ  ಡಾ.ಯು.ಆರ್‌.ಅನಂತಮೂರ್ತಿ ಬಹಿರಂಗವಾಗಿ ಹೇಳುತ್ತಿದ್ದರು.

ಅನಂತಮೂರ್ತಿ ಅವರ ಬಾಲ್ಯದ ಗೆಳೆಯ, ಒಡನಾಡಿಯಾಗಿದ್ದ ಪ್ರೊ.ಕೆ.ಗಂಗಾಧರ್‌ ಅವರು ಮಂಗಳವಾರ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾದರು. 82ರ ಹರೆಯದಲ್ಲಿಯೂ ಅತ್ಯಂತ ಉತ್ಸಾಹಿಯಾಗಿದ್ದ ಗಂಗಾಧರ್‌ ತೀರ್ಥಹಳ್ಳಿಯಲ್ಲಿ ನಡೆಯುವ ಬಹುತೇಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು.

ಅನಂತಮೂರ್ತಿ, ತೀರ್ಥಹಳ್ಳಿಗೆ ಬಂದಾಗಲೆಲ್ಲಾ ಬಹುತೇಕ ಅವರ ಮನೆಯಲ್ಲಿಯೇ ವಾಸ್ತವ್ಯ ಹೂಡುತ್ತಿದ್ದರು. ತಮ್ಮ ಭಾಷಣಗಳಲ್ಲಿ ಗಂಗಾಧರ್‌ ಅವರೊಂದಿಗೆ ಕಳೆದ ಬಾಲ್ಯದ ಹಾಗೂ ಕಾಲೇಜು ದಿನಗಳನ್ನು ಸ್ಮರಿಸುತ್ತಿದ್ದರು. ಹೆಗ್ಗೋಡಿನ ನೀನಾಸಂನ ಕೆ.ವಿ. ಸುಬ್ಬಣ್ಣ ಕೂಡ ಗಂಗಾಧರ್‌ ಅವರ ಗೆಳೆಯರಾಗಿದ್ದರು.

ಭಾರತೀಪುರ ಸಮೀಪದ ಕಲ್ಲಾಳದ ಗಂಗಾಧರ್‌ ಅವರು ತಮ್ಮ ಕ್ರಿಯಾಶೀಲತೆಯಿಂದಲೆ ಗಮನ ಸೆಳೆದಿದ್ದರು. ಉತ್ತಮ ಭಾಷಾ ತಜ್ಞ, ವಿಮರ್ಶಕರಾಗಿದ್ದರು. ಆರಂಭದಲ್ಲಿ ಪಟ್ಟಣದಲ್ಲಿ ಬಾಲಕಿಯರ ಪ್ರೌಢಶಾಲೆ ಆರಂಭಕ್ಕೆ ಕಾರಣರಾಗಿದ್ದರು. ತೀರ್ಥಹಳ್ಳಿಯಲ್ಲಿ ವಾಣಿ ಪ್ರಿಂಟಿಂಗ್‌ ಪ್ರೆಸ್‌ ಆರಂಭಿಸುವ ಮೂಲಕ ತಮಗಿರುವ ಅಕ್ಷರ ಪ್ರೀತಿಯನ್ನು ಮೆರೆದವರು. ತುಂಗಾ ಮಹಾ ವಿದ್ಯಾಲಯದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಇವರು ಇದೇ ಸಂಸ್ಥೆಯ ತುಂಗಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ನೆಪ ಮಾತ್ರಕ್ಕೆ ಕೇವಲ ಒಂದು ರೂಪಾಯಿ ಸಂಬಳ ಪಡೆದು ಕಾಲೇಜಿನ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದವರು.

ತೀರ್ಥಹಳ್ಳಿ ಪುರ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಲ್ಲದೇ, ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿ, ತಾಲ್ಲೂಕು ಬೋರ್ಡ್‌ ಅಧ್ಯಕ್ಷರಾಗಿ, ರೋಟರಿ ಸಂಸ್ಥೆಯಲ್ಲಿ ಗೌರವಾಧ್ಯಕ್ಷರಾಗಿ ಹಾಗೂ ಸೊಪ್ಪುಗುಡ್ಡೆಯ ಮುನ್ಸಿಪಲ್‌ ಬಾಲಕಿಯರ ಹೈಸ್ಕೂಲ್‌ನಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.

ತುಂಗಾ ಮೂಲ ಉಳಿಸಿ ಹೋರಾಟದಲ್ಲಿ ಡಾ.ಯು.ಆರ್‌. ಅನಂತಮೂರ್ತಿ ಅವರ ಬೆಂಬಲಕ್ಕೆ ನಿಂತು ಪಾದಯಾತ್ರೆಯ ಮೂಲಕ ಪರಿಸರ ಹೋರಾಟದಲ್ಲಿ ಗುರುತಿಸಿಕೊಂಡಿದ್ದರು. ಸಮಾಜವಾದಿ ಚಿಂತಕರಾದ ಇವರು  ‘ತೀರ್ಥಹಳ್ಳಿ ಸುತ್ತಮುತ್ತ’ ಎಂಬ ಕೃತಿಯನ್ನು ರಚಿಸುವ ಮೂಲಕ ಸಾಂಸ್ಕೃತಿಕ ದಾಖಲೆಯನ್ನು ಕಟ್ಟಿಕೊಟ್ಟಿದ್ದಾರೆ.

ನಾಡಿನ ಅನೇಕ ಸಾಹಿತಿಗಳಿಗೆ ಗಂಗಾಧರ್‌ ಅವರ ಮನೆ  ಸಾಹಿತ್ಯ ಚರ್ಚೆಯ ಕೇಂದ್ರವಾಗಿತ್ತು. ಡಾ.ಯು.ಆರ್‌. ಅನಂತಮೂರ್ತಿ ಅವರು ತಮ್ಮ ಅನೇಕ ಕೃತಿಗಳಲ್ಲಿ ಗಂಗಾಧರ್‌ ಅವರನ್ನು ಪ್ರಸ್ತಾಪಿಸಿದ್ದಾರೆ. ಪುಣೆಯ ಡೆಕ್ಕನ್‌ ಕಾಲೇಜಿಗೆ ಭಾಷಾಶಾಸ್ತ್ರ ಕುರಿತು ಉಪನ್ಯಾಸ ನೀಡುತ್ತಿದ್ದ ಪ್ರೊ.ಕೆ. ಗಂಗಾಧರ್‌ ತಾಲ್ಲೂಕಿನ ಸಾವಿರಾರು ವಿದ್ಯಾರ್ಥಿಗಳಿಗೆ ಅಚ್ಚು ಮೆಚ್ಚಿನ ಗುರುಗಳಾಗಿದ್ದರು. ನಿವೃತ್ತಿಯ ನಂತರ ಕೃಷಿಯಲ್ಲಿ ತೊಗಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT